ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಮಂತ್ರಿ ಅವರು ಸೂರತ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಬುಲೆಟ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ (ಎಂಎಎಚ್ಎಸ್ಆರ್) ಪ್ರಗತಿಯನ್ನು ಪರಿಶೀಲಿಸಲಿದ್ದಾರೆ - ಇದು ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ.
ಎಂಎಎಚ್ಎಸ್ಆರ್ ಸುಮಾರು 508 ಕಿಲೋಮೀಟರ್ ವ್ಯಾಪಿಸಿದ್ದು, ಗುಜರಾತ್ ಮತ್ತು ದಾದ್ರಾ ಮತ್ತು ನಗರ್ ಹವೇಲಿಯಲ್ಲಿ 352 ಕಿಮೀ ಮತ್ತು ಮಹಾರಾಷ್ಟ್ರದಲ್ಲಿ 156 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಈ ಕಾರಿಡಾರ್ ಸಬರಮತಿ, ಅಹಮದಾಬಾದ್, ಆನಂದ್, ವಡೋದರಾ, ಭರೂಚ್, ಸೂರತ್, ಬಿಲಿಮೊರಾ, ವಾಪಿ, ಬೋಯಿಸರ್, ವಿರಾರ್, ಥಾಣೆ ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ, ಇದು ಭಾರತದ ಸಾರಿಗೆ ಮೂಲಸೌಕರ್ಯದಲ್ಲಿ ಪರಿವರ್ತನಾತ್ಮಕ ಹೆಜ್ಜೆಯಾಗಿದೆ.
ಅಂತಾರಾಷ್ಟ್ರೀಯ ಮಾನದಂಡಗಳಿಗೆ ಸಮನಾಗಿ ಸುಧಾರಿತ ಎಂಜಿನಿಯರಿಂಗ್ ತಂತ್ರಗಳೊಂದಿಗೆ ನಿರ್ಮಿಸಲಾದ ಈ ಯೋಜನೆಯು ವಯಾಡಕ್ಟ್ ಗಳಲ್ಲಿ 465 ಕಿಮೀ (ಸುಮಾರು ಶೇ. 85 ರಷ್ಟು ಮಾರ್ಗ) ಅನ್ನು ಒಳಗೊಂಡಿದೆ, ಇದು ಕನಿಷ್ಠ ಭೂ ಅಡಚಣೆ ಮತ್ತು ವರ್ಧಿತ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಇಲ್ಲಿಯವರೆಗೆ, 326 ಕಿ.ಮೀ ವಯಾಡಕ್ಟ್ ಕಾಮಗಾರಿ ಪೂರ್ಣಗೊಂಡಿದೆ ಮತ್ತು 25 ನದಿ ಸೇತುವೆಗಳ ಪೈಕಿ 17 ಅನ್ನು ಈಗಾಗಲೇ ನಿರ್ಮಿಸಲಾಗಿದೆ.
ಪೂರ್ಣಗೊಂಡ ನಂತರ, ಬುಲೆಟ್ ರೈಲು ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಎರಡು ಗಂಟೆಗಳಿಗೆ ಕಡಿಮೆ ಮಾಡುತ್ತದೆ. ಅಂತರ-ನಗರ ಪ್ರಯಾಣವನ್ನು ವೇಗವಾಗಿ, ಸುಲಭ ಮತ್ತು ಹೆಚ್ಚು ಆರಾಮದಾಯಕವಾಗಿಸುವ ಮೂಲಕ ಕ್ರಾಂತಿಯನ್ನುಂಟು ಮಾಡುತ್ತದೆ. ಈ ಯೋಜನೆಯು ಇಡೀ ಕಾರಿಡಾರ್ ಉದ್ದಕ್ಕೂ ವ್ಯಾಪಾರ, ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ, ಪ್ರಾದೇಶಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ.
ಸುಮಾರು 47 ಕಿ.ಮೀ ವ್ಯಾಪ್ತಿಯ ಸೂರತ್-ಬಿಲಿಮೊರಾ ವಿಭಾಗವು ಪೂರ್ಣಗೊಳ್ಳುವ ಹಂತದಲ್ಲಿದೆ, ಸಿವಿಲ್ ಕಾಮಗಾರಿ ಮತ್ತು ಹಳಿ ಹಾಸಿಗೆ ಹಾಕುವ ಕಾರ್ಯ ಪೂರ್ಣಗೊಂಡಿದೆ. ಸೂರತ್ ನಿಲ್ದಾಣದ ವಿನ್ಯಾಸವು ನಗರದ ವಿಶ್ವಪ್ರಸಿದ್ಧ ವಜ್ರ ಉದ್ಯಮದಿಂದ ಸ್ಫೂರ್ತಿ ಪಡೆದಿದೆ. ಇದು ಸೊಬಗು ಮತ್ತು ಕ್ರಿಯಾತ್ಮಕತೆ ಎರಡನ್ನೂ ಪ್ರತಿಬಿಂಬಿಸುತ್ತದೆ. ಪ್ರಯಾಣಿಕರ ಸೌಕರ್ಯದ ಮೇಲೆ ಬಲವಾದ ಗಮನದೊಂದಿಗೆ ನಿಲ್ದಾಣವನ್ನು ವಿನ್ಯಾಸಗೊಳಿಸಲಾಗಿದೆ, ವಿಶಾಲವಾದ ಕಾಯುವ ಕೊಠಡಿಗಳು, ವಿಶ್ರಾಂತಿ ಕೊಠಡಿಗಳು ಮತ್ತು ಚಿಲ್ಲರೆ ಮಳಿಗೆಗಳನ್ನು ಒಳಗೊಂಡಿದೆ. ಇದು ಸೂರತ್ ಮೆಟ್ರೋ, ಸಿಟಿ ಬಸ್ಸುಗಳು ಮತ್ತು ಭಾರತೀಯ ರೈಲ್ವೆ ಜಾಲದೊಂದಿಗೆ ತಡೆರಹಿತ ಬಹು-ಮಾದರಿ ಸಂಪರ್ಕವನ್ನು ಸಹ ಒದಗಿಸುತ್ತದೆ.


