ಬಿಹಾರವು ಅಭಿವೃದ್ಧಿ ಹೊಂದುತ್ತದೆ ಮತ್ತು ದೇಶದ ಸಮೃದ್ಧಿಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ ದಾಖಲೆಯ 25 ಕೋಟಿ ಭಾರತೀಯರು ಬಡತನವನ್ನು ಹಿಮೆಟ್ಟಿಸಿದ್ದಾರೆ: ಪ್ರಧಾನಮಂತ್ರಿ
ಬಿಹಾರವು ಮೇಡ್ ಇನ್ ಇಂಡಿಯಾದ ದೊಡ್ಡ ಕೇಂದ್ರವಾಗಲಿದೆ, ಇಂದು ಮರ್ಹೌರಾ ಲೋಕೋಮೋಟಿವ್ ಕಾರ್ಖಾನೆಯಿಂದ ಮೊದಲ ಎಂಜಿನ್ ಅನ್ನು ಆಫ್ರಿಕಾಕ್ಕೆ ರಫ್ತು ಮಾಡಲಾಗುತ್ತಿದೆ: ಪ್ರಧಾನಮಂತ್ರಿ

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ನಾನು ಎಲ್ಲರಿಗೂ ನಮಸ್ಕರಿಸುತ್ತೇನೆ. ಬಾಬಾ ಮಹೇಂದ್ರನಾಥ್, ಬಾಬಾ ಹಂಸನಾಥ್, ಸೋಹಗ್ರಾ ಧಾಮ್, ಮಾತೆ ತಾವೇ ಭವಾನಿ, ಮಾತೆ ಅಂಬಿಕಾ ಭವಾನಿ, ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರ ಪುಣ್ಯ ಭೂಮಿಯಲ್ಲಿರುವ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ!

ಬಿಹಾರ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಜಿ, ಇಲ್ಲಿನ ಜನರ ಸೇವೆಗೆ ಸಮರ್ಪಿತರಾದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಜಿತನ್ ರಾಮ್ ಮಾಂಝಿ ಜಿ, ಗಿರಿರಾಜ್ ಸಿಂಗ್ ಜಿ, ಲಲ್ಲನ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ, ರಾಮನಾಥ್ ಠಾಕೂರ್ ಜಿ, ನಿತ್ಯಾನಂದ ರೈ ಜಿ, ಸತೀಶ್ ಚಂದ್ರ ದುಬೆ ಜಿ, ರಾಜಭೂಷಣ್ ಚೌಧರಿ ಜಿ, ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಜಿ, ವಿಜಯ್ ಕುಮಾರ್ ಸಿನ್ಹಾ ಜಿ, ಸಂಸತ್ತಿನ ನನ್ನ ಸಹೋದ್ಯೋಗಿ ಉಪೇಂದ್ರ ಕುಶ್ವಾಹ ಜಿ, ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಜಿ, ಇತರೆ ಸಚಿವರೆ, ಸಂಸದರೆ, ಶಾಸಕರೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!

ಈ ಸಿವಾನ್ ಭೂಮಿ ನಮ್ಮ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿದಾಯಕ ನೆಲೆಯಾಗಿದೆ. ಇದು ನಮ್ಮ ಪ್ರಜಾಪ್ರಭುತ್ವ, ದೇಶ ಮತ್ತು ಸಂವಿಧಾನಕ್ಕೆ ಬಲ ನೀಡುವ ಪುಣ್ಯ ಭೂಮಿ. ಸಿವಾನ್ ದೇಶಕ್ಕೆ ಬಾಬು ರಾಜೇಂದ್ರ ಪ್ರಸಾದ್ ಅವರಂತಹ ಮಹಾನ್ ಪುತ್ರನನ್ನು ನೀಡಿದೆ. ಸಂವಿಧಾನ ರಚನೆಯಲ್ಲಿ ಮತ್ತು ದೇಶಕ್ಕೆ ನಿರ್ದೇಶನ ನೀಡುವಲ್ಲಿ ರಾಜೇಂದ್ರ ಪ್ರಸಾದ್ ಬಹಳ ಮುಖ್ಯ ಪಾತ್ರ ವಹಿಸಿದರು. ಸಿವಾನ್ ದೇಶಕ್ಕೆ ಬ್ರಜ್ ಕಿಶೋರ್ ಪ್ರಸಾದ್ ಜಿ ಅವರಂತಹ ಮಹಾನ್ ಸಮಾಜ ಸುಧಾರಕರನ್ನು ಸಹ ನೀಡಿದೆ. ಬ್ರಜ್ ಬಾಬು ಅವರು ಮಹಿಳಾ ಸಬಲೀಕರಣವನ್ನು ತಮ್ಮ ಜೀವನದ ಗುರಿ ಆಗಿಸಿಕೊಂಡಿದ್ದರು.

 

ಸ್ನೇಹಿತರೆ,

ಎನ್‌ಡಿಎಯ ಈ ಡಬಲ್ ಎಂಜಿನ್ ಸರ್ಕಾರವು ಅಂತಹ ಮಹಾನ್ ಆತ್ಮಗಳ ಜೀವನ ಧ್ಯೇಯವನ್ನು ದೃಢ ನಿಶ್ಚಯದಿಂದ ಮುಂದಕ್ಕೆ ಕೊಂಡೊಯ್ಯುತ್ತಿದೆ ಎಂಬುದು ನನಗೆ ಸಂತೋಷ ನೀಡಿದೆ. ಇಂದಿನ ಕಾರ್ಯಕ್ರಮವು ಈ ಪ್ರಯತ್ನಗಳ ಒಂದು ಭಾಗವಾಗಿದೆ. ಇಂದು ಈ ವೇದಿಕೆಯಿಂದ, ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಲಾಗಿದೆ. ಈ ಎಲ್ಲಾ ಅಭಿವೃದ್ಧಿ ಯೋಜನೆಗಳು ಬಿಹಾರವನ್ನು ಉಜ್ವಲ ಭವಿಷ್ಯದತ್ತ ಕೊಂಡೊಯ್ಯುತ್ತವೆ, ಬಿಹಾರವನ್ನು ಸಮೃದ್ಧಗೊಳಿಸುತ್ತವೆ. ಈ ಯೋಜನೆಗಳು ಬಿಹಾರದ ಎಲ್ಲಾ ಪ್ರದೇಶಗಳಾದ ಸಿವಾನ್, ಸಸಾರಾಮ್, ಬಕ್ಸಾರ್, ಮೋತಿಹಾರಿ, ಬೆಟ್ಟಿಯಾ ಮತ್ತು ಅರಾವನ್ನು ಅಭಿವೃದ್ಧಿ ಪಡಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ಇವು ಬಡವರು, ವಂಚಿತರು, ದಲಿತರು, ಮಹಾದಲಿತರು, ಸಮಾಜದ ಪ್ರತಿಯೊಂದು ವರ್ಗದ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಜನರ ಜೀವನವನ್ನು ಸುಲಭಗೊಳಿಸುತ್ತವೆ. ಈ ಯೋಜನೆಗಳಿಗಾಗಿ ಬಿಹಾರದ ಜನರನ್ನು, ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ. ನಾನು ಇಲ್ಲಿಗೆ ಬರುವಾಗ, ನಿನ್ನೆ ಮಳೆಯಾಯಿತು. ಬೆಳಗ್ಗೆಯೂ ಮಳೆಯಾಯಿತು. ಇದರ ಹೊರತಾಗಿಯೂ, ನೀವು ಅಪಾರ ಸಂಖ್ಯೆಯಲ್ಲಿ ಬಂದು ನಮ್ಮನ್ನು ಆಶೀರ್ವದಿಸಿದ್ದೀರಿ, ನನ್ನ ಹೃದಯಾಂತರಾಳದಿಂದ ನಿಮಗೆ ಧನ್ಯವಾದ ಹೇಳುತ್ತೇನೆ.

ಸಹೋದರ ಸಹೋದರಿಯರೆ,

ನಿಮಗೆಲ್ಲರಿಗೂ ತಿಳಿದಿರುವಂತೆ, ನಾನು ನಿನ್ನೆಯಷ್ಟೇ ವಿದೇಶದಿಂದ ಮರಳಿದೆ. ಈ ಭೇಟಿಯ ಸಮಯದಲ್ಲಿ, ನಾನು ವಿಶ್ವದ ಪ್ರಮುಖ ಶ್ರೀಮಂತ ರಾಷ್ಟ್ರಗಳ ನಾಯಕರೊಂದಿಗೆ ಮಾತನಾಡಿದೆ. ಭಾರತದ ತ್ವರಿತ ಪ್ರಗತಿಯಿಂದ ಎಲ್ಲಾ ನಾಯಕರು ತುಂಬಾ ಪ್ರಭಾವಿತರಾಗಿದ್ದಾರೆ. ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಸೂಪರ್ ಪವರ್ ಆಗುವುದನ್ನು ಅವರು ನೋಡುತ್ತಾರೆ, ಬಿಹಾರವು ಖಂಡಿತವಾಗಿಯೂ ಇದರಲ್ಲಿ ಬಹಳ ದೊಡ್ಡ ಪಾತ್ರ ವಹಿಸಲಿದೆ. ಬಿಹಾರವು ಅಭಿವೃದ್ಧಿ ಹೊಂದುತ್ತದೆ ಮತ್ತು ದೇಶದ ಸಮೃದ್ಧಿಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಸ್ನೇಹಿತರೆ,

ನನ್ನ ನಂಬಿಕೆಗೆ ಕಾರಣ ಬಿಹಾರದ ನಿಮ್ಮೆಲ್ಲರ ಶಕ್ತಿ. ನೀವು ಒಟ್ಟಾಗಿ ಬಿಹಾರದಲ್ಲಿ ಜಂಗಲ್ ರಾಜ್ ನಿರ್ಮೂಲನೆ ಮಾಡಿದ್ದೀರಿ. ಇಲ್ಲಿನ ನಮ್ಮ ಯುವಕರು 20 ವರ್ಷಗಳ ಹಿಂದೆ ಬಿಹಾರದ ದುಃಸ್ಥಿತಿಯ ಬಗ್ಗೆ ಕಥೆಗಳನ್ನು ಮಾತ್ರ ಕೇಳಿದ್ದಾರೆ. ಜಂಗಲ್ ರಾಜ್ ಜನರು ಬಿಹಾರಕ್ಕೆ ಏನು ಮಾಡಿದ್ದಾರೆಂದು ಅವರಿಗೆ ತಿಳಿದಿಲ್ಲ. ಶತಮಾನಗಳ ಕಾಲ ಭಾರತದ ಪ್ರಗತಿಗೆ ಕಾರಣವಾದ ಬಿಹಾರವನ್ನು ಪಂಜಾ(पंजा) ಮತ್ತು ಲಾಲ್ಟೆನ್ (लालटेन) ಹಿಡಿತದಿಂದ ವಲಸೆಯ ಸಂಕೇತವನ್ನಾಗಿ ಮಾಡಲಾಯಿತು.

 

ಸ್ನೇಹಿತರೆ,

ಬಿಹಾರದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ, ಅವನ ಸ್ವಾಭಿಮಾನ. ನನ್ನ ಬಿಹಾರಿ ಸಹೋದರ ಸಹೋದರಿಯರು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಎಂದಿಗೂ ತಮ್ಮ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ಪಂಜಾ ಮತ್ತು ಲಾಲ್ಟೆನ್ ಚಿಹ್ನೆಗಳನ್ನು ಹೊಂದಿರುವ ಜನರು ಒಟ್ಟಾಗಿ ಬಿಹಾರದ ಸ್ವಾಭಿಮಾನಕ್ಕೆ ಧಕ್ಕೆ ತಂದರು. ಈ ಜನರು ಲೂಟಿಗೆ ಕಾರಣರಾದರು, ಬಡತನ ಬಿಹಾರದ ದುರದೃಷ್ಟವಾಯಿತು. ಅನೇಕ ಸವಾಲುಗಳನ್ನು ನಿವಾರಿಸಿ, ನಿತೀಶ್ ಜಿ ನೇತೃತ್ವದ ಎನ್‌ಡಿಎ ಸರ್ಕಾರ ಬಿಹಾರವನ್ನು ಮತ್ತೆ ಅಭಿವೃದ್ಧಿಯ ಹಾದಿಗೆ ತಂದಿದೆ, ನಾನು ಬಿಹಾರದ ಜನರಿಗೆ ಭರವಸೆ ನೀಡಲು ಬಂದಿದ್ದೇನೆ, ನಾವು ಬಹಳಷ್ಟು ಮಾಡಿರಬಹುದು, ಮಾಡುತ್ತಿದ್ದೇವೆ ಮತ್ತು ಮುಂದುವರಿಸುತ್ತೇವೆ, ಆದರೆ ಮೋದಿ ಇದರ ನಂತರವೂ ಮೌನವಾಗಿರುವುದಿಲ್ಲ, ಈಗ ಸಾಕು, ನಾನು ಸಾಕಷ್ಟು ಮಾಡಿದ್ದೇನೆ, ಇಲ್ಲ, ನಾನು ಬಿಹಾರಕ್ಕಾಗಿ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ, ನಾನು ನಿಮಗಾಗಿ ಅದನ್ನು ಮಾಡಬೇಕು, ಇಲ್ಲಿನ ಪ್ರತಿಯೊಂದು ಹಳ್ಳಿಗೂ ನಾನು ಅದನ್ನು ಮಾಡಬೇಕು, ಇಲ್ಲಿನ ಪ್ರತಿಯೊಂದು ಮನೆಗೂ ನಾನು ಅದನ್ನು ಮಾಡಬೇಕು, ಇಲ್ಲಿನ ಪ್ರತಿಯೊಬ್ಬ ಯುವಕರಿಗೂ ನಾನು ಅದನ್ನು ಮಾಡಬೇಕು. ಕಳೆದ 10-11 ವರ್ಷಗಳ ಬಗ್ಗೆ ಮಾತ್ರ ನಾನು ಮಾತನಾಡಿದರೆ, ಈ 10 ವರ್ಷಗಳಲ್ಲಿ ಬಿಹಾರದಲ್ಲಿ ಸುಮಾರು 55 ಸಾವಿರ ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ, 1.5 ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ, 1.5 ಕೋಟಿ ಜನರಿಗೆ ನೀರಿನ ಸಂಪರ್ಕ ಒದಗಿಸಲಾಗಿದೆ, 45 ಸಾವಿರಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು ನಿರ್ಮಿಸಲಾಗಿದೆ, ಇಂದು ಬಿಹಾರದ ಸಣ್ಣ ನಗರಗಳಲ್ಲಿ ಹೊಸ ನವೋದ್ಯಮಗಳು ತಲೆ ಎತ್ತುತ್ತಿವೆ.

ಸ್ನೇಹಿತರೆ,

ಬಿಹಾರದಲ್ಲಿ ಪ್ರಗತಿಯ ವೇಗ ನಿರಂತರವಾಗಿ ಹೆಚ್ಚುತ್ತಿದೆ, ಅದು ಹೆಚ್ಚುತ್ತಲೇ ಇರಬೇಕು. ಅದೇ ಸಮಯದಲ್ಲಿ, ಬಿಹಾರದಲ್ಲಿ ಜಂಗಲ್ ರಾಜ್ ತಂದವರು ಹೇಗಾದರೂ ತಮ್ಮ ಹಳೆಯ ಕೃತ್ಯಗಳನ್ನು ಪುನರಾವರ್ತಿಸಲು ಅವಕಾಶ ಹುಡುಕುತ್ತಿದ್ದಾರೆ. ಅವರು ಬಿಹಾರದ ಆರ್ಥಿಕ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳಲು ವಿವಿಧ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ, ಆದ್ದರಿಂದ ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ, ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ನೀವು ಬಹಳ ಜಾಗರೂಕರಾಗಿರಬೇಕು. ಸಮೃದ್ಧ ಬಿಹಾರದತ್ತ ಪ್ರಯಾಣಕ್ಕೆ ಬ್ರೇಕ್ ಹಾಕಲು ಸಿದ್ಧರಿರುವವರನ್ನು ಮೈಲುಗಟ್ಟಲೆ ದೂರದಲ್ಲಿ ಇಡಬೇಕು.

ಸ್ನೇಹಿತರೆ,

ನಮ್ಮ ದೇಶವು ದಶಕಗಳಿಂದ ಗರೀಬಿ ಹಠಾವೋ ಘೋಷಣೆ ಕೇಳಿದೆ. ನಿಮ್ಮ 2-3 ತಲೆಮಾರುಗಳು ಬಂದು ಪ್ರತಿ ಚುನಾವಣೆಯಲ್ಲೂ ಗರೀಬಿ ಹಠಾವೋ! ಗರೀಬಿ ಹಠಾವೋ! ಎಂದು ಜಪಿಸುತ್ತಿವೆ. ಆದರೆ ನೀವು ನಮಗೆ ಅವಕಾಶ ನೀಡಿದಾಗ, ಎನ್‌ಡಿಎಗೆ ಅವಕಾಶ ನೀಡಿದಾಗ, ಬಡತನ ಕಡಿಮೆ ಮಾಡಬಹುದು ಎಂದು ಎನ್‌ಡಿಎ ಸರ್ಕಾರ ತೋರಿಸಿದೆ. ಕಳೆದ ದಶಕದಲ್ಲಿ, ದಾಖಲೆಯ 25 ಕೋಟಿ ಭಾರತೀಯರು ಬಡತನ ಸೋಲಿಸಿದ್ದಾರೆ. ವಿಶ್ವಬ್ಯಾಂಕ್‌ನಂತಹ ವಿಶ್ವಪ್ರಸಿದ್ಧ ಸಂಸ್ಥೆಗಳು ಭಾರತದ ಈ ಮಹಾ ಸಾಧನೆಯನ್ನು ಹೊಗಳುತ್ತಿವೆ. ಭಾರತ ಸಾಧಿಸಿದ ಈ ಅದ್ಭುತ ಸಾಧನೆಯಲ್ಲಿ, ಬಿಹಾರ ಮತ್ತು ನಮ್ಮ ನಿತೀಶ್ ಜಿ ಅವರ ಸರ್ಕಾರವು ದೊಡ್ಡ ಕೊಡುಗೆಯನ್ನು ನೀಡಿದೆ. ಇದಕ್ಕೂ ಮೊದಲು, ಬಿಹಾರದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಅತ್ಯಂತ ಬಡವರಾಗಿದ್ದರು. ಆದರೆ ಕಳೆದ ದಶಕದಲ್ಲಿ, ಬಿಹಾರದ ಸುಮಾರು 3.75 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ.

 

ಸ್ನೇಹಿತರೆ,

ಸ್ವಾತಂತ್ರ್ಯ ಬಂದ ಹಲವು ದಶಕಗಳ ನಂತರವೂ, ಅನೇಕ ಜನರು ಬಡವರಾಗಿದ್ದರು, ಘೋಷಣೆಗಳು ಪ್ರತಿಧ್ವನಿಸುತ್ತಲೇ ಇದ್ದವು, ಬಡತನ ಹೆಚ್ಚುತ್ತಲೇ ಇತ್ತು. ಆದರೆ ಬಿಹಾರ ಜನರ ಕಠಿಣ ಪರಿಶ್ರಮದಲ್ಲಿ ಯಾವುದೇ ಕೊರತೆ ಇಲ್ಲದ ಕಾರಣ ಇದು ಸಂಭವಿಸಲಿಲ್ಲ, ದೇಶವಾಸಿಗಳ ಕಠಿಣ ಪರಿಶ್ರಮದಲ್ಲಿ ಯಾವುದೇ ಕೊರತೆ ಇರಲಿಲ್ಲ. ಆದರೂ, ಅವರು ಮುಂದುವರಿಯಲು ಯಾವುದೇ ಮಾರ್ಗವಿಲ್ಲದ ಕಾರಣ. ದೀರ್ಘಕಾಲದವರೆಗೆ, ಕಾಂಗ್ರೆಸ್‌ನ ಜಂಗಲ್ ರಾಜ್ ದೇಶವನ್ನು ಬಡವರನ್ನಾಗಿ ಮಾಡಿತು, ಬಡವರನ್ನು ತೀವ್ರ ಬಡತನಕ್ಕೆ ತಳ್ಳಿತು. ಎಲ್ಲದಕ್ಕೂ ಕೋಟಾ-ಪರವಾನಗಿ ನಿಗದಿಪಡಿಸಿದಾಗ. ಸಣ್ಣ ಕೆಲಸಗಳನ್ನು ಮಾಡಲು ಸಹ ಪರವಾನಗಿಗಳು ಬೇಕಾಗಿದ್ದವು. ಕಾಂಗ್ರೆಸ್-ಆರ್‌ಜೆಡಿ ಆಳ್ವಿಕೆಯಲ್ಲಿ, ಬಡವರಿಗೆ ಮನೆಗಳು ಸಿಗಲಿಲ್ಲ, ಮಧ್ಯವರ್ತಿಗಳು ಪಡಿತರವನ್ನು ಕಸಿದುಕೊಂಡರು. ವೈದ್ಯಕೀಯ ಚಿಕಿತ್ಸೆ ಬಡವರ ವ್ಯಾಪ್ತಿಯನ್ನು ಮೀರಿತ್ತು, ಶಿಕ್ಷಣ ಮತ್ತು ಗಳಿಕೆಗಾಗಿ ಹೋರಾಟವಿತ್ತು, ವಿದ್ಯುತ್-ನೀರು ಸಂಪರ್ಕ ಪಡೆಯಲು ಒಬ್ಬರು ಸರ್ಕಾರಿ ಕಚೇರಿಗಳಿಗೆ ಲೆಕ್ಕವಿಲ್ಲದಷ್ಟು ಬಾರಿ ಸುತ್ತಾಡಬೇಕಾಯಿತು. ಅನಿಲ ಸಂಪರ್ಕಕ್ಕಾಗಿ ಸಂಸದರ ಶಿಫಾರಸು ಅಗತ್ಯವಾಗಿತ್ತು. ಲಂಚ ಅಥವಾ ಶಿಫಾರಸು ಇಲ್ಲದೆ ಯಾವುದೇ ಕೆಲಸ ಸಿಗುತ್ತಿರಲಿಲ್ಲ. ಇದರ ದೊಡ್ಡ ಬಲಿಪಶುಗಳು ಯಾರು? ಈ ಜನರಲ್ಲಿ ಹೆಚ್ಚಿನವರು ನನ್ನ ದಲಿತ ಸಮುದಾಯ, ಮಹಾದಲಿತ ಸಮುದಾಯ, ಹಿಂದುಳಿದ ಸಮುದಾಯ, ಅತ್ಯಂತ ಹಿಂದುಳಿದ ಸಮುದಾಯದವರು, ನನ್ನ ಈ ಸಹೋದರ ಸಹೋದರಿಯರು ಅದರ ಬಲಿಪಶುಗಳಾದರು. ಬಡತನ ನಿರ್ಮೂಲನೆ ಮಾಡುವ ಕನಸನ್ನು ಅವರಿಗೆ ತೋರಿಸುವ ಮೂಲಕ, ಕೆಲವು ಕುಟುಂಬಗಳು ಸ್ವತಃ ಕೋಟ್ಯಧಿಪತಿಗಳಾದರು.

ಸ್ನೇಹಿತರೆ,

ಕಳೆದ 11 ವರ್ಷಗಳಿಂದ ನಮ್ಮ ಸರ್ಕಾರವು ಬಡವರ ಹಾದಿಯಲ್ಲಿರುವ ಪ್ರತಿಯೊಂದು ಕಷ್ಟವನ್ನು ತೆಗೆದುಹಾಕುವತ್ತ ಕೆಲಸ ಮಾಡುತ್ತಿದೆ, ಭವಿಷ್ಯದಲ್ಲೂ ಅದನ್ನು ಮುಂದುವರಿಸುತ್ತದೆ. ಇಷ್ಟೊಂದು ಕಠಿಣ ಪರಿಶ್ರಮದಿಂದಾಗಿ, ಇಂದು ನಾವು ಅಂತಹ ಉತ್ತಮ ಫಲಿತಾಂಶಗಳನ್ನು ನೋಡಬಹುದು. ಈಗ ಬಡವರಿಗೆ ಮನೆಗಳಿವೆ, ನಾನು ಮನೆಗಳ ಕೀಲಿಗಳನ್ನು ನೀಡಲು ಅವಕಾಶ ಪಡೆದ ಕುಟುಂಬಗಳು ಅನೇಕ ಆಶೀರ್ವಾದಗಳನ್ನು ನೀಡುತ್ತಿದ್ದವು, ಅವರ ಮುಖಗಳಲ್ಲಿ ತುಂಬು ತೃಪ್ತಿ ಇತ್ತು, ಅವರು ಸಕಾರಾತ್ಮಕ ಭಾವನೆಗಳಿಂದ ತುಂಬಿದ್ದರು.

 

ಸ್ನೇಹಿತರೆ,

ಕಳೆದ ದಶಕದಲ್ಲಿ ದೇಶಾದ್ಯಂತ 4 ಕೋಟಿಗೂ ಹೆಚ್ಚಿನ ಬಡವರಿಗೆ ಕಾಂಕ್ರೀಟ್ ಮನೆಗಳು ಸಿಕ್ಕಿವೆ. ನಾನು ನಿಮ್ಮನ್ನು ಕೇಳಿದರೆ, ನೀವು ಉತ್ತರಿಸುತ್ತೀರಾ? ನಾನು ಕೇಳಿದರೆ, ನೀವು ಉತ್ತರಿಸುತ್ತೀರಾ? ನಾನು ಹೇಳಿದ್ದು, 4 ಕೋಟಿ ಜನರಿಗೆ, ಅಂದರೆ, 4 ಕೋಟಿ ಕುಟುಂಬಗಳಿಗೆ ಕಾಂಕ್ರೀಟ್ ಮನೆಗಳು ಸಿಕ್ಕಿವೆ. ಎಷ್ಟು ಜನ? ಜೋರಾಗಿ ಹೇಳಿ, ಎಷ್ಟು ಜನ? 4 ಕೋಟಿ! ಊಹಿಸಿ, 4 ಕೋಟಿ ಜನರಿಗೆ ಕಾಂಕ್ರೀಟ್ ಮನೆಗಳು ಸಿಕ್ಕಿವೆ, ಅದು ಕೇವಲ 4 ಗೋಡೆಗಳಲ್ಲ, ಆ ಮನೆಗಳಲ್ಲಿ ಕನಸುಗಳನ್ನು ರೂಪಿಸಲಾಗಿದೆ, ಆ ಮನೆಗಳಲ್ಲಿ ನಿರ್ಣಯಗಳನ್ನು ಮಾಡಲಾಗಿದೆ. ಮುಂಬರುವ ಸಮಯದಲ್ಲಿ, 3 ಕೋಟಿಗೂ ಹೆಚ್ಚಿ ಕಾಂಕ್ರೀಟ್ ಮನೆಗಳು ಸಿದ್ಧವಾಗುತ್ತವೆ. ನಾನು ಮೊದಲೇ ಹೇಳಿದ್ದೆ, ನಾನು ಸೇವೆಯ ಕೆಲಸದಲ್ಲಿ ನಿಲ್ಲುವುದಿಲ್ಲ. ಏನೇ ಆದರೂ, ಅದು ಹಿಂದಿನ ಮನೆಗಳಿಗಿಂತ ಉತ್ತಮವಾಗಿರುತ್ತವೆ. ಆದರೂ ಮೋದಿ ನೆಮ್ಮದಿಯಿಂದ ಮಲಗುವುದಿಲ್ಲ, ಅವರು ಹಗಲಿರುಳು ಕೆಲಸ ಮಾಡುತ್ತಲೇ ಇರುತ್ತಾರೆ, ಅವರು ನಿಮಗಾಗಿ ಕೆಲಸ ಮಾಡುತ್ತಲೇ ಇರುತ್ತಾರೆ. ಏಕೆಂದರೆ ನೀವು ನನ್ನ ಕುಟುಂಬದ ಸದಸ್ಯರಾಗಿದ್ದೀರಿ, ನನ್ನ ಕುಟುಂಬದ ಒಬ್ಬ ಸದಸ್ಯರೂ ಹಿಂದೆ ಉಳಿಯಬಾರದು, ದುಃಖ ಅನಭವಿಸಬಾರದು ಎಂಬ ಕನಸಿನೊಂದಿಗೆ ಬಂದಿದ್ದೇನೆ. ಬಿಹಾರದ ನನ್ನ ಬಡ ಸಹೋದರ ಸಹೋದರಿಯರೆ, ದಲಿತ ಸಹೋದರ ಸಹೋದರಿಯರೆ, ಮಹಾದಲಿತ ಸಹೋದರ ಸಹೋದರಿಯರೆ, ಹಿಂದುಳಿದ ಸಹೋದರ ಸಹೋದರಿಯರೆ, ಅತ್ಯಂತ ಹಿಂದುಳಿದ ಸಹೋದರ ಸಹೋದರಿಯರೆ, ನಾನು ನಡೆಸುತ್ತಿರುವ ಎಲ್ಲಾ ಯೋಜನೆಗಳು ಮೊದಲು ಅವರಿಗೆ ಅಪಾರ ಪ್ರಯೋಜನ ನೀಡುತ್ತಿವೆ. ಬಿಹಾರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 57 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಸಿವಾನ್ ಜಿಲ್ಲೆಯಲ್ಲಿಯೂ ಸಹ, ಬಡವರಿಗಾಗಿ 1 ಲಕ್ಷದ 10 ಸಾವಿರಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಿಸಲಾಗಿದೆ, ನಾನು ಒಂದು ಜಿಲ್ಲೆಯ ಬಗ್ಗೆ ಮಾತನಾಡುತ್ತಿದ್ದೇನೆ, ಈ ಕೆಲಸ ನಿರಂತರವಾಗಿ ಮುಂದುವರೆದಿದೆ. ಇಂದಿಗೂ, ಬಿಹಾರದ 50 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳಿಗೆ ಕಂತುಗಳನ್ನು ನೀಡಲಾಗಿದೆ. ಈ ಮನೆಗಳಲ್ಲಿ ಹೆಚ್ಚಿನವು ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿವೆ. ಎಂದಿಗೂ ತಮ್ಮ ಹೆಸರಿನಲ್ಲಿ ಯಾವುದೇ ಆಸ್ತಿ ಹೊಂದಿರದ ನನ್ನ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಈಗ ಅವರ ಮನೆಗಳ ಮಾಲೀಕರಾಗುತ್ತಿದ್ದಾರೆ.

ಸ್ನೇಹಿತರೆ,

ನಮ್ಮ ಸರ್ಕಾರವು ಮನೆಗಳ ಜತೆಗೆ ಉಚಿತ ಪಡಿತರ, ವಿದ್ಯುತ್ ಮತ್ತು ನೀರಿನ ಸೌಲಭ್ಯಗಳನ್ನು ಒದಗಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ದೇಶಾದ್ಯಂತ 12 ಕೋಟಿಗೂ ಹೆಚ್ಚು ಹೊಸ ಕುಟುಂಬಗಳ ಮನೆಗಳಿಗೆ ನಲ್ಲಿ ನೀರು ತಲುಪಿದೆ. ಇದರಲ್ಲಿ, ಸಿವಾನ್‌ನ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಕುಟುಂಬಗಳು ಮೊದಲ ಬಾರಿಗೆ ನಲ್ಲಿ ನೀರು ಪಡೆದಿವೆ. ಹಳ್ಳಿಗಳಲ್ಲಿರುವ ಪ್ರತಿ ಮನೆಗೆ ನಲ್ಲಿ ಇರಬೇಕು, ಪ್ರತಿ ನಗರಕ್ಕೆ ಸಾಕಷ್ಟು ಕುಡಿಯುವ ನೀರು ಇರಬೇಕು ಎಂಬ ಗುರಿಯತ್ತ ನಾವು ಕೆಲಸ ಮಾಡುತ್ತಿದ್ದೇವೆ. ಕಳೆದ ವರ್ಷಗಳಲ್ಲಿ, ಬಿಹಾರದ ಅನೇಕ ನಗರಗಳಿಗೆ ನೀರಿನ ಪೈಪ್‌ಲೈನ್‌ಗಳು ಮತ್ತು ಒಳಚರಂಡಿ ಸಂಸ್ಕರಣಾ ಯೋಜನೆಗಳನ್ನು ನಿರ್ಮಿಸಲಾಗಿದೆ. ಈಗ ಡಜನ್ ಗಟ್ಟಲೆ ನಗರಗಳಿಗೆ ಪೈಪ್‌ಲೈನ್‌ಗಳು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಅನುಮೋದಿಸಲಾಗಿದೆ. ಈ ಎಲ್ಲಾ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನವನ್ನು ಉತ್ತಮಗೊಳಿಸುತ್ತವೆ.

 

ಸಹೋದರ ಸಹೋದರಿಯರೆ,

ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಕಾರ್ಯಗಳು ಮತ್ತು ಕಾರ್ಯಕ್ರಮಗಳು ಬಿಹಾರ ವಿರೋಧಿ ಮತ್ತು ಹೂಡಿಕೆ ವಿರೋಧಿಯಾಗಿದ್ದವು. ಅವರು ಅಭಿವೃದ್ಧಿಯ ಬಗ್ಗೆ ಮಾತನಾಡುವಾಗಲೆಲ್ಲಾ, ಜನರು ಅಂಗಡಿಗಳು, ವ್ಯವಹಾರಗಳು, ಕೈಗಾರಿಕೆಗಳು ಇತ್ಯಾದಿಗಳನ್ನು ಲಾಕ್ ಮಾಡಿರುವುದನ್ನು ನೋಡುತ್ತಿದ್ದರು. ಆದ್ದರಿಂದ, ಅವರು ಬಿಹಾರದ ಯುವಕರ ಹೃದಯದಲ್ಲಿ ಎಂದಿಗೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಈ ಜನರು ಕಳಪೆ ಮೂಲಸೌಕರ್ಯ, ಮಾಫಿಯಾ ಆಳ್ವಿಕೆ, ಗೂಂಡಾಗಿರಿ ಮತ್ತು ಭ್ರಷ್ಟಾಚಾರದ ಪೋಷಕರಾಗಿದ್ದಾರೆ.

ಸ್ನೇಹಿತರೆ,

ಬಿಹಾರದ ಪ್ರತಿಭಾನ್ವಿತ ಯುವಕರು ಇಂದು ನೆಲದ ಮೇಲೆ ನಡೆಯುತ್ತಿರುವ ಕೆಲಸವನ್ನು ವೀಕ್ಷಿಸುತ್ತಿದ್ದಾರೆ, ಅದನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. ಎನ್‌ಡಿಎ ಯಾವ ರೀತಿಯ ಬಿಹಾರವನ್ನು ನಿರ್ಮಿಸುತ್ತಿದೆ ಎಂಬುದಕ್ಕೆ ಮಧುರಾ ರೈಲು ಕಾರ್ಖಾನೆ ಒಂದು ಉದಾಹರಣೆಯಾಗಿದೆ. ಇಂದು ಮಧುರಾ ಲೋಕೋಮೋಟಿವ್ ಕಾರ್ಖಾನೆಯಿಂದ ಮೊದಲ ಎಂಜಿನ್ ಅನ್ನು ಆಫ್ರಿಕಾಕ್ಕೆ ರಫ್ತು ಮಾಡಲಾಗುತ್ತಿದೆ. ಅದು ನಿಮ್ಮದಾಗುತ್ತದೆ, ಅಲ್ಲಿ ರೈಲು ಸಂಚರಿಸುತ್ತದೆ. ಬಿಹಾರವು ಆಫ್ರಿಕಾದಲ್ಲೂ ಪ್ರಶಂಸೆಗೆ ಪಾತ್ರವಾಗಲಿದೆ ಎಂದು ಊಹಿಸಿಕೊಳ್ಳಿ. ಪಂಜಾ ಮತ್ತು ಆರ್‌ಜೆಡಿ ಪಕ್ಷಗಳು ಹಿಂದುಳಿದ ಪ್ರದೇಶ ಎಂದು ಕರೆದ ಸರನ್ ಜಿಲ್ಲೆಯಲ್ಲೇ ಈ ಕಾರ್ಖಾನೆಯನ್ನು ನಿರ್ಮಿಸಲಾಗಿದೆ. ಇಂದು ಈ ಜಿಲ್ಲೆ ವಿಶ್ವದ ಉತ್ಪಾದನೆ ಮತ್ತು ರಫ್ತು ನಕ್ಷೆಯಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ. ಜಂಗಲ್ ರಾಜ್‌ನ ಜನರು ಬಿಹಾರದ ಅಭಿವೃದ್ಧಿ ಎಂಜಿನ್ ಅನ್ನು ನಿಲ್ಲಿಸಿದ್ದರು, ಈಗ ಬಿಹಾರದಲ್ಲಿ ತಯಾರಾದ ಎಂಜಿನ್ ಆಫ್ರಿಕಾದ ರೈಲುಗಳನ್ನು ಓಡಿಸುತ್ತದೆ. ಇದು ಬಹಳ ಹೆಮ್ಮೆಯ ವಿಷಯ, ಬಿಹಾರವು ಮೇಡ್ ಇನ್ ಇಂಡಿಯಾದ ದೊಡ್ಡ ಕೇಂದ್ರವಾಗಲಿದೆ ಎಂಬುದು ನನಗೆ ಖಚಿತವಾಗಿದೆ. ಮಖಾನಾ, ಇಲ್ಲಿಂದ ಹಣ್ಣುಗಳು ಮತ್ತು ತರಕಾರಿಗಳು ವಿದೇಶಗಳಿಗೆ ಹೋಗುತ್ತವೆ, ಬಿಹಾರದ ಕಾರ್ಖಾನೆಗಳಲ್ಲಿ ತಯಾರಾದ ಸರಕುಗಳು ವಿಶ್ವದ ಮಾರುಕಟ್ಟೆಗಳನ್ನು ತಲುಪುತ್ತವೆ. ಬಿಹಾರದ ಯುವಕರು, ಇಲ್ಲಿ ತಯಾರಾದ ಸರಕುಗಳು ಸ್ವಾವಲಂಬಿ ಭಾರತಕ್ಕೆ ಬಲ ನೀಡುತ್ತವೆ.

 

ಸ್ನೇಹಿತರೆ,

ಬಿಹಾರದಲ್ಲಿ ನಿರ್ಮಿಸಲಾಗುತ್ತಿರುವ ಆಧುನಿಕ ಮೂಲಸೌಕರ್ಯಗಳು ಇದರಲ್ಲಿ ಬಹಳ ಉಪಯುಕ್ತವಾಗುತ್ತವೆ. ಇಂದು ಬಿಹಾರದಲ್ಲಿ ರಸ್ತೆ, ರೈಲು, ವಾಯುಯಾನ ಮತ್ತು ಜಲಮಾರ್ಗಗಳಂತಹ ಪ್ರತಿಯೊಂದು ಮೂಲಸೌಕರ್ಯಗಳಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ಬಿಹಾರ ನಿರಂತರವಾಗಿ ಹೊಸ ರೈಲುಗಳನ್ನು ಪಡೆಯುತ್ತಿದೆ. ವಂದೇ ಭಾರತ್‌ನಂತಹ ಆಧುನಿಕ ರೈಲುಗಳು ಇಲ್ಲಿ ಸಂಚರಿಸುತ್ತಿವೆ. ಇಂದು ನಾವು ಮತ್ತೊಂದು ದೊಡ್ಡ ಆರಂಭ ಮಾಡಲಿದ್ದೇವೆ. ಸಾವನ್ ಆರಂಭಕ್ಕೂ ಮೊದಲು, ಇಂದು ಬಾಬಾ ಹರಿಹರನಾಥರ ಭೂಮಿಯನ್ನು ವಂದೇ ಭಾರತ್ ರೈಲು ಮೂಲಕ ಬಾಬಾ ಗೋರಖ್‌ನಾಥರ ಭೂಮಿಗೆ ಸಂಪರ್ಕಿಸಲಾಗಿದೆ. ಪಾಟ್ನಾದಿಂದ ಗೋರಖ್‌ಪುರಕ್ಕೆ ಹೋಗುವ ಹೊಸ ವಂದೇ ಭಾರತ್ ರೈಲು ಪೂರ್ವಾಂಚಲ್‌ನ ಶಿವ ಭಕ್ತರಿಗೆ ಹೊಸ ಪ್ರಯಾಣವಾಗಿದೆ. ಈ ರೈಲು ಭಗವಾನ್ ಬುದ್ಧನ ತಪೋಭೂಮಿಯನ್ನು ಅವರ ಮಹಾಪರಿನಿರ್ವಾಣ ಭೂಮಿಯಾದ ಕುಶಿನಗರದೊಂದಿಗೆ ಸಂಪರ್ಕಿಸುವ ಒಂದು ಮಾರ್ಗವಾಗಿದೆ.

ಸ್ನೇಹಿತರೆ,

ಇಂತಹ ಪ್ರಯತ್ನಗಳು ಬಿಹಾರದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದಲ್ಲದೆ, ಪ್ರವಾಸೋದ್ಯಮವು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತದೆ. ಇದರೊಂದಿಗೆ, ಬಿಹಾರವು ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖವಾಗಿ ಹೊರಹೊಮ್ಮಲಿದೆ. ಇದರರ್ಥ ಬಿಹಾರದ ಯುವಕರಿಗೆ ಹಲವಾರು ಉದ್ಯೋಗಾವಕಾಶಗಳು ಸಿಗಲಿವೆ.

 

ಸ್ನೇಹಿತರೆ,

ದೇಶದ ಪ್ರತಿಯೊಬ್ಬರಿಗೂ ಪ್ರಗತಿ ಸಾಧಿಸಲು ಅವಕಾಶ ಸಿಗಬೇಕು, ಯಾರಿಗೂ ತಾರತಮ್ಯ ಮಾಡಬಾರದು, ಇದು ನಮ್ಮ ಸಂವಿಧಾನದ ಆಶಯ. ನಾವು ಕೂಡ ಅದೇ ಮನೋಭಾವದಿಂದ ಹೇಳುತ್ತೇವೆ - ಸಬ್ಕಾ ಸಾಥ್, ಸಬ್ಕಾ ವಿಕಾಸ್. ಆದರೆ ಲಾಲ್ಟೆನ್ ಮತ್ತು ಪಂಜಾ ಹೊಂದಿರುವ ಈ ಜನರು - ಪರಿವಾರ್ ಕಾ ಸಾಥ್, ಪರಿವಾರ್ ಕಾ ವಿಕಾಸ್ ಎಂದು ಹೇಳುತ್ತಾರೆ. ನಾವು - ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂದು ಹೇಳುತ್ತೇವೆ. ಅವರು - ಪರಿವಾರ್ ಕಾ ಸಾಥ್, ಪರಿವಾರ್ ಕಾ ವಿಕಾಸ್ ಎಂದು ಹೇಳುತ್ತಾರೆ. ಇದು ಅವರ ರಾಜಕೀಯದ ಒಟ್ಟು ಸಾರವಾಗಿದೆ. ತಮ್ಮ ಸ್ವಂತ ಕುಟುಂಬಗಳ ಲಾಭಕ್ಕಾಗಿ, ಅವರು ದೇಶ ಮತ್ತು ಬಿಹಾರದ ಕೋಟ್ಯಂತರ ಕುಟುಂಬಗಳಿಗೆ ಹಾನಿ ಮಾಡಲು ಹಿಂಜರಿಯಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಸ್ವತಃ ಈ ರೀತಿಯ ರಾಜಕೀಯವನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದರು. ಅದಕ್ಕಾಗಿಯೇ ಈ ಜನರು ಪ್ರತಿ ಹಂತದಲ್ಲೂ ಬಾಬಾ ಸಾಹೇಬರನ್ನು ಅವಮಾನಿಸುತ್ತಾರೆ. ಈಗ ಬಾಬಾ ಸಾಹೇಬರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ಇಡೀ ದೇಶವೇ ನೋಡಿದೆ. ಬಾಬಾ ಸಾಹೇಬರನ್ನು ಅವಮಾನಿಸಿದ್ದಕ್ಕಾಗಿ ಕ್ಷಮೆ ಯಾಚಿಸುವಂತೆ ಬಿಹಾರದಲ್ಲಿ ಪೋಸ್ಟರ್‌ಗಳನ್ನು ನಾನು ನೋಡುತ್ತಿದ್ದೆ, ಆದರೆ ಈ ಜನರು ಎಂದಿಗೂ ಕ್ಷಮೆ ಯಾಚಿಸುವುದಿಲ್ಲ ಏಕೆಂದರೆ ಅವರಿಗೆ ದಲಿತರು, ಮಹಾದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದ ಜನರ ಬಗ್ಗೆ ಗೌರವವಿಲ್ಲ. ಆರ್‌ಜೆಡಿ ಮತ್ತು ಕಾಂಗ್ರೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರವನ್ನು ತಮ್ಮ ಪಾದಗಳ ಬಳಿ ಇಟ್ಟುಕೊಳ್ಳುತ್ತವೆ, ಆದರೆ ಮೋದಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರವನ್ನು ತಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ. ಬಾಬಾ ಸಾಹೇಬ್ ಅವರನ್ನು ಅವಮಾನಿಸುವ ಮೂಲಕ, ಈ ಜನರು ತಮ್ಮನ್ನು ಬಾಬಾ ಸಾಹೇಬ್‌ಗಿಂತ ದೊಡ್ಡವರು ಎಂದು ತೋರಿಸಿಕೊಳ್ಳಲು ಬಯಸುತ್ತಾರೆ. ಬಾಬಾ ಸಾಹೇಬ್‌ಗೆ ಮಾಡಿದ ಈ ಅವಮಾನವನ್ನು ಬಿಹಾರದ ಜನರು ಎಂದಿಗೂ ಮರೆಯುವುದಿಲ್ಲ.

ಸ್ನೇಹಿತರೆ,

ಬಿಹಾರದ ತ್ವರಿತ ಪ್ರಗತಿಗೆ ಅಗತ್ಯವಾದ ಲಾಂಚ್ ಪ್ಯಾಡ್ ಅನ್ನು ನಿತೀಶ್ ಜಿ ಅವರ ಪ್ರಯತ್ನದಿಂದ ಸಿದ್ಧಪಡಿಸಲಾಗಿದೆ. ಈಗ ಎನ್‌ಡಿಎ ಒಟ್ಟಾಗಿ ಬಿಹಾರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ನನಗೆ ಬಿಹಾರದ ಯುವಕರ ಮೇಲೆ ನಂಬಿಕೆ ಇದೆ. ಒಟ್ಟಾಗಿ ನಾವು ಬಿಹಾರದ ಪ್ರಾಚೀನ ವೈಭವವನ್ನು ಪುನಃಸ್ಥಾಪಿಸುತ್ತೇವೆ, ಬಿಹಾರವನ್ನು ಅಭಿವೃದ್ಧಿ ಹೊಂದಿದ ಭಾರತದ ಬಲವಾದ ಎಂಜಿನ್ ಆಗಿ ಮಾಡುತ್ತೇವೆ, ಈ ನಂಬಿಕೆಯೊಂದಿಗೆ, ಅಭಿವೃದ್ಧಿ ಕಾರ್ಯಗಳಿಗಾಗಿ ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳು. ಎರಡೂ ಮುಷ್ಟಿಗಳನ್ನು ಮುಚ್ಚಿ, ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ನನ್ನೊಂದಿಗೆ ಹೇಳಿ, ಭಾರತ್ ಮಾತಾ ಕಿ ಜೈ! ತ್ರಿವರ್ಣ ಧ್ವಜವನ್ನು ಹಿಡಿದಿರುವವರು ತ್ರಿವರ್ಣ ಧ್ವಜವನ್ನು ಬೀಸುತ್ತಾರೆ.

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ತುಂಬು ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India completes 2,843-km Dedicated Freight Corridor; how shifting goods trains to separate tracks could change rail travel

Media Coverage

India completes 2,843-km Dedicated Freight Corridor; how shifting goods trains to separate tracks could change rail travel
NM on the go

Nm on the go

Always be the first to hear from the PM. Get the App Now!
...
Prime Minister extends greetings on Samvatsari
September 15, 2026

The Prime Minister, Shri Narendra Modi, has extended his greetings to the people on the sacred occasion of Samvatsari. Shri Modi said that Samvatsari reminds us that forgiveness and compassion strengthen every bond. He called upon everyone to embrace humility and let kindness and goodwill guide their actions.

The Prime Minister posted on X:

Samvatsari reminds us that forgiveness and compassion strengthen every bond.

On this sacred occasion, may humility guide us and may kindness and goodwill shape our every action.

Michhami Dukkadam!