ವಿಕಸಿತ ಭಾರತ ನಿರ್ಮಾಣದಲ್ಲಿ 140 ಕೋಟಿ ಭಾರತೀಯರು ಒಂದಾಗಿದ್ದಾರೆ: ಪ್ರಧಾನಮಂತ್ರಿ
ನಮ್ಮ ದೇಶದ ಪ್ರಗತಿಗೆ ಅಗತ್ಯವಿರುವ ಎಲ್ಲವನ್ನೂ ಇಲ್ಲಿಯೇ, ಭಾರತದಲ್ಲಿ ಮಾಡಬೇಕು: ಪ್ರಧಾನಮಂತ್ರಿ
ಬುಡಕಟ್ಟು ಸಮಾಜದ ಅಭಿವೃದ್ಧಿಗಾಗಿ ಕಳೆದ 11 ವರ್ಷಗಳಲ್ಲಿ ಅಭೂತಪೂರ್ವ ಪ್ರಯತ್ನಗಳನ್ನು ಮಾಡಲಾಗಿದೆ: ಪ್ರಧಾನಮಂತ್ರಿ
ಆಪರೇಷನ್ ಸಿಂಧೂರ್ ಕೇವಲ ಮಿಲಿಟರಿ ಕ್ರಮವಲ್ಲ, ಇದು ಭಾರತೀಯರಾದ ನಮ್ಮ ಮೌಲ್ಯಗಳು ಮತ್ತು ಭಾವನೆಗಳ ಅಭಿವ್ಯಕ್ತಿಯಾಗಿದೆ: ಪ್ರಧಾನಮಂತ್ರಿ

ತ್ರಿವರ್ಣ ಧ್ವಜವನ್ನು ಎಲ್ಲರೂ ಹೆಮ್ಮೆಯಿಂದ ಹಾರಿಸುತ್ತಲೇ ಇರಬೇಕು.

ಭಾರತ್ ಮಾತಾ ಕೀ ಜೈ,

ಭಾರತ್ ಮಾತಾ ಕೀ ಜೈ,

ಭಾರತ್ ಮಾತಾ ಕೀ ಜೈ,

ಭಾರತ್ ಮಾತಾ ಕೀ ಜೈ.

ಗುಜರಾತ್‌ನ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ, ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಗುಜರಾತ್ ಸಚಿವ ಸಂಪುಟದ ನನ್ನ ಎಲ್ಲಾ ಸಹೋದ್ಯೋಗಿಗಳೆ, ಸಂಸತ್ ಸದಸ್ಯರೆ, ವಿಧಾನಸಭೆ ಸದಸ್ಯರೆ, ಇತರೆ ಗಣ್ಯರೆ, ದಾಹೋದ್‌ನ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!

ಎಲ್ಲರೂ ಹೇಗಿದ್ದೀರಿ? ದಯವಿಟ್ಟು ಜೋರಾಗಿ ಹೇಳಿ - ದಾಹೋದ್ ಜನರ ಪ್ರಭಾವ ಈಗ ಬೆಳೆದಿದೆ!

ಇಂದು ಮೇ 26. 2014ರ ಇದೇ ದಿನದಂದು ನಾನು ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ. ತ್ರಿವರ್ಣ ಧ್ವಜವು ಯಾವಾಗಲೂ ಹೆಮ್ಮೆಯಿಂದ ಹಾರಿಸುತ್ತಿರಬೇಕೆಂದು ನಾನು ಬಯಸುತ್ತೇನೆ. ಗುಜರಾತ್‌ನ ಜನರು ನನ್ನನ್ನು ಅಪಾರವಾಗಿ ಆಶೀರ್ವದಿಸಿದರು, ನಂತರ ದೇಶಾದ್ಯಂತ ಕೋಟ್ಯಂತರ ನಾಗರಿಕರು ನನಗೆ ತಮ್ಮ ಆಶೀರ್ವಾದಗಳನ್ನು ನೀಡಿದರು. ನಿಮ್ಮ ಆಶೀರ್ವಾದದಿಂದ ಸಬಲನಾಗಿ, ನನ್ನ ದೇಶವಾಸಿಗಳ ಸೇವೆಗೆ ಹಗಲಿರುಳು ಅರ್ಪಿಸಿಕೊಂಡಿದ್ದೇನೆ.

ಈ ವರ್ಷಗಳಲ್ಲಿ, ರಾಷ್ಟ್ರವು ಒಂದು ಕಾಲದಲ್ಲಿ ಊಹಿಸಲಾಗದ ಮತ್ತು ಹಿಂದೆಂದೂ ಕಾಣದ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಾವು ದಶಕಗಳ ಹಿಂದಿನ ಸಂಕೋಲೆಗಳಿಂದ ಮುಕ್ತರಾಗಿದ್ದೇವ, ಪ್ರತಿಯೊಂದು ವಲಯದಲ್ಲೂ ಪ್ರಗತಿ ಸಾಧಿಸಿದ್ದೇವೆ. ಇಂದು ದೇಶವು ಹತಾಶೆಯಿಂದ ಹೊರಬಂದಿದ್ದು, ಹೊಸ ವಿಶ್ವಾಸ ಮತ್ತು ಭರವಸೆಯೊಂದಿಗೆ ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸುತ್ತಿದೆ.

 

ಸ್ನೇಹಿತರೆ,

ಇಂದು ನಾವು - 140 ಕೋಟಿ ಭಾರತೀಯರು - ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ದೃಢಸಂಕಲ್ಪದಿಂದ ಕೆಲಸ ಮಾಡುತ್ತಿದ್ದೇವೆ. ದೇಶದ ಪ್ರಗತಿಗೆ ಬೇಕಾದ ಎಲ್ಲವನ್ನೂ ಭಾರತದೊಳಗೆ ತಯಾರಿಸುವುದು ಕಡ್ಡಾಯವಾಗಿದೆ. ಇದು ಇಂದಿನ ಅಗತ್ಯವಾಗಿದೆ. ಭಾರತವು ಉತ್ಪಾದನಾ ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ದೇಶೀಯ ಬಳಕೆಗೆ ಅಗತ್ಯವಾದ ವಸ್ತುಗಳನ್ನು ಉತ್ಪಾದಿಸುವುದಾಗಲಿ ಅಥವಾ ಜಗತ್ತಿನಾದ್ಯಂತದ ದೇಶಗಳಿಗೆ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ರಫ್ತು ಮಾಡುವುದಾಗಲಿ, ನಾವು ನಿರಂತರ ಬೆಳವಣಿಗೆ ಕಾಣುತ್ತಿದ್ದೇವೆ. ಇಂದು ಭಾರತವು ಸ್ಮಾರ್ಟ್‌ಫೋನ್‌ಗಳು ಮತ್ತು ಕಾರುಗಳಿಂದ ಹಿಡಿದು ಆಟಿಕೆಗಳು, ಮಿಲಿಟರಿ ಉಪಕರಣಗಳು ಮತ್ತು ಔಷಧಗಳವರೆಗೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹಲವಾರು ದೇಶಗಳಿಗೆ ರಫ್ತು ಮಾಡುತ್ತಿದೆ. ಇದಲ್ಲದೆ, ಭಾರತವು ಈಗ ರೈಲ್ವೆಗಳು, ಮೆಟ್ರೋ ವ್ಯವಸ್ಥೆಗಳು ಮತ್ತು ಅವುಗಳಿಗೆ ಅಗತ್ಯವಿರುವ ಮುಂದುವರಿದ ತಂತ್ರಜ್ಞಾನವನ್ನು ತಯಾರಿಸುತ್ತಿದೆ, ಇವುಗಳನ್ನು ಸಹ ರಫ್ತು ಮಾಡುತ್ತಿದೆ. ದಾಹೋದ್ ಈ ಪ್ರಗತಿಗೆ ಜೀವಂತ ಸಾಕ್ಷಿಯಾಗಿದೆ.

ಸ್ವಲ್ಪ ಸಮಯದ ಹಿಂದೆ ನಾವು ಇಲ್ಲಿ ಹಲವಾರು ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ್ದೇವೆ. ದಾಹೋದ್‌ನಲ್ಲಿರುವ ವಿದ್ಯುತ್ ಲೋಕೋಮೋಟಿವ್ ಕಾರ್ಖಾನೆ ಇವುಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ನಾನು 3 ವರ್ಷಗಳ ಹಿಂದೆ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಲು ಇಲ್ಲಿಗೆ ಬಂದಿದ್ದೆ. ಕೆಲವು ವ್ಯಕ್ತಿಗಳು, ಬರೀ ಟೀಕೆಗಳಲ್ಲಿ ತೊಡಗುತ್ತಾರೆ. ಚುನಾವಣಾ ಲಾಭಕ್ಕಾಗಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು, ಅದರಿಂದ ಏನೂ ಪ್ರಯೋಜನವಿಲ್ಲ ಎಂದರು. ಆದರೆ ಇಂದು, 3 ವರ್ಷಗಳ ನಂತರ, ಈ ಕಾರ್ಖಾನೆಯಲ್ಲಿ ಮೊದಲ ವಿದ್ಯುತ್ ಲೋಕೋಮೋಟಿವ್ ಅನ್ನು ಯಶಸ್ವಿಯಾಗಿ ತಯಾರಿಸಲಾಗಿದೆ ಎಂಬುದನ್ನು ನಾವೆಲ್ಲರೂ ಈಗ ನೋಡಬಹುದು. ಸ್ವಲ್ಪ ಸಮಯದ ಹಿಂದೆ ಅದನ್ನು ಉದ್ಘಾಟಿಸುವ ಗೌರವ ನನಗೆ ಸಿಕ್ಕಿತು. ಇದು ಗುಜರಾತ್‌ಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ.

ಇಂದು, ಗುಜರಾತ್ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ - ಅದರ ರೈಲು ಜಾಲದ ಸಂಪೂರ್ಣ ವಿದ್ಯುದೀಕರಣ. ಈ ಸಾಧನೆಗಾಗಿ ಗುಜರಾತ್‌ನ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೆ,

ಮೊದಲನೆಯದಾಗಿ, ಈ ಕಾರ್ಯಕ್ರಮ ಆಯೋಜಿಸಿದ ಇಲ್ಲಿನ ಜನರಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲೇಬೇಕು, ನನ್ನನ್ನು ಮತ್ತೊಮ್ಮೆ ನಿಮ್ಮೆಲ್ಲರ ನಡುವೆ ಕರೆತಂದಿದ್ದೀರಿ. ಅನೇಕ ಹಿರಿಯ ನಾಗರಿಕರನ್ನು, ಅನೇಕ ಪರಿಚಿತ ಮುಖಗಳನ್ನು ಭೇಟಿ ಮಾಡುವ ಮತ್ತು ಲೆಕ್ಕವಿಲ್ಲದಷ್ಟು ಪ್ರೀತಿಯ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ನನಗೆ ಸಿಕ್ಕಿತು. ದಾಹೋದ್ ಜತೆಗಿನ ನನ್ನ ಒಡನಾಟವು ನನ್ನ ರಾಜಕೀಯ ಪ್ರವೇಶದೊಂದಿಗೆ ಪ್ರಾರಂಭವಾಗಲಿಲ್ಲ. ಇದು ಸುಮಾರು 70 ವರ್ಷಗಳ ಹಿಂದಿನದು. ಇಲ್ಲಿ 2-3 ತಲೆಮಾರುಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಇಂದು, ನಾನು 20 ವರ್ಷಗಳ ನಂತರ ನನ್ನ ಸ್ಥಳ(ಪರೇಲ್)ಕ್ಕೆ ಭೇಟಿ ನೀಡಿದ್ದೇನೆ. ಇಡೀ ಪ್ರದೇಶವು ರೂಪಾಂತರಗೊಂಡಿದೆ. ಮೊದಲು, ನಾನು ಭೇಟಿ ನೀಡಿದಾಗಲೆಲ್ಲಾ, ಸೂರ್ಯಾಸ್ತದ ವೇಳೆಗೆ ಪರೇಲ್‌ಗೆ ಸೈಕಲ್ ಸವಾರಿ ಮಾಡಲು ಪ್ರಯತ್ನಿಸುತ್ತಿದ್ದೆ. ಮಳೆ ಬಂದು ಸುತ್ತಮುತ್ತಲಿನ ಪ್ರದೇಶಗಳು ಹಸಿರಿನಿಂದ ಕೂಡಿದ್ದರೆ, ಸಣ್ಣ ಬೆಟ್ಟಗಳ ಮೂಲಕ ಸುತ್ತುವರಿದ ಕಿರಿದಾದ ಹಾದಿಗಳಲ್ಲಿ ನಾನು ಸಂತೋಷದಿಂದ ಸೈಕಲ್ ಸವಾರಿ ಮಾಡುತ್ತಿದ್ದೆ. ಅಂತಹ ಸಂಜೆಗಳು ನನಗೆ ಅಪಾರ ಸಂತವನ್ನು ತಂದವು. ಅದರ ನಂತರ, ನಾನು ಪರೇಲ್‌ನಲ್ಲಿ ರೈಲ್ವೆಯಲ್ಲಿ ಕೆಲಸ ಮಾಡುವ ಸಹೋದರರ ಮನೆಗಳಲ್ಲಿ ಊಟ ಮಾಡುತ್ತಿದ್ದೆ. ಅವರೊಂದಿಗಿನ ನನ್ನ ಬಾಂಧವ್ಯ ಅಷ್ಟು ಹತ್ತಿರವಾಗಿತ್ತು. ಇಂದು ಪರೇಲ್‌ನ ವೈಭವ ನೋಡುವುದು ನನಗೆ ಅಪಾರ ಸಂತೋಷ ತರುತ್ತದೆ.

ನಾವು ಇಲ್ಲಿ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಶ್ರಮಿಸಿದ್ದೇವ, ಹಲವಾರು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದಾಹೋದ್ ಬಗ್ಗೆ ನಾನು ಒಮ್ಮೆ ಕಂಡ ಕನಸುಗಳು ಈಗ ನನ್ನ ಕಣ್ಣ ಮುಂದೆಯೇ ನನಸಾಗುತ್ತಿವೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಭಾರತದಲ್ಲಿ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಯನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದರ ಮಾದರಿಯನ್ನು ಯಾರಾದರೂ ನೋಡಲು ಬಯಸಿದರೆ, ಅವರು ದಾಹೋದ್‌ಗೆ ಭೇಟಿ ನೀಡಬೇಕು ಎಂದು ಪೂರ್ಣ ವಿಶ್ವಾಸದಿಂದ ನಾನು ಪ್ರತಿಪಾದಿಸುತ್ತೇನೆ. ಬುಡಕಟ್ಟು ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸುವ ಕಲ್ಪನೆಯು ಒಂದು ಕಾಲದಲ್ಲಿ ಅನೇಕರನ್ನು ಅಚ್ಚರಿಗೊಳಿಸಿತು. ಆದಾಗ್ಯೂ, ಕಳೆದ 10–11 ವರ್ಷಗಳಲ್ಲಿ, ನಮ್ಮ ರೈಲ್ವೆಗಳು ಎಷ್ಟು ವೇಗವಾಗಿ ರೂಪಾಂತರಗೊಂಡಿವೆ ಎಂಬುದನ್ನು ನಾವು ನೋಡಿದ್ದೇವೆ. ರೈಲ್ವೆ ಅಭಿವೃದ್ಧಿಯ ದಿಕ್ಕು ಬದಲಾಗಿದೆ, ಅದರ ವೇಗ ಹೆಚ್ಚಾಗಿದೆ ಮತ್ತು ಮೆಟ್ರೋ ಸೇವೆಗಳು ವೇಗವಾಗಿ ವಿಸ್ತರಿಸುತ್ತಿವೆ. ಹಿಂದೆ, ಅರೆ-ಹೈ-ಸ್ಪೀಡ್ ರೈಲುಗಳು ಭಾರತದ ಶಬ್ದಕೋಶದ ಭಾಗವಾಗಿರಲಿಲ್ಲ. ಇಂದು ಈ ಪರಿಕಲ್ಪನೆಯು ಹೆಚ್ಚಿನ ವೇಗದಲ್ಲಿ ವಾಸ್ತವವಾಗುತ್ತಿದೆ. ಪ್ರಸ್ತುತ, ವಂದೇ ಭಾರತ್ ರೈಲುಗಳು ದೇಶಾದ್ಯಂತ ಸುಮಾರು 70 ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಂದು ದಾಹೋದ್‌ನಿಂದ, ಸೋಮನಾಥ ದಾದಾ ಅವರ ಪವಿತ್ರ ಪಾದಗಳಲ್ಲಿ, ಅಹಮದಾಬಾದ್ ಮತ್ತು ವೆರಾವಲ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭಿಸಲಾಗಿದೆ. ಇದಕ್ಕೂ ಮೊದಲು, ದಾಹೋದ್‌ನ ನಮ್ಮ ಸಹೋದರರು ಹತ್ತಿರದ ಉಜ್ಜಯಿನಿಗೆ ಪ್ರಯಾಣಿಸಲು ಆಗಾಗ್ಗೆ ಬಯಸುತ್ತಿದ್ದರು. ಈಗ, ಸೋಮನಾಥದ ಬಾಗಿಲುಗಳು ಸಹ ನಿಮಗಾಗಿ ತೆರೆದಿವೆ.

ಸ್ನೇಹಿತರೆ,

ಇಂದು ಭಾರತದಾದ್ಯಂತ ಅಸಂಖ್ಯಾತ ಆಧುನಿಕ ರೈಲುಗಳು ಓಡುತ್ತಿವೆ, ಈ ರೂಪಾಂತರಕ್ಕೆ ಪ್ರಮುಖ ಕಾರಣ ನಮ್ಮ ದೇಶದ ಯುವಕರು - ನಮ್ಮ ಹೊಸ ಪೀಳಿಗೆ - ಈಗ ಭಾರತದೊಳಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಭಾರತದಲ್ಲಿ ಬೋಗಿಗಳನ್ನು ತಯಾರಿಸಲಾಗುತ್ತಿದೆ, ಲೋಕೋಮೋಟಿವ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ ಹಿಂದೆ, ನಾವು ಇವೆಲ್ಲವನ್ನೂ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಈಗ ಹೂಡಿಕೆ ನಮ್ಮದು, ಪ್ರಯತ್ನ ನಮ್ಮದು, ಮತ್ತು ಸಾಧನೆಗಳು ಸಹ ನಮ್ಮದೇ ಆಗಿವೆ. ಭಾರತವು ರೈಲ್ವೆ ಸಂಬಂಧಿತ ಉಪಕರಣಗಳ ಪ್ರಮುಖ ಜಾಗತಿಕ ರಫ್ತುದಾರನಾಗುತ್ತಿದೆ. ನೀವು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದರೆ, ಅವರ ಮೆಟ್ರೋ ವ್ಯವಸ್ಥೆಗಳಲ್ಲಿ ಬಳಸುವ ಬೋಗಿಗಳನ್ನು ಗುಜರಾತ್‌ನಲ್ಲಿ ತಯಾರಿಸಲಾಗುತ್ತದೆ ಎಂಬುದನ್ನು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಇಂಗ್ಲೆಂಡ್, ಸೌದಿ ಅರೇಬಿಯಾ ಅಥವಾ ಫ್ರಾನ್ಸ್‌ಗೆ ಭೇಟಿ ನೀಡಿ, ಆ ದೇಶಗಳಲ್ಲಿ ಕಾರ್ಯ ನಿರ್ವಹಿಸುವ ಅನೇಕ ಆಧುನಿಕ ರೈಲುಗಳಿಗೆ ಬೋಗಿಗಳನ್ನು ಇಲ್ಲಿಯೇ ಭಾರತದಲ್ಲಿ ತಯಾರಿಸಲಾಗುತ್ತಿದೆ ಎಂದು ನೀವು ಕಂಡುಕೊಳ್ಳುತ್ತೀರಿ. ಮೆಕ್ಸಿಕೊ, ಸ್ಪೇನ್, ಜರ್ಮನಿ ಮತ್ತು ಇಟಲಿಯಲ್ಲಿ, ವಿವಿಧ ಸಣ್ಣ ಮತ್ತು ದೊಡ್ಡ ರೈಲ್ವೆ ಘಟಕಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ.

 

ನಮ್ಮ ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳು - ಎಂಎಸ್ಎಂಇಗಳು ಮತ್ತು ಗುಡಿ ಕೈಗಾರಿಕೆಗಳನ್ನು ನಡೆಸುವವರು ಅಸಾಧಾರಣ ಕೆಲಸ ಮಾಡುತ್ತಿದ್ದಾರೆ. ಅವರು ಸಂಕೀರ್ಣವಾದ ಭಾಗಗಳನ್ನು ನಿಖರತೆಯೊಂದಿಗೆ ತಯಾರಿಸುತ್ತಿದ್ದಾರೆ, ಅವುಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುತ್ತಿದ್ದಾರೆ. ಮೊಜಾಂಬಿಕ್ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಈಗ ಭಾರತೀಯ ಪ್ರಯಾಣಿಕ ಕೋಚ್‌ಗಳನ್ನು ಬಳಸಲಾಗುತ್ತಿದೆ. ಭಾರತದಲ್ಲಿ ತಯಾರಿಸಿದ ಲೋಕೋಮೋಟಿವ್‌ಗಳು ಮತ್ತು ಎಂಜಿನ್‌ಗಳನ್ನು ಹಲವಾರು ದೇಶಗಳಿಗೆ ರಫ್ತು ಮಾಡುತ್ತಿದೆ. ಈ 'ಭಾರತದಲ್ಲಿ ತಯಾರಿಸಿದ' ಬ್ರ್ಯಾಂಡ್ ವಿಸ್ತರಿಸುತ್ತಿದೆ. ಇದರಿಂದಾಗಿ, ಭಾರತವು ಪ್ರಪಂಚದ ಮುಂದೆ ಹೆಮ್ಮೆಯಿಂದ ತಲೆ ಎತ್ತಿ ಹಿಡಿಯಬಹುದು.

ದಾಹೋದ್‌ನ ನನ್ನ ಸಹೋದರ ಸಹೋದರಿಯರೆ, ನನಗೆ ಹೇಳಿ - ಈಗ ಭಾರತೀಯ ನಿರ್ಮಿತ ವಸ್ತುಗಳು ಜಾಗತಿಕ ಮನ್ನಣೆ ಪಡೆಯುತ್ತಿವೆ. ನಾವು ಮನೆಯಲ್ಲಿ ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಳಸುವುದನ್ನು ಮುಂದುವರಿಸಬೇಕೇ? ಜೋರಾಗಿ ಉತ್ತರಿಸಿ - ನಾವು ಮಾಡಬೇಕೇ ಅಥವಾ ಬೇಡವೇ? ತ್ರಿವರ್ಣ ಧ್ವಜವನ್ನು ಬೀಸುವ ಮೂಲಕ ಹೇಳಿ - ನಾವು ಭಾರತೀಯ ನಿರ್ಮಿತ ಸರಕುಗಳನ್ನು ಬೆಂಬಲಿಸಬೇಕೇ ಅಥವಾ ಬೇಡವೇ? ನಿಮ್ಮನ್ನು ನೋಡಿದರೆ, ನೀವು ತ್ರಿವರ್ಣ ಧ್ವಜದ ನೆರಳಿನಲ್ಲಿ ಕುಳಿತು ಘೋಷಿಸುತ್ತಿದ್ದೀರಿ. ನಾವು ನಮ್ಮ ಸ್ವಂತ ದೇಶದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಏಕೆ ಬಳಸಬಾರದು? ಹಾಗಾದರೆ, ಗಣೇಶ ಚತುರ್ಥಿ ಬಂದಾಗ ನಾವು ವಿದೇಶಿ ವೈಶಿಷ್ಟ್ಯಗಳು ಮತ್ತು ಸಣ್ಣ ಕಣ್ಣುಗಳನ್ನು ಹೊಂದಿರುವ ಗಣಪತಿ ವಿಗ್ರಹಗಳನ್ನು ಮನೆಗೆ ತರಬೇಕೇ? ನಮ್ಮ ಸ್ವಂತ ದೇಶವಾದ ಭಾರತದಲ್ಲಿ ತಯಾರಿಸಿದ ವಿಗ್ರಹಗಳನ್ನು ಮನೆಗೆ ಏಕೆ ತರಬಾರದು? ಹೋಳಿ ಮತ್ತು ದೀಪಾವಳಿ ಸಮಯದಲ್ಲಿ, ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ಪಟಾಕಿ ಮತ್ತು ಪಿಚ್ಕರಿಗಳನ್ನು ಬಳಸಬೇಕೇ? ಬದಲಾಗಿ ನಾವು ಭಾರತೀಯ ಉತ್ಪನ್ನಗಳನ್ನು ಆರಿಸಿಕೊಳ್ಳಬೇಕೆ? ಭಾರತೀಯರು ಭಾರತೀಯ ನಿರ್ಮಿತ ಉತ್ಪನ್ನಗಳಿಂದ ಗಳಿಸಬೇಕೇ ಅಥವಾ ಬೇಡವೇ? ಭಾರತವು ಪ್ರಗತಿ ಹೊಂದಬೇಕಾದರೆ, ಪ್ರತಿಯೊಬ್ಬ ಭಾರತೀಯನು ಇದನ್ನು ವೈಯಕ್ತಿಕ ನಿರ್ಣಯವಾಗಿ ತೆಗೆದುಕೊಳ್ಳಬೇಕು.

ಸ್ನೇಹಿತರೆ,

ರೈಲ್ವೆ ವಲಯವು ಪ್ರಬಲವಾಗಿದ್ದಾಗ, ಅದು ವರ್ಧಿತ ಸೌಲಭ್ಯಗಳಿಗೆ ಕಾರಣವಾಗುತ್ತದೆ, ಇದು ಕೈಗಾರಿಕೆಗಳು, ಕೃಷಿ, ವಿದ್ಯಾರ್ಥಿಗಳಿಗೆ ಪ್ರಯೋಜನ ನೀಡುತ್ತದೆ. ನಮ್ಮ ಸಹೋದರಿಯರಿಗೆ ಗಮನಾರ್ಹ ಪರಿಹಾರ ನೀಡುತ್ತದೆ. ಕಳೆದ ದಶಕದಲ್ಲಿ, ರೈಲುಗಳು ಮೊದಲ ಬಾರಿಗೆ ಅನೇಕ ಪ್ರದೇಶಗಳನ್ನು ತಲುಪಿವೆ. ಗುಜರಾತ್‌ನೊಳಗೆ ಸಹ, ಸಣ್ಣ ರೈಲುಗಳು ಮಾತ್ರ ಚಲಿಸುವ ಅನೇಕ ಸ್ಥಳಗಳಿದ್ದವು, ಅಲ್ಲಿ ಅವು ಸಹ ಅತ್ಯಂತ ನಿಧಾನವಾಗಿ ಚಲಿಸುತ್ತಿದ್ದವು. ಉದಾಹರಣೆಗೆ, ದಾಭೋಯ್ ಪ್ರದೇಶವನ್ನು ತೆಗೆದುಕೊಳ್ಳಿ. ಅಲ್ಲಿನ ರೈಲುಗಳು ತುಂಬಾ ನಿಧಾನವಾಗಿದ್ದವು, ಒಬ್ಬರು ಮಧ್ಯದಲ್ಲಿ ಹಾಪ್ ಆಫ್ ಮಾಡಿ ಅದು ಚಲಿಸುತ್ತಿರುವಾಗಲೇ ಮತ್ತೆ ಹತ್ತಬಹುದಿತ್ತು! ಅಂತಹ ಅನೇಕ ಕಿರಿದಾದ-ಗೇಜ್ ಮಾರ್ಗಗಳನ್ನು ಈಗ ಬ್ರಾಡ್-ಗೇಜ್ ಆಗಿ ಪರಿವರ್ತಿಸಲಾಗಿದೆ. ದಾಭೋಯ್‌ನಲ್ಲಿರುವ ಕಿರಿದಾದ-ಗೇಜ್ ರೈಲ್ವೆಯನ್ನು ಈಗ ನವೀಕರಿಸಲಾಗಿದೆ.

ಇಂದು ಇಲ್ಲಿ ಹಲವಾರು ರೈಲು ಮಾರ್ಗಗಳನ್ನು ಉದ್ಘಾಟಿಸಲಾಗಿದೆ. ದಾಹೋದ್ ಮತ್ತು ವಲ್ಸಾದ್ ನಡುವೆ ಎಕ್ಸ್‌ಪ್ರೆಸ್ ರೈಲು ಈಗ ಕಾರ್ಯಾಚರಣೆ ಪ್ರಾರಂಭಿಸಿದೆ. ದಾಹೋದ್‌ನ ನನ್ನ ಸಹೋದರರು ಗುಜರಾತ್‌ನ ಪ್ರತಿಯೊಂದು ಮೂಲೆಯಲ್ಲೂ ಇದ್ದಾರೆ. ರಾಜ್ಯದ ಯಾವುದೇ ಸಣ್ಣ ಪಟ್ಟಣಕ್ಕೆ ಭೇಟಿ ನೀಡಬಹುದು, ನೀವು ದಾಹೋದ್‌ನಿಂದ ಯಾರನ್ನಾದರೂ ಕಂಡುಕೊಳ್ಳುವುದು ಖಚಿತ. ಈಗ ಈ ಹೊಸ ರೈಲ್ವೆ ಜಾಲವನ್ನು ನಿರ್ಮಿಸಲಾಗುತ್ತಿರುವುದರಿಂದ, ದಾಹೋದ್ ಶೀಘ್ರದಲ್ಲೇ 100-ಕಿಲೋಮೀಟರ್ ಜಾಲದಿಂದ ಸಂಪರ್ಕ ಕಲ್ಪಿಸುತ್ತದೆ. ಈ ಅಭಿವೃದ್ಧಿಯ ಹೆಚ್ಚಿನ ಫಲಾನುಭವಿಗಳು ನಮ್ಮ ಬುಡಕಟ್ಟು ಮಕ್ಕಳಾಗಿದ್ದಾರೆ.

 

ಒಂದು ಕಾರ್ಖಾನೆ ಸ್ಥಾಪಿಸಿದಲ್ಲೆಲ್ಲಾ, ಅದರ ಸುತ್ತಲೂ ಸಂಪೂರ್ಣ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದಲು ಪ್ರಾರಂಭಿಸುತ್ತದೆ. ಸಣ್ಣ ಘಟಕಗಳನ್ನು ಉತ್ಪಾದಿಸಲು ಪೂರಕ ಕಾರ್ಖಾನೆಗಳು ಹುಟ್ಟಿಕೊಳ್ಳುತ್ತವೆ, ಇವು ಪ್ರತಿಯಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ನಮ್ಮ ಯುವಕರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಸಿಗುವುದನ್ನು ಖಚಿತಪಡಿಸಿಕೊಳ್ಳಲು ನಾನು ಕೆಲಸ ಮಾಡುತ್ತಿದ್ದೇನೆ. ದಾಹೋದ್‌ನಲ್ಲಿರುವ ರೈಲು ಕಾರ್ಖಾನೆ ವಿಶ್ವದ ಪ್ರಮುಖ ಉತ್ಪಾದನಾ ಘಟಕಗಳಲ್ಲಿ ಒಂದಾಗಲಿದೆ. ಭಾರತಕ್ಕೆ ಮಾತ್ರವಲ್ಲ, ಭಾರತಕ್ಕೆ ಒಂದು ಹೆಗ್ಗುರುತಾಗಿದೆ. ಸ್ನೇಹಿತರೆ, ಇದು ಸಾಮಾನ್ಯ ಕಾರ್ಖಾನೆಯಲ್ಲ. ನಾನು ನಿಮಗೆ ನೆನಪಿಸುತ್ತೇನೆ... ಅಲ್ಲಿರುವ ಎಲ್ಲವೂ ಬಹುತೇಕ ಕಣ್ಮರೆಯಾಗಿತ್ತು. ಆ ಸ್ಥಳಕ್ಕೆ ಬೀಗ ಹಾಕಲಾಗಿತ್ತು. ದಾಹೋದ್‌ನ ಪರೇಲ್ ನನ್ನ ಕಣ್ಣ ಮುಂದೆ ಒಣಗಿ ಹೋಗುವುದನ್ನು ನಾನು ನೋಡಿದ್ದೇನೆ. ಈಗ, ಅದು ಮತ್ತೆ ಜೀವಂತವಾಗುವುದನ್ನು ನಾನು ನೋಡುತ್ತಿದ್ದೇನೆ, ಅದು ಭವ್ಯವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ರೂಪಾಂತರವು ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದಾ ಆಗಿದೆ. ಇಂದು ಭಾರತದ 9,000 ಅಶ್ವಶಕ್ತಿಯ ಲೋಕೋಮೋಟಿವ್ ಅನ್ನು ಎಲ್ಲಿ ನಿರ್ಮಿಸಲಾಗಿದೆ ಎಂದು ಯಾರಾದರೂ ಕೇಳಿದರೆ, ಉತ್ತರ ಹೀಗಿರುತ್ತದೆ, ಅದು ದಾಹೋದ್. ಇಲ್ಲಿ ತಯಾರಾಗುತ್ತಿರುವ ಲೋಕೋಮೋಟಿವ್‌ಗಳು ಹೆಮ್ಮೆಯಿಂದ ಭಾರತದಲ್ಲಿ ತಯಾರಾಗುತ್ತವೆ. ಇವು ನಮ್ಮ ರೈಲ್ವೆಯ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಇಲ್ಲಿ ತಯಾರಾಗುವ ಟೈರ್‌ಗಳು ಪ್ರಪಂಚದಾದ್ಯಂತ ಖ್ಯಾತಿ ಗಳಿಸುತ್ತವೆ, ದಾಹೋದ್‌ನ ಹೆಸರು ಜಾಗತಿಕವಾಗಿ ಹೊಳೆಯುತ್ತದೆ. ಮುಂಬರುವ ವರ್ಷಗಳಲ್ಲಿ, ನೂರಾರು ಲೋಕೋಮೋಟಿವ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಶೀಘ್ರದಲ್ಲೇ, ಪ್ರತಿ 2 ದಿನಗಳಿಗೊಮ್ಮೆ ಹೊಸ ಲೋಕೋಮೋಟಿವ್ ಬಿಡುಗಡೆಯಾಗುವ ಸಮಯ ಬರಲಿದೆ. ಈ ಸಾಧನೆಯ ಪ್ರಮಾಣವನ್ನು ಊಹಿಸಿ - ಪ್ರತಿ 2 ದಿನಗಳಿಗೊಮ್ಮೆ ಒಂದು ಲೋಕೋಮೋಟಿವ್! ಇಂತಹ ಬೃಹತ್ ಕಾರ್ಯಾಚರಣೆಯು ನಮ್ಮ ಸ್ಥಳೀಯ ಸಹೋದರ ಸಹೋದರಿಯರಿಗೆ ಮತ್ತು ನಮ್ಮ ಯುವಕರಿಗೆ ವ್ಯಾಪಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಕಾರ್ಖಾನೆಯು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಡಿಭಾಗಗಳ ಉತ್ಪಾದನಾ ಘಟಕಗಳು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ವಿಶಾಲ ಜಾಲದ ಬೆಳವಣಿಗೆಗೆ ಕಾರಣವಾಗುತ್ತದೆ.

ಕಾರ್ಖಾನೆಯಲ್ಲಿ ನೇರವಾಗಿ ಉದ್ಯೋಗಾವಕಾಶಗಳು ಖಂಡಿತವಾಗಿಯೂ ಸೃಷ್ಟಿಯಾಗುತ್ತವೆಯಾದರೂ, ಈ ಪೋಷಕ ಕೈಗಾರಿಕೆಗಳು ಲೆಕ್ಕವಿಲ್ಲದಷ್ಟು ಹೊಸ ಉದ್ಯೋಗಗಳನ್ನು ಸೃಜಿಸುತ್ತವೆ. ಅದು ನಮ್ಮ ರೈತ ಸಹೋದರ ಸಹೋದರಿಯರಾಗಿರಲಿ, ನಮ್ಮ ಜಾನುವಾರು ಸಾಕಣೆದಾರರು, ಸಣ್ಣ ಅಂಗಡಿಯವರು, ಕಾರ್ಮಿಕರು, ಪುರುಷರು ಅಥವಾ ಮಹಿಳೆಯರು, ಸಮಾಜದ ಪ್ರತಿಯೊಂದು ವಿಭಾಗವು ಈ ಅಭಿವೃದ್ಧಿಯಿಂದ ಅಪಾರ ಪ್ರಯೋಜನ ಪಡೆಯುತ್ತದೆ.

 

ಸ್ನೇಹಿತರೆ,

ಇಂದು ಗುಜರಾತ್ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಸೆಮಿಕಂಡಕ್ಟರ್ ಗಳು ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಯಾವುದೇ ಕ್ಷೇತ್ರವನ್ನು ಹೆಸರಿಸಿ, ಗುಜರಾತ್‌ನ ತ್ರಿವರ್ಣ ಧ್ವಜವು ಎತ್ತರಕ್ಕೆ ಹಾರುವುದನ್ನು ನೀವು ನೋಡುತ್ತೀರಿ. ಸಾವಿರಾರು ಕೋಟಿ ರೂ. ಮೌಲ್ಯದ ಹೂಡಿಕೆಗಳು ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ ಸ್ಥಾವರಗಳ ನಿರ್ಮಾಣಕ್ಕೆ ಕಾರಣವಾಗುತ್ತಿವೆ. ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ, ರಾಜ್ಯಾದ್ಯಂತ ಲಕ್ಷಾಂತರ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಸ್ನೇಹಿತರೆ,

ವಡೋದರದಲ್ಲಿ ವಿವಿಧ ಸಣ್ಣ ಮತ್ತು ದೊಡ್ಡ ಯೋಜನೆಗಳು ನಡೆಯುತ್ತಿದ್ದ ಸಮಯವಿತ್ತು. ನಾನು ಪಂಚಮಹಲ್ ಜಿಲ್ಲೆಯನ್ನು ವಿಭಜಿಸಿ ದಾಹೋದ್ ಅನ್ನು ಪ್ರತ್ಯೇಕ ಜಿಲ್ಲೆಯಾಗಿ ರಚಿಸಿದ ದಿನವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಈ ನಿರ್ಧಾರವು ಪಂಚಮಹಲ್ ಮತ್ತು ದಾಹೋದ್ ಎರಡರ ಸ್ವತಂತ್ರ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ನನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿತ್ತು. ಇಂದು ಆ ಅಭಿವೃದ್ಧಿಯನ್ನು ನನ್ನ ಕಣ್ಣ ಮುಂದೆಯೇ ನೋಡಿದಾಗ, ಈ ಭೂಮಿಗೆ ನಾನು ಸಲ್ಲಿಸಬೇಕಾದ ಋಣವನ್ನು ತೀರಿಸುವಲ್ಲಿ ನಾನು ಅನುಭವಿಸುವ ಸಂತೋಷವು ಅಪಾರವಾಗಿದೆ. ಸ್ನೇಹಿತರೆ, ನಾನು ತುಂಬಾ ಸಂತೋಷವಾಗಿದ್ದೇನೆ, ಏಕೆಂದರೆ ನಾನು ನಿಮ್ಮ ಉಪ್ಪಿನಲ್ಲೂ ಭಾಗಿಯಾಗಿದ್ದೇನೆ, ನಾನು ನಿಮಗಾಗಿ ಎಷ್ಟೇ ಮಾಡಿದರೂ ಅದು ಎಂದಿಗೂ ಸಾಕಾಗುವುದಿಲ್ಲ. ಸುತ್ತಲೂ ನೋಡಿ - ಇಂದು, ನಾವು ಸಣ್ಣ ಪ್ರಮಾಣದ ಕೈಗಾರಿಕೆಗಳ ಜಾಲವನ್ನು ನೋಡುತ್ತೇವೆ, ಅವುಗಳ ಸಂಪೂರ್ಣ ಜಾಲ, ಸಾಮಾನ್ಯವಲ್ಲ ಆದರೆ ಹೆಚ್ಚು ಮುಂದುವರಿದ ಮತ್ತು ಹೈಟೆಕ್ ಉತ್ಪನ್ನಗಳನ್ನು ಉತ್ಪಾದಿಸುತ್ತವೆ. ಈ ಸಂಪೂರ್ಣ ಬೆಳವಣಿಗೆಯನ್ನು ನನ್ನ ಬುಡಕಟ್ಟು ಸಹೋದರ ಸಹೋದರಿಯರು ನಡೆಸುತ್ತಿದ್ದಾರೆ.

ನೀವು ವಡೋದರಾದಿಂದ ದಾಹೋದ್‌ಗೆ ಮತ್ತು ಮಧ್ಯಪ್ರದೇಶಕ್ಕೆ ಪ್ರಯಾಣಿಸಿದರೆ, ವಿಮಾನ ತಯಾರಿಕೆಯು ಈಗ ವಡೋದರಾದಲ್ಲಿ ತ್ವರಿತ ಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ನೀವು ನೋಡುತ್ತೀರಿ. ಕೆಲವೇ ತಿಂಗಳ ಹಿಂದೆ, ಏರ್‌ಬಸ್ ಅಸೆಂಬ್ಲಿ ಲೈನ್ ಅನ್ನು ಅಲ್ಲಿ ಉದ್ಘಾಟಿಸಲಾಯಿತು. ದೇಶದ ಮೊದಲ ಗತಿಶಕ್ತಿ ವಿಶ್ವವಿದ್ಯಾಲಯವನ್ನು ವಡೋದರಾದಲ್ಲಿ ಸ್ಥಾಪಿಸಲಾಯಿತು. ವಿದೇಶಿ ಹೂಡಿಕೆಯಿಂದ ನಡೆಸಲ್ಪಡುವ ರೈಲ್ವೆ ಕೋಚ್‌ಗಳು ಮತ್ತು ಕಾರುಗಳನ್ನು ತಯಾರಿಸುವ ಪ್ರಮುಖ ಕಾರ್ಖಾನೆಯನ್ನು ಸಾವ್ಲಿಯಲ್ಲಿ ಸ್ಥಾಪಿಸಲಾಗಿದೆ, ಇಂದು ಅದು ಜಾಗತಿಕ ಎತ್ತರಕ್ಕೆ ಏರುತ್ತಿದೆ. ಭಾರತದ ಅತ್ಯಂತ ಶಕ್ತಿಶಾಲಿ ರೈಲು ಎಂಜಿನ್ 9,000 ಅಶ್ವಶಕ್ತಿಯ ಲೋಕೋಮೋಟಿವ್ ಇಲ್ಲಿಯೇ ದಾಹೋದ್‌ನಲ್ಲಿ ತಯಾರಿಸಲಾಗುತ್ತಿದೆ. ಗೋಧ್ರಾ, ಕಲೋಲ್ ಮತ್ತು ಹಲೋಲ್‌ನಲ್ಲಿರುವ ಹಲವಾರು ಕೈಗಾರಿಕೆಗಳು ಮತ್ತು ಉತ್ಪಾದನಾ ಘಟಕಗಳು ಕೈಗಾರಿಕಾ ಅಭಿವೃದ್ಧಿಯ ಹಿಂದಿನ ಪ್ರಮುಖ ಪ್ರೇರಕಶಕ್ತಿಗಳಾಗಿ ಹೊರಹೊಮ್ಮುತ್ತಿವೆ. ಗುಜರಾತ್‌ನಾದ್ಯಂತ ಪ್ರಗತಿಯ ಅಲೆಯು ವ್ಯಾಪಿಸುತ್ತಿದೆ.

 

ಸ್ನೇಹಿತರೆ,

ಗುಜರಾತ್ ಸೈಕಲ್‌ಗಳು ಮತ್ತು ಮೋಟಾರ್‌ಸೈಕಲ್‌ಗಳಿಂದ ಹಿಡಿದು ರೈಲ್ವೆ ಎಂಜಿನ್‌ಗಳು ಮತ್ತು ವಿಮಾನಗಳವರೆಗೆ ಎಲ್ಲವನ್ನೂ ತಯಾರಿಸುವ ದಿನಕ್ಕಾಗಿ ನಾನು ಕಾತುರದಿಂದ ಕಾಯುತ್ತಿದ್ದೇನೆ, ಅದನ್ನೆಲ್ಲ ಗುಜರಾತ್‌ನ ಯುವಕರು ಗುಜರಾತ್‌ನ ನೆಲದಲ್ಲಿ ನಿರ್ಮಿಸುತ್ತಾರೆ. ಅಂತಹ ಹೈಟೆಕ್ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಕಾರಿಡಾರ್ ವಿಶ್ವದಲ್ಲಿ ಅಪರೂಪದ ವಿದ್ಯಮಾನವಾಗಿದೆ. ವಡೋದರಾದಿಂದ ದಾಹೋದ್, ಹಲೋಲ್, ಕಲೋಲ್ ಮತ್ತು ಗೋಧ್ರಾವರೆಗೆ ವಿಸ್ತರಿಸಿರುವ ಅಸಾಧಾರಣ ಕೈಗಾರಿಕಾ ಜಾಲವನ್ನು ಸ್ಥಾಪಿಸಲಾಗುತ್ತಿದೆ.

ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ಭಾರತದ ಸೃಷ್ಟಿಗೆ, ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಯೂ ಅಷ್ಟೇ ಮುಖ್ಯ. ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದಾಗ, ರಾಜ್ಯದ ಪೂರ್ವ ವಲಯದಲ್ಲಿರುವ ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು, ಅವರ ಕಲ್ಯಾಣಕ್ಕಾಗಿ ನನ್ನನ್ನು ಸಂಪೂರ್ಣ ಅರ್ಪಿಸಿಕೊಂಡೆ. ನಂತರ, ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವಾಗ, ನಾನು ಈ ಪ್ರಯತ್ನಗಳನ್ನು ಮುಂದುವರಿಸಿದೆ. ಕಳೆದ 11 ವರ್ಷಗಳಲ್ಲಿ, ಬುಡಕಟ್ಟು ಸಮುದಾಯಗಳ ಅಭೂತಪೂರ್ವ ಅಭಿವೃದ್ಧಿಗೆ ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಗುಜರಾತ್‌ನ ಬುಡಕಟ್ಟು ಪ್ರದೇಶಗಳಲ್ಲಿ ದೀರ್ಘಕಾಲದವರೆಗೆ ಸುಮಾರು 7 ದಶಕಗಳವರೆಗೆ ವ್ಯಾಪಕವಾಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ, ಬುಡಕಟ್ಟು ಸಹೋದರ ಸಹೋದರಿಯರು ಹಂಚಿಕೊಂಡ ಲೆಕ್ಕವಿಲ್ಲದಷ್ಟು ಅನುಭವಗಳನ್ನು ನಾನು ಕೇಳಿದ್ದೇನೆ. ಉಮರ್ಗಮ್‌ನಿಂದ ಅಂಬಾಜಿಯವರೆಗಿನ ಇಡೀ ಬುಡಕಟ್ಟು ಪ್ರದೇಶದಲ್ಲಿ 12 ನೇ ತರಗತಿಗೆ ಒಂದೇ ಒಂದು ವಿಜ್ಞಾನ ಶಾಲೆ ಇಲ್ಲದಿದ್ದ ಸಮಯವಿತ್ತು. ನಾನು ಅಂತಹ ಸಮಯಗಳನ್ನು ಕಂಡಿದ್ದೇನೆ. ಆದರೆ ಇಂದು ಆ ಪ್ರದೇಶದಲ್ಲಿ - ಉಮರ್ಗಮ್‌ನಿಂದ ಅಂಬಾಜಿಯವರೆಗೆ - ಹಲವಾರು ಕಾಲೇಜುಗಳು, ಐಟಿಐಗಳು, ವೈದ್ಯಕೀಯ ಕಾಲೇಜುಗಳು ಮತ್ತು 2 ಬುಡಕಟ್ಟು ವಿಶ್ವವಿದ್ಯಾಲಯಗಳು ಬುಡಕಟ್ಟು ಪ್ರದೇಶಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಕಳೆದ 11 ವರ್ಷಗಳಲ್ಲಿ, ಏಕಲವ್ಯ ಮಾದರಿ ವಸತಿ ಶಾಲೆಗಳ ಜಾಲವು ಗಮನಾರ್ಹವಾಗಿ ವಿಸ್ತರಿಸಿದೆ. ದಾಹೋದ್‌ನಲ್ಲಿಯೂ ಇಂತಹ ಹಲವಾರು ಶಾಲೆಗಳನ್ನು ಸ್ಥಾಪಿಸಲಾಗಿದೆ.

ಸ್ನೇಹಿತರೆ,

ಇಂದು ಬುಡಕಟ್ಟು ಸಮುದಾಯಗಳ ಉನ್ನತಿಗಾಗಿ ದೇಶಾದ್ಯಂತ ವ್ಯಾಪಕ ಮತ್ತು ಕೇಂದ್ರೀಕೃತ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಬುಡಕಟ್ಟು ಗ್ರಾಮಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಹಲವಾರು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇತ್ತೀಚಿನ ಬಜೆಟ್‌ನಲ್ಲಿ ನಾವು ಬುಡಕಟ್ಟು ಗ್ರಾಮ ಅಭಿವೃದ್ಧಿಗಾಗಿ 'ಧರ್ತಿ ಆಬಾ' ಉಪಕ್ರಮ ಪ್ರಾರಂಭಿಸಿದ್ದೇವೆ ಎಂಬುದನ್ನು ನೀವು ಗಮನಿಸಿರಬಹುದು - ಬಿರ್ಸಾ ಮುಂಡಾವನ್ನು ಧರ್ತಿ ಆಬಾ ಎಂದು ಪೂಜಿಸಲಾಗುತ್ತದೆ.

 

ಈ ಬ್ಯಾನರ್ ಅಡಿ, ನಾವು ಜನಜಾತಿಯಾ ಗ್ರಾಮ ಉತ್ಕರ್ಷ್ ಅಭಿಯಾನ ಪ್ರಾರಂಭಿಸಿದ್ದೇವೆ, ಇದರ ಮೂಲಕ ಕೇಂದ್ರ ಸರ್ಕಾರ ಸುಮಾರು 80,000 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಉಪಕ್ರಮವು ಗುಜರಾತ್‌ ಒಳಗೊಂಡಂತೆ ದೇಶಾದ್ಯಂತ 60,000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸುತ್ತಿದೆ. ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ - ಅದು ವಿದ್ಯುತ್, ಶುದ್ಧ ಕುಡಿಯುವ ನೀರು, ರಸ್ತೆಗಳು, ಶಾಲೆಗಳು ಅಥವಾ ಆಸ್ಪತ್ರೆಗಳಾಗಲಿ - ಅತ್ಯಂತ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ. ಈಗ ದೇಶಾದ್ಯಂತ ಘನವಾದ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಲಾಗುತ್ತಿದೆ.

ಸ್ನೇಹಿತರೆ,

ಜಗತ್ತು ಹೆಚ್ಚಾಗಿ ನಿರ್ಲಕ್ಷಿಸುವವರನ್ನು ಮೋದಿ ಪೂಜಿಸುತ್ತಾರೆ. ಬುಡಕಟ್ಟು ಜನಸಂಖ್ಯೆಯ ಅನೇಕ ಸಮುದಾಯಗಳು ಬಹಳ ಹಿಂದಿನಿಂದಲೂ ಹಿಂದುಳಿದಿವೆ, ಆದರೆ ಅವುಗಳನ್ನು ಮರೆಯದಂತೆ ನಾವು ಖಚಿತಪಡಿಸಿಕೊಂಡಿದ್ದೇವೆ. ಅವರಿಗಾಗಿ ಸರ್ಕಾರವು ಪ್ರಧಾನ ಮಂತ್ರಿ ಜನ್ಮನ್ ಯೋಜನೆ ಪರಿಚಯಿಸಿದೆ. ಈ ಯೋಜನೆಯಡಿ, ಅತ್ಯಂತ ಅಂಚಿನಲ್ಲಿರುವ, ನಿರ್ಲಕ್ಷಿತ ಬುಡಕಟ್ಟು ಕುಟುಂಬಗಳಿಗೆ ವಸತಿ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳಂತಹ ಅಗತ್ಯ ಸೇವೆಗಳನ್ನು ತಲುಪಿಸಲು ನಾವು ಕೆಲಸ ಮಾಡುತ್ತಿದ್ದೇವೆ.

ಸಹೋದರ ಸಹೋದರಿಯರೆ,

ಗುಜರಾತ್‌ನಲ್ಲಿರುವ ನಮಗೆ ಕುಡಗೋಲು ಕಣ ಕಾಯಿಲೆಯಿಂದ ಉಂಟಾಗುವ ಸವಾಲುಗಳ ಬಗ್ಗೆ ಬಹಳ ಹಿಂದಿನಿಂದಲೂ ಅರಿವಿದೆ. ನಾನು ಗುಜರಾತ್‌ನಲ್ಲಿದ್ದಾಗಿನಿಂದ ಈ ಕಾಯಿಲೆ ನಿವಾರಿಸಲು ಪ್ರಯತ್ನಗಳನ್ನು ಮಾಡುತ್ತಿದ್ದೇನೆ, ಇಂದು ನಾವು ಅದನ್ನು ರಾಷ್ಟ್ರವ್ಯಾಪಿ ಮಟ್ಟದಲ್ಲಿ ಪರಿಹರಿಸುತ್ತಿದ್ದೇವೆ. ನನ್ನ ಬುಡಕಟ್ಟು ಸಹೋದರ ಸಹೋದರಿಯರನ್ನು ಕುಡಗೋಲು ಕಣ ಕಾಯಿಲೆಯ ಹಿಡಿತದಿಂದ ಮುಕ್ತಗೊಳಿಸಲು ನಾವು ಕಾರ್ಯಾಚರಣೆ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ಕಾರ್ಯಾಚರಣೆಯ ಭಾಗವಾಗಿ, ಲಕ್ಷಾಂತರ ಬುಡಕಟ್ಟು ಜನರನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ.

ಐತಿಹಾಸಿಕವಾಗಿ ಹಿಂದುಳಿದಿರುವ ಪ್ರದೇಶಗಳ ಅಭಿವೃದ್ಧಿ ವೇಗಗೊಳಿಸಲು ನಮ್ಮ ಸರ್ಕಾರ ಶ್ರಮಿಸುತ್ತಿದೆ. ದುರದೃಷ್ಟವಶಾತ್, ದೇಶದ 100 ಅತ್ಯಂತ ಹಿಂದುಳಿದ ಜಿಲ್ಲೆಗಳನ್ನು ಈ ಹಿಂದೆ ಅವರ ಅದೃಷ್ಟಕ್ಕೆ ಕೈಬಿಡಲಾಗಿತ್ತು. ಈ ಪ್ರದೇಶಗಳನ್ನು ನಿರ್ಲಕ್ಷಿಸಲಾಗಿತ್ತು, ಅಲ್ಲಿ ಸೇವೆ ಸಲ್ಲಿಸಲು ಯಾವುದೇ ಸಮರ್ಥ ಅಧಿಕಾರಿಗಳು ಇರಲಿಲ್ಲ, ಶಾಲೆಗಳಲ್ಲಿ ಶಿಕ್ಷಕರು ಲಭ್ಯವಿರಲಿಲ್ಲ, ಮನೆಗಳು ಇರಲಿಲ್ಲ ಮತ್ತು ರಸ್ತೆಗಳು ಇರಲಿಲ್ಲ. ಆ ಸನ್ನಿವೇಶವು ಈಗ ಬದಲಾಗಿದೆ, ಅನೇಕ ಬುಡಕಟ್ಟು ಜಿಲ್ಲೆಗಳು ಪರಿಣಾಮ ಬೀರಿದವು. ದಾಹೋದ್ ಜಿಲ್ಲೆಯನ್ನು ಸಹ ಅವುಗಳಲ್ಲಿ ಸೇರಿಸಲಾದ ಸಮಯವಿತ್ತು. ಆದರೆ ಈಗ, ಸ್ಮಾರ್ಟ್ ಸಿಟಿ ಉಪಕ್ರಮದ ಭಾಗವಾಗಿ ದಾಹೋದ್ ಜಿಲ್ಲೆ ಮತ್ತು ದಾಹೋದ್ ನಗರವು ರೂಪಾಂತರಕ್ಕೆ ಒಳಗಾಗುತ್ತಿದೆ. ಭವಿಷ್ಯದ ದೃಷ್ಟಿಕೋನದೊಂದಿಗೆ ದಾಹೋದ್ ಮುಂದುವರಿಯುತ್ತಿದೆ. ಇದು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜಗತ್ತಿನಲ್ಲೂ ಮನ್ನಣೆ ಗಳಿಸಿದೆ. ದಾಹೋದ್ ನಗರವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ, ಆಧುನಿಕ ಸ್ಮಾರ್ಟ್ ಸೌಲಭ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಸ್ನೇಹಿತರೆ,

ದಾಹೋದ್ ಸೇರಿದಂತೆ ದಕ್ಷಿಣ ಗುಜರಾತ್‌ನ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ತಲೆಮಾರುಗಳಿಂದ ಮುಂದುವರೆದಿದೆ. ಇಂದು, ನೀರು ಸರಬರಾಜು ಮಾಡಲು ನೂರಾರು ಕಿಲೋಮೀಟರ್ ಉದ್ದದ ಪೈಪ್‌ಲೈನ್‌ಗಳನ್ನು ಹಾಕಲು ವ್ಯಾಪಕವಾದ ಕೆಲಸಗಳು ನಡೆಯುತ್ತಿವೆ. ನರ್ಮದಾ ನದಿ ನೀರು ಪ್ರತಿ ಮನೆಗೂ ತಲುಪುವಂತೆ ನೋಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಕಳೆದ ವರ್ಷವಷ್ಟೇ, ನಾವು ಉಮರ್ಗಮ್‌ನಿಂದ ಅಂಬಾಜಿಯವರೆಗೆ 11 ಲಕ್ಷ ಎಕರೆ ಭೂಮಿಗೆ ನೀರುಣಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ನಮ್ಮ ರೈತರಿಗೆ ಗಮನಾರ್ಹ ಪ್ರಯೋಜನ ನೀಡಿದೆ, ಅವರು ವಾರ್ಷಿಕವಾಗಿ 3 ಬೆಳೆಗಳನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ.

ಸಹೋದರ ಸಹೋದರಿಯರೆ,

ಇಲ್ಲಿಗೆ ಬರುವ ಮೊದಲು, ನಾನು ವಡೋದರಾದಲ್ಲಿದ್ದೆ, ಅಲ್ಲಿ ಸಾವಿರಾರು ತಾಯಂದಿರು ಮತ್ತು ಸಹೋದರಿಯರು ಸೇರಿದ್ದರು. ಅವರು ನಮ್ಮ ಸಶಸ್ತ್ರ ಪಡೆಗಳಿಗೆ ಕೃತಜ್ಞತೆ ವ್ಯಕ್ತಪಡಿಸಲು ಒಟ್ಟುಗೂಡಿದ್ದರು, ಅವರು ತಮ್ಮ ಉದಾತ್ತ ಕಾರ್ಯಕ್ಕಾಗಿ ಮಾಧ್ಯಮವಾಗುವ ಗೌರವವನ್ನು ನನಗೆ ವಹಿಸಿದರು. ಮಾತೃಶಕ್ತಿಯ ಈ ಸಾಕಾರಕ್ಕೆ ನಾನು ಗೌರವದಿಂದ ನಮಸ್ಕರಿಸುತ್ತೇನೆ. ಇಲ್ಲಿ ದಾಹೋದ್‌ನಲ್ಲಿಯೂ ಸಹ, ನೀವೆಲ್ಲರೂ - ನಮ್ಮ ತಾಯಂದಿರು ಮತ್ತು ಸಹೋದರಿಯರು - ನಿಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಆಪರೇಷನ್ ಸಿಂದೂರ್‌ಗೆ ನಿಮ್ಮ ಆಶೀರ್ವಾದಗಳನ್ನು ನೀಡಿದ್ದೀರಿ. ದಾಹೋದ್‌ನ ಈ ಭೂಮಿ ತಪಸ್ಸು ಮತ್ತು ತ್ಯಾಗದ ಭೂಮಿ. ದುಧಿಮತಿ ನದಿಯ ದಡದಲ್ಲಿಯೇ ಮಹರ್ಷಿ ದಧೀಚಿ ಬ್ರಹ್ಮಾಂಡದ ರಕ್ಷಣೆಗಾಗಿ ತನ್ನ ದೇಹವನ್ನು ತ್ಯಾಗ ಮಾಡಿದನೆಂದು ಹೇಳಲಾಗುತ್ತದೆ.

ಈ ಮಣ್ಣೇ ಒಂದು ಕಾಲದಲ್ಲಿ ಕ್ರಾಂತಿಕಾರಿ ತಾತ್ಯಾ ಟೋಪೆ ಅವರ ಕಷ್ಟದ ಸಮಯದಲ್ಲಿ ಅವರ ಪಕ್ಕದಲ್ಲಿ ನಿಂತಿತ್ತು. ಇಲ್ಲಿಂದ ಸ್ವಲ್ಪ ದೂರದಲ್ಲಿ ಮಂಘರ್ ಧಾಮ್ ಇದೆ - ಗೋವಿಂದ ಗುರು ನೇತೃತ್ವದ ನೂರಾರು ಬುಡಕಟ್ಟು ಯೋಧರ ಶೌರ್ಯ ಮತ್ತು ತ್ಯಾಗವನ್ನು ಸಂಕೇತಿಸುವ ಪವಿತ್ರ ಸ್ಥಳ. ಆದ್ದರಿಂದ, ಈ ಪ್ರದೇಶವು ಭಾರತ ಮಾತೆ ಮತ್ತು ಮಾನವತೆಯ ಸೇವೆಯಲ್ಲಿ ನಿಸ್ವಾರ್ಥ ತ್ಯಾಗದ ನಮ್ಮ ಹಳೆಯ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಅಂತಹ ಮೌಲ್ಯಗಳು ಭಾರತೀಯರ ಹೃದಯದಲ್ಲಿ ನೆಲೆಸಿರುವಾಗ, ಹೇಳಿ – ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮಾಡಿದ್ದಕ್ಕೆ ಭಾರತವು ಮೌನವಾಗಿರಲು ಸಾಧ್ಯವೇ? ಮೋದಿ ಮೌನವಾಗಿರಲು ಸಾಧ್ಯವೇ?

ಯಾರಾದರೂ ನಮ್ಮ ಸಹೋದರಿಯರ ಹಣೆಯ ಮೇಲಿನ ಸಿಂದೂರ ಅಳಿಸಲು ಧೈರ್ಯ ಮಾಡಿದಾಗ, ಅವರ ಸ್ವಂತ ವಿನಾಶ ಅನಿವಾರ್ಯವಾಗುತ್ತದೆ. ಆದ್ದರಿಂದ, ಆಪರೇಷನ್ ಸಿಂದೂರ್ ಕೇವಲ ಸೇನೆಯ ಕ್ರಮವಲ್ಲ - ಇದು ಭಾರತೀಯ ಮೌಲ್ಯಗಳು ಮತ್ತು ಭಾವನೆಗಳ ಪ್ರತಿಬಿಂಬವಾಗಿದೆ. ಭಯೋತ್ಪಾದಕರು ತಮ್ಮ ಕನಸಿನಲ್ಲಿಯೂ ಸಹ, ಮೋದಿ ಅವರನ್ನು ಎದುರಿಸುವುದು ಎಷ್ಟು ಭೀಕರವಾಗಿರುತ್ತದೆ ಎಂದು ಊಹಿಸಿರಲಿಲ್ಲ. ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸುತ್ತಲೇ ಇರಿ, ಅದು ಪ್ರತಿನಿಧಿಸುವ ಗೌರವದ ಬಗ್ಗೆ ಯೋಚಿಸಿ. ಒಬ್ಬ ತಂದೆಗೆ ಅವರ ಮಕ್ಕಳ ಮುಂದೆಯೇ ಗುಂಡು ಹಾರಿಸಲಾಯಿತು.  ಇಂದಿಗೂ ಆ ಚಿತ್ರಗಳನ್ನು ನೋಡಿದಾಗ ನನ್ನ ರಕ್ತ ಕುದಿಯುತ್ತದೆ. ಭಯೋತ್ಪಾದಕರು 140 ಕೋಟಿ ಭಾರತೀಯರಿಗೆ ಸವಾಲು ಹಾಕಿದ್ದರು. ಪ್ರಧಾನ ಸೇವಕನಾಗಿ ನೀವೆಲ್ಲರೂ ನನಗೆ ವಹಿಸಿಕೊಟ್ಟ ಕಚೇರಿ - ನಾನು ನನ್ನ ಕರ್ತವ್ಯವನ್ನು ಪೂರೈಸಿದೆ. ನಾನು ನಮ್ಮ 3 ಸಶಸ್ತ್ರ ಪಡೆಗಳಿಗೆ ಮುಕ್ತ ಅಧಿಕಾರ ನೀಡಿದ್ದೇನೆ. ನಮ್ಮ ಧೈರ್ಯಶಾಲಿ ಸೈನಿಕರು ಸಾಧಿಸಿದ್ದನ್ನು ಹಲವಾರು ದಶಕಗಳಿಂದ ಜಗತ್ತು ನೋಡಿಲ್ಲ. ಗಡಿಯುದ್ದಕ್ಕೂ ಕಾರ್ಯ ನಿರ್ವಹಿಸುತ್ತಿರುವ 9 ಪ್ರಮುಖ ಭಯೋತ್ಪಾದಕ ಅಡಗುತಾಣಗಳನ್ನು ನಾವು ಗುರುತಿಸಿ,  ಅವುಗಳ ನಿಖರವಾದ ಸ್ಥಳಗಳನ್ನು ದೃಢಪಡಿಸಿ, 6ನೇ ತಾರೀಖಿನ ರಾತ್ರಿ ಕೇವಲ 22 ನಿಮಿಷಗಳಲ್ಲಿ, 22ನೇ ತಾರೀಖಿನಂದು ಅವರು ನಡೆಸಿದ ದುಷ್ಕೃತ್ಯಗಳಿಗೆ ಪ್ರತೀಕಾರವಾಗಿ ನಾವು ಅವರೆಲ್ಲರನ್ನೂ ನಿರ್ಮೂಲನೆ ಮಾಡಿದ್ದೇವೆ.

ಭಾರತದ ತಕ್ಕ ಉತ್ತರದಿಂದ ಬೆಚ್ಚಿಬಿದ್ದ ಪಾಕಿಸ್ತಾನಿ ಸೈನ್ಯವು ಹತಾಶೆಯಿಂದ ವರ್ತಿಸಲು ಪ್ರಯತ್ನಿಸಿದಾಗ, ನಮ್ಮ ಪಡೆಗಳು ಅವರನ್ನು ಸಹ ಸೋಲಿಸಿದವು. ನಮ್ಮ ನಿವೃತ್ತ ಮಿಲಿಟರಿ ಸಿಬ್ಬಂದಿಗಳಲ್ಲಿ ಅನೇಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ನನಗೆ ತಿಳಿದಿದೆ. ನಾನು ಅವರಿಗೂ ವಂದಿಸುತ್ತೇನೆ. ಈ ಪವಿತ್ರ ಭೂಮಿಯಾದ ದಾಹೋದ್‌ನಿಂದ, ನಾನು ಮತ್ತೊಮ್ಮೆ ನಮ್ಮ ದೇಶದ ಸಶಸ್ತ್ರ ಪಡೆಗಳ ಶೌರ್ಯಕ್ಕೆ ಗೌರವ ಸಲ್ಲಿಸುತ್ತೇನೆ.

ಸ್ನೇಹಿತರೆ,

ವಿಭಜನೆಯ ನಂತರ ಹೊರಹೊಮ್ಮಿದ ದೇಶವು ಒಂದೇ ಒಂದು ಉದ್ದೇಶ ಹೊಂದಿದೆ - ಭಾರತದ ವಿರುದ್ಧ ದ್ವೇಷ, ಭಾರತದ ಮೇಲಿನ ದ್ವೇಷ ಮತ್ತು ಭಾರತಕ್ಕೆ ಹಾನಿ ಮಾಡುವ ನಿರಂತರ ಬಯಕೆ. ಮತ್ತೊಂದೆಡೆ, ಭಾರತದ ಉದ್ದೇಶ ಬಡತನವನ್ನು ನಿರ್ಮೂಲನೆ ಮಾಡುವುದು, ತನ್ನ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ತನ್ನನ್ನು ತಾನು ಸ್ಥಾಪಿಸುವುದು. ನಮ್ಮ ಸಶಸ್ತ್ರ ಪಡೆಗಳು ಬಲಿಷ್ಠವಾಗಿದ್ದಾಗ ಮತ್ತು ನಮ್ಮ ಆರ್ಥಿಕತೆಯು ಬಲಿಷ್ಠವಾಗಿದ್ದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತವನ್ನು ಸಾಕಾರಗೊಳಿಸಬಹುದು. ನಾವು ಈ ದಿಕ್ಕಿನಲ್ಲಿ ನಿರಂತರವಾಗಿ ದೃಢನಿಶ್ಚಯದಿಂದ ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೆ,

ದಾಹೋದ್ ಅಪಾರ ಸಾಮರ್ಥ್ಯ ಹೊಂದಿದೆ. ಇಂದಿನ ಕಾರ್ಯಕ್ರಮವು ಮುಂದೆ ಏನಿದೆ ಎಂಬುದರ ಒಂದು ನೋಟ ಮಾತ್ರ. ನನ್ನ ಎಲ್ಲಾ ಶ್ರಮಶೀಲ ಸ್ನೇಹಿತರಲ್ಲಿ ಮತ್ತು ಈ ರಾಷ್ಟ್ರದ ಜನರಲ್ಲಿ ನನಗೆ ಸಂಪೂರ್ಣ ನಂಬಿಕೆಯಿದೆ. ಈ ಹೊಸ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಮತ್ತು ದಾಹೋದ್ ಅನ್ನು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಜಿಲ್ಲೆಗಳಲ್ಲಿ ಒಂದಾಗಿ ಪರಿವರ್ತಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಈ ದೃಢನಿಶ್ಚಯದಿಂದ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ, ಆಪರೇಷನ್ ಸಿಂದೂರ್ ಗೌರವಾರ್ಥವಾಗಿ ಎಲ್ಲರೂ ಎದ್ದುನಿಂತು ತ್ರಿವರ್ಣ ಧ್ವಜ ಹಾರಿಸುವಂತೆ ನಾನು ಆಹ್ವಾನಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ನಿಂತು ತ್ರಿವರ್ಣ ಧ್ವಜವನ್ನು ಹಾರಿಸೋಣ ಮತ್ತು ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆಯು ಜೋರಾಗಿ ಪ್ರತಿಧ್ವನಿಸುತ್ತಲೇ ಇರಬೇಕು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Since 2019, a total of 1,106 left wing extremists have been 'neutralised': MHA

Media Coverage

Since 2019, a total of 1,106 left wing extremists have been 'neutralised': MHA
NM on the go

Nm on the go

Always be the first to hear from the PM. Get the App Now!
...
Prime Minister Welcomes Release of Commemorative Stamp Honouring Emperor Perumbidugu Mutharaiyar II
December 14, 2025

Prime Minister Shri Narendra Modi expressed delight at the release of a commemorative postal stamp in honour of Emperor Perumbidugu Mutharaiyar II (Suvaran Maran) by the Vice President of India, Thiru C.P. Radhakrishnan today.

Shri Modi noted that Emperor Perumbidugu Mutharaiyar II was a formidable administrator endowed with remarkable vision, foresight and strategic brilliance. He highlighted the Emperor’s unwavering commitment to justice and his distinguished role as a great patron of Tamil culture.

The Prime Minister called upon the nation—especially the youth—to learn more about the extraordinary life and legacy of the revered Emperor, whose contributions continue to inspire generations.

In separate posts on X, Shri Modi stated:

“Glad that the Vice President, Thiru CP Radhakrishnan Ji, released a stamp in honour of Emperor Perumbidugu Mutharaiyar II (Suvaran Maran). He was a formidable administrator blessed with remarkable vision, foresight and strategic brilliance. He was known for his commitment to justice. He was a great patron of Tamil culture as well. I call upon more youngsters to read about his extraordinary life.

@VPIndia

@CPR_VP”

“பேரரசர் இரண்டாம் பெரும்பிடுகு முத்தரையரை (சுவரன் மாறன்) கௌரவிக்கும் வகையில் சிறப்பு அஞ்சல் தலையைக் குடியரசு துணைத்தலைவர் திரு சி.பி. ராதாகிருஷ்ணன் அவர்கள் வெளியிட்டது மகிழ்ச்சி அளிக்கிறது. ஆற்றல்மிக்க நிர்வாகியான அவருக்குப் போற்றத்தக்க தொலைநோக்குப் பார்வையும், முன்னுணரும் திறனும், போர்த்தந்திர ஞானமும் இருந்தன. நீதியை நிலைநாட்டுவதில் அவர் உறுதியுடன் செயல்பட்டவர். அதேபோல் தமிழ் கலாச்சாரத்திற்கும் அவர் ஒரு மகத்தான பாதுகாவலராக இருந்தார். அவரது அசாதாரண வாழ்க்கையைப் பற்றி அதிகமான இளைஞர்கள் படிக்க வேண்டும் என்று நான் கேட்டுக்கொள்கிறேன்.

@VPIndia

@CPR_VP”