ಪ್ರಧಾನಮಂತ್ರಿ ಅವರು ಸುಮಾರು ₹25,000 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ
ಜಿಂದ್‌ ನಲ್ಲಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಅವರಿಂದ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ
ಜಿಂದ್ ಮತ್ತು ಸೋನಿಪತ್ ನಡುವೆ ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ
ಈ ರೈಲು ವಿಶ್ವದ ಅತ್ಯಂತ ಉದ್ದದ ಮತ್ತು ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿದೆ
ಹೈಡ್ರೋಜನ್ ಇಂಧನ ಕೋಶ ಚಾಲಿತ ರೈಲು ಕೇವಲ ನೀರಿನ ಹಬೆಯನ್ನು ಉಪ-ಉತ್ಪನ್ನವಾಗಿ ಹೊಮ್ಮಿಸುವ ಮೂಲಕ ಶೂನ್ಯ ಕಾರ್ಬನ್ ಹೊರಸೂಸುವಿಕೆಯನ್ನು ಖಚಿತಪಡಿಸುತ್ತದೆ
ಕುರುಕ್ಷೇತ್ರದಲ್ಲಿ ಸಿಖ್ ಗುರುಗಳ ಪರಂಪರೆ ಮತ್ತು ಸಿಖ್ ಸಂಸ್ಕೃತಿಗೆ ಸಮರ್ಪಿತವಾದ ಸಿಖ್ ವಸ್ತುಸಂಗ್ರಹಾಲಯಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
ಚಂಡೀಗಢದಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ರಸ್ತೆ ಮೂಲಸೌಕರ್ಯಗಳನ್ನು ಒಳಗೊಂಡ ₹4,700 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ
ಚಂಡೀಗಢದ ಪಿಜಿಐಎಂಇಆರ್ ನಲ್ಲಿ ಸುಧಾರಿತ ತಾಯಿ ಮತ್ತು ಮಕ್ಕಳ ಕೇಂದ್ರ ಹಾಗೂ ಸುಧಾರಿತ ನರವಿಜ್ಞಾನ ಕೇಂದ್ರವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ
ದೆಹಲಿ-ಅಮೃತಸರ-ಕತ್ರಾ ಎಕ್ಸ್‌ ಪ್ರೆಸ್‌ವೇಯ ಸಂಪೂರ್ಣ ಪ್ರವೇಶ-ನಿಯಂತ್ರಿತ ಪ್ಯಾಕೇಜ್ 1 ರಿಂದ 6 ಅನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ
ಜಲಂಧರ್‌ ನಲ್ಲಿ ₹5,470 ಕೋಟಿಗೂ ಅಧಿಕ ಮೌಲ್ಯದ ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
20 ರಾಜ್ಯಗಳಾದ್ಯಂತ ಪುನರಾಭಿವೃದ್ಧಿ ಮಾಡಲಾದ 75 ಅಮೃತ್ ಭಾರತ್ ರೈಲು ನಿಲ್ದಾಣಗಳನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜುಲೈ 17ರಂದು ಹರಿಯಾಣ, ಚಂಡೀಗಢ ಮತ್ತು ಪಂಜಾಬ್‌ ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ಸುಮಾರು 11 ಗಂಟೆಗೆ ಪ್ರಧಾನಮಂತ್ರಿಯವರು ಜಿಂದ್ ರೈಲು ನಿಲ್ದಾಣದಲ್ಲಿ ಜಿಂದ್ ಮತ್ತು ಸೋನಿಪತ್ ನಡುವಿನ ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮಧ್ಯಾಹ್ನ ಸುಮಾರು 11:30 ಗಂಟೆಗೆ ಪ್ರಧಾನಮಂತ್ರಿಯವರು ಜಿಂದ್‌ ನ ಏಕಲವ್ಯ ಕ್ರೀಡಾಂಗಣದಲ್ಲಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅದಾದ ನಂತರ, ಪ್ರಧಾನಮಂತ್ರಿಯವರು ಚಂಡೀಗಢಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಮಧ್ಯಾಹ್ನ ಸುಮಾರು 1:45 ಗಂಟೆಗೆ ₹4,700 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲೂ ಅವರು ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಬಳಿಕ ಪ್ರಧಾನಮಂತ್ರಿಯವರು ಜಲಂಧರ್‌ ಗೆ ಭೇಟಿ ನೀಡಲಿದ್ದು, ಅಲ್ಲಿ ₹5,470 ಕೋಟಿಗೂ ಅಧಿಕ ಮೌಲ್ಯದ ಬಹುಸಂಖ್ಯೆಯ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ.

ಜಿಂದ್‌ ನಲ್ಲಿ ಪ್ರಧಾನಮಂತ್ರಿ

ರೈಲ್ವೆ ವಲಯದಲ್ಲಿ ಸ್ವಚ್ಛ ಮತ್ತು ಸುಸ್ಥಿರ ಚಲನಶೀಲತೆಯ ಅಳವಡಿಕೆಯತ್ತ ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿಯವರು ಜಿಂದ್ ಮತ್ತು ಸೋನಿಪತ್ ನಡುವೆ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಭಾರತದಲ್ಲೇ ವಿನ್ಯಾಸಗೊಳಿಸಿ, ಇಂಜಿನಿಯರಿಂಗ್ ಮಾಡಿ ಮತ್ತು ಸಂಯೋಜಿಸಲಾದ ಈ ರೈಲನ್ನು ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ, ಇದು ಸುಧಾರಿತ ರೈಲ್ವೆ ಇಂಜಿನಿಯರಿಂಗ್‌ ನಲ್ಲಿ ದೇಶದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ. ಇದರ ಪರಿಚಯದೊಂದಿಗೆ, ಹೈಡ್ರೋಜನ್ ಚಾಲಿತ ರೈಲುಗಳನ್ನು ಕಾರ್ಯಾಚರಣೆಗೊಳಿಸುತ್ತಿರುವ ಆಯ್ದ ದೇಶಗಳ ಗುಂಪಿಗೆ ಭಾರತವೂ ಸೇರ್ಪಡೆಯಾಗುತ್ತಿದೆ.

ಈ ರೈಲು ಹೈಡ್ರೋಜನ್ ಇಂಧನ ಕೋಶ (ಫ್ಯುಯೆಲ್ ಸೆಲ್) ತಂತ್ರಜ್ಞಾನದಿಂದ ಚಾಲಿತವಾಗಿದೆ, ಇದು ರೈಲನ್ನು ಮುನ್ನಡೆಸಲು ಹೈಡ್ರೋಜನ್ ಅನ್ನು ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಈ ಪ್ರಕ್ರಿಯೆಯು ಕೇವಲ ನೀರಿನ ಹಬೆಯನ್ನು ಉಪ-ಉತ್ಪನ್ನವಾಗಿ ಉತ್ಪಾದಿಸುತ್ತದೆ, ಇದರ ಪರಿಣಾಮವಾಗಿ ಕಾರ್ಯಾಚರಣೆಯ ಸಮಯದಲ್ಲಿ ಶೂನ್ಯ ಕಾರ್ಬನ್ ಹೊರಸೂಸುವಿಕೆ ಇರುತ್ತದೆ.

ಡೀಸೆಲ್ ರೈಲುಗಳಿಗೆ ಹೋಲಿಸಿದರೆ, ಇವು ಟೈಲ್‌ಪೈಪ್ ಹೊರಸೂಸುವಿಕೆಯನ್ನು ಇಲ್ಲವಾಗಿಸುತ್ತವೆ, ಪಳೆಯುಳಿಕೆ ಇಂಧನಗಳು ಮತ್ತು ಪಳೆಯುಳಿಕೆ ಇಂಧನ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ ಮತ್ತು ಗಣನೀಯವಾಗಿ ಕಡಿಮೆ ಶಬ್ದದೊಂದಿಗೆ ಕಾರ್ಯನಿರ್ವಹಿಸುತ್ತವೆ. ಸಾಂಪ್ರದಾಯಿಕ ವಿದ್ಯುತ್ ರೈಲುಗಳಿಗಿಂತ ಭಿನ್ನವಾಗಿ, ಇವುಗಳಿಗೆ ನಿರಂತರ ಓವರ್‌ಹೆಡ್ ವಿದ್ಯುದೀಕರಣ ಮೂಲಸೌಕರ್ಯಗಳ ಅಗತ್ಯವಿರುವುದಿಲ್ಲ, ಏಕೆಂದರೆ ವಿದ್ಯುತ್ ಅನ್ನು ಹೈಡ್ರೋಜನ್ ಇಂಧನ ಕೋಶಗಳ ಮೂಲಕ ರೈಲಿನಲ್ಲೇ (ಆನ್‌ಬೋರ್ಡ್) ಉತ್ಪಾದಿಸಲಾಗುತ್ತದೆ, ಇದು ಇವುಗಳನ್ನು ಸ್ವಚ್ಛ ಮತ್ತು ಸಮರ್ಥ ಪರಿಹಾರವನ್ನಾಗಿ ಮಾಡುತ್ತದೆ. ಹಸಿರು ಹೈಡ್ರೋಜನ್ ಬಳಕೆ ಪಳೆಯುಳಿಕೆ ಇಂಧನ ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಂದ ಉತ್ಪಾದಿಸುವ ವಿದ್ಯುತ್ ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡುತ್ತದೆ, ಇದು ಸುಸ್ಥಿರ ಸಾರಿಗೆಯತ್ತ ಭಾರತದ ಸ್ಥಿತ್ಯಂತರಕ್ಕೆ ಬೆಂಬಲ ನೀಡುತ್ತದೆ.

ಭಾರತದ ಹೈಡ್ರೋಜನ್ ರೈಲು 10-ಬೋಗಿಗಳ ವಿನ್ಯಾಸವನ್ನು ಹೊಂದಿದೆ, ಇದು ಇದುವರೆಗೆ ಅಭಿವೃದ್ಧಿಪಡಿಸಲಾದ ಅತ್ಯಂತ ಉದ್ದದ ಹೈಡ್ರೋಜನ್ ಚಾಲಿತ ಪ್ರಯಾಣಿಕರ ರೈಲುಗಳಲ್ಲಿ ಒಂದಾಗಿದೆ. ಇದು 3,200 ಎಚ್‌ ಪಿ ಪ್ರೊಪಲ್ಷನ್ ಸಿಸ್ಟಮ್‌ ನಿಂದ ಚಾಲಿತವಾಗಿದ್ದು, ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ಚಾಲಿತ ರೈಲುಗಳಲ್ಲಿ ಒಂದಾಗಿದೆ.

ಪ್ರಧಾನಮಂತ್ರಿಯವರು ಹರಿಯಾಣದಲ್ಲಿ ₹₹12,470 ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಹಾಗೂ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ.

ಸುಮಾರು ₹₹9,680 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 157.92 ಕಿಮೀ ಉದ್ದದ, ನಾಲ್ಕು ಪಥಗಳ, ಸಂಪೂರ್ಣ ಪ್ರವೇಶ-ನಿಯಂತ್ರಿತ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ ಪ್ರೆಸ್‌ವೇ (ಪ್ಯಾಕೇಜ್ 1 ರಿಂದ 5) ಅನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಗ್ರೀನ್‌ಫೀಲ್ಡ್ ಕಾರಿಡಾರ್ 667 ಕಿಮೀ ಉದ್ದದ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ ಪ್ರೆಸ್‌ವೇಯ ಭಾಗವಾಗಿದೆ. ಈ ಎಕ್ಸ್‌ ಪ್ರೆಸ್‌ವೇ ದೆಹಲಿ ಮತ್ತು ಕತ್ರಾ ನಡುವಿನ ಪ್ರಯಾಣದ ಸಮಯವನ್ನು ಸುಮಾರು 14 ಗಂಟೆಗಳಿಂದ ಸುಮಾರು 6 ಗಂಟೆಗಳಿಗೆ ಇಳಿಸಲಿದೆ, ಹಾಗೆಯೇ ದೆಹಲಿ-ಅಮೃತಸರ ಪ್ರಯಾಣವನ್ನು ಸುಮಾರು 8 ಗಂಟೆಗಳಿಂದ 4 ಗಂಟೆಗಳಿಗೆ ಕಡಿತಗೊಳಿಸಲಿದೆ. ಈ ಯೋಜನೆಯು ಎನ್‌ ಎಚ್-44 (ಜಿಟಿ ರಸ್ತೆ) ರಲ್ಲಿನ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಶ್ರೀ ಮಾತಾ ವೈಷ್ಣೋದೇವಿಗೆ ಹೋಗುವ ಯಾತ್ರಿಕರು ಮತ್ತು ಪ್ರವಾಸಿಗರ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಕಾರಿಡಾರ್‌ ನ ಉದ್ದಕ್ಕೂ ಕೈಗಾರಿಕಾ ಹಾಗೂ ಲಾಜಿಸ್ಟಿಕ್ಸ್ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರಧಾನಮಂತ್ರಿಯವರು ಎನ್‌ ಎಚ್-7 ಮತ್ತು ಎನ್‌ ಎಚ್-344 ರಲ್ಲಿನ 33.81 ಕಿಮೀ ಉದ್ದದ ನಾಲ್ಕು ಪಥಗಳ, ಭಾಗಶಃ ಪ್ರವೇಶ-ನಿಯಂತ್ರಿತ ಅಂಬಾಲಾ-ಕಾಲಾ ಅಂಬ್ ಹೆದ್ದಾರಿಯನ್ನೂ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಹೆದ್ದಾರಿಯು ಅಂಬಾಲಾ ನಗರ ಮತ್ತು ಕಾಲಾ ಅಂಬ್ ಕೈಗಾರಿಕಾ ವಲಯದ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ನಡುವಿನ ರಸ್ತೆ ಸಂಪರ್ಕಗಳನ್ನು ಸುಧಾರಿಸುತ್ತದೆ, ಗುಡ್ಡಗಾಡು ಪ್ರದೇಶಗಳಿಗೆ ಪ್ರವಾಸಿಗರ ಸಂಚಾರವನ್ನು ಸುಲಭಗೊಳಿಸುತ್ತದೆ ಮತ್ತು ಕಾಲಾ ಅಂಬ್ ಪ್ರದೇಶದ ಕೈಗಾರಿಕೆಗಳಿಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಸಮರ್ಪಣೆಯಾಗಲಿರುವ ಮತ್ತೊಂದು ಪ್ರಮುಖ ಯೋಜನೆಯೆಂದರೆ ಎನ್‌ ಎಚ್-352ಎ ನಲ್ಲಿನ 40.60 ಕಿಮೀ ಉದ್ದದ ಜಿಂದ್-ಗೊಹಾನಾ ಗ್ರೀನ್‌ಫೀಲ್ಡ್ ಹೆದ್ದಾರಿ. ಈ ಹೊಸ ಹೆದ್ದಾರಿಯು ಜಿಂದ್ ಮತ್ತು ಗೊಹಾನಾ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಎರಡು ಗಂಟೆಗಳಿಂದ ಕೇವಲ 40 ನಿಮಿಷಗಳಿಗೆ ಇಳಿಸಲಿದೆ, ಇದು ಪ್ರಯಾಣಿಕರು, ಸರಕು ಸಾಗಣೆ ಮತ್ತು ಕೃಷಿ ಪ್ರಮುಖವಾಗಿರುವ ಜಿಂದ್-ಗೊಹಾನಾ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ, ಜೊತೆಗೆ ರೋಹ್ಟಕ್, ಪಾನಿಪತ್ ಮತ್ತು ದೆಹಲಿ-ಎನ್‌ ಸಿ ಆರ್‌ ಗೆ ಸಂಪರ್ಕವನ್ನು ಸುಧಾರಿಸುತ್ತದೆ.

ಅಸ್ತಿತ್ವದಲ್ಲಿರುವ ಕ್ಯಾರಿಯೇಜ್‌ ವೇಯನ್ನು ಪೇವ್ಡ್ ಶೋಲ್ಡರ್‌ ಗಳೊಂದಿಗೆ 2/4-ಪಥಗಳ ವಿನ್ಯಾಸಕ್ಕೆ ಮೇಲ್ದರ್ಜೆಗೇರಿಸುವ 24.27 ಕಿಮೀ ಉದ್ದದ ಹನ್ಸಿ-ಬರ್ವಾಲಾ ಬ್ರೌನ್‌ಫೀಲ್ಡ್ ಹೆದ್ದಾರಿ ಯೋಜನೆಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಕುರುಕ್ಷೇತ್ರದಲ್ಲಿ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ಅನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ, ಇದು ನಗರದ ರೈಲ್ವೆ ಕ್ರಾಸಿಂಗ್‌ ಗಳಲ್ಲಿ ದೀರ್ಘಕಾಲದ ಸಂಚಾರ ದಟ್ಟಣೆಯನ್ನು ನಿವಾರಿಸುವ ಪ್ರಮುಖ ನಗರ ಮೂಲಸೌಕರ್ಯ ಯೋಜನೆಯಾಗಿದೆ. ಈ ಯೋಜನೆಯು ಸುಗಮ ವಾಹನ ಸಂಚಾರವನ್ನು ಖಚಿತಪಡಿಸುತ್ತದೆ, ರಸ್ತೆ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ರೈಲು ಹಾಗೂ ರಸ್ತೆ ಸಾರಿಗೆ ವ್ಯವಸ್ಥೆಗಳೆರಡರ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ.

ಪ್ರಧಾನಮಂತ್ರಿಯವರು ಪ್ರಮುಖ ವೈದ್ಯಕೀಯ ಸಂಸ್ಥೆಗಳನ್ನೂ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ - ಪಂಡಿತ್ ನೇಕಿ ರಾಮ್ ಶರ್ಮಾ ಸರ್ಕಾರಿ ವೈದ್ಯಕೀಯ ಕಾಲೇಜು, ಭಿವಾನಿ; ಮಹರ್ಷಿ ಚ್ಯವನ್ ವೈದ್ಯಕೀಯ ಕಾಲೇಜು ಮತ್ತು ರಾವ್ ತುಲಾ ರಾಮ್ ಆಸ್ಪತ್ರೆ, ಕೊರಿಯಾವಾಸ್, ನಾರ್ನಾಲ್. ಈ ಸಂಸ್ಥೆಗಳು ಹರಿಯಾಣದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಪ್ರವೇಶವನ್ನು ವಿಸ್ತರಿಸುತ್ತವೆ, ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ, ತಜ್ಞ ಆರೋಗ್ಯ ವೃತ್ತಿಪರರ ಲಭ್ಯತೆಯನ್ನು ಸುಧಾರಿಸುತ್ತವೆ ಮತ್ತು ಜನರು ತಮ್ಮ ಮನೆಗಳಿಗೆ ಹತ್ತಿರದಲ್ಲೇ ಉತ್ತಮ ವೈದ್ಯಕೀಯ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತವೆ, ಆ ಮೂಲಕ ರಾಜ್ಯದ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತವೆ.

ಈ ಪ್ರದೇಶದ ಸಾಂಸ್ಕೃತಿಕ ಮೂಲಸೌಕರ್ಯವನ್ನು ಮತ್ತಷ್ಟು ಸಮೃದ್ಧಗೊಳಿಸಲು, ಪ್ರಧಾನಮಂತ್ರಿಯವರು ಕುರುಕ್ಷೇತ್ರದಲ್ಲಿ ಸಿಖ್ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ವಸ್ತುಸಂಗ್ರಹಾಲಯವು ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಸಿಖ್ ಧರ್ಮದ ಇತಿಹಾಸ, ಸಿಖ್ ಗುರುಗಳ ಬೋಧನೆಗಳು, ಅವರ ಧೈರ್ಯ, ತ್ಯಾಗಗಳು ಮತ್ತು ಭಾರತದ ನಾಗರಿಕತೆ ಹಾಗೂ ಸಂಸ್ಕೃತಿಗೆ ಸಿಖ್ ಸಮುದಾಯದ ಅಮೂಲ್ಯ ಕೊಡುಗೆಯನ್ನು ಪ್ರದರ್ಶಿಸಲಿದೆ.

ಚಂಡೀಗಢದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ರಸ್ತೆ ಮೂಲಸೌಕರ್ಯಗಳನ್ನು ಒಳಗೊಂಡ ₹₹4,700 ಕೋಟಿಗೂ ಅಧಿಕ ಮೌಲ್ಯದ ಬಹುಸಂಖ್ಯೆಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಪಿಜಿಐಎಂಇಆರ್) ಸುಧಾರಿತ ತಾಯಿ ಮತ್ತು ಮಕ್ಕಳ ಕೇಂದ್ರ ಹಾಗೂ ಸುಧಾರಿತ ನರವಿಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಸುಧಾರಿತ ತಾಯಿ ಮತ್ತು ಮಕ್ಕಳ ಕೇಂದ್ರವನ್ನು ಹೆಚ್ಚಿನ ಅಪಾಯದ ಗರ್ಭಧಾರಣೆಗಳು, ತೀವ್ರವಾಗಿ ಅಸ್ವಸ್ಥರಾಗಿರುವ ನವಜಾತ ಶಿಶುಗಳು ಮತ್ತು ವಿಶೇಷ ಚಿಕಿತ್ಸೆಯ ಅಗತ್ಯವಿರುವ ಮಕ್ಕಳಿಗೆ ಸಮಗ್ರ ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. 300 ಹಾಸಿಗೆಗಳು ಮತ್ತು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಜ್ಜುಗೊಂಡಿರುವ ಈ ಕೇಂದ್ರವು ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನು ಗಣನೀಯವಾಗಿ ಬಲಪಡಿಸುತ್ತದೆ ಮತ್ತು ಪ್ರದೇಶದಾದ್ಯಂತದ ಸಾವಿರಾರು ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಸುಧಾರಿತ ನರವಿಜ್ಞಾನ ಕೇಂದ್ರವು ನರವಿಜ್ಞಾನ (ನ್ಯೂರಾಲಜಿ), ನರಶಸ್ತ್ರಚಿಕಿತ್ಸೆ (ನ್ಯೂರೋಸರ್ಜರಿ), ನ್ಯೂರೋ-ಕ್ರಿಟಿಕಲ್ ಕೇರ್ ಮತ್ತು ಸುಧಾರಿತ ರೋಗನಿರ್ಣಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಸಂಯೋಜಿತ ಸೇವೆಗಳಾಗಿ ಒದಗಿಸುತ್ತದೆ. ಇದು ಜಟಿಲ ನರವೈಜ್ಞಾನಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಮಯೋಚಿತ ಮತ್ತು ವಿಶ್ವದರ್ಜೆಯ ಚಿಕಿತ್ಸೆಯನ್ನು ಖಚಿತಪಡಿಸುತ್ತದೆ, ಹಾಗೆಯೇ ನರವಿಜ್ಞಾನದಲ್ಲಿ ವೈದ್ಯಕೀಯ ಸಂಶೋಧನೆ, ಶಿಕ್ಷಣ ಮತ್ತು ತರಬೇತಿಯನ್ನು ಬಲಪಡಿಸುತ್ತದೆ.

ಪ್ರಧಾನಮಂತ್ರಿಯವರು ಚಂಡೀಗಢದ ಪಿಜಿಐಎಂಇಆರ್ ನಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ-ಎ ಬಿ ಎಚ್‌ ಐ ಎಂ) ಅಡಿಯಲ್ಲಿ 150 ಹಾಸಿಗೆಗಳ ಅತ್ಯಾಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್‌ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸೌಲಭ್ಯವು ತುರ್ತು ಸನ್ನದ್ಧತೆ, ತೀವ್ರ ನಿಗಾ ಸೇವೆಗಳು ಮತ್ತು ವಿಪತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸುತ್ತದೆ, ಜೊತೆಗೆ ಈ ಪ್ರದೇಶದ ಒಟ್ಟಾರೆ ಆರೋಗ್ಯ ರಕ್ಷಣಾ ಮೂಲಸೌಕರ್ಯವನ್ನು ಬಲಪಡಿಸುತ್ತದೆ.

ಪ್ರಧಾನಮಂತ್ರಿಯವರು ಚಂಡೀಗಢದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕುರುಕ್ಷೇತ್ರ ಪುರುಷರ ಹಾಸ್ಟೆಲ್ ಮತ್ತು ಮೆಸ್ ಉದ್ಘಾಟನೆ, ಸೆಕ್ಟರ್ 46 ರ ಸರ್ಕಾರಿ ಕಾಲೇಜಿನಲ್ಲಿ ಹಾಸ್ಟೆಲ್ ಬ್ಲಾಕ್ ಉದ್ಘಾಟನೆ ಮತ್ತು ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಹಾಸ್ಟೆಲ್‌ ಗೆ ಶಂಕುಸ್ಥಾಪನೆ ಸೇರಿವೆ. ಈ ಸೌಲಭ್ಯಗಳು ಶೈಕ್ಷಣಿಕ ಮೂಲಸೌಕರ್ಯವನ್ನು ಬಲಪಡಿಸುತ್ತವೆ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ವಸತಿ ಸೌಲಭ್ಯಗಳನ್ನು ಸುಧಾರಿಸುತ್ತವೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತವೆ.

ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವ ಉದ್ದೇಶದ ಪ್ರಮುಖ ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಮೊಹಾಲಿ ಜಿಲ್ಲೆಯ ಐಟಿ ಸಿಟಿಯಿಂದ ಕುರಾಲಿಯವರೆಗಿನ 6-ಪಥಗಳ ಗ್ರೀನ್‌ಫೀಲ್ಡ್ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ, ಇದು ಪ್ರದೇಶದ ಪ್ರಮುಖ ಮೂಲಸೌಕರ್ಯ ಯೋಜನೆಯಾಗಿದೆ. ಈ ಹೆದ್ದಾರಿಯು ಮೊಹಾಲಿ, ಖರಾರ್ ಮತ್ತು ಕುರಾಲಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವೆ ಸುಧಾರಿತ ಸಂಪರ್ಕವನ್ನು ಒದಗಿಸುತ್ತದೆ.

ಅಂಬಾಲಾ-ಚಂಡೀಗಢ ಗ್ರೀನ್‌ಫೀಲ್ಡ್ ಹೆದ್ದಾರಿಯ (ಎನ್‌ ಎಚ್-205ಎ) ಪಿಆರ್-7 ಸಂಪರ್ಕ ರಸ್ತೆಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು 10.3 ಕಿಲೋಮೀಟರ್ ಉದ್ದದ ಗ್ರೀನ್‌ಫೀಲ್ಡ್ ಕಾರಿಡಾರ್ ಆಗಿದ್ದು, ದೂರದ ಪ್ರಯಾಣದ ಸಂಚಾರವು ಜಿರಾಕ್‌ಪುರದ ನಗರ ಪ್ರದೇಶಗಳನ್ನು ಬೈಪಾಸ್ ಮಾಡಲು ಮತ್ತು ಜಿರಾಕ್‌ಪುರ ಬೈಪಾಸ್ ಅನ್ನು ನೇರವಾಗಿ ಚಂಡೀಗಢದ ಏರೋಸಿಟಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

ಜಲಂಧರ್‌ ನಲ್ಲಿ ಪ್ರಧಾನಮಂತ್ರಿ

ಸಂಪರ್ಕವನ್ನು ಬಲಪಡಿಸುವ, ಪ್ರಯಾಣಿಕರ ಅನುಕೂಲವನ್ನು ಸುಧಾರಿಸುವ ಮತ್ತು ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವ ಉದ್ದೇಶದ ₹5,470 ಕೋಟಿಗೂ ಅಧಿಕ ಮೌಲ್ಯದ ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಜಲಂಧರ್ ಕಂಟೋನ್ಮೆಂಟ್‌ ಸೇರಿದಂತೆ ಮರುಅಭಿವೃದ್ಧಿ ಮಾಡಲಾದ 75 ರೈಲು ನಿಲ್ದಾಣಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. 20 ರಾಜ್ಯಗಳಾದ್ಯಂತ 75 ಅಮೃತ ನಿಲ್ದಾಣಗಳ ಉದ್ಘಾಟನೆಯು ವಿಶ್ವದ ಅತಿ ದೊಡ್ಡ ನಿಲ್ದಾಣ ಮರುಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಸುಮಾರು ₹₹1,570 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ನಿಲ್ದಾಣಗಳನ್ನು ಆಧುನಿಕ, ಪ್ರಯಾಣಿಕ ಸ್ನೇಹಿ ಸೌಲಭ್ಯಗಳಾಗಿ ಪರಿವರ್ತಿಸಲಾಗಿದೆ. 'ವಿರಾಸತ್ ಭಿ, ವಿಕಾಸ್ ಭಿ' ಎಂಬ ಮನೋಭಾವದಲ್ಲಿ ಮರುಅಭಿವೃದ್ಧಿಪಡಿಸಲಾದ ಈ ನಿಲ್ದಾಣಗಳು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಅಂಶಗಳನ್ನು ಒಳಗೊಂಡಿವೆ.

ನಂಗಲ್ ಅಣೆಕಟ್ಟು-ತಲ್ವಾರಾ-ಮುಕೇರಿಯನ್ ಹೊಸ ರೈಲು ಮಾರ್ಗ ಯೋಜನೆಯ ಭಾಗವಾಗಿ ಸುಮಾರು ₹₹830 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ದೌಲತ್‌ಪುರ ಚೌಕ್-ಕರ್ತೋಲಿ ಹೊಸ ರೈಲು ಮಾರ್ಗವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಇದು ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ನಡುವಿನ ರೈಲು ಸಂಪರ್ಕವನ್ನು ಗಣನೀಯವಾಗಿ ಬಲಪಡಿಸುತ್ತದೆ, ಹೋಶಿಯಾರಪುರ ಮತ್ತು ಉನಾ ಜಿಲ್ಲೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ಹೊಸ ರೈಲು ಮಾರ್ಗವು ಶ್ರೀ ಆನಂದಪುರ ಸಾಹಿಬ್ ಮತ್ತು ಮಾ ಚಿಂತಪೂರ್ಣಿ ದೇವಸ್ಥಾನದಂತಹ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಸಂಪರ್ಕವನ್ನು ಒದಗಿಸುತ್ತದೆ, ಜೊತೆಗೆ ಪ್ರಯಾಣಿಕರಿಗೆ ವೇಗದ, ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹ ಸಾರಿಗೆ ವಿಧಾನವನ್ನು ಒದಗಿಸುವ ಮೂಲಕ ದೂರದ ಪ್ರದೇಶಗಳಿಗೆ ಪ್ರವೇಶವನ್ನು ಹೆಚ್ಚಿಸುತ್ತದೆ.

ಪ್ರಧಾನಮಂತ್ರಿಯವರು ಕರ್ತೋಲಿ-ಅಂಬಾಲಾ ರೈಲು ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ, ಇದು ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದಾದ್ಯಂತ ಸಂಪರ್ಕವನ್ನು ಸುಧಾರಿಸುತ್ತದೆ. ಪ್ರಧಾನಮಂತ್ರಿಯವರು ಅಮೃತಸರ (ಛೇಹರ್ಟಾ)-ವಾರಾಣಸಿ ರೈಲು ಸೇವೆಗೂ ಹಸಿರು ನಿಶಾನೆ ತೋರಲಿದ್ದಾರೆ, ಇದು ಭಾರತದ ಅತ್ಯಂತ ಪೂಜನೀಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳ ನಡುವೆ ನೇರ ರೈಲು ಸಂಪರ್ಕವನ್ನು ಸ್ಥಾಪಿಸುತ್ತದೆ.

ರಾಜ್ಯದಲ್ಲಿ ರಸ್ತೆ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು, ಪ್ರಧಾನಮಂತ್ರಿಯವರು ₹3,070 ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ನಾಲ್ಕು ಪಥಗಳ ಗ್ರೀನ್‌ಫೀಲ್ಡ್ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ ಪ್ರೆಸ್‌ವೇಯ 30.9 ಕಿಮೀ ಉದ್ದದ ಪ್ಯಾಕೇಜ್-6 ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಈ ವಿಭಾಗವು ವಿಶೇಷವಾಗಿ ಭಾರಿ ವಾಹನಗಳಿಗೆ ಸುಲಭ ಮತ್ತು ವೇಗದ ಪ್ರಯಾಣವನ್ನು ಸುಗಮಗೊಳಿಸುತ್ತದೆ, ಜೊತೆಗೆ ಇಂಧನ ಬಳಕೆ ಮತ್ತು ವಾಹನ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ.

25.2 ಕಿಮೀ ಉದ್ದದ ಆರು ಪಥಗಳ ಗ್ರೀನ್‌ಫೀಲ್ಡ್ ದಕ್ಷಿಣ ಲೂಧಿಯಾನ ಬೈಪಾಸ್ ಅಭಿವೃದ್ಧಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯು ಲೂಧಿಯಾನ ಮತ್ತು ಬಟಿಂಡಾ ನಡುವಿನ ಪ್ರಯಾಣದ ದೂರ ಮತ್ತು ಸಮಯವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಇತರ ಪ್ರಮುಖ ಆರ್ಥಿಕ ಕೇಂದ್ರಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's forex reserves hit all-time high of $729.33 billion after $12.42 billion jump

Media Coverage

India's forex reserves hit all-time high of $729.33 billion after $12.42 billion jump
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಆಗಸ್ಟ್ 2026
August 29, 2026

New India, New Speed, New Stage: Missiles, Medals, Multilateralism under PM Modi