ವಿಕಸಿತ ಭಾರತದ ದೃಷ್ಟಿಕೋನವು ಪ್ರತಿಯೊಂದು ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಹಳ್ಳಿಯ ಸಾಮೂಹಿಕ ಸಂಕಲ್ಪವಾಗಬೇಕು: ಪ್ರಧಾನಮಂತ್ರಿ
ಭಾರತದ 70 ಕೋಟಿ ಯುವಜನರನ್ನು ದೇಶದ ಆಸ್ತಿ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಈ ಜನಸಂಖ್ಯಾ ಲಾಭವನ್ನು ಅಭಿವೃದ್ಧಿಯ ಲಾಭವಾಗಿ ಪರಿವರ್ತಿಸಲು ರಾಜ್ಯಗಳಿಗೆ ಕರೆ ನೀಡಿದರು
ಯುವಕರು ಮತ್ತು ಎಂ ಎಸ್‌ ಎಂ ಇ ಗಳಿಗೆ ಅವಕಾಶಗಳನ್ನು ಸೃಷ್ಟಿಸಲು ಮತ್ತು ಭಾರತವು ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿರುವ ದೇಶಗಳಿಂದ ಹೂಡಿಕೆಗಳನ್ನು ಆಕರ್ಷಿಸಲು ರಾಜ್ಯಗಳಿಗೆ ಪ್ರಧಾನಮಂತ್ರಿ ಕರೆ
‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯನ್ನು ಬಲಪಡಿಸಲು ಮತ್ತು ರಕ್ಷಣಾ ಉತ್ಪಾದನಾ ವಲಯದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ರಾಜ್ಯಗಳಿಗೆ ಪ್ರಧಾನಮಂತ್ರಿ ಒತ್ತಾಯ
ಎಐ (ಕೃತಕ ಬುದ್ಧಿಮತ್ತೆ) ಅನ್ನು ಒಂದು ಅವಕಾಶವಾಗಿ ನೋಡಬೇಕು ಮತ್ತು ಜನರಿಗೆ ಭವಿಷ್ಯದ ಸಿದ್ಧ ಕೌಶಲ್ಯಗಳನ್ನು ಕಲಿಸಬೇಕು: ಪ್ರಧಾನಮಂತ್ರಿ
ಮಾದಕ ದ್ರವ್ಯ ವ್ಯಸನ ಮತ್ತು ಸೈಬರ್ ವಂಚನೆಯಂತಹ ಸಾಮಾಜಿಕ ಸವಾಲುಗಳನ್ನು ಎದುರಿಸಲು ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ
‘ಎಲ್ ನಿನೊ’ ದಿಂದ ಉಂಟಾಗುವ ಆತಂಕಗಳ ಕಡೆಗೆ ಗಮನ ಸೆಳೆದ ಪ್ರಧಾನಮಂತ್ರಿ, ನೀರನ್ನು ಸಂರಕ್ಷಿಸಲು ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ರಾಜ್ಯಗಳಿಗೆ ಮನವಿ
ಅಧಿಕಾರಾವಧಿಯಲ್ಲಿ 12 ವರ್ಷಗಳನ್ನು ಪೂರೈಸಿದ ಪ್ರಧಾನಮಂತ್ರಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿಗಳು/ಲೆಫ್ಟಿನೆಂಟ್ ಗವರ್ನರ್‌ ಗಳು/ಆಡಳಿತಾಧಿಕಾರಿಗಳು
ಜಾಗತಿಕ ಭೌಗೋಳಿಕ-ರಾಜಕೀಯ ಬಿಕ್ಕಟ್ಟನ್ನು ಎದುರಿಸಲು ಮತ್ತು ಭಾರತದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಕೇಂದ್ರದೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ ರಾಜ್ಯಗಳು
ಸಭೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳು ಭಾಗಿ; ಮೊದಲ ಬಾರಿಗೆ ಎಲ್ಲಾ 28 ರಾಜ್ಯಗಳ ಮುಖ್ಯಮಂತ್ರಿಗಳ ಭಾಗಿ
ಸಭೆಯ ಆಶಯಃ ವಿಕಸಿತ ಭಾರತ@2047 ಕ್ಕಾಗಿ ಸರ್ವರನ್ನೂ ಒಳಗೊಂಡ ಮಾನವ ಅಭಿವೃದ್ಧಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು ನಡೆದ ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವರ್ಷದ ಆಶಯ ‘ವಿಕಸಿತ ಭಾರತ@2047 ಕ್ಕಾಗಿ ಸರ್ವರನ್ನೂ ಒಳಗೊಂಡ ಮಾನವ ಅಭಿವೃದ್ಧಿ’ ಎಂಬುದಾಗಿತ್ತು. ಈ ಸಭೆಯಲ್ಲಿ 28 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ ಗಳು ಮತ್ತು ಆಡಳಿತಾಧಿಕಾರಿಗಳು ಭಾಗವಹಿಸಿದ್ದರು. ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಎಲ್ಲಾ 28 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದು ಇದೇ ಮೊದಲ ಬಾರಿಯಾಗಿದೆ.

ಅನೇಕ ಪ್ರಮುಖ ಆರ್ಥಿಕತೆಗಳು ಅನಿಶ್ಚಿತತೆ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ, ಭಾರತದ ಬೆಳವಣಿಗೆಯ ಕಥೆಯು ಜಗತ್ತಿಗೆ ಸ್ಪೂರ್ತಿ ನೀಡುತ್ತಾ ಮುಂದುವರಿದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾವಲಂಬನೆಯತ್ತ ರಾಷ್ಟ್ರದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಅವರು ವಿವರಿಸಿದರು ಮತ್ತು ವಿಶೇಷವಾಗಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಜಾಗತಿಕ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮತ್ತು ಅನುಷ್ಠಾನಗೊಳಿಸುವ ಮಹತ್ವವನ್ನು ಒತ್ತಿ ಹೇಳಿದರು.

ಸಹಕಾರ ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ವಿಕಸಿತ ಭಾರತದ ದೃಷ್ಟಿಕೋನವು ಪ್ರತಿಯೊಂದು ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಹಳ್ಳಿಯ ಸಾಮೂಹಿಕ ಸಂಕಲ್ಪವಾಗಬೇಕು ಎಂದು ಅವರು ಹೇಳಿದರು.

ಭಾರತದ ಜನಸಂಖ್ಯೆಯ ಶಕ್ತಿಯನ್ನು ಎತ್ತಿಹಿಡಿದ ಪ್ರಧಾನಮಂತ್ರಿಯವರು, ಯುವಕರೇ ದೇಶದ ದೊಡ್ಡ ಆಸ್ತಿಯಾಗಿದ್ದಾರೆ, ಸುಮಾರು 70 ಕೋಟಿ ಭಾರತೀಯರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಹೇಳಿದರು. ಇದನ್ನು ‘ಜನಸಂಖ್ಯಾ ಲಾಭ’ ಎಂದು ಕರೆದ ಅವರು, ಯುವಕರನ್ನು ಭವಿಷ್ಯದ ಅವಕಾಶಗಳು ಮತ್ತು ಸವಾಲುಗಳಿಗೆ ಸಿದ್ಧಗೊಳಿಸುವ ಶಿಕ್ಷಣ, ಕೌಶಲ್ಯ ಮತ್ತು ಸಾಮರ್ಥ್ಯ ವೃದ್ಧಿ ಉಪಕ್ರಮಗಳ ಮೂಲಕ ಇದನ್ನು ‘ಅಭಿವೃದ್ಧಿಯ ಲಾಭ’ವನ್ನಾಗಿ ಪರಿವರ್ತಿಸಲು ಗಮನಹರಿಸುವಂತೆ ರಾಜ್ಯಗಳಿಗೆ ಕರೆ ನೀಡಿದರು.

ಹಲವಾರು ದೇಶಗಳೊಂದಿಗೆ ಭಾರತವು ಇತ್ತೀಚೆಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಯುವಕರು ಮತ್ತು ಎಂ ಎಸ್‌ ಎಂ ಇ ಗಳಿಗೆ ಅವಕಾಶಗಳನ್ನು ಸೃಷ್ಟಿಸಲು ಮತ್ತು ಈ ಒಪ್ಪಂದಗಳಿಂದ ಬರುವ ಪ್ರಯೋಜನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪಾಲುದಾರರನ್ನು ಸಜ್ಜುಗೊಳಿಸಲು ರಾಜ್ಯಗಳಿಗೆ ಕರೆ ನೀಡಿದರು. ಪಾಲುದಾರ ದೇಶಗಳಿಂದ ಹೂಡಿಕೆಗಳನ್ನು ಸಕ್ರಿಯವಾಗಿ ಆಕರ್ಷಿಸುವಂತೆಯೂ ಅವರು ರಾಜ್ಯಗಳಿಗೆ ಕರೆ ನೀಡಿದರು.

ಮಹಿಳಾ ನೇತೃತ್ವದ ಅಭಿವೃದ್ಧಿಗೆ ಒತ್ತು ನೀಡಿದ ಪ್ರಧಾನಮಂತ್ರಿಯವರು, ‘ಲಕ್ಷಾಧಿಪತಿ ದೀದಿ’ಯರ ಸಂಖ್ಯೆಯನ್ನು 3 ಕೋಟಿಯಿಂದ 6 ಕೋಟಿಗೆ ಹೆಚ್ಚಿಸಲು ಕೆಲಸ ಮಾಡುವಂತೆ ರಾಜ್ಯಗಳಿಗೆ ಒತ್ತಾಯಿಸಿದರು ಮತ್ತು ನಾರಿ ಶಕ್ತಿಗೆ ಸುರಕ್ಷಿತ ಮತ್ತು ಭದ್ರತೆಯ ವಾತಾವರಣವನ್ನು ಖಚಿತಪಡಿಸುವ ಮಹತ್ವವನ್ನು ಒತ್ತಿಹೇಳಿದರು.

ರಾಜ್ಯಗಳು ‘ಒಂದು ಜಿಲ್ಲೆ ಒಂದು ಉತ್ಪನ್ನ’ (ಒಡಿಒಪಿ) ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಮತ್ತು ಅದರ ಸುತ್ತ ರಫ್ತು ಆಧಾರಿತ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಮಂತ್ರಿ ಒತ್ತಾಯಿಸಿದರು. ರಕ್ಷಣಾ ಉತ್ಪಾದನೆಯನ್ನು ಭಾರತವು ತನ್ನದೇ ಆದ ವಿಶಿಷ್ಟ ಗುರುತನ್ನು ಸ್ಥಾಪಿಸುತ್ತಿರುವ ಒಂದು ಉದಯೋನ್ಮುಖ ವಲಯ ಎಂದು ಗುರುತಿಸಿದ ಅವರು, ಅದರ ಬೆಳವಣಿಗೆಯಿಂದ ಬರುವ ಅವಕಾಶಗಳನ್ನು ಬಳಸಿಕೊಳ್ಳಲು ನೀತಿಗಳನ್ನು ರೂಪಿಸುವಂತೆ ರಾಜ್ಯಗಳಿಗೆ ಕರೆ ನೀಡಿದರು.

ಮಾದಕ ದ್ರವ್ಯ ವ್ಯಸನ ಮತ್ತು ಸೈಬರ್ ವಂಚನೆಯಂತಹ ಸಾಮಾಜಿಕ ಸವಾಲುಗಳನ್ನು ತಡೆಗಟ್ಟುವ ಕ್ರಮಗಳು, ಜಾಗೃತಿ ಅಭಿಯಾನಗಳು ಮತ್ತು ಪರಿಣಾಮಕಾರಿ ಆಡಳಿತದ ಮೂಲಕ ಎದುರಿಸಲು ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು.

‘ಎಲ್ ನಿನೊ’ ಪರಿಸ್ಥಿತಿಗಳಿಂದ ಉಂಟಾಗುವ ಆತಂಕಗಳ ಕಡೆಗೂ ಗಮನ ಸೆಳೆದ ಪ್ರಧಾನಮಂತ್ರಿಯವರು, ಜಲ ಸಂರಕ್ಷಣೆಯನ್ನು ಉತ್ತೇಜಿಸಲು ಮತ್ತು ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸಲು ರಾಜ್ಯಗಳಿಗೆ ಮನವಿ ಮಾಡಿದರು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರು 11 ಲಕ್ಷ ಟನ್ ಸಾವಯವ ಗೊಬ್ಬರವನ್ನು ಖರೀದಿಸಿರುವುದು ಸುಸ್ಥಿರ ಕೃಷಿಯ ಮೇಲಿನ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದಲ್ಲಿ, ವಿಶೇಷವಾಗಿ ಮಹತ್ವಾಕಾಂಕ್ಷಿ ಜಿಲ್ಲೆಗಳ ನಿಯತಾಂಕಗಳ ಮೂಲಕ ಪ್ರಗತಿಯನ್ನು ಮೌಲ್ಯಮಾಪನ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿಹೇಳಿದರು. ಇದೇ ಮಾದರಿಯಲ್ಲಿ, ಕೃಷಿ ಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರಲು 100 ಜಿಲ್ಲೆಗಳನ್ನು ಗುರುತಿಸಬೇಕು ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು. ಈ ನಿಟ್ಟಿನಲ್ಲಿ ರಾಜ್ಯಗಳು ಮುನ್ನಡೆ ಸಾಧಿಸಬೇಕು, ಇದರಿಂದ ಮಹತ್ವಾಕಾಂಕ್ಷಿ ವಿಧಾನದ ಮೂಲಕ ಅದ್ಭುತ ಬದಲಾವಣೆಯನ್ನು ಸಾಧಿಸಬಹುದು ಎಂದು ಅವರು ಹೇಳಿದರು.

ವಿಕಸಿತ ಭಾರತ@2047 ರ ದೃಷ್ಟಿಕೋನವನ್ನು ಸಾಧಿಸಲು ನಿರಂತರ ನಿಗಾ ವಹಿಸುವ ವ್ಯವಸ್ಥೆ ಹಾಗೂ ನಿರ್ದಿಷ್ಟ ಗುರಿ ಹೊಂದಿದ 100 ದಿನಗಳ ಮತ್ತು ಐದು ವರ್ಷಗಳ ಗುರಿಗಳ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿಹೇಳಿದರು.

ಹೂಡಿಕೆಯನ್ನು ಆಕರ್ಷಿಸಲು ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಮೂಲಸೌಕರ್ಯಗಳ ಮಹತ್ವವನ್ನು ಎತ್ತಿಹಿಡಿದ ಅವರು, ಬ್ರ್ಯಾಂಡಿಂಗ್, ಸುಲಭ ವ್ಯವಹಾರ ಮತ್ತು ಡೇಟಾ ಸೆಂಟರ್‌ ಗಳು ಹಾಗೂ ಕೃತಕ ಬುದ್ಧಿಮತ್ತೆಯಂತಹ ವಲಯಗಳಲ್ಲಿ ಉದಯೋನ್ಮುಖ ಅವಕಾಶಗಳತ್ತ ಗಮನ ಹರಿಸುವಂತೆ ರಾಜ್ಯಗಳಿಗೆ ಒತ್ತಾಯಿಸಿದರು. ಎಐ ಅನ್ನು ಒಂದು ಅವಕಾಶವಾಗಿ ನೋಡಬೇಕು ಎಂದು ಒತ್ತಿಹೇಳಿದ ಅವರು, ಭವಿಷ್ಯದ ಆರ್ಥಿಕತೆಗೆ ಅಗತ್ಯವಿರುವ ಕೌಶಲ್ಯಗಳನ್ನು ಜನರಿಗೆ ಕಲಿಸಲು ಹೆಚ್ಚಿನ ಪ್ರಯತ್ನಗಳನ್ನು ಕೈಗೊಳ್ಳಲು ಕರೆ ನೀಡಿದರು.

ಮುಖ್ಯಮಂತ್ರಿಗಳು/ಲೆಫ್ಟಿನೆಂಟ್ ಗವರ್ನರ್‌ ಗಳು/ಆಡಳಿತಾಧಿಕಾರಿಗಳು ಮೋದಿಯವರು ಪ್ರಧಾನಮಂತ್ರಿಯಾಗಿ 12 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದಿಸಿದರು. ಜಾಗತಿಕ ಭೌಗೋಳಿಕ-ರಾಜಕೀಯ ಬಿಕ್ಕಟ್ಟನ್ನು ಎದುರಿಸಲು, ಇಂಧನ ಅಗತ್ಯತೆಗಳಿಗೆ ಸಂಬಂಧಿಸಿದಂತೆ ಭಾರತದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಮತ್ತು ದೇಶದ ಬೆಳವಣಿಗೆಯ ಪಥವನ್ನು ಉಳಿಸಿಕೊಳ್ಳಲು ಕೇಂದ್ರದೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಿದರು.

ಚರ್ಚೆಗಳು ರಚನಾತ್ಮಕವಾಗಿದ್ದವು ಮತ್ತು ರಾಜ್ಯಗಳ ಆಕಾಂಕ್ಷೆಗಳು, ಭರವಸೆಗಳು, ಅನುಭವಗಳು, ಉತ್ತಮ ಪದ್ಧತಿಗಳು ಹಾಗೂ ಸವಾಲುಗಳನ್ನು ಪ್ರತಿಬಿಂಬಿಸಿದವು ಎಂದು ಪ್ರಧಾನಮಂತ್ರಿ ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಮುಖ್ಯಮಂತ್ರಿಗಳು/ಲೆಫ್ಟಿನೆಂಟ್ ಗವರ್ನರ್‌ ಗಳು/ಆಡಳಿತಾಧಿಕಾರಿಗಳಿಗೆ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಸಿದರು ಹಾಗೂ ಸಹಕಾರ, ನಾವೀನ್ಯತೆ ಮತ್ತು ಅಭಿವೃದ್ಧಿಗೆ ಸಮಾನ ಬದ್ಧತೆಯ ಮೂಲಕ ನಾವೆಲ್ಲರೂ ಒಟ್ಟಾಗಿ, 2047ರ ವೇಳೆಗೆ ವಿಕಸಿತ ಭಾರತದ ಕಡೆಗೆ ಭಾರತದ ಪ್ರಯಾಣವನ್ನು ವೇಗಗೊಳಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indias wind turbine exports jumped 50% in FY26, further growth expected: IWTMA CEO

Media Coverage

Indias wind turbine exports jumped 50% in FY26, further growth expected: IWTMA CEO
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಸೆಪ್ಟೆಂಬರ್ 2026
September 09, 2026

Viksit Bharat Express: How PM Modi’s Reforms Are Supercharging India’s Economy and Infrastructure