ಮಹಾರಾಷ್ಟ್ರದಲ್ಲಿ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಉದ್ಘಾಟನೆ
ನಾಗ್ಪುರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಶಂಕುಸ್ಥಾಪನೆ
ಶಿರಡಿ ವಿಮಾನ ನಿಲ್ದಾಣದಲ್ಲಿ ನೂತನ ಸಮಗ್ರ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ಮುಂಬೈ ಮತ್ತು ವಿದ್ಯಾ ಸಮೀಕ್ಷಾ ಕೇಂದ್ರ ಮಹಾರಾಷ್ಟ್ರದ ಉದ್ಘಾಟನೆ
ಮಹಾರಾಷ್ಟ್ರದಲ್ಲಿ ಯೋಜನೆಗಳ ಆರಂಭವು ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ, ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಯುವಜನರನ್ನು ಸಬಲೀಕರಣಗೊಳಿಸುತ್ತದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ 7600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಯೋಜನೆಗಳಲ್ಲಿ ನಾಗ್ಪುರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಯೋಜನೆ ಮತ್ತು ಶಿರಡಿ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ಸೇರಿವೆ. ಶ್ರೀ ಮೋದಿ ಅವರು ಮಹಾರಾಷ್ಟ್ರದ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಕಾರ್ಯಾಚರಣೆಗೆ ಚಾಲನೆ ನೀಡಿದರು ಮತ್ತು ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಮತ್ತು ಮಹಾರಾಷ್ಟ್ರದ ವಿದ್ಯಾ ಸಮೀಕ್ಷಾ ಕೇಂದ್ರ (ವಿಎಸ್ಕೆ) ಗಳನ್ನು ಉದ್ಘಾಟಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾರಾಷ್ಟ್ರಕ್ಕೆ 10 ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ನಾಗ್ಪುರ ವಿಮಾನ ನಿಲ್ದಾಣದ ಆಧುನೀಕರಣ ಹಾಗು ವಿಸ್ತರಣೆ ಮತ್ತು ಶಿರಡಿ ವಿಮಾನ ನಿಲ್ದಾಣಕ್ಕೆ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ನೀಡಲಾಗುತ್ತಿದೆ ಎಂದರು. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಅವರು ಮಹಾರಾಷ್ಟ್ರದ ಜನರನ್ನು ಅಭಿನಂದಿಸಿದರು.

30,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲು ಮುಂಬೈ ಮತ್ತು ಥಾಣೆಗೆ ತಾವು ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಿ, ಮೆಟ್ರೋ ಜಾಲದ ವಿಸ್ತರಣೆ, ವಿಮಾನ ನಿಲ್ದಾಣಗಳ ಉನ್ನತೀಕರಣ, ಹೆದ್ದಾರಿ ಯೋಜನೆಗಳು, ಮೂಲಸೌಕರ್ಯ, ಸೌರಶಕ್ತಿ ಮತ್ತು ಜವಳಿ ಪಾರ್ಕ್ ಗಳಂತಹ ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಈ ಹಿಂದೆ ವಿವಿಧ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ಉಲ್ಲೇಖಿಸಿದರು. ರೈತರು, ಮೀನುಗಾರರು ಮತ್ತು ಪಶುಪಾಲಕರಿಗಾಗಿ ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಭಾರತದ ಅತಿದೊಡ್ಡ ಕಂಟೇನರ್ ಬಂದರಾದ ವಾಧ್ವಾನ್ ಬಂದರಿಗೆ ಮಹಾರಾಷ್ಟ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂಬುದನ್ನೂ  ಶ್ರೀ ಮೋದಿ ಒತ್ತಿ ಹೇಳಿದರು. "ಮಹಾರಾಷ್ಟ್ರದ ಇತಿಹಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಇಷ್ಟು ವೇಗವಾಗಿ, ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಹಿಂದೆಂದೂ ನಡೆದಿಲ್ಲ" ಎಂದೂ  ಪ್ರಧಾನ ಮಂತ್ರಿ  ಹೇಳಿದರು.

ಮರಾಠಿಯನ್ನು ಶಾಸ್ತ್ರೀಯ/ಅಭಿಜಾತ  ಭಾಷೆಯಾಗಿ ಇತ್ತೀಚೆಗೆ ಗುರುತಿಸಿ ಮಾನ್ಯತೆ ನೀಡಿರುವುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಒಂದು ಭಾಷೆಗೆ ಸೂಕ್ತ ಗೌರವ ದೊರೆತಾಗ ಅದರಿಂದ ಕೇವಲ ಪದಗಳಿಗೆ ಮಾತ್ರವಲ್ಲ, ಇಡೀ ಪೀಳಿಗೆಗೆ ಧ್ವನಿ ಸಿಗುತ್ತದೆ ಎಂದರು. ಇದರೊಂದಿಗೆ ಕೋಟ್ಯಂತರ ಮರಾಠಿ ಸಹೋದರರ ಕನಸು ನನಸಾಗಿದೆ ಎಂದು ಅವರು ಹೇಳಿದರು. ಮರಾಠಿಯನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸಿರುವುದನ್ನು ಮಹಾರಾಷ್ಟ್ರದ ಜನರು ಸಂಭ್ರಮಿಸಿದ್ದಾರೆ ಎಂಬುದರತ್ತಲೂ  ಶ್ರೀ ಮೋದಿ ಬೆಟ್ಟು ಮಾಡಿದರು. ಮಹಾರಾಷ್ಟ್ರದ ಹಳ್ಳಿಗಳಾದ್ಯಂತದ ಜನರಿಂದ ಸಂತೋಷ ಮತ್ತು ಕೃತಜ್ಞತೆಯ ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ಅವರು ಹೇಳಿದರು. ಮರಾಠಿಯನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸುವುದು ನನ್ನಿಂದಾದ ಕೆಲಸವಲ್ಲ, ಅದು ಮಹಾರಾಷ್ಟ್ರದ ಜನರ ಆಶೀರ್ವಾದದ ಫಲ ಎಂದೂ  ಶ್ರೀ ಮೋದಿ ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜ್, ಬಾಬಾ ಸಾಹೇಬ್ ಅಂಬೇಡ್ಕರ್, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರಂತಹ ಮಹಾನ್ ವ್ಯಕ್ತಿಗಳ ಆಶೀರ್ವಾದದಿಂದಾಗಿ ಮಹಾರಾಷ್ಟ್ರದಲ್ಲಿ ಪ್ರಗತಿಯ ಕಾರ್ಯಗಳು ನಡೆಯುತ್ತಿವೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಹರಿಯಾಣ ಹಾಗು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ನಿನ್ನೆ ಪ್ರಕಟವಾಗಿದ್ದು ಹರಿಯಾಣ ಮತದಾರರು ದೇಶದ ಜನರ ಮನಸ್ಥಿತಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಎರಡು ಅವಧಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಹರಿಯಾಣದಲ್ಲಿ ಸತತ ಮೂರನೇ ಬಾರಿಗೆ ಗೆಲುವು ಐತಿಹಾಸಿಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಭಜಕವಾದದ  ರಾಜಕೀಯವನ್ನು ಆಡುವವರು ಮತ್ತು ವೈಯಕ್ತಿಕ ಲಾಭಕ್ಕಾಗಿ ಮತದಾರರನ್ನು ದಾರಿತಪ್ಪಿಸುವವರ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದರು. ಭಾರತದಲ್ಲಿ ಮುಸ್ಲಿಮರಲ್ಲಿ ಭಯವನ್ನು ಉಂಟುಮಾಡುವ ಮತ್ತು ಅವರನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸುವ ಪ್ರಯತ್ನಗಳತ್ತ ಅವರು ಗಮನಸೆಳೆದರು ಮತ್ತು ಲಾಭಕ್ಕಾಗಿ ಹಿಂದೂ ಧರ್ಮದಲ್ಲಿ ಜಾತಿವಾದದಲ್ಲಿ ತೊಡಗಿರುವವರ ಬಗ್ಗೆ ಧಿಕ್ಕಾರವನ್ನು ವ್ಯಕ್ತಪಡಿಸಿದರು. ರಾಜಕೀಯ ಲಾಭಕ್ಕಾಗಿ ಭಾರತದಲ್ಲಿ ಹಿಂದೂ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವವರ ವಿರುದ್ಧ ಶ್ರೀ ಮೋದಿ ಎಚ್ಚರಿಕೆ ನೀಡಿದರು. ಸಮಾಜವನ್ನು ಒಡೆಯುವ ಪ್ರಯತ್ನಗಳನ್ನು ಮಹಾರಾಷ್ಟ್ರದ ಜನರು ತಿರಸ್ಕರಿಸುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

 

ಕಳೆದ 10 ವರ್ಷಗಳಲ್ಲಿ, ರಾಷ್ಟ್ರದ ಅಭಿವೃದ್ಧಿಗಾಗಿ ಆಧುನಿಕ ಮೂಲಸೌಕರ್ಯಗಳನ್ನು ಸೃಷ್ಟಿಸುವ 'ಮಹಾ ಯಜ್ಞ'ವನ್ನು ಸರ್ಕಾರ ಪ್ರಾರಂಭಿಸಿದೆ ಎಂದು ಪ್ರಧಾನಿ ಹೇಳಿದರು. "ಇಂದು, ನಾವು ಕಟ್ಟಡಗಳನ್ನು ನಿರ್ಮಿಸುವುದಷ್ಟೇ ಅಲ್ಲ, ಆರೋಗ್ಯಕರ ಮತ್ತು ಸಮೃದ್ಧ ಮಹಾರಾಷ್ಟ್ರಕ್ಕೆ ಅಡಿಪಾಯ ಹಾಕುತ್ತಿದ್ದೇವೆ" ಎಂದು ಹೇಳಿದ ಪ್ರಧಾನ ಮಂತ್ರಿ ಅವರು, ಲಕ್ಷಾಂತರ ಜನರ ಜೀವನವನ್ನು ಸುಧಾರಿಸಲು ರಾಜ್ಯದಲ್ಲಿ 10 ಹೊಸ ವೈದ್ಯಕೀಯ ಕಾಲೇಜುಗಳ ಉದ್ಘಾಟನೆಯನ್ನು ಉಲ್ಲೇಖಿಸಿದರು.  ಥಾಣೆ, ಅಂಬರ್ ನಾಥ್, ಮುಂಬೈ, ನಾಸಿಕ್, ಜಲ್ನಾ, ಬುಲ್ಧಾನಾ, ಹಿಂಗೋಲಿ, ವಾಶಿಮ್, ಅಮರಾವತಿ, ಭಂಕ್ದಾರಾ ಮತ್ತು ಗಡ್ಚಿರೋಲಿ ಜಿಲ್ಲೆಗಳು ಲಕ್ಷಾಂತರ ಜನರಿಗೆ ಸೇವಾ ಕೇಂದ್ರಗಳಾಗಲಿವೆ ಎಂದು ಅವರು ಹೇಳಿದರು. 10 ಹೊಸ ವೈದ್ಯಕೀಯ ಕಾಲೇಜುಗಳು ಮಹಾರಾಷ್ಟ್ರದಲ್ಲಿ 900 ವೈದ್ಯಕೀಯ ಸೀಟುಗಳನ್ನು ಸೇರಿಸಲಿದ್ದು, ರಾಜ್ಯದ ಒಟ್ಟು ವೈದ್ಯಕೀಯ ಸೀಟುಗಳ ಸಂಖ್ಯೆ ಸುಮಾರು 6000 ಕ್ಕೆ ತಲುಪಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕೆಂಪು ಕೋಟೆಯಲ್ಲಿ ಘೋಷಿಸಿದ  75,000 ಹೊಸ ವೈದ್ಯಕೀಯ ಸೀಟುಗಳನ್ನು ಸೇರಿಸುವ ತಮ್ಮ ಸಂಕಲ್ಪವನ್ನು ಸ್ಮರಿಸಿದ ಪ್ರಧಾನಿ, ಇಂದಿನ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದರು.

ಸರ್ಕಾರವು ವೈದ್ಯಕೀಯ ಶಿಕ್ಷಣವನ್ನು ಸುಲಭಗೊಳಿಸಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಮಹಾರಾಷ್ಟ್ರದ ಯುವಜನರಿಗೆ ಹೊಸ ಮಾರ್ಗಗಳ ಬಾಗಿಲು ತೆರೆಯಲಾಗಿದೆ ಎಂದರು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಅನೇಕ ಮಕ್ಕಳು ವೈದ್ಯರಾಗುವುದನ್ನು ಮತ್ತು ಅವರ ಕನಸುಗಳನ್ನು ಈಡೇರಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ, ಅಂತಹ ವಿಶೇಷ ಅಧ್ಯಯನಗಳಿಗೆ ಮಾತೃಭಾಷೆಯಲ್ಲಿ ಪುಸ್ತಕಗಳು ಲಭ್ಯವಿಲ್ಲದಿರುವ ದೊಡ್ಡ ಸವಾಲು ಇತ್ತು ಎಂದು ಶ್ರೀ ಮೋದಿ ಹೇಳಿದರು. ಸರ್ಕಾರವು ಈ ತಾರತಮ್ಯವನ್ನು ಕೊನೆಗೊಳಿಸಿದೆ ಮತ್ತು ಮಹಾರಾಷ್ಟ್ರದ ಯುವಜನರು ಮರಾಠಿ ಭಾಷೆಯಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಎಂದೂ ಪ್ರಧಾನಿ ಹೇಳಿದರು. ಯುವಜನರು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಮೂಲಕ ವೈದ್ಯರಾಗುವ ತಮ್ಮ ಕನಸನ್ನು ಈಡೇರಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಜೀವನವನ್ನು ಆರಾಮದಾಯಕವಾಗಿಸುವ ಸರ್ಕಾರದ ಪ್ರಯತ್ನವು ಬಡತನದ ವಿರುದ್ಧ ಹೋರಾಡಲು ದೊಡ್ಡ ಮಾಧ್ಯಮವಾಗಿದೆ ಎಂದು ಪ್ರಧಾನಿ ಹೇಳಿದರು. ಹಿಂದಿನ ಸರ್ಕಾರಗಳು ಬಡತನವನ್ನು ತಮ್ಮ ರಾಜಕೀಯದ ಇಂಧನವನ್ನಾಗಿ ಮಾಡಿಕೊಂಡಿವೆ ಎಂದು ವಾಗ್ದಾಳಿ ನಡೆಸಿದ ಅವರು, ತಮ್ಮ ಸರ್ಕಾರವು ಒಂದು ದಶಕದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ ಎಂದು ಹೇಳಿದರು. ದೇಶದಲ್ಲಿ ಆರೋಗ್ಯ ಸೇವೆಗಳ ಪರಿವರ್ತನೆಯ ಬಗ್ಗೆ ವಿವರಿಸಿದ ಶ್ರೀ ಮೋದಿ, "ಇಂದು, ಪ್ರತಿಯೊಬ್ಬ ಬಡ ವ್ಯಕ್ತಿಯು ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್ ಹೊಂದಿದ್ದಾರೆ" ಎಂದು ಹೇಳಿದರು. ಇತ್ತೀಚೆಗೆ 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಸಹ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಜನೌಷಧಿ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ ಮತ್ತು ಹೃದ್ರೋಗಿಗಳಿಗೆ ಸ್ಟೆಂಟ್ ಗಳನ್ನು ಶೇ.80-85ರಷ್ಟು ಅಗ್ಗವಾಗಿಸಲಾಗಿದೆ ಎಂಬುದರತ್ತ  ಶ್ರೀ ಮೋದಿ ಗಮನ ಸೆಳೆದರು. ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಬೆಲೆಯನ್ನು ಸಹ ಸರ್ಕಾರ ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ವೈದ್ಯಕೀಯ ಚಿಕಿತ್ಸೆ ಅಗ್ಗವಾಗಿದೆ ಎಂದು ಹೇಳಿದ ಶ್ರೀ ಮೋದಿ, "ಇಂದು ಮೋದಿ ಸರ್ಕಾರವು ಕಡು ಬಡವರಿಗೆ ಸಾಮಾಜಿಕ ಭದ್ರತೆಯ ಬಲವಾದ ಗುರಾಣಿಯನ್ನು ನೀಡಿದೆ" ಎಂದೂ  ಹೇಳಿದರು.

ಒಂದು ದೇಶದ ಯುವಜನರು ಆತ್ಮವಿಶ್ವಾಸದಿಂದ ತುಂಬಿರುವಾಗ  ಮಾತ್ರ ಜಗತ್ತು ದೇಶವನ್ನು ನಂಬುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದಿನ ಯುವ ಭಾರತದ ಆತ್ಮವಿಶ್ವಾಸವು ರಾಷ್ಟ್ರಕ್ಕೆ ಹೊಸ ಭವಿಷ್ಯದ ಕಥೆಯನ್ನು ಬರೆಯುತ್ತಿದೆ ಎಂದು ಹೇಳಿದ ಅವರು, ಜಾಗತಿಕ ಸಮುದಾಯವು ಭಾರತವನ್ನು ಮಾನವ ಸಂಪನ್ಮೂಲದ ಮಹತ್ವದ ಕೇಂದ್ರವಾಗಿ ನೋಡುತ್ತಿದೆ, ವಿಶ್ವದಾದ್ಯಂತ ಶಿಕ್ಷಣ, ಆರೋಗ್ಯ ಮತ್ತು ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಅಪಾರ ಅವಕಾಶಗಳಿವೆ ಎಂದು ಒತ್ತಿ ಹೇಳಿದರು. ಈ ಅವಕಾಶಗಳಿಗಾಗಿ ಭಾರತದ ಯುವಜನರನ್ನು ಸಿದ್ಧಪಡಿಸಲು, ಸರ್ಕಾರವು ಅವರ ಕೌಶಲ್ಯಗಳನ್ನು ಜಾಗತಿಕ ಮಾನದಂಡಗಳೊಂದಿಗೆ ಸರಿಹೊಂದಿಸುತ್ತಿದೆ ಎಂದೂ ಪ್ರಧಾನಿ ಮಾಹಿತಿ ನೀಡಿದರು. ಶೈಕ್ಷಣಿಕ ಚೌಕಟ್ಟನ್ನು ಮುನ್ನಡೆಸುವ ಗುರಿಯನ್ನು ಹೊಂದಿರುವ ವಿದ್ಯಾ ಸಮೀಕ್ಷಾ ಕೇಂದ್ರ ಸೇರಿದಂತೆ ಮಹಾರಾಷ್ಟ್ರದಲ್ಲಿ ವಿವಿಧ ಯೋಜನೆಗಳ ಪ್ರಾರಂಭ ಮತ್ತು ಮುಂಬೈನಲ್ಲಿ ಭಾರತೀಯ ಕೌಶಲ್ಯ ಸಂಸ್ಥೆಯನ್ನು ಉದ್ಘಾಟಿಸಿರುವುದನ್ನು ಪ್ರಧಾನಿ ಉಲ್ಲೇಖಿಸಿದರು, ಅಲ್ಲಿ ಯುವ ವ್ಯಕ್ತಿಗಳ ಪ್ರತಿಭೆಯನ್ನು ಮಾರುಕಟ್ಟೆ ಬೇಡಿಕೆಗಳೊಂದಿಗೆ ಸರಿಹೊಂದಿಸಲು ಭವಿಷ್ಯ ಆಧಾರಿತ ತರಬೇತಿ ನೀಡಲಾಗುವುದು. ಇದಲ್ಲದೆ, ಯುವಜನರಿಗೆ ಪಾವತಿಸಿದ ಇಂಟರ್ನ್ಶಿಪ್ ನೀಡುವ ಸರ್ಕಾರದ ಉಪಕ್ರಮವನ್ನು ಶ್ರೀ ಮೋದಿ ಎತ್ತಿ ತೋರಿಸಿದರು, ಇದು ಭಾರತದ ಇತಿಹಾಸದಲ್ಲಿ ಮೊದಲನೆಯದು, ಅಲ್ಲಿ ವಿದ್ಯಾರ್ಥಿಗಳು ತಮ್ಮ ಇಂಟರ್ನ್ಶಿಪ್ ಸಮಯದಲ್ಲಿ 5,000 ರೂ.ಗಳ ಸ್ಟೈಫಂಡ್ ಪಡೆಯುತ್ತಾರೆ. ಈ ಉಪಕ್ರಮದ ಭಾಗವಾಗಲು ಸಾವಿರಾರು ಕಂಪನಿಗಳು ನೋಂದಾಯಿಸಿಕೊಳ್ಳುತ್ತಿವೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು, ಆ ಮೂಲಕ ಯುವ ವ್ಯಕ್ತಿಗಳು ಮೌಲ್ಯಯುತ ಅನುಭವವನ್ನು ಪಡೆಯಲು ಇದು ಸಹಾಯ ಮಾಡುತ್ತದೆ  ಮತ್ತು ಅವರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದೂ ಪ್ರಧಾನ ಮಂತ್ರಿ ಅವರು ನುಡಿದರು.

ತನ್ನ ಯುವಜನರಿಗಾಗಿ ಭಾರತದ ಪ್ರಯತ್ನಗಳು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತಿವೆ ಎಂದು ಪ್ರಧಾನಿ ಹೇಳಿದರು. ಭಾರತದ ಶಿಕ್ಷಣ ಸಂಸ್ಥೆಗಳು ಜಾಗತಿಕವಾಗಿ ಉನ್ನತ ಸಂಸ್ಥೆಗಳಿಗೆ ಸಮಾನವಾಗಿ ನಿಂತಿವೆ ಮತ್ತು ಜಗತ್ತಿನ  ವಿಶ್ವವಿದ್ಯಾಲಯ ಶ್ರೇಯಾಂಕಗಳು ನಿನ್ನೆಯಷ್ಟೇ ಬಿಡುಗಡೆಗೊಂಡಿದ್ದು, ಅವು ಭಾರತದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸಿವೆ ಎಂದೂ ಪ್ರಧಾನ ಮಂತ್ರಿ  ಹೇಳಿದರು.

 

ದೇಶವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿರುವುದರಿಂದ ವಿಶ್ವದ ಕಣ್ಣುಗಳು ಈಗ ಭಾರತದತ್ತ ನೆಟ್ಟಿವೆ ಎಂದು ಶ್ರೀ ಮೋದಿ ಹೇಳಿದರು. "ಜಾಗತಿಕ ಆರ್ಥಿಕತೆಯ ಭವಿಷ್ಯ ಭಾರತದಲ್ಲಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ವಿಶೇಷವಾಗಿ ಒಂದು ಕಾಲದಲ್ಲಿ ದಶಕಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದ ಕ್ಷೇತ್ರಗಳಲ್ಲಿ ಆರ್ಥಿಕ ಪ್ರಗತಿಯು ತಂದ ಹೊಸ ಅವಕಾಶಗಳನ್ನು ಉಲ್ಲೇಖಿಸಿದರು. ಪ್ರವಾಸೋದ್ಯಮದ ಉದಾಹರಣೆಯನ್ನು ನೀಡಿದ ಅವರು, ಮಹಾರಾಷ್ಟ್ರದ ಅಮೂಲ್ಯ ಪರಂಪರೆ, ಸುಂದರವಾದ ನೈಸರ್ಗಿಕ ತಾಣಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ರಾಜ್ಯವನ್ನು ಬಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಸಲು ಇದ್ದ ಅವಕಾಶಗಳನ್ನು  ಕಳೆದುಕೊಂಡಿರುವ ಬಗ್ಗೆ ಗಮನಸೆಳೆದರು.

ಪ್ರಸ್ತುತ ಸರ್ಕಾರವು ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಸೇರಿಸಿಕೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತದ ಶ್ರೀಮಂತ ಗತಕಾಲದಿಂದ ಪ್ರೇರಿತವಾಗಿ ಉಜ್ವಲ ಭವಿಷ್ಯವನ್ನು  ನಿರ್ಮಾಣ ಮಾಡುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಶಿರಡಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್, ನಾಗ್ಪುರ ವಿಮಾನ ನಿಲ್ದಾಣದ ಆಧುನೀಕರಣ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಇತರ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ಶಿರಡಿ ವಿಮಾನ ನಿಲ್ದಾಣದಲ್ಲಿನ ಹೊಸ ಟರ್ಮಿನಲ್ ಸಾಯಿಬಾಬಾ ಭಕ್ತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ದೇಶ ಹಾಗು ವಿದೇಶಗಳಿಂದ ಹೆಚ್ಚಿನ ಸಂದರ್ಶಕರಿಗೆ ಅವಕಾಶ, ಅನುಕೂಲತೆಗಳನ್ನು  ಒದಗಿಸುತ್ತದೆ ಎಂದು ಅವರು ಹೇಳಿದರು. ನವೀಕರಿಸಿದ ಸೋಲಾಪುರ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಬಗ್ಗೆಯೂ ಅವರು ಮಾತನಾಡಿದರು, ಇದು ಈಗ ಭಕ್ತರಿಗೆ ಹತ್ತಿರದ ಆಧ್ಯಾತ್ಮಿಕ ತಾಣಗಳಾದ ಶನಿ ಶಿಂಗನಾಪುರ, ತುಳಜಾ ಭವಾನಿ ಮತ್ತು ಕೈಲಾಸ್ ದೇವಾಲಯಕ್ಕೆ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ, ಆ ಮೂಲಕ ಮಹಾರಾಷ್ಟ್ರದ ಪ್ರವಾಸೋದ್ಯಮ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದವರು ಅಭಿಪ್ರಾಯಪಟ್ಟರು.

"ನಮ್ಮ ಸರ್ಕಾರದ ಪ್ರತಿಯೊಂದು ನಿರ್ಧಾರ ಮತ್ತು ಪ್ರತಿಯೊಂದು ನೀತಿಯು ಒಂದೇ ಗುರಿಯನ್ನು ಹೊಂದಿದೆ-ಅದುವೇ - ವಿಕ್ಷಿತ್ ಭಾರತ!" ಎಂದು ಶ್ರೀ ಮೋದಿ ಉದ್ಗರಿಸಿದರು. ಬಡವರು, ರೈತರು, ಯುವಜನರು ಮತ್ತು ಮಹಿಳೆಯರ ಕಲ್ಯಾಣವೇ ಸರ್ಕಾರದ ದೃಷ್ಟಿಕೋನವಾಗಿದೆ ಎಂದೂ ಅವರು ಹೇಳಿದರು. ಆದ್ದರಿಂದ, ಪ್ರತಿಯೊಂದು ಅಭಿವೃದ್ಧಿ ಯೋಜನೆಯನ್ನು ಬಡ ಗ್ರಾಮಸ್ಥರು, ಕಾರ್ಮಿಕರು ಮತ್ತು ರೈತರಿಗೆ ಸಮರ್ಪಿಸಲಾಗಿದೆ ಎಂದೂ ಅವರು ನುಡಿದರು. ಶಿರಡಿ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗುತ್ತಿರುವ ಪ್ರತ್ಯೇಕ ಸರಕು ಸಂಕೀರ್ಣವು ರೈತರಿಗೆ ಸಾಕಷ್ಟು ಸಹಾಯ ಮಾಡುತ್ತದೆ, ಏಕೆಂದರೆ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ದೇಶ ಮತ್ತು ವಿದೇಶಗಳಿಗೆ ರಫ್ತು ಮಾಡಬಹುದು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈರುಳ್ಳಿ, ದ್ರಾಕ್ಷಿ, ಪೇರಳೆ ಮತ್ತು ದಾಳಿಂಬೆಯಂತಹ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗೆ ಸುಲಭವಾಗಿ ಸಾಗಿಸಲು ಸಾಧ್ಯವಾಗುವುದರಿಂದ ಶಿರಡಿ, ಲಾಸಲ್ಗಾಂವ್, ಅಹಲ್ಯಾನಗರ ಮತ್ತು ನಾಸಿಕಗಳ ರೈತರು ಸರಕು ಸಂಕೀರ್ಣದಿಂದ ಪ್ರಯೋಜನ ಪಡೆಯುತ್ತಾರೆ ಎಂದು ಅವರು ಹೇಳಿದರು.

ಬಾಸ್ಮತಿ ಅಕ್ಕಿಯ ಮೇಲಿನ ಕನಿಷ್ಠ ರಫ್ತು ಬೆಲೆಯನ್ನು ರದ್ದುಪಡಿಸುವುದು, ಬಾಸ್ಮತಿಯೇತರ ಅಕ್ಕಿಯ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕುವುದು, ಪಾರ್ಬಾಯ್ಲ್ಡ್  (ಕುಸುಬಲಕ್ಕಿ) ಅಕ್ಕಿಯ ಮೇಲಿನ ರಫ್ತು ಸುಂಕವನ್ನು ಅರ್ಧದಷ್ಟು ಕಡಿಮೆ ಮಾಡುವುದು ಮುಂತಾದ ಕ್ರಮಗಳನ್ನು ರೈತರ ಹಿತದೃಷ್ಟಿಯಿಂದ ಸರ್ಕಾರ ನಿರಂತರವಾಗಿ ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು. ಮಹಾರಾಷ್ಟ್ರದ ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರವು ಈರುಳ್ಳಿಯ ಮೇಲಿನ ರಫ್ತು ತೆರಿಗೆಯನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಖಾದ್ಯ ತೈಲಗಳ ಆಮದಿನ ಮೇಲೆ ಶೇಕಡಾ 20 ರಷ್ಟು ತೆರಿಗೆ ವಿಧಿಸಲು ಮತ್ತು ಸಂಸ್ಕರಿಸಿದ ಸೋಯಾಬೀನ್, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಯ ಮೇಲಿನ ಕಸ್ಟಮ್ ಸುಂಕವನ್ನು ಗಮನಾರ್ಹವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಶ್ರೀ ಮೋದಿ ಹೇಳಿದರು. ಜವಳಿ ಉದ್ಯಮವನ್ನು ಸರ್ಕಾರ ಬೆಂಬಲಿಸುತ್ತಿರುವ ರೀತಿಯಿಂದ ಮಹಾರಾಷ್ಟ್ರದ ಹತ್ತಿ ರೈತರಿಗೆ ಹೆಚ್ಚಿನ ಲಾಭವಾಗಲಿದೆ ಎಂದೂ ಶ್ರೀ ಮೋದಿ ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ಪ್ರಧಾನಮಂತ್ರಿಯವರು, ಮಹಾರಾಷ್ಟ್ರವನ್ನು ಬಲಪಡಿಸುವುದು ಪ್ರಸ್ತುತ ಸರ್ಕಾರದ ಸಂಕಲ್ಪವಾಗಿದೆ ಎಂದರು. ರಾಜ್ಯದ ಪ್ರಗತಿಯ ವೇಗದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು ಮತ್ತು ಇಂದಿನ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ಮಹಾರಾಷ್ಟ್ರದ ಜನರನ್ನು ಅಭಿನಂದಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ಸಿ.ಪಿ.ರಾಧಾಕೃಷ್ಣನ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಈ ಸಂದರ್ಭದಲ್ಲಿ ವರ್ಚುವಲ್ ಆಗಿ ಉಪಸ್ಥಿತರಿದ್ದರು.

ಹಿನ್ನೆಲೆ

ನಾಗ್ಪುರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಮಾರು 7000 ಕೋಟಿ ರೂ.ಗಳ ಅಂದಾಜು ಯೋಜನಾ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಯೋಜನೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದು ಉತ್ಪಾದನೆ, ವಾಯುಯಾನ, ಪ್ರವಾಸೋದ್ಯಮ, ಲಾಜಿಸ್ಟಿಕ್ಸ್ ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ನಾಗ್ಪುರ ನಗರ ಮತ್ತು ವಿಶಾಲ ವಿದರ್ಭ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ.

ಪ್ರಧಾನಮಂತ್ರಿಯವರು ಶಿರಡಿ ವಿಮಾನ ನಿಲ್ದಾಣದಲ್ಲಿ 645 ಕೋಟಿ ರೂಪಾಯಿ ಮೌಲ್ಯದ ಹೊಸ ಸಮಗ್ರ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದು ಶಿರಡಿಗೆ ಬರುವ ಧಾರ್ಮಿಕ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತದೆ. ಪ್ರಸ್ತಾವಿತ ಟರ್ಮಿನಲ್ ನ ನಿರ್ಮಾಣ ವಿಷಯವು ಸಾಯಿಬಾಬಾ ಅವರ, ಬೇವಿನ ಮರವನ್ನು ಆವರಿಸಿದ ಆಧ್ಯಾತ್ಮಿಕ ಬದುಕನ್ನು ಆಧರಿಸಿದೆ.(ಸಾಯಿಬಾಬಾ ಅವರು ಶಿರಡಿಗೆ ಬಂದಾಗ ಬಹಳಷ್ಟು ಸಮಯವನ್ನು ಬೇವಿನ ಮರದ ಅಡಿಯಲ್ಲಿ ಕಳೆದರು, ಅದು ಭಕ್ತರಿಗೆ ಪವಿತ್ರ ವೃಕ್ಷವಾಗಿದೆ)

ಎಲ್ಲರಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುವ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುವ ಬದ್ಧತೆಗೆ ಅನುಗುಣವಾಗಿ, ಮಹಾರಾಷ್ಟ್ರದ ಮುಂಬೈ, ನಾಸಿಕ್, ಜಲ್ನಾ, ಅಮರಾವತಿ, ಗಡ್ಚಿರೋಲಿ, ಬುಲ್ಧಾನಾ, ವಾಶಿಮ್, ಭಂಡಾರ, ಹಿಂಗೋಲಿ ಮತ್ತು ಅಂಬರ್ ನಾಥ್ (ಥಾಣೆ) ಗಳಲ್ಲಿ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಕಾರ್ಯಾಚರಣೆಗೆ ಪ್ರಧಾನಿ ಚಾಲನೆ ನೀಡಿದರು. ಪದವಿ ಮತ್ತು ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸುವುದಲ್ಲದೆ, ಈ ಕಾಲೇಜುಗಳು ಜನರಿಗೆ ವಿಶೇಷ ತೃತೀಯ ಹಂತದ ಆರೋಗ್ಯ ರಕ್ಷಣೆಯನ್ನು ಸಹ ನೀಡುತ್ತವೆ.

ಭಾರತವನ್ನು 'ವಿಶ್ವದ ಕೌಶಲ್ಯ ರಾಜಧಾನಿ' ಯನ್ನಾಗಿ ಮಾಡುವ  ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ತರಬೇತಿಯೊಂದಿಗೆ ಉದ್ಯಮಕ್ಕೆ ಸಿದ್ಧವಾದ ಕಾರ್ಯಪಡೆಯನ್ನು ರಚಿಸುವ ಉದ್ದೇಶದಿಂದ ಪ್ರಧಾನಮಂತ್ರಿಯವರು ಮುಂಬೈಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಅನ್ನು ಉದ್ಘಾಟಿಸಿದರು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಸ್ಥಾಪಿಸಲಾದ ಇದು ಟಾಟಾ ಎಜುಕೇಶನ್ ಅಂಡ್ ಡೆವಲಪ್ಮೆಂಟ್ ಟ್ರಸ್ಟ್ ಮತ್ತು ಭಾರತ ಸರ್ಕಾರದ ನಡುವಿನ ಸಹಯೋಗವಾಗಿದೆ. ಮೆಕಾಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ, ಡೇಟಾ ಅನಾಲಿಟಿಕ್ಸ್, ಇಂಡಸ್ಟ್ರಿಯಲ್ ಆಟೋಮೇಷನ್ ಮತ್ತು ರೊಬೊಟಿಕ್ಸ್ ನಂತಹ ವಿಶೇಷ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಸಂಸ್ಥೆ ಯೋಜಿಸಿದೆ.

ಇದಲ್ಲದೆ, ಪ್ರಧಾನಮಂತ್ರಿಯವರು ಮಹಾರಾಷ್ಟ್ರದ ವಿದ್ಯಾ ಸಮೀಕ್ಷಾ ಕೇಂದ್ರವನ್ನು (ವಿಎಸ್ ಕೆ) ಉದ್ಘಾಟಿಸಿದರು. ವಿಎಸ್ಕೆ,  ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತಗಾರರಿಗೆ ಸ್ಮಾರ್ಟ್ ಉಪಸ್ಥಿತಿ, ಸ್ವಾಧ್ಯಾಯ ಮುಂತಾದ ಲೈವ್ ಚಾಟ್ಬಾಟ್ಗಳ ಮೂಲಕ ನಿರ್ಣಾಯಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಡೇಟಾಕ್ಕೆ ಪ್ರವೇಶವನ್ನು ಒದಗಿಸುತ್ತದೆ. ಇದು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಪೋಷಕರು ಮತ್ತು ರಾಜ್ಯದ ನಡುವಿನ ಸಂಬಂಧಗಳನ್ನು ಬಲಪಡಿಸಲು ಮತ್ತು ಸ್ಪಂದಿಸುವ ಬೆಂಬಲವನ್ನು ನೀಡಲು ಶಾಲೆಗಳಿಗೆ ಉತ್ತಮ ಗುಣಮಟ್ಟದ ಒಳನೋಟಗಳನ್ನು ನೀಡುತ್ತದೆ. ಇದು ಬೋಧನಾ ಅಭ್ಯಾಸಗಳು ಮತ್ತು ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚಿಸಲು ಕ್ಯುರೇಟೆಡ್ ಬೋಧನಾ ಸಂಪನ್ಮೂಲಗಳನ್ನು ಸಹ ಪೂರೈಸುತ್ತದೆ.

 

Click here to read full text speech

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian professionals flagbearers in global technological adaptation: Report

Media Coverage

Indian professionals flagbearers in global technological adaptation: Report
NM on the go

Nm on the go

Always be the first to hear from the PM. Get the App Now!
...
PM congratulates Indian contingent for their historic performance at the 10th Asia Pacific Deaf Games 2024
December 10, 2024

The Prime Minister Shri Narendra Modi today congratulated the Indian contingent for a historic performance at the 10th Asia Pacific Deaf Games 2024 held in Kuala Lumpur.

He wrote in a post on X:

“Congratulations to our Indian contingent for a historic performance at the 10th Asia Pacific Deaf Games 2024 held in Kuala Lumpur! Our talented athletes have brought immense pride to our nation by winning an extraordinary 55 medals, making it India's best ever performance at the games. This remarkable feat has motivated the entire nation, especially those passionate about sports.”