The commissioning of three frontline naval combatants underscores India's unwavering commitment to building a robust and self-reliant defence sector: PM
A significant step towards empowering the Indian Navy of the 21st century: PM
Today's India is emerging as a major maritime power in the world:PM
Today, India is recognised as a reliable and responsible partner globally, especially in the Global South: PM
India has emerged as the First Responder across the entire Indian Ocean Region: PM
Be it land, water, air, the deep sea or infinite space, India is safeguarding its interests everywhere: PM

ಮಹಾರಾಷ್ಟ್ರದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಸಿಪಿ ರಾಧಾಕೃಷ್ಣನ್ ಅವರು, ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ, ಶ್ರೀ  ದೇವೇಂದ್ರ ಫಡ್ನವೀಸ್ ಅವರು, ಮಂತ್ರಿ ಪರಿಷತ್ತಿನಲ್ಲಿ ನನ್ನ ಹಿರಿಯ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ಅವರು, ಸಂಜಯ್ ಸೇಠ್ ಜಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಅವರೊಂದಿಗೆ ಇಂದು ನಮ್ಮ ಇಬ್ಬರು ಉಪಮುಖ್ಯಮಂತ್ರಿಗಳಾದ. ಉಪಮುಖ್ಯಮಂತ್ರಿ ಶ್ರೀ.ಏಕನಾಥ ಶಿಂಧೆಯವರು, ಶ್ರೀ ಅಜಿತ್ ಪವಾರ್ ಅವರು, CDS, CNS, ಎಲ್ಲ ನೌಕಾ ಸಿಬ್ಬಂದಿ, ಮಡಗಾಂವ್ ನೌಕಾನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಹೋದ್ಯೋಗಿಗಳೇ, ಇತರ ಆಹ್ವಾನಿತರೆ, ಮಹಿಳೆಯರೇ ಮತ್ತು ಮಹನೀಯರೇ, 

ಜನವರಿ 15 ಅನ್ನು ಸೇನಾ ದಿನವಾಗಿಯೂ ಆಚರಿಸಲಾಗುತ್ತದೆ. ದೇಶವನ್ನು ರಕ್ಷಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟ ಪ್ರತಿಯೊಬ್ಬ ವೀರ ಸೇನಾನಿಗೆ ನಾನು ವಂದಿಸುತ್ತೇನೆ, ಈ ದಿನದಂದು ಭಾರತಮಾತೆಯ ರಕ್ಷಣೆಯಲ್ಲಿ ತೊಡಗಿರುವ ಪ್ರತಿಯೊಬ್ಬ ವೀರ ಯೋಧರಿಗೆ ಅಭಿನಂದಿಸುತ್ತೇನೆ.

 

ಸ್ನೇಹಿತರೇ,

ಇಂದು ಭಾರತದ ಕಡಲ ಪರಂಪರೆ, ನೌಕಾಪಡೆಯ ಭವ್ಯ ಇತಿಹಾಸ ಮತ್ತು ಸ್ವಾವಲಂಬಿ ಭಾರತ ಅಭಿಯಾನಕ್ಕೆ ಬಹು ದೊಡ್ಡ ದಿನವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಭಾರತೀಯ ನೌಕಾಪಡೆಗೆ ಹೊಸ ಶಕ್ತಿ ಮತ್ತು ಹೊಸ ದೃಷ್ಟಿಕೋನವನ್ನು ನೀಡಿದ್ದರು.  ಅವರ ಈ ಪವಿತ್ರ ಭೂಮಿಯಲ್ಲಿ, ಇಂದು ನಾವು 21 ನೇ ಶತಮಾನದ ನೌಕಾಪಡೆಯನ್ನು ಬಲ ವೃದ್ಧಿಸುವತ್ತ ಒಂದು ದೊಡ್ಡ ಹೆಜ್ಜೆಯನ್ನಿಡುತ್ತಿದ್ದೇವೆ. ವಿಧ್ವಂಸಕ ನೌಕೆ, ಯುದ್ಧನೌಕೆ ಮತ್ತು ಜಲಾಂತರ್ಗಾಮಿ ನೌಕೆಯನ್ನು ಒಟ್ಟಿಗೆ ನಿಯೋಜಿಸುತ್ತಿರುವುದು ಇದೇ ಪ್ರಥಮ ಬಾರಿಯಾಗಿದೆ. ಎಲ್ಲಾ ಮೂರು ಫ್ರಂಟ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂಬುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಭಾರತೀಯ ನೌಕಾಪಡೆ, ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಅದರ ಎಲ್ಲಾ ಸಹೋದ್ಯೋಗಿಗಳು, ಎಂಜಿನಿಯರ್‌ಗಳು, ಕಾರ್ಮಿಕ ವರ್ಗ  ಮತ್ತು ಇಡೀ ದೇಶವನ್ನು ನಾನು  ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದಿನ ಕಾರ್ಯಕ್ರಮವು ನಮ್ಮ ಭವ್ಯ ಪರಂಪರೆಯನ್ನು ಭವಿಷ್ಯದ ಆಶಯಗಳೊಂದಿಗೆ ಮೇಳೈಸುತ್ತದೆ. ದೀರ್ಘ ಸಮುದ್ರಯಾನ, ವಾಣಿಜ್ಯ, ನೌಕಾ ರಕ್ಷಣೆ, ನೌಕಾ ಉದ್ಯಮದಲ್ಲಿ ನಮ್ಮದು ಶ್ರೀಮಂತ ಇತಿಹಾಸ. ಇತಿಹಾಸದಿಂದ ಸ್ಫೂರ್ತಿ ಪಡೆದು, ಇಂದಿನ ಭಾರತ ದೇಶ ವಿಶ್ವದ ಪ್ರಮುಖ ಕಡಲ ಶಕ್ತಿಯಾಜಿ ಹೊರಹೊಮ್ಮುತ್ತಿದೆ. ಇದು ಇಂದು ಬಿಡುಗಡೆಗೊಂಡಿರುವ ವೇದಿಕೆಗಳು ಕೂಡಾ ಇದನ್ನೇ ಪ್ರತಿಪಾದಿಸುತ್ತವೆ. ಉದಾಹರಣೆಗೆ ನಮ್ಮ ನೀಲಗಿರಿಯು ಚೋಳ ಸಾಮ್ರಾಜ್ಯದ ಕಡಲ ಶಕ್ತಿಗೆ ಸಮರ್ಪಿತವಾಗಿದೆ. ಸೂರತ್ ಯುದ್ಧನೌಕೆಯು ಗುಜರಾತ್ ಬಂದರುಗಳ ಮೂಲಕ ಭಾರತವು ಪಶ್ಚಿಮ ಏಷ್ಯಾಕ್ಕೆ ಸಂಪರ್ಕ ಹೊಂದಿದ ಅವಧಿಯನ್ನು ನೆನಪಿಸುತ್ತದೆ. ಇಂದಿನ ದಿನಗಳಲ್ಲಿ, ಈ ಎರಡೂ ಹಡಗುಗಳ ಜೊತೆಗೆ ವಾಘಶೀರ್ ಜಲಾಂತರ್ಗಾಮಿ ನೌಕೆಯನ್ನು ಸಹ ನಿಯೋಜಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ P75 ಕ್ಲಾಸ್‌ನ ಮೊದಲ ಜಲಾಂತರ್ಗಾಮಿ ಕಲ್ವರಿ ಕಾರ್ಯಾರಂಭ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಲಭಿಸಿತ್ತು. ಇಂದು ಈ ವರ್ಗದ ಆರನೇ ಜಲಾಂತರ್ಗಾಮಿ ವಾಘ್‌ಶೀರ್ ಅನ್ನು ನಿಯೋಜಿಸುವ ಭಾಗ್ಯ ನನ್ನದಾಗಿದೆ. ಈ ಹೊಸ ಗಡಿನಾಡು ವೇದಿಕೆಗಳು ಭಾರತದ ಭದ್ರತೆ ಮತ್ತು ಪ್ರಗತಿ ಎರಡಕ್ಕೂ ಹೊಸ ಸಾಮರ್ಥ್ಯ ಒದಗಿಸಲಿವೆ.

 

ಸ್ನೇಹಿತರೇ,

ಭಾರತ ಇಂದು ವಿಶ್ವಾದ್ಯಂತ ಮತ್ತು ವಿಶೇಷವಾಗಿ ಜಾಗತಿಕ ದಕ್ಷಿಣ ಭಾಗದಲ್ಲಿ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಡುತ್ತಿದೆ. ಭಾರತವು ಅಭಿವೃದ್ಧಿಯ ಉತ್ಸಾಹದಲ್ಲಿ ಕೆಲಸ ಮಾಡುತ್ತದೆ ಹೊರತಾಗಿ ವಿಸ್ತರಣೆಯ ಉತ್ಸಾಹದಲ್ಲಲ್ಲ.  ಭಾರತ ಎಂದಿಗೂ ಮುಕ್ತ, ಸುರಕ್ಷಿತ, ಅಂತರ್ಗತ ಮತ್ತು ಸಮೃದ್ಧ...ಇಂಡೋ-ಪೆಸಿಫಿಕ್ ಪ್ರದೇಶವನ್ನು ಬೆಂಬಲಿಸುತ್ತದೆ. ಆದ್ದರಿಂದ, ಸಮುದ್ರದ ನೆರೆ ರಾಷ್ಟ್ರಗಳ ಅಭಿವೃದ್ಧಿಯ ವಿಷಯ ಬಂದಾಗ, ಭಾರತವು 'ಸಾಗರ' ಮಂತ್ರವನ್ನು ನೀಡಿತು. ಸಾಗರ್ ಎಂದರೆ - ಈ ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಅಭಿವೃದ್ಧಿ, ನಾವು ಸಾಗರ್ ದೂರದೃಷ್ಟಿಯೊಂದಿಗೆ ಮುನ್ನಡೆದಿದ್ದೇವೆ, ಭಾರತಕ್ಕೆ  ಜಿ -20 ರ ಅಧ್ಯಕ್ಷ ಸ್ಥಾನವನ್ನು ವಹಿಸುವ ಜವಾಬ್ದಾರಿ ದೊರೆತಾಗ, ನಾವು ಜಗತ್ತಿಗೆ - ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯತ್ತು ಎಂಬ ಮಂತ್ರವನ್ನು ನೀಡಿದೆವು. ಜಗತ್ತು ಕರೋನಾ ವಿರುದ್ಧ ಹೋರಾಡುತ್ತಿರುವಾಗ, ಭಾರತವು ಒಂದು ಭೂಮಿ ಒಂದು ಆರೋಗ್ಯ ಎಂಬ ದೃಷ್ಟಿಕೋನವನ್ನು ಪ್ರಸ್ತಾಪಿಸಿತು. ನಾವು ಇಡೀ ಜಗತ್ತನ್ನು ನಮ್ಮ ಕುಟುಂಬ ಎಂದು ಪರಿಗಣಿಸುತ್ತೇವೆ, ನಾವು ಸಬ್ಕಾ ಸಾಥ್, ಸಬ್ಕಾ ವಿಕಾಸ್ ತತ್ವವನ್ನು ನಂಬುವ ಜನರು. ಹಾಗಾಗಿ, ಭಾರತವು ಈ ಇಡೀ ಪ್ರದೇಶದ ರಕ್ಷಣೆ ಮತ್ತು ಭದ್ರತೆಯನ್ನು ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತದೆ. 

ಸ್ನೇಹಿತರೇ,

ಜಾಗತಿಕ ಭದ್ರತೆ, ಅರ್ಥಶಾಸ್ತ್ರ ಮತ್ತು ಭೌಗೋಳಿಕ ರಾಜಕೀಯ ಕ್ರಿಯಾಶೀಲತೆಯಲ್ಲಿ ನಿರ್ದೇಶನ ನೀಡುವಂತಹ ವಿಷಯದಲ್ಲಿ ಭಾರತದಂತಹ ಕಡಲ ರಾಷ್ಟ್ರದ ಪಾತ್ರವು ಬೃಹದಾದುದಾಗಿದೆ. ಆರ್ಥಿಕ ಪ್ರಗತಿ ಮತ್ತು ಇಂಧನ ಭದ್ರತೆಗಾಗಿ, ಪ್ರಾದೇಶಿಕ ಜಲ ಸಂರಕ್ಷಣೆ ಮಹತ್ವಪೂರ್ಣವಾಗಿದೆ, ಜಲಸಂಚಾರ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವುದು ಮತ್ತು ಸರಬರಾಜು ಮಾರ್ಗಗಳು ಮತ್ತು ಸಮುದ್ರದ ವ್ಯಾಪಾರ ಮಾರ್ಗಗಳನ್ನು ಸುರಕ್ಷಿತಗೊಳಿಸುವುದು ಅವಶ್ಯಕ. ಈ ಇಡೀ ಪ್ರದೇಶವನ್ನು ಭಯೋತ್ಪಾದನೆ, ಶಸ್ತ್ರಾಸ್ತ್ರ ಹಾಗು ಮಾದಕವಸ್ತು ಕಳ್ಳಸಾಗಣೆಯಿಂದ ನಾವು ರಕ್ಷಿಸಬೇಕಾಗಿದೆ. ಆದ್ದರಿಂದ, ಸಮುದ್ರವನ್ನು ಸುರಕ್ಷಿತ ಮತ್ತು ಸಮೃದ್ಧಗೊಳಿಸುವಲ್ಲಿ ನಾವು ಜಾಗತಿಕ ಪಾಲುದಾರರಾಗುವುದು ಇಂದು ಮುಖ್ಯವಾಗಿದೆ, ಸರಕು ಸರಬರಾಜು ಮತ್ತು ಹಡಗು ಉದ್ಯಮದ ದಕ್ಷತೆಯನ್ನು ಹೆಚ್ಚಿಸಲು ನಾವು ಕೆಲಸ ಮಾಡುತ್ತೇವೆ. ಅಮೂಲ್ಯ ಖನಿಜಗಳು, ಮೀನುಗಳಂತಹ ಸಾಗರ ಸಂಪನ್ಮೂಲಗಳ ದುರುಪಯೋಗವನ್ನು ತಡೆಗಟ್ಟುವ ಮತ್ತು ಅದನ್ನು ನಿರ್ವಹಿಸುವ ಸಾಮರ್ಥ್ಯವನ್ನು ನಾವು ಅಭಿವೃದ್ಧಿಪಡಿಸಬೇಕಿದೆ. ಹೊಸ ಹಡಗು ಮಾರ್ಗಗಳು ಮತ್ತು ಸಂವಹನದ ಸಮುದ್ರ ಮಾರ್ಗಗಳ ಶೋಧದಲ್ಲಿ ನಾವು ಹೂಡಿಕೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಭಾರತವು ನಿರಂತರವಾಗಿ ಮುನ್ನಡೆಯುತ್ತಿರುವುದು ನನಗೆ ಸಂತೋಷವೆನಿಸಿದೆ. ಸಂಪೂರ್ಣ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತವು ಮೊದಲ ರೆಸ್ಪೋನ್ಡರ್ ಆಗಿ ಹೊರಹೊಮ್ಮಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ನಮ್ಮ ನೌಕಾಪಡೆಯು ನೂರಾರು ಜೀವಗಳನ್ನು ಉಳಿಸಿದೆ ಮತ್ತು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸರಕುಗಳನ್ನು ರಕ್ಷಿಸಿದೆ. ಇದು ಭಾರತದ ಮೇಲಿನ ಜಾಗತಿಕ ವಿಶ್ವಾಸವನ್ನು ಹೆಚ್ಚಿಸಿದೆ, ಅದು ನಿಮ್ಮೆಲ್ಲರಿಂದ ಸಾಧ್ಯವಾಗಿದೆ ಮತ್ತು ಅದಕ್ಕಾಗಿಯೇ ಇಂದು ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ. ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಮೇಲೆ ನಿರಂತರವಾಗಿ ವಿಶ್ವಾಸ ವೃದ್ಧಿಯಾಗುತ್ತಾ ಸಾಗಿದೆ. ಆಸಿಯಾನ್, ಆಸ್ಟ್ರೇಲಿಯ, ಗಲ್ಫ್ ಅಥವಾ ಆಫ್ರಿಕನ್ ರಾಷ್ಟ್ರಗಳ ಜೊತೆಗೆ , ಭಾರತದ ಆರ್ಥಿಕ ಸಹಕಾರ ನಿರಂತರವಾಗಿ ಬಲಗೊಳ್ಳುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ಈ ಸಂಬಂಧಗಳ ಬಲವರ್ಧನೆಯಲ್ಲಿ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಉಪಸ್ಥಿತಿ ಮತ್ತು ಭಾರತದ ಸಾಮರ್ಥ್ಯವು ಒಂದು ದೊಡ್ಡ ಅಡಿಪಾಯವಾಗಿದೆ. ಅದಕ್ಕಾಗಿಯೇ ಇಂದಿನ ಕಾರ್ಯಕ್ರಮ ಸೇನಾ ದೃಷ್ಟಿಕೋನದಿಂದ ಮತ್ತು ಆರ್ಥಿಕ ದೃಷ್ಟಿಕೋನದಿಂದಲು ಸಮಾನ ರೀತಿಯಲ್ಲಿ ಮುಖ್ಯವಾಗಿದೆ.

ಸ್ನೇಹಿತರೇ,

21ನೇ ಶತಮಾನದ ಭಾರತದ ಮಿಲಿಟರಿ ಸಾಮರ್ಥ್ಯವು ಹೆಚ್ಚು ಸಮರ್ಥ ಮತ್ತು ಆಧುನಿಕವಾಗಿರಬೇಕು ಎಂಬುದು ದೇಶದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ನೀರು, ಭೂಮಿ, ಆಕಾಶ, ಆಳವಾದ ಸಮುದ್ರ ಅಥವಾ ಅನಂತ ಬಾಹ್ಯಾಕಾಶ ಹೀಗೆ ಎಲ್ಲೆಡೆ ಭಾರತ  ತನ್ನ ಹಿತಾಸಕ್ತಿಗಳನ್ನು ಕಾಪಿಡುತ್ತಿದೆ. ಇದಕ್ಕೆಂದೇ ನಿರಂತರ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಸೇನಾ ಸಿಬ್ಬಂದಿ ಮುಖ್ಯಸ್ಥರ ನೇಮಕ ಅಂತಹ ಒಂದು ಸುಧಾರಣೆಯಾಗಿದೆ. ನಮ್ಮ ಪಡೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ಭಾರತವೂ ಆಜ್ಞಾಧಾರಿತ ಪಾಲನೆಯ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. 

 

ಸ್ನೇಹಿತರೇ,

ಕಳೆದ 10 ವರ್ಷಗಳಲ್ಲಿ ಭಾರತದ ಮೂರೂ ಸೇನಾ ವಿಭಾಗಗಳು ಆತ್ಮನಿರ್ಭರತೆಯ ಮಂತ್ರವನ್ನು ಅಳವಡಿಸಿಕೊಂಡ ರೀತಿ ಬಹಳ ಶ್ಲಾಘನೀಯವಾಗಿದೆ. ಬಿಕ್ಕಟ್ಟಿನ ಸಮಯದಲ್ಲಿ ಇತರ ದೇಶಗಳ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸುವ ಅಗತ್ಯತೆಯನ್ನು ಅರ್ಥಮಾಡಿಕೊಂಡು, ನೀವೆಲ್ಲರೂ ಈ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೀರಿ ಮತ್ತು ನಾಯಕತ್ವಕ್ಕೆ ಇಂಬು ನೀಡುತ್ತಿದ್ದೀರಿ. ಇನ್ನು ಮುಂದೆ ವಿದೇಶದಿಂದ ಆಮದು ಮಾಡಿಕೊಳ್ಳುವ ಅವಶ್ಯಕತೆಯಿರದಂತಹ  5 ಸಾವಿರಕ್ಕೂ ಹೆಚ್ಚು ಉಪಕರಣಗಳು ಮತ್ತು ಸಾಧನಗಳ ಪಟ್ಟಿಯನ್ನು ನಮ್ಮ ಸೇನೆಗಳು ತಯಾರಿಸಿವೆ.  ಭಾರತದಲ್ಲಿ ತಯಾರಾದ ಉಪಕರಣಗಳೊಂದಿಗೆ ಭಾರತೀಯ ಸೈನಿಕ ಮುಂದೆ ಸಾಗುವಾಗ, ಅವನ ಆತ್ಮವಿಶ್ವಾಸವೂ ಇಮ್ಮಡಿ ಮುಮ್ಮಡಿಗೊಳ್ಳುತ್ತದೆ. ಕಳೆದ 10 ವರ್ಷಗಳಲ್ಲಿ ದೇಶದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಕರ್ನಾಟಕದಲ್ಲಿ ಪ್ರಾರಂಭವಾಗಿದೆ. ಸೇನೆಗಳಿಗೆ ಸಾರಿಗೆ ವಿಮಾನಗಳನ್ನು ತಯಾರಿಸುವ ಕಾರ್ಖಾನೆ ಆರಂಭವಾಗಿದೆ. ತೇಜಸ್ ಯುದ್ಧ ವಿಮಾನವು ಭಾರತದ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ಕಾರಿಡಾರ್‌ಗಳು ರಕ್ಷಣಾ ಉತ್ಪಾದನೆಗೆ ಮತ್ತಷ್ಟು ಉತ್ತೇಜನ ನೀಡಲಿವೆ. ನಮ್ಮ ನೌಕಾಪಡೆ ಕೂಡಾ  ಮೇಕ್ ಇನ್ ಇಂಡಿಯಾ ಅಭಿಯಾನವನ್ನು ವ್ಯಾಪಕವಾಗಿ ವಿಸ್ತರಿಸಿರುವುದು ನನಗೆ ಸಂತಸ ತಂದಿದೆ. ಇದರಲ್ಲಿ ಮಝಗಾಂವ್ ಡಾಕ್‌ಯಾರ್ಡ್‌ನ ಎಲ್ಲ ಸಹೋದ್ಯೋಗಿಗಳು ಸಹ ಬಹು ದೊಡ್ಡ ಪಾತ್ರ ವಹಿಸಿದ್ದೀರಿ. ಕಳೆದ 10 ವರ್ಷಗಳಲ್ಲಿ 33 ಹಡಗುಗಳು ಮತ್ತು 07 ಜಲಾಂತರ್ಗಾಮಿಗಳನ್ನು ಭಾರತೀಯ ನೌಕಾಪಡೆಗೆ ಸೇರಿಸಲಾಗಿದೆ. ಈ 40 ನೌಕೆಗಳಲ್ಲಿ 39 ಭಾರತೀಯ ಹಡಗು ನಿರ್ಮಾಣ ಕೇಂದ್ರಗಳಲ್ಲಿ ನಿರ್ಮಿಸಲ್ಪಟ್ಟಿವೆ. ಇದರಲ್ಲಿ ನಮ್ಮ ಅದ್ಭುತ ಮತ್ತು ಬೃಹತ್ ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆ, ಮತ್ತು ಐಎನ್‌ಎಸ್ ಅರಿಹಂತ್ ಮತ್ತು ಐಎನ್‌ಎಸ್ ಅರಿಘಾಟ್‌ನಂತಹ ಪರಮಾಣು ಜಲಾಂತರ್ಗಾಮಿಗಳು ಕೂಡಾ ಸೇರಿವೆ. ಮೇಕ್ ಇನ್ ಇಂಡಿಯಾಗೆ ಇಂತಹ ಉತ್ತೇಜನ ನೀಡಿದ್ದಕ್ಕಾಗಿ ನಾನು ದೇಶದ ಮೂರು ಸೇನಾ ತುಕಡಿಗಳನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಇಂದು ಭಾರತದ ರಕ್ಷಣಾ ಉತ್ಪಾದನೆ 1.25 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ನಾವು 100 ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿದ್ದೇವೆ. ನಿಮ್ಮ ಬೆಂಬಲದೊಂದಿಗೆ ಭಾರತವು ತನ್ನ ರಕ್ಷಣಾ ವಲಯವನ್ನು ಬಹು ವೇಗವಾಗಿ ಪರಿವರ್ತಿಸಲಿದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಮೇಕ್ ಇನ್ ಇಂಡಿಯಾ, ಭಾರತದ ಸಶಸ್ತ್ರ ಪಡೆಗಳ ಬಲ ವೃದ್ಧಿಸುವ ಜೊತೆಗೆ ಆರ್ಥಿಕ ಪ್ರಗತಿಗೆ ಹೊಸ ದ್ವಾರಗಳನ್ನು ತೆರೆಯುತ್ತಿದೆ. ಹಡಗು ನಿರ್ಮಾಣ ಪರಿಸರ ವ್ಯವಸ್ಥೆ ಇದಕ್ಕೆ ಒಂದು ಉದಾಹರಣೆಯಾಗಿದೆ.  ಹಡಗು ನಿರ್ಮಾಣದಲ್ಲಿ ಹೂಡಿಕೆ ಮಾಡಿದ ಮೊತ್ತವು ಆರ್ಥಿಕತೆಯ ಮೇಲೆ ಬಹಳಷ್ಟು ಪಟ್ಟು ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ ಎಂಬುದನ್ನು  ನಿಮ್ಮಲ್ಲಿ ಹಲವರು ತಿಳಿದಿರಬಹುದು. ಅಂದರೆ ನಾವು ಹಡಗು ನಿರ್ಮಾಣದಲ್ಲಿ 1 ರೂಪಾಯಿಯನ್ನು ಹೂಡಿಕೆ ಮಾಡಿದರೆ, ಆರ್ಥಿಕತೆಯಲ್ಲಿ ಸುಮಾರು 1.82 ರೂಪಾಯಿ ಚಲಾವಣೆಗೆ ಬರುತ್ತದೆ. ಒಮ್ಮೆ ಊಹಿಸಿ, ದೇಶದಲ್ಲಿ ಪ್ರಸ್ತುತ 60 ದೊಡ್ಡ ಹಡಗುಗಳು ನಿರ್ಮಾಣ ಹಂತದಲ್ಲಿವೆ. ಅವುಗಳ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂಪಾಯಿ. ಅಂದರೆ ಇಷ್ಟು ಹಣವನ್ನು ಹೂಡಿಕೆ ಮಾಡುವುದರಿಂದ ನಮ್ಮ ಆರ್ಥಿಕತೆಯಲ್ಲಿ ಸುಮಾರು 3 ಲಕ್ಷ ಕೋಟಿಯಷ್ಟು ಹಣ ಚಲಾವಣೆಯಾಗುತ್ತದೆ. ಉದ್ಯೋಗದ ವಿಷಯದಲ್ಲಿ, ಇದು 6 ಪಟ್ಟು ಹೆಚ್ಚು ಪರಿಣಾಮವನ್ನು ಬೀರುತ್ತದೆ. ಹೆಚ್ಚಿನ ಸರಕುಗಳು ಮತ್ತು ಹಡಗುಗಳ ಭಾಗಗಳು ದೇಶದ MSME ಗಳಿಂದ ಬರುತ್ತವೆ. ಆದ್ದರಿಂದ, ಹಡಗು ನಿರ್ಮಾಣದಲ್ಲಿ 2000 ಕಾರ್ಮಿಕರು ಕೆಲಸ ಮಾಡುತ್ತಿದ್ದರೆ, MSME ಪೂರೈಕೆದಾರರಾಗಿರುವ ಮತ್ತೊಂದು ಉದ್ಯಮದಲ್ಲಿ MSME ವಲಯದಲ್ಲಿ ಸುಮಾರು 12 ಸಾವಿರ ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಸ್ನೇಹಿತರೇ,

ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ. ನಮ್ಮ ಉತ್ಪಾದನಾ ಮತ್ತು ರಫ್ತು ಸಾಮರ್ಥ್ಯವೂ ನಿರಂತರವಾಗಿ ಹೆಚ್ಚುತ್ತಿದೆ. ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ನೂರಾರು ಹೊಸ ಹಡಗುಗಳು ಮತ್ತು ಹೊಸ ಕಂಟೈನರ್‌ಗಳ ಅಗತ್ಯವಿರುತ್ತದೆ. ಆದ್ದರಿಂದ, ಬಂದರು ನೇತೃತ್ವದ ಈ ಅಭಿವೃದ್ಧಿ ಮಾದರಿಯು ನಮ್ಮ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಮತ್ತು ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

 

ಸ್ನೇಹಿತರೇ, 

ಈ ಕ್ಷೇತ್ರದಲ್ಲಿ ಉದ್ಯೋಗ ಹೇಗೆ ಹೆಚ್ಚುತ್ತಿದೆ ಎಂಬುದಕ್ಕೆ ನಾವಿಕರ ಸಂಖ್ಯೆಯೂ ಒಂದು ಉದಾಹರಣೆಯಾಗಿದೆ. 2014ರಲ್ಲಿ ಭಾರತದಲ್ಲಿ ನಾವಿಕರ ಸಂಖ್ಯೆ ಒಂದೂವರೆ ಲಕ್ಷಕ್ಕಿಂತಲೂ ಕಡಿಮೆ ಇತ್ತು. ಇಂದು ಇದು ಎರಡರಷ್ಟು ಹೆಚ್ಚಾಗಿ ಸುಮಾರು 3 ಲಕ್ಷಕ್ಕೆ ತಲುಪಿದೆ. ಇಂದು ಭಾರತ ನಾವಿಕರ ಸಂಖ್ಯೆಯಲ್ಲಿ ವಿಶ್ವದ ಅಗ್ರ - ೫ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ.

ಸ್ನೇಹಿತರೇ, 

ಅನೇಕ ದೊಡ್ಡ ನಿರ್ಧಾರಗಳೊಂದಿಗೆ ನಮ್ಮ ಸರ್ಕಾರದ ಮೂರನೇ ಅವಧಿ ಆರಂಭವಾಗಿದೆ. ಹೊಸ ನೀತಿಗಳನ್ನು ವೇಗವಾಗಿ ರೂಪಿಸಿದ್ದೇವೆ ಮಾತ್ರವಲ್ಲ ದೇಶದ ಅವಶ್ಯಕತೆಯನ್ನು ಅರಿತು ಹೊಸ ಕಾರ್ಯಗಳಿಗೆ ನಾಂದಿ ಹಾಡಿದ್ದೇವೆ. ದೇಶದ ಪ್ರತಿ ಕ್ಷೇತ್ರದ ಮೂಲೆ ಮೂಲೆಯಲ್ಲೂ ಅಭಿವೃದ್ಧಿಯಾಗಬೇಕು  ಎಂಬ ಗುರಿಯೊಂದಿಗೆ ನಾವು ಸಾಗುತ್ತಿದ್ದೇವೆ, ಬಂದರು ಕ್ಷೇತ್ರದ ವಿಸ್ತರಣೆಯೂ ಇದರ ಭಾಗವಾಗಿದೆ. ಮಹಾರಾಷ್ಟ್ರದ ವಾಢವಣ ಬಂದರಿಗೆ ಅನುಮೋದನೆ, ನಮ್ಮ ಮೂರನೇ ಅವಧಿಯ ಮೊದಲ ದೊಡ್ಡ ನಿರ್ಧಾರಗಳಲ್ಲಿ ಒಂದು.  ಎಪ್ಪತ್ತೈದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಧುನಿಕ ಬಂದರಿನ ನಿರ್ಮಾಣ ಕಾರ್ಯವೂ ಆರಂಭವಾಗಿದೆ. ಇದರಿಂದಲೂ ಮಹಾರಾಷ್ಟ್ರದಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಸ್ನೇಹಿತರೇ,

ಸುದೀರ್ಘ ಕಾಲದವರೆಗೆ ಗಡಿ ಮತ್ತು ಕರಾವಳಿ ಪ್ರದೇಶದ ಸಂಪರ್ಕ ಮೂಲಸೌಕರ್ಯಗಳ ಮೇಲೆ ಅಷ್ಟೊಂದು ಗಮನಹರಿಸಲಾಗಿರಲಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಈ ನಿಟ್ಟಿನಲ್ಲೂ ಅಭೂತಪೂರ್ವ ಕೆಲಸ ನಡೆದಿದೆ. ಎರಡು ದಿನಗಳ ಹಿಂದೆಯಷ್ಟೇ ಜಮ್ಮು ಕಾಶ್ಮೀರದಲ್ಲಿ ಸೋನಮಾರ್ಗ ಸುರಂಗ ಮಾರ್ಗದ ಉದ್ಘಾಟನೆ ಮಾಡುವ ಅವಕಾಶ ನನಗೆ ಲಭಿಸಿತು. ಇದರಿಂದ ಕಾರ್ಗಿಲ್, ಲಡಾಖ್ ಮುಂತಾದ ನಮ್ಮ ಗಡಿ ಪ್ರದೇಶಗಳಿಗೆ ತಲುಪುವುದು ಬಹಳ ಸುಲಭವಾಗಲಿದೆ. ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ಸೇಲಾ ಸುರಂಗ ಮಾರ್ಗದ ಉದ್ಘಾಟನೆಯಾಗಿತ್ತು. ನಮ್ಮ ಸೇನೆ ಎಲ್‌ಎಸಿ ವರೆಗೆ ತಲುಪಲು ಇದು ಮಾರ್ಗವನ್ನು ಸುಲಭಗೊಳಿಸುತ್ತಿದೆ. ಇಂದು ಶಿಂಕುನ್ ಲಾ ಸುರಂಗ ಮಾರ್ಗ ಮತ್ತು ಜೋಜಿಲಾ ಸುರಂಗ ಮಾರ್ಗದಂತಹ ಅನೇಕ ನಿರ್ಣಾಯಕ ಮೂಲಸೌಕರ್ಯಗಳ ಮೇಲೆ ಕೆಲಸ ಶರವೇಗದಲ್ಲಿ ನಡೆಯುತ್ತಿದೆ. ಭಾರತಮಾಲಾ ಯೋಜನೆಯಿಂದ ಗಡಿ ಪ್ರದೇಶದಲ್ಲಿ ಅದ್ಭುತ ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು ನಿರ್ಮಿಸಲಾಗುತ್ತಿದೆ. ವೈಬ್ರೆಂಟ್ ವಿಲೇಜ್ ಕಾರ್ಯಕ್ರಮ, ಇಂದು ಗಡಿ ಗ್ರಾಮಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕಳೆದ ದಶಕದಲ್ಲಿ ನಮ್ಮ ದೂರದ ದ್ವೀಪಗಳ ಮೇಲೂ ನಾವು ಗಮನ ಹರಿಸಿದ್ದೇವೆ. ನಿರ್ವಸಿತವಾದ ಆ ದ್ವೀಪಗಳ ನಿಯಮಿತ ಮೇಲ್ವಿಚಾರಣೆ ನಡೆಯುತ್ತಿದೆ, ಅಷ್ಟೇ ಅಲ್ಲ, ಈಗ ಆ ದ್ವೀಪಗಳಿಗೆ ಹೊಸ ಗುರುತನ್ನು ನೀಡಲಾಗುತ್ತಿದೆ, ಅವುಗಳಿಗೆ ಹೊಸ ಹೆಸರನ್ನು ನೀಡಲಾಗುತ್ತಿದೆ. ಅಲ್ಲದೆ, ಹಿಂದೂ ಮಹಾಸಾಗರದ ಸಮುದ್ರ ಆಳದಲ್ಲಿರುವ ಸಮುದ್ರ ಪರ್ವತಗಳು ಅಥವಾ ಸೀಮೌಂಟ್‌ಗಳಿಗೂ ನಾಮಕರಣ ಮಾಡಲಾಗುತ್ತಿದೆ. . ಕಳೆದ ವರ್ಷ ಭಾರತದ ಪ್ರಯತ್ನದಿಂದ ಅಂತರರಾಷ್ಟ್ರೀಯ ಸಂಸ್ಥೆಯು 5 ಅಂತಹ ಸ್ಥಳಗಳಿಗೆ ನಾಮಕರಣ ಮಾಡಿದೆ.  ಹಿಂದೂ ಮಹಾಸಾಗರದಲ್ಲಿ ಅಶೋಕ ಸೀಮೌಂಟ್, ಹರ್ಷವರ್ಧನ ಸೀಮೌಂಟ್, ರಾಜರಾಜ ಚೋಳ ಸೀಮೌಂಟ್, ಕಲ್ಪತರು ರಿಡ್ಜ್ ಮತ್ತು ಚಂದ್ರಗುಪ್ತ ರಿಡ್ಜ್ ಭಾರತದ ಗೌರವವನ್ನು ಹೆಚ್ಚಿಸುತ್ತಿವೆ.

 

ಸ್ನೇಹಿತರೇ,

ಭವಿಷ್ಯದಲ್ಲಿ ಅನಂತ ಬಾಹ್ಯಾಕಾಶ ಮತ್ತು ಸಮುದ್ರದ ಆಳ, ಎರಡರ ಮಹತ್ವ ಎಷ್ಟಿದೆ ಎಂಬುದನ್ನು  ನಾವೆಲ್ಲರೂ ಬಲ್ಲೆವು, ಆದ್ದರಿಂದ ಇಂದು ಬಾಹ್ಯಾಕಾಶ ಮತ್ತು ಕಡಲಾಳ, ಎರಡೂ ಕಡೆ ಭಾರತ ತನ್ನ ಸಾಮರ್ಥ್ಯ ವೃದ್ಧಿಸುತ್ತಿದೆ. ನಮ್ಮ ಸಮುದ್ರಯಾನ ಯೋಜನೆ, ವಿಜ್ಞಾನಿಗಳನ್ನು ಸಮುದ್ರದಲ್ಲಿ 6 ಸಾವಿರ ಮೀಟರ್ ಆಳಕ್ಕೆ ಕರೆದೊಯ್ಯಲಿದೆ, ಇಲ್ಲಿಗೆ ಕೆಲವೇ ದೇಶಗಳು ತಲುಪಿವೆ. ಅಂದರೆ ಭವಿಷ್ಯದ ಯಾವುದೇ ಸಾಧ್ಯತೆಯ ಮೇಲೆ ಕೆಲಸ ಮಾಡುವಲ್ಲಿ ನಮ್ಮ ಸರ್ಕಾರ ಯಾವುದೇ ಅವಕಾಶವನ್ನು ಕೈ ಬಿಡುತ್ತಿಲ್ಲ.

ಸ್ನೇಹಿತರೇ,

21ನೇ ಶತಮಾನದ ಭಾರತ ಪೂರ್ಣ ಆತ್ಮವಿಶ್ವಾಸದಿಂದ ಮುಂದೆ ಸಾಗಲು, ನಾವು ಗುಲಾಮಗಿರಿಯ ಕರಿನೆರಳಿನಿಂದಲೂ ಮುಕ್ತರಾಗಬೇಕು, ಮತ್ತು ನಮ್ಮ ನೌಕಾದಳ ಇದರಲ್ಲಿಯೂ ನಾಯಕತ್ವ ಮೆರೆದಿದೆ. ಛತ್ರಪತಿ ಶಿವಾಜಿ ಮಹಾರಾಜರ ಗೌರವಾನ್ವಿತ ಪರಂಪರೆಗೆ ನಮ್ಮ ನೌಕಾದಳ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದೆ. ನೌಕಾದಳ ಅಡ್ಮಿರಲ್ ದರ್ಜೆಯ ಎಪೋಲೆಟ್‌ಗಳನ್ನೂ, ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯ ಪ್ರಕಾರ ಮರುವಿನ್ಯಾಸಗೊಳಿಸಿದೆ. ಮೇಕ್ ಇನ್ ಇಂಡಿಯಾ ಅಭಿಯಾನ, ಭಾರತದ ಆತ್ಮನಿರ್ಭರತೆಯ ಅಭಿಯಾನವೂ ಗುಲಾಮಗಿರಿಯ ಮನಸ್ತತ್ವದದಿಂದ ಮುಕ್ತಿಗೆ ಪ್ರೋತ್ಸಾಹಿಸುತ್ತದೆ. ನೀವೆಲ್ಲರೂ ಹೀಗೆಯೇ ದೇಶ ಹೆಮ್ಮೆಯ ಕ್ಷಣಗಳನ್ನು ಆಸ್ವಾದಿಸುವ ಅವಕಾಶ ಕಲ್ಪಿಸುವಿರಿ ಎಂದು ನನಗೆ ವಿಶ್ವಾಸವಿದೆ.  ಭಾರತವನ್ನು ಅಭಿವೃದ್ಧಿಪಡಿಸುವಲ್ಲಿ ಕೊಡುಗೆ ನೀಡುವ ಪ್ರತಿಯೊಂದು ಕೆಲಸವನ್ನೂ ನಾವು ಒಟ್ಟಾಗಿ ಮಾಡಬೇಕಿದೆ. ನಮ್ಮ ಜವಾಬ್ದಾರಿಗಳು ಬೇರೆ ಬೇರೆ ಆಗಿರಬಹುದು, ಆದರೆ ಎಲ್ಲರ ಗುರಿ ಒಂದೇ - ಅದೇ ಅಭಿವೃದ್ಧಿ ಹೊಂದಿದ ಭಾರತ. ಇಂದು ದೇಶಕ್ಕೆ ದೊರೆತಿರುವ ಈ ಹೊಸ ಫ್ರಂಟಿಯರ್ ಪ್ಲಾಟ್‌ಫಾರ್ಮ್‌ಗಳು, ನಮ್ಮ ಸಂಕಲ್ಪಕ್ಕೆ ಬಲ ನೀಡಲಿವೆ.

 

ಮತ್ತು ಸ್ನೇಹಿತರೇ,

ಸ್ವಲ್ಪ ಸಹಜವಾದ ಮಾತನ್ನು ಆಡಬೇಕೆಂದರೆ, ನಾನು ಸೇನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ ಮತ್ತು ಊಟದ ವಿಷಯದಲ್ಲಿ ಅತ್ಯುತ್ತಮ ವ್ಯವಸ್ಥೆ ಯಾರದಾದರೂ ಮಾಡಿದ್ದಾರೆ ಎಂದರೆ ಅದು ನೌಕಾಪಡೆ, ವೈವಿಧ್ಯಮಯವಾದ  ಖಾದ್ಯಗಳಿರುತ್ತವೆ ಎಂಬುದು ನನ್ನ ಅನುಭವ. ಇಂದು ಸೂರತ್ ಕೂಡಾ ಈ ಪಟ್ಟಿಗೆ ಸೇರಿಕೊಂಡಿದೆ, ಮತ್ತು ನಮಗೆಲ್ಲಾ ಒಂದು ಜನಪ್ರಿಯ ಗಾದೆ ಮಾತು ಗೊತ್ತಿದೆ ಮತ್ತು ಕ್ಯಾಪ್ಟನ್ ಸಂದೀಪ್ ಈ ವಿಷಯವನ್ನು ಗಮನವಿಟ್ಟು ಕೇಳಬೇಕೆಂದು ನಾನು ಬಯಸುತ್ತೇನೆ. ಆ ಗಾದೆ ಹೀಗಿದೆ - ಸೂರತ್‌ನ ಊಟೋಪಚಾರ ಮತ್ತು ಕಾಶಿಯಲ್ಲಿ  ಮರಣ, ಅಂದರೆ ಸೂರತ್‌ನಲ್ಲಿ ಸಿಗುವ ಊಟ ಎಷ್ಟು ಸ್ವಾದಿಷ್ಠವೋ, ಅಷ್ಟೇ ಶ್ರೇಷ್ಠವಾದದ್ದು, ಈಗ ಸೂರತ್ ನಲ್ಲಿ ಪ್ರಾರಂಭವಾಗುತ್ತಿರುವಾಗ, ಕ್ಯಾಪ್ಟನ್ ಸಂದೀಪ್ ಸೂರತ್ ಖಾದ್ಯಗಳನ್ನು ಜನರಿಗೆ ಉಣಬಡಿಸುತ್ತಾರೆ ಎಂದು ಆಶಿಸುವೆ.

 

ಸ್ನೇಹಿತರೇ,

ಇದು ಬಹಳ ಶ್ರೇಷ್ಠ ಸಂದರ್ಭ, ದೇಶವೆಲ್ಲಾ ನಿಮಗೆ ಶುಭಹಾರೈಸುತ್ತಿದೆ, ದೇಶವೆಲ್ಲಾ ಹೆಮ್ಮೆಯಿಂದ ಬೀಗುತ್ತಿದೆ. ಹಾಗಾಗಿ, ಹೊಸ ವಿಶ್ವಾಸದೊಂದಿಗೆ, ಹೊಸ ಉತ್ಸಾಹ ಮತ್ತು ಹುರುಪಿನೊಂದಿಗೆ, ಹೊಸ ಸಂಕಲ್ಪದೊಂದಿಗೆ ವಿಕಸಿತ ಭಾರತದ ಸಂಕಲ್ಪವನ್ನು ಪೂರೈಸಲು ನಾವು ಪೂರ್ಣ ಶಕ್ತಿಯಿಂದ ಒಗ್ಗೂಡೋಣ. ಈ ಸಂದರ್ಭದಲ್ಲಿ ಈ ಮೂರು ಮಹತ್ವದ ಕ್ರಮಗಳಿಗೆ, ಮಹತ್ವದ ಕೊಡುಗೆಗಳಿಗಾಗಿ ನಿಮಗೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಾ, ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ.

ಎಲ್ಲರು ನನ್ನೊಂದಿಗೆ ಒಕ್ಕೊರಲಿನಿಂದ ಹೇಳಿ -

ಭಾರತ ಮಾತಾ ಕಿ ಜೈ.

ಈ ಕಾರ್ಯಕ್ರಮದಲ್ಲಿ ಈ ಧ್ವನಿ ಮಾರ್ದನಿಸಬೇಕು 

ಭಾರತ ಮಾತಾ ಕಿ ಜೈ

ಭಾರತ ಮಾತಾ ಕಿ ಜೈ

ಭಾರತ ಮಾತಾ ಕಿ ಜೈ

ಅನಂತ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Apple grows India foothold, enlists big Indian players as suppliers

Media Coverage

Apple grows India foothold, enlists big Indian players as suppliers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಮಾರ್ಚ್ 2025
March 20, 2025

Citizen Appreciate PM Modi's Governance: Catalyzing Economic and Social Change