ದೇಶದಲ್ಲಿ ಮೊಟ್ಟಮೊದಲ ನದಿ ತೀರದ ಡಾಲ್ಫಿನ್ ಅಂದಾಜು ವರದಿಯನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ: ಒಟ್ಟು 6,327 ಡಾಲ್ಫಿನ್‌ಗಳಿರುವ ಅಂದಾಜು
ಜುನಾಗಢದಲ್ಲಿ ರಾಷ್ಟ್ರೀಯ ವನ್ಯಜೀವಿ ಚಿಕಿತ್ಸಾ ಕೇಂದ್ರಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ
2025ರಲ್ಲಿ 16 ನೇ ಏಷ್ಯಾ ವಲಯದ ಸಿಂಹಗಳ ಸಂಖ್ಯೆಗಳ ಅಂದಾಜು ಸಮೀಕ್ಷೆ ನಡೆಸಲಾಗುವುದು ಮತ್ತು ಕೊಯಮತ್ತೂರಿನ ಸ್ಯಾಕಾನ್ ನಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಶ್ರೇಷ್ಠತಾ ಕೇಂದ್ರ ಸ್ಥಾಪಿಸುವುದಾಗಿ ಪ್ರಧಾನಮಂತ್ರಿ ಪ್ರಕಟಿಸಿದರು
ಮಧ್ಯಪ್ರದೇಶದ ಗಾಂಧಿಸಾಗರ್ ವನ್ಯಜೀವಿ ತಾಣ ಮತ್ತು ಗುಜರಾತ್ ನ ಬನ್ನಿ ಹುಲ್ಲುಗಾವಲು ವಲಯದಲ್ಲಿ ಎರಡು ಚೀತಾ ಪರಿಚಯ ಕೇಂದ್ರಗಳ ವಿಸ್ತರಣಾ ಯೋಜನೆ ಪ್ರಾರಂಭಿಸುವುದಾಗಿ ಪ್ರಕಟಿಸಿದ ಪ್ರಧಾನಮಂತ್ರಿ
ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳನ್ನು ಬಲಪಡಿಸುವ ಸಲುವಾಗಿ, ಮೀನು ತಿನ್ನುವ ಮೊಸಳೆಗಳಿಗಾಗಿ ಹೊಸ ಯೋಜನೆ ಮತ್ತು ರಾಷ್ಟ್ರೀಯ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಸಂಕುಲ ಸಂರಕ್ಷಣಾ ಕ್ರಿಯಾ ಯೋಜನೆಯನ್ನು ಪ್ರಕಟಿಸಿದ ಪ್ರಧಾನಮಂತ್ರಿ
ಕಾಡಿನ ಬೆಂಕಿ ಮತ್ತು ಮಾನವ-ಪ್ರಾಣಿ ಸಂಘರ್ಷಗಳಂತಹ ಸಮಸ್ಯೆಗಳನ್ನು ಎದುರಿಸಲು ದೂರ ಸಂವೇದಿ ಮತ್ತು ಭೂ ಭೌಗೋಳಿಕ ಮ್ಯಾಪಿಂಗ್ ಮತ್ತು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಬಳಕೆಯ ಬಗ್ಗೆ ಗಮನಹರಿಸುವಂತೆ ಒತ್ತಿ ಹೇಳಿದ ಪ್ರಧಾನಮಂತ್ರಿ
ಸುಗಮ ಪ್ರವಾಸ ಮತ್ತು ವನ್ಯ ಜೀವಿ ಪ್ರವಾಸೋದ್ಯಮ ಸಂಪರ್ಕದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಜ್ಞಾನ ಮತ್ತು ಹಸ್ತಪ್ರತಿಗಳನ್ನು ಸಂಗ್ರಹಿಸಲು ವನ್ಯಜೀವಿ ಮಂಡಳಿ ಮತ್ತು ಪರಿಸರ ಸಚಿವಾಲಯಕ್ಕೆ ಪ್ರಧಾನಮಂತ್ರಿ ಸೂಚನೆ
ಸಿಂಹ ಮತ್ತು ಚಿರತೆ ಸಂರಕ್ಷಣೆಯಲ್ಲಿ ಗಿರ್ ಒಂದು ಅತ್ಯುತ್ತಮ ಯಶೋಗಾಥೆಯಾಗಿದ್ದು, ಇತರ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳಲ್ಲಿ ಬಳಸಲು ನಾವು ಈ ಸಾಂಪ್ರದಾಯಿಕ ಜ್ಞಾನವನ್ನು ಕೃತಕ ಬುದ್ದಿಮತ್ತೆ ಸಹಾಯದಿಂದ ದಾಖಲಿಸಬೇಕು: ಪ್ರಧಾನಮಂತ್ರಿ

ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭೇಟಿ ನೀಡಿದ್ದು, ಅಲ್ಲಿ ಅವರು ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ 7ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.  

ವನ್ಯಜೀವಿ ಸಂರಕ್ಷಣೆಯಲ್ಲಿ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಪರಿಶೀಲಿಸಿತು. ಹೊಸ ಸಂರಕ್ಷಿತ ಪ್ರದೇಶಗಳ ರಚನೆಯಲ್ಲಿನ ಸಾಧನೆಗಳು ಮತ್ತು ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಎಲಿಫೆಂಟ್, ಪ್ರಾಜೆಕ್ಟ್ ಸ್ನೋ ಲೆಪರ್ಡ್ ಮುಂತಾದ ನಿರ್ದಿಷ್ಟ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಡಾಲ್ಫಿನ್‌ಗಳು ಮತ್ತು ಏಷ್ಯಾ ವಲಯದ ಸಿಂಹಗಳ ಸಂರಕ್ಷಣಾ ಪ್ರಯತ್ನಗಳು ಮತ್ತು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲೈಯನ್ಸ್ ಸ್ಥಾಪನೆಯ ಬಗ್ಗೆಯೂ ಮಂಡಳಿಯಲ್ಲಿ ಚರ್ಚಿಸಲಾಯಿತು.

ಸಭೆಯ ಸಂದರ್ಭದಲ್ಲಿ ದೇಶದಲ್ಲಿ ಮೊಟ್ಟಮೊದಲ ನದಿ ತೀರದ ಡಾಲ್ಫಿನ್ ಅಂದಾಜು ವರದಿಯನ್ನು ಪ್ರಧಾನಮಂತ್ರಿ ಅವರು ಬಿಡುಗಡೆ ಮಾಡಿದ್ದು, ಒಟ್ಟು 6,327 ಡಾಲ್ಫಿನ್‌ಗಳಿರುವ ಅಂದಾಜು ಮಾಡಲಾಗಿದೆ. ಈ ಪ್ರಮುಖ ಪ್ರಯತ್ನವು ಎಂಟು ರಾಜ್ಯಗಳಾದ್ಯಂತ 28 ನದಿಗಳ ಸಮೀಕ್ಷೆಯನ್ನು ಒಳಗೊಂಡಿದೆ. 3150 ಮಾನವ ದಿನಗಳನ್ನು 8,500 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಸಂಚರಿಸಿತ್ತು. ಉತ್ತರ ಪ್ರದೇಶದಲ್ಲಿ ಇದು ಅತಿ ಹೆಚ್ಚು ದಾಖಲಾಗಿದ್ದು, ನಂತರದ ಸ್ಥಾನಗಳಲ್ಲಿ ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿವೆ.

 

ಡಾಲ್ಫೀನ್ ಗಳ ಸಂರಕ್ಷಣೆ ಕುರಿತು ಜನ ಜಾಗೃತಿ ಮೂಡಿಸಬೇಕು ಮತ್ತು ಸ್ಥಳೀಯ ಜನತೆ ಮತ್ತು ಗ್ರಾಮೀಣ ಸಮುದಾಯವನ್ನು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಡಾಲ್ಫೀನ್ ಆವಾಸ ಸ್ಥಾನಗಳಿಗೆ ಶಾಲಾ ಮಕ್ಕಳ ಪ್ರವಾಸವನ್ನು ಹಮ್ಮಿಕೊಳ್ಳುವಂತೆ ಪ್ರಧಾನಮಂತ್ರಿಯವರು ಕಿವಿ ಮಾತು ಹೇಳಿದರು.

ಜುನಾಗಢದಲ್ಲಿ ರಾಷ್ಟ್ರೀಯ ವನ್ಯಜೀವಿ ಚಿಕಿತ್ಸಾ ಕೇಂದ್ರಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದ್ದು, ಇದು ವನ್ಯಜೀವಿ ಆರೋಗ್ಯ ಮತ್ತು ರೋಗ ನಿರ್ವಹಣೆ ಕುರಿತಂತೆ ಸರ್ಕಾರದ ವಿವಿಧ ಆಯಾಮಗಳಿಗೆ ಸಂಬಂಧಪಟ್ಟಂತೆ ಪ್ರಮುಖ ತಾಣವಾಗಿ ಕಾರ್ಯನಿರ್ವಹಿಸಲಿದೆ.

ಏಷ್ಯಾ ವಲಯದ ಸಿಂಹಗಳ ಸಂಖ್ಯೆಗಳ ಅಂದಾಜುಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಅಂತಹ ಕೊನೆಯ ಕಸರತ್ತನ್ನು 2020ರಲ್ಲಿ ಕೈಗೊಳ್ಳಲಾಗಿತ್ತು. 2025ರಲ್ಲಿ ನಡೆಸಲಾಗುವ 16 ನೇ ಸಿಂಹಗಳ ಅಂದಾಜಿನ ಸಮೀಕ್ಷೆಯನ್ನು ಪ್ರಾರಂಭಿಸುವುದಾಗಿ ಪ್ರಧಾನಮಂತ್ರಿ ಅವರು ಘೋಷಿಸಿದರು.

 

ಏಷ್ಯಾ ವಲಯದ ಸಿಂಹಗಳು ಈಗ ನೈಸರ್ಗಿಕ ಪ್ರಸರಣದ ಮೂಲಕ ಬರ್ಡಾ ವನ್ಯಜೀವಿ ಅಭಯಾರಣ್ಯವನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡಿರುವುದನ್ನು ಪರಿಗಣಿಸಿ, ಬೇಟೆಯ ವೃದ್ಧಿ ಮತ್ತು ಇತರ ಆವಾಸಸ್ಥಾನ ಸುಧಾರಣಾ ಪ್ರಯತ್ನಗಳ ಮೂಲಕ ಬರ್ಡಾದಲ್ಲಿ ಸಿಂಹಗಳ ಸಂರಕ್ಷಣೆಯನ್ನು ಬೆಂಬಲಿಸಲಾಗುವುದು ಎಂದು ಪ್ರಧಾನಮಂತ್ರಿಯವರು ಘೋಷಿಸಿದರು. ವನ್ಯಜೀವಿ ಆವಾಸಸ್ಥಾನಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಪರಿಸರ ಪ್ರವಾಸೋದ್ಯಮದ ಮಹತ್ವವನ್ನು ಒತ್ತಿ ಹೇಳಿದ ಅವರು, ಪ್ರಯಾಣದ ಸುಲಭತೆ ಮತ್ತು ವನ್ಯಜೀವಿ ಪ್ರವಾಸೋದ್ಯಮಕ್ಕೆ ಸಂಪರ್ಕ ಇರಬೇಕು ಎಂದು ವಿಶೇಷವಾಗಿ ಅವರು ಪ್ರಸ್ತಾಪಿಸಿದರು.

ಮಾನವ-ವನ್ಯಜೀವಿ ಸಂಘರ್ಷದ ಪರಿಣಾಮಕಾರಿ ನಿರ್ವಹಣೆಗಾಗಿ, ಕೊಯಮತ್ತೂರಿನ ಸಾಕಾಮ್ (ಸಲೀಮ್ ಅಲಿ ಸೆಂಟರ್ ಫಾರ್ ಆರ್ನಿಥಾಲಜಿ ಅಂಡ್ ನ್ಯಾಚುರಲ್ ಹಿಸ್ಟರಿ) ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆ- ಕ್ಯಾಂಪಸ್‌ನಲ್ಲಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುವುದಾಗಿ ಪ್ರಧಾನಮಂತ್ರಿ ಘೋಷಿಸಿದರು. ಈ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಸುಧಾರಿತ ತಂತ್ರಜ್ಞಾನ, ಜಾಡುಪತ್ತೆ ವ್ಯವಸ್ಥೆ, ಮುನ್ನೆಚ್ಚರಿಕೆಗಳೊಂದಿಗೆ ಸಜ್ಜುಗೊಳಿಸುವಲ್ಲಿ ಬೆಂಬಲ ನೀಡುತ್ತದೆ. ಮಾನವ-ವನ್ಯಜೀವಿ ಸಂಘರ್ಷದ ತಾಣಗಳಲ್ಲಿ ಕಣ್ಗಾವಲು ಮತ್ತು ಒಳನುಸುಳುವಿಕೆ ಪತ್ತೆ ವ್ಯವಸ್ಥೆಗಳನ್ನು ಸೂಚಿಸಿ; ಮತ್ತು ಸಂಘರ್ಷ ತಗ್ಗಿಸುವ ಕ್ರಮಗಳನ್ನು ಕಾರ್ಯಗತಗೊಳಿಸಲು ಕ್ಷೇತ್ರ ವೃತ್ತಿಪರರು ಮತ್ತು ಸಮುದಾಯಗಳ ಸಾಮರ್ಥ್ಯವನ್ನು ನಿರ್ಮಿಸಲಾಗುವುದು ಎಂದರು.

ಕಾಡ್ಗಿಚ್ಚು ಮತ್ತು ಮಾನವ-ಪ್ರಾಣಿ ಸಂಘರ್ಷಗಳಂತಹ ಸಮಸ್ಯೆಗಳನ್ನು ಎದುರಿಸಲು ದೂರ ಸಂವೇದಿ ಮತ್ತು ಭೌಗೋಳಿಕ ಮ್ಯಾಪಿಂಗ್ ಮತ್ತು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಬಳಕೆಯ ಮಹತ್ವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಮಾನವ-ವನ್ಯಜೀವಿ ಸಂಘರ್ಷದ ಸವಾಲನ್ನು ಎದುರಿಸಲು ಭಾರತೀಯ ವನ್ಯಜೀವಿ ಸಂಸ್ಥೆಯು ಭಾಸ್ಕರಾಚಾರ್ಯ ರಾಷ್ಟ್ರೀಯ ಬಾಹ್ಯಾಕಾಶ ಅನ್ವಯಿಕೆಗಳು ಮತ್ತು ಭೌಗೋಳಿಕ ಸಂಸ್ಥೆ (ಬೈಸಾಗ್ - ಎನ್) ನೊಂದಿಗೆ ತೊಡಗಿಸಿಕೊಳ್ಳಬೇಕೆಂದು ಪ್ರಧಾನಮಂತ್ರಿಯವರು ಸಲಹೆ ನೀಡಿದರು.

ಕಾಡ್ಗಿಚ್ಚಿನ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಹೆಚ್ಚಿಸಲು, ವಿಶೇಷವಾಗಿ ಅತ್ಯಂತ ಸೂಕ್ಷ್ಮ ಸಂರಕ್ಷಿತ ಪ್ರದೇಶಗಳಲ್ಲಿ, ಮುನ್ಸೂಚನೆ, ಪತ್ತೆ, ತಡೆಗಟ್ಟುವಿಕೆ ಮತ್ತು ನಿಯಂತ್ರಣವನ್ನು ಕೇಂದ್ರೀಕರಿಸಲು, ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯ ಮೂಲಕ ಭಾರತೀಯ ಅರಣ್ಯ ಸಮೀಕ್ಷೆ, ಡೆಹ್ರಾಡೂನ್ ಮತ್ತು ಬಿಸಾಗ್-ಎನ್ ನಡುವೆ ಸಹಯೋಗಕ್ಕೆ ಪ್ರಧಾನಮಂತ್ರಿಯರು ಸಲಹೆ ನೀಡಿದರು.

 

ಮಧ್ಯಪ್ರದೇಶದ ಗಾಂಧಿಸಾಗರ್ ಅಭಯಾರಣ್ಯ ಮತ್ತು ಗುಜರಾತ್‌ನ ಬನ್ನಿ ಹುಲ್ಲುಗಾವಲುಗಳು ಸೇರಿದಂತೆ ಇತರ ಪ್ರದೇಶಗಳಿಗೆ ಚಿರತೆ ಪರಿಚಯ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ಪ್ರಧಾನಮಂತ್ರಿ ಘೋಷಿಸಿದರು.

ಹುಲಿ ಮೀಸಲು ಪ್ರದೇಶಗಳ ಹೊರಗೆ ಹುಲಿಗಳ ಸಂರಕ್ಷಣೆಗೆ ಒತ್ತು ನೀಡುವ ಯೋಜನೆಯನ್ನು ಪ್ರಧಾನಮಂತ್ರಿಯವರು ಘೋಷಿಸಿದರು. ಈ ಉಪಕ್ರಮವು ಸ್ಥಳೀಯ ಸಮುದಾಯಗಳೊಂದಿಗೆ ಸಹಬಾಳ್ವೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಈ ಮೀಸಲು ಪ್ರದೇಶಗಳ ಹೊರಗಿನ ಪ್ರದೇಶಗಳಲ್ಲಿ ಮಾನವ-ಹುಲಿ ಮತ್ತು ಇತರ ಸಹ-ಪರಭಕ್ಷಕಗಳ ಸಂಘರ್ಷಗಳನ್ನು ತಪ್ಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಮೀನು ತಿನ್ನುವ ಮೊಸಳೆಗಳು [ಘರಿಯಲ್‌ಗಳ] ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗುರುತಿಸಿ, ಅವುಗಳ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಪ್ರಧಾನಮಂತ್ರಿಯವರು ಘರಿಯಲ್‌ಗಳ ಸಂರಕ್ಷಣೆಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದರು.

ಪರಾಮರ್ಶೆ ಸಭೆಯಲ್ಲಿ, ಪ್ರಧಾನಮಂತ್ರಿಯವರು, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಭಾರತದ ವಿವಿಧ ಪ್ರದೇಶಗಳಿಂದ ಸಾಂಪ್ರದಾಯಿಕ ಜ್ಞಾನ ಮತ್ತು ಹಸ್ತಪ್ರತಿಗಳನ್ನು ಸಂಗ್ರಹಿಸಲು ಮಂಡಳಿ ಮತ್ತು ಪರಿಸರ ಸಚಿವಾಲಯಕ್ಕೆ ಸಲಹೆ ಮಾಡಿದರು. ಪ್ರಧಾನಮಂತ್ರಿಯವರು ವನ್ಯಜೀವಿ ಸಂರಕ್ಷಣಾ ಕಾರ್ಯತಂತ್ರ ಮತ್ತು ಸಚಿವಾಲಯದ ಭವಿಷ್ಯದ ಕ್ರಮಗಳಿಗಾಗಿ ಮಾರ್ಗಸೂಚಿ ಅಗತ್ಯತೆಯನ್ನು ಪ್ರಸ್ತಾಪಿಸಿದರು ಮತ್ತು ಭಾರತೀಯ ಸ್ಲಾತ್ ಬೇರ್, ಘರಿಯಾಲ್ ಮತ್ತು ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಕೆಲಸ ಮಾಡಲು ವಿವಿಧ ಕಾರ್ಯಪಡೆಗಳನ್ನು ರಚಿಸುವಂತೆ ಸೂಚಿಸಿದರು.

 

ಸಿಂಹ ಮತ್ತು ಚಿರತೆ ಸಂರಕ್ಷಣೆಯಲ್ಲಿ ಗಿರ್ ಒಂದು ಉತ್ತಮ ಯಶೋಗಾಥೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಸಾಂಪ್ರದಾಯಿಕ ಜ್ಞಾನವನ್ನು ಇತರ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳಲ್ಲಿ ಬಳಸಲು ಕೃತಕ ಬುದ್ದಿಮತ್ತೆ ಸಹಾಯದಿಂದ ದಾಖಲಿಸಬೇಕು ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯ ವಲಸೆ ಪ್ರಭೇದಗಳ ಕಾಡು ಪ್ರಾಣಿಗಳ ಸಂರಕ್ಷಣೆ ಸಮಾವೇಶ (ಸಿಎಂಎಸ್) ಅಡಿಯಲ್ಲಿ ಸಮನ್ವಯ ಘಟಕದಲ್ಲಿ ಸಹಕಾರವನ್ನು ಹೆಚ್ಚಿಸುವಂತೆ ಪ್ರಧಾನಮಂತ್ರಿಯವರು ಸೂಚಿಸಿದರು.

ಸಂರಕ್ಷಣೆಯಲ್ಲಿ, ವಿಶೇಷವಾಗಿ ಸಮುದಾಯ ಮೀಸಲು ಸ್ಥಾಪನೆಯ ಮೂಲಕ ಸ್ಥಳೀಯ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಕಳೆದ ದಶಕದಲ್ಲಿ, ಭಾರತವು ಸಮುದಾಯ ಮೀಸಲುಗಳ ಸಂಖ್ಯೆಯಲ್ಲಿ ಆರು ವೃದ್ಧಿಸಿದೆ. ವನ್ಯಜೀವಿ ಸಂರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಸೇರಿದಂತೆ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಅರಣ್ಯ ಪ್ರದೇಶಗಳಲ್ಲಿನ ಔಷಧೀಯ ಸಸ್ಯಗಳ ಸಂಶೋಧನೆ ಮತ್ತು ದಾಖಲೀಕರಣದ ಬಗ್ಗೆಯೂ ಪ್ರಧಾನಮಂತ್ರಿಯವರು ಸಲಹೆ ನೀಡಿದರು. ಇದು ಪ್ರಾಣಿಗಳ ಆರೋಗ್ಯ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಾಗತಿಕ ಮಟ್ಟದಲ್ಲಿ ಪ್ರಾಣಿಗಳ ಆರೋಗ್ಯ ನಿರ್ವಹಣೆಗಾಗಿ ಸಸ್ಯ ಆಧಾರಿತ ಔಷಧ ವ್ಯವಸ್ಥೆಗಳ ಬಳಕೆಯನ್ನು ಉತ್ತೇಜಿಸುವ ಸಾಧ್ಯತೆಗಳನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.

ಸಭೆಯ ನಂತರ, ಪ್ರಧಾನಮಂತ್ರಿಯವರು ಅರಣ್ಯ ಸಿಬ್ಬಂದಿಯ ಚಲನಶೀಲತೆಯನ್ನು ಹೆಚ್ಚಿಸಲು ಮೋಟಾರ್ ಸೈಕಲ್‌ಗಳಿಗೆ ಹಸಿರು ನಿಶಾನೆ ತೋರಿದರು. ಅವರು ಗಿರ್‌ನಲ್ಲಿ ಮುಂಚೂಣಿ ಸಿಬ್ಬಂದಿ, ಪರಿಸರ ಮಾರ್ಗದರ್ಶಕರು ಮತ್ತು ಜಾಡುಪತ್ತೆಗಾರರು ಸೇರಿದಂತೆ ಕ್ಷೇತ್ರ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions