ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 26ರಂದು ಬೆಳಗ್ಗೆ 10ಗಂಟೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ʻಜಿಎಂಆರ್ ಏರೋಸ್ಪೇಸ್ ಮತ್ತು ಕೈಗಾರಿಕಾ ಪಾರ್ಕ್ʼ - ವಿಶೇಷ ಆರ್ಥಿಕ ವಲಯದಲ್ಲಿರುವ ʻಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾʼ (ಎಸ್ಎಇಎಸ್ಐ) ಘಟಕವನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.
ʻಎಸ್‌ಎಇಎಸ್‌ಐʼ ಎಂಬುದು ʻಲೀಪ್ʼ (ಲೀಡಿಂಗ್ ಎಡ್ಜ್ ಏವಿಯೇಷನ್ ಪ್ರೊಪಲ್ಶನ್) ಎಂಜಿನ್‌ಗಳಿಗಾಗಿ ʻಸಫ್ರಾನ್ʼ ಸಂಸ್ಥೆ ಸ್ಥಾಪಿಸಿರುವ ವಿಶೇಷವಾದ ʻನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ(ಎಂಆರ್‌ಒ) ಘಟಕವಾಗಿದೆ. ಇದು ʻಏರ್‌ಬಸ್ ಎ320ನಿಯೊʼ ಮತ್ತು ʻಬೋಯಿಂಗ್ 737 ಮ್ಯಾಕ್ಸ್ʼ ವಿಮಾನಗಳಲ್ಲಿ ಇಂತಹ ʻಲೀಪ್ʼ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಈ ಘಟಕದ ಸ್ಥಾಪನೆಯನ್ನು ಮಹತ್ವದ ಮೈಲುಗಲ್ಲನ್ನು ಗುರುತಿಸಲಾಗಿದೆ. ಏಕೆಂದರೆ ಇದು ಅತಿದೊಡ್ಡ ಜಾಗತಿಕ ವಿಮಾನ ಎಂಜಿನ್ ʻಎಂಆರ್‌ಒʼ ಸೌಲಭ್ಯಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೆ, ಮೊದಲ ಬಾರಿಗೆ, ಜಾಗತಿಕ ಎಂಜಿನ್ ತಯಾರಿಕಾ ಮೂಲ ಸಂಸ್ಥೆಯೊಂದು(ಮೂಲ ಸಲಕರಣೆ ತಯಾರಕ-ಒಇಎಂ) ಭಾರತದಲ್ಲಿ ʻಎಂಆರ್‌ಒʼ ಘಟಕವನ್ನು ಸ್ಥಾಪಿಸಿದೆ.
ʻಜಿಎಂಆರ್ ಏರೋಸ್ಪೇಸ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್ʼ - ವಿಶೇಷ ಆರ್ಥಕ ವಲಯವದಲ್ಲಿ 45,000 ಚದರ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಅತ್ಯಾಧುನಿಕ ಸೌಲಭ್ಯವನ್ನು ಸುಮಾರು 1,300 ಕೋಟಿ ರೂ.ಗಳ ಆರಂಭಿಕ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ವಾರ್ಷಿಕವಾಗಿ 300 ʻಲೀಪ್ʼ ಎಂಜಿನ್‌ಗಳಿಗೆ ಸೇವೆ ಸಲ್ಲಿಸಲು ವಿನ್ಯಾಸಗೊಳಿಸಲಾದ ʻಎಸ್ಎಇಎಸ್ಐʼ ಸೌಲಭ್ಯವು 2035ರ ವೇಳೆಗೆ ಸಂಪೂರ್ಣ ಕಾರ್ಯಾಚರಣೆಯ ಸಾಮರ್ಥ್ಯವನ್ನು ಸಾಧಿಸಿದ ನಂತರ 1,000ಕ್ಕೂ ಹೆಚ್ಚು ನುರಿತ ಭಾರತೀಯ ತಂತ್ರಜ್ಞರು ಮತ್ತು ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲಿದೆ. ಈ ಘಟಕವು ವಿಶ್ವದರ್ಜೆಯ ಎಂಜಿನ್ ನಿರ್ವಹಣೆ ಮತ್ತು ದುರಸ್ತಿ ಸೇವೆಗಳನ್ನು ತಲುಪಿಸಲು ಸುಧಾರಿತ ಪ್ರಕ್ರಿಯೆ ಸಾಧನಗಳನ್ನು ಹೊಂದಿರುತ್ತದೆ.
ʻಎಂಆರ್‌ಒʼ ಘಟಕವು ವಾಯುಯಾನ ಕ್ಷೇತ್ರದಲ್ಲಿ ʻಆತ್ಮನಿರ್ಭರತೆʼಯ ಗುರಿಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ʻಎಂಆರ್‌ಒʼ ಕಾರ್ಯಗಳಲ್ಲಿ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದರಿಂದ ವಿದೇಶಿ ವಿನಿಮಯದ ಹೊರಹರಿವು ಕಡಿಮೆಯಾಗುತ್ತದೆ, ಹೆಚ್ಚಿನ ಮೌಲ್ಯದ ಉದ್ಯೋಗಗಳು ಸೃಷ್ಟಿಯಾಗುತ್ತವೆ, ಪೂರೈಕೆ-ಸರಪಳಿ ಸ್ಥಿತಿಸ್ಥಾಪಕತ್ವ ಬಲವಾಗುತ್ತದೆ ಜೊತೆಗೆ ಜಾಗತಿಕ ವಾಯುಯಾನ ಕೇಂದ್ರವಾಗಿ ಭಾರತದ ಸ್ಥಾನ ಭದ್ರವಾಗುತ್ತದೆ. ವಲಯದ ತ್ವರಿತ ಬೆಳವಣಿಗೆಯನ್ನು ಬೆಂಬಲಿಸಲು ದೃಢವಾದ ʻಎಂಆರ್‌ಒʼ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಭಾರತ ಸರ್ಕಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ 2024ರಲ್ಲಿ ಜಿಎಸ್‌ಟಿ ಸುಧಾರಣೆಗಳು, ʻಎಂಆರ್‌ಒ ಮಾರ್ಗಸೂಚಿಗಳು-2021ʼ ಮತ್ತು ʻರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ-2016ʼ ಸೇರಿದಂತೆ ಸರ್ಕಾರದ ಪ್ರಮುಖ ನೀತಿ ಉಪಕ್ರಮಗಳು ಕೈಗೊಂಡಿದೆ. ಈ ಕ್ರಮಗಳು ತೆರಿಗೆ ರಚನೆಗಳನ್ನು ತರ್ಕಬದ್ಧಗೊಳಿಸುವ ಮತ್ತು ರಾಯಧನ ಹೊರೆಯನ್ನು ಕಡಿಮೆ ಮಾಡುವ ಮೂಲಕ ʻಎಂಆರ್‌ಒʼ ಸೇವಾ ಪೂರೈಕೆದಾರರ ಕಾರ್ಯಾಚರಣೆಗಳನ್ನು ಸರಳಗೊಳಿಸಿವೆ.


