ಶೇರ್
 
Comments
PM Modi applauds doctors, Medical Staff, Para-Medical Staff, sanitation workers in hospitals and everyone associated with Corona Vaccine
PM Modi complements Corona warriors for their authentic communication about the pandemic and vaccination
World's largest vaccination programme is going on in our country today: PM Modiಹರ್ ಹರ್ ಮಹಾದೇವ್!

ಬನಾರಸ್‌ ನ ಸೇವಕನಿಂದ ಬನಾರಸ್‌ ನ ಎಲ್ಲರಿಗೂ ಪ್ರಣಾಮಗಳು! ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪ್ಯಾರಾ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಗಳಲ್ಲಿ ಪ್ರಮುಖ ಕೆಲಸ ಮಾಡುವ, ಸ್ವಚ್ಛ ತೆಯನ್ನು ಕಾಪಾಡುವ ಸ್ನೇಹಿತರು ಮತ್ತು ಸಹೋದರ ಸಹೋದರಿಯರು, ಕೊರೊನಾ ಲಸಿಕೆಗೆ ಸಂಬಂಧಿಸಿದ ಎಲ್ಲಾ ಜನರು ಮತ್ತು ಕೊರೊನಾ ಲಸಿಕೆ ಪಡೆದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಸಮಯದಲ್ಲಿ ನಾನು ನಿಮ್ಮ ನಡುವೆ ಇರಬೇಕಾಗಿತ್ತು, ಆದರೆ ಕೆಲವು ಕಾರಣಗಳಿಂದಾಗಿ, ನಾವು ವರ್ಚುವಲ್‌ ಆಗಿ ಭೇಟಿಯಾಗಬೇಕಾಯಿತು. ಆದರೆ ನಾನು ಯಾವಾಗಲೂ ಕಾಶಿಗಾಗಿ ನಾನು ಏನು ಬೇಕಾದರೂ ಮಾಡಲು ಪ್ರಯತ್ನಿಸುತ್ತೇನೆ ಎನ್ನುವುದು ನಿಜ.

ಸ್ನೇಹಿತರೇ,

2021 ವರ್ಷವು ಬಹಳ ಶುಭ ನಿರ್ಣಯಗಳೊಂದಿಗೆ ಪ್ರಾರಂಭವಾಗಿದೆ. ಕಾಶಿಯ ಬಗ್ಗೆ ಕೇವಲ ಕಾಶಿಯ ಸ್ಪರ್ಶವು ಶುಭ ಹಾರೈಕೆಗಳನ್ನು ಪರಿಪೂರ್ಣತೆಗೆ ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಈ ಸಾಧನೆಯ ಫಲವೇ ಇಂದು ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವು ನಮ್ಮ ದೇಶದಲ್ಲಿ ನಡೆಯುತ್ತಿದೆ. ಮತ್ತು, ಮೊದಲ ಎರಡು ಹಂತಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇಂದು, ದೇಶದಲ್ಲಿ ಅಂತಹ ವಾತಾವರಣ ಮತ್ತು ಪ್ರವೃತ್ತಿ ಇದ್ದು, ಅದು ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅದೂ ಒಂದು ಅಲ್ಲ, ಎರಡು ‘ಮೇಡ್ ಇನ್ ಇಂಡಿಯಾʼ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಂದು, ದೇಶದ ವ್ಯವಸ್ಥೆಯು ಹೇಗಿದೆಯೆಂದರೆ , ಲಸಿಕೆಗಳು ದೇಶದ ಮೂಲೆ ಮತ್ತು ಮೂಲೆಯನ್ನು ತ್ವರಿತವಾಗಿ ತಲುಪುವುದು ಮಾತ್ರವಲ್ಲದೆ, ವಿಶ್ವದ ಈ ಮಹತ್ತರವಾದ ಅಗತ್ಯದಲ್ಲಿ ಭಾರತವು ಸಂಪೂರ್ಣವಾಗಿ ಆತ್ಮ ನಿರ್ಭರವಾಗಿದೆ. ಅಷ್ಟೇ ಅಲ್ಲ, ಭಾರತವೂ ಅನೇಕ ದೇಶಗಳಿಗೆ ಸಹಾಯ ಮಾಡುತ್ತಿದೆ.

ಸ್ನೇಹಿತರೇ,

ಕಳೆದ ಆರು ವರ್ಷಗಳಲ್ಲಿ, ಬನಾರಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವೈದ್ಯಕೀಯ ಮೂಲಸೌಕರ್ಯದಲ್ಲಿನ ಪ್ರಮುಖ ಬದಲಾವಣೆಯು ಕೊರೊನಾ ಕಾಲದಲ್ಲಿ ಇಡೀ ಪೂರ್ವಾಂಚಲ ಪ್ರದೇಶಕ್ಕೆ ಸಹಾಯಕವಾಗಿದೆ. ಈಗ ಬನಾರಸ್ ಲಸಿಕೆಗಾಗಿ ಅದೇ ವೇಗದಲ್ಲಿ ಸಾಗುತ್ತಿದೆ. ಮೊದಲ ಹಂತದಲ್ಲಿ 20 ಸಾವಿರಕ್ಕೂ ಹೆಚ್ಚು ಆರೋಗ್ಯ ವೃತ್ತಿಪರರಿಗೆ ಬೆನಾರಸ್‌ನಲ್ಲಿ ಲಸಿಕೆ ನೀಡಲಾಗುವುದು ಎಂದು ನನಗೆ ತಿಳಿಸಲಾಗಿದೆ. ಇದಕ್ಕಾಗಿ 15 ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಸಂಪೂರ್ಣ ಅಭಿಯಾನಕ್ಕಾಗಿ ನಾನು ಎಲ್ಲಾ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ, ಯೋಗಿಜಿ ಸರ್ಕಾರವನ್ನು ಅಭಿನಂದಿಸುತ್ತೇನೆ, ಎಲ್ಲಾ ಇಲಾಖೆಯ ಸಹೋದ್ಯೋಗಿಗಳನ್ನು ಅಭಿನಂದಿಸುತ್ತೇನೆ.

 

ಸ್ನೇಹಿತರೇ,

ಬನಾರಸ್‌ನಲ್ಲಿ ನಿಮ್ಮ ಅನುಭವಗಳೇನು? ವ್ಯಾಕ್ಸಿನೇಷನ್‌ನಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿರುವಿರಾ? ಇದೆಲ್ಲವನ್ನೂ ತಿಳಿದುಕೊಳ್ಳಲು ನಾನು ಇಂದು ನಿಮ್ಮ ನಡುವೆ ಬಂದಿದ್ದೇನೆ. ನಾವು ವರ್ಚುವಲ್‌ ಆಗಿ ಮಾತನಾಡೋಣ. ನಾನು ಇಂದು ಯಾವುದೇ ಭಾಷಣ ಮಾಡಲು ಬಂದಿಲ್ಲ. ಕಾಶಿ ಮತ್ತು ಅದರ ಜನರ ಪ್ರತಿಕ್ರಿಯೆ ಇತರ ಪ್ರದೇಶಗಳಲ್ಲಿ ನನಗೆ ತುಂಬಾ ಉಪಯುಕ್ತವಾಗಲಿದೆ ಎಂದು ನಾನು ಭಾವಿಸುತ್ತೇನೆ. ಎಲ್ಲಾ ರೀತಿಯ ಜನರು ಇಲ್ಲಿದ್ದಾರೆ - ಲಸಿಕೆ ಹಾಕಿಸಿಕೊಂಡವರು ಮತ್ತು ಲಸಿಕೆ ಅಭಿಯಾನದಲ್ಲಿ ತೊಡಗಿರುವವರು. ಮತ್ತು ವಾರಣಾಸಿ ಜಿಲ್ಲಾ ಮಹಿಳಾ ಆಸ್ಪತ್ರೆಯ ಮೇಟ್ರನ್‌ ಸಿಸ್ಟರ್ ಪುಷ್ಪಾಜಿ ಅವರು ಮೊದಲು ನನ್ನೊಂದಿಗೆ ಮಾತನಾಡುತ್ತಾರೆ ಎಂದು ನನಗೆ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ: ನಮಸ್ತೆ, ಪುಷ್ಪಾಜಿ.

ಪುಷ್ಪಾ ದೇವಿ: ಮಾನ್ಯ ಪ್ರಧಾನಮಂತ್ರಿಯವರಿಗೆ ಪ್ರಣಾಮಗಳು. ನನ್ನ ಹೆಸರು ಪುಷ್ಪಾ ದೇವಿ. ಸರ್, ನಾನು ಕಳೆದ ಒಂದು ವರ್ಷದಿಂದ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಮೇಟ್ರನ್‌ ಆಗಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನಿ ನರೇಂದ್ರ ಮೋದಿ: ಒಳ್ಳೆಯದು. ಮೊದಲನೆಯದಾಗಿ, ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡವರಲ್ಲಿ ನೀವೂ ಇದ್ದೀರಿ ಎಂದು ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಜನರು ಕೊರೊನಾಗೆ ಹೆದರುತ್ತಿದ್ದ ಸಮಯವಿತ್ತು. ಈಗ, ನಾನು ಪುಷ್ಪಾಜಿಯಿಂದ ಕೇಳಲು ಬಯಸುತ್ತೇನೆ. ನಾನು ಕೂಡ ಕೇಳುತ್ತಿದ್ದೇನೆ ಮತ್ತು ದೇಶವೂ ಕೂಡ.

ಪುಷ್ಪಾ ದೇವಿ: ಮೊದಲನೆಯದಾಗಿ, ನನ್ನ ಎಲ್ಲ ಆರೋಗ್ಯ ಸಿಬ್ಬಂದಿಯ ಪರವಾಗಿ, ಕೊರೊನಾ ಲಸಿಕೆಗಳಿಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಏಕೆಂದರೆ ನೀವು ಆರೋಗ್ಯ ಇಲಾಖೆಯನ್ನು ಮೊದಲ ಹಂತದಲ್ಲಿ ವ್ಯಾಕ್ಸಿನೇಷನ್ಗಾಗಿ ಆಯ್ಕೆ ಮಾಡಿಕೊಂಡಿದ್ದೀರಿ ಮತ್ತು ಜನವರಿ 16 ರಂದು ಲಸಿಕೆ ಹಾಕಿಸಿಕೊಂಡ ಮೊದಲನೆಯವಳು ನಾನು. ನಾನು ಲಸಿಕೆ ಹಾಕಿಸಿಕೊಂಡಿರುವ ಅದೃಷ್ಟಶಾಲಿಯೆಂದುಕೊಂಡಿದ್ದೇನೆ ಮತ್ತು ನಾನು, ನನ್ನ ಕುಟುಂಬ ಮತ್ತು ಸಮಾಜವು ಸುರಕ್ಷಿತವಾಗಿರುವುದು ಎಂದು ನಾನು ಭಾವಿಸುತ್ತೇನೆ. ಇದಲ್ಲದೆ, ನಾನು ಶುಶ್ರೂಷಾ ಸಿಬ್ಬಂದಿ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ವ್ಯಾಕ್ಸಿನೇಷನ್ಗಾಗಿ ವಿನಂತಿಸುತ್ತಿದ್ದೇನೆ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ನಾನು ಅವರಿಗೆ ಹೇಳುತ್ತಿದ್ದೇನೆ. ಇದು ಇತರ ಯಾವುದೇ ಚುಚ್ಚುಮದ್ದಿನಂತೆಯೇ ಇರುತ್ತದೆ. ಆದ್ದರಿಂದ, ನೀವು, ನಿಮ್ಮ ಕುಟುಂಬ ಮತ್ತು ಸಮಾಜವು ಸುರಕ್ಷಿತವಾಗಿರಲು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಬೇಕು ಎನ್ನುವುದು ನನ್ನ ಮನವಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ: 'ಮೇಡ್ ಇನ್ ಇಂಡಿಯಾ' ಲಸಿಕೆಗಾಗಿ ಇದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ, ಆದರೆ ಇದರ ಯಶಸ್ಸಿಗೆ ಕಾರಣ ನಿಮ್ಮಂತಹ ಲಕ್ಷಾಂತರ ಯೋಧರು ಮತ್ತು 130 ಕೋಟಿ ದೇಶವಾಸಿಗಳು. ನೀವು ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ನೀವು ಹೇಳಿದ್ದರಿಂದ, ಇದೊಂದು ಉತ್ತಮ ಅನುಭವವಿದೆ ಎಂದು ನೀವು ಯಾರಿಗಾದರೂ ಅತ್ಯಂತ ವಿಶ್ವಾಸದಿಂದ ಹೇಳಬಲ್ಲಿರಾ?

ಪುಷ್ಪಾ ದೇವಿ: ಹೌದು.

ಪ್ರಧಾನಿ ನರೇಂದ್ರ ಮೋದಿ: ವಿವರಿಸಿ ಹೇಳಿ, ಪುಷ್ಪಾಜಿ.

ಪುಷ್ಪಾ ದೇವಿ: ಹೌದು ಸರ್,

ಪ್ರಧಾನಿ ನರೇಂದ್ರ ಮೋದಿ: ನಿಮಗೆ ನನ್ನ ಮಾತು ಕೇಳಿಸ್ತಿದೆಯಾ ?

ಪುಷ್ಪಾ ದೇವಿ: ಹೌದು ಸರ್.

ಪ್ರಧಾನಿ ನರೇಂದ್ರ ಮೋದಿ: ನೀವು ಹೇಳಿದಂತೆ ಇದು ಬೇರೆಯದರಂತೆ ಸಾಮಾನ್ಯ ಲಸಿಕೆ ಎಂದು ನೀವು ಕಂಡುಕೊಂಡಿದ್ದೀರಿ, ಆದರೆ ಕೆಲವರಿಗೆ ಆತಂಕವಿದೆ. ನೀವು ವೈದ್ಯಕೀಯ ಜಗತ್ತಿನವರಾದ್ದರಿಂದ ಮತ್ತು ನಿಮಗೆ ಲಸಿಕೆ ನೀಡಲಾಗಿರುವುದರಿಂದ, ದಯವಿಟ್ಟು ಜನರಿಗೆ ಭರವಸೆ ನೀಡುವಂತಹ ಮಾತನ್ನು ಹಂಚಿಕೊಳ್ಳಿ.

ಪುಷ್ಪಾ ದೇವಿ: ಇದು ಜನರಿಗೆ ಬಹಳ ಮುಖ್ಯವಾದ ಲಸಿಕೆ ಎಂದು ನಾವು ಜನರಿಗೆ ಭರವಸೆ ನೀಡಬೇಕಾಗಿದೆ ಮತ್ತು ಒಂಬತ್ತು ತಿಂಗಳಲ್ಲಿ ಮಾನ್ಯ ಪ್ರಧಾನ ಮಂತ್ರಿಯವರಿಂದದ ಲಭ್ಯವಾಗಿಸಿಹ ಲಸಿಕೆಗಳಿಂದಾಗಿ ಜನರು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತಾರೆ. ಅವರಿಗೆ ಯಾವುದೇ ಆತಂಕಗಳು ಇರಬಾರದು ಮತ್ತು ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ಮತ್ತು ನಮಗೆ ಯಾವುದೇ ಹಾನಿ ಆಗುವುದಿಲ್ಲ. ಆದ್ದರಿಂದ, ಪ್ರತಿಯೊಬ್ಬರೂ ಯಾವುದೇ ಭಯವಿಲ್ಲದೆ ಲಸಿಕೆ ಹಾಕಿಸಿಕೊಳ್ಳಬೇಕಾಗಿದೆ.

ಪ್ರಧಾನಿ ನರೇಂದ್ರ ಮೋದಿ: ನೀವು ಸರಿಯಾಗಿ ಹೇಳಿದ್ದೀರಿ ಪುಷ್ಪಾಜಿ. ನಮ್ಮ ವಿಜ್ಞಾನಿಗಳು ಯಾವುದೇ ಲಸಿಕೆಯನ್ನು ತಯಾರಿಸಲು ಸಾಕಷ್ಟು ಶ್ರಮಿಸುತ್ತಾರೆ ಮತ್ತು ಇದು ಸಂಪೂರ್ಣವಾದ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಮತ್ತು ನೀವು ಕೇಳಿರಬಹುದು, ಆರಂಭದಲ್ಲಿ, ನನ್ನ ಮೇಲೆ ಭಾರಿ ಒತ್ತಡವಿತ್ತು, ಲಸಿಕೆ ಏಕೆ ಲಭ್ಯವಿಲ್ಲ? ನೀವು ಯಾವಾಗ ಲಸಿಕೆ ಪ್ರಾರಂಭಿಸುತ್ತೀರಿ? ಎಂದು. ರಾಜಕೀಯದಲ್ಲಿ, ಅನೇಕ ವಿಷಯಗಳನ್ನು ಹೇಳಲಾಗುತ್ತದೆ ಆದರೆ ವಿಜ್ಞಾನಿಗಳು ಹೇಳುವದನ್ನು ನಾವು ಮಾಡುತ್ತೇವೆ ಎಂದು ನಾನು ಒಂದೇ ಉತ್ತರವನ್ನು ನೀಡುತ್ತಿದ್ದೆ. ನಿರ್ಧರಿಸುವುದು ರಾಜಕೀಯದವರ ಕೆಲಸವಲ್ಲ. ಮತ್ತು ನಮ್ಮ ವಿಜ್ಞಾನಿಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ತಕ್ಷಣ, "ಈಗ ಎಲ್ಲಿಂದ ಪ್ರಾರಂಭಿಸಬೇಕು?" ಎಂದು ಹೇಳಿದೆವು. ಆದ್ದರಿಂದ ನಾವು ಮೊದಲು ರೋಗಿಗಳೊಂದಿಗೆ ದಿನನಿತ್ಯ ಕೆಲಸ ಮಾಡುವವರ ಬಗ್ಗೆ ಯೋಚಿಸಿದ್ದೇವೆ. ಅವರು ಸುರಕ್ಷಿತರಾಗಿದ್ದರೆ, ಸಮಾಜದ ಎಲ್ಲರನ್ನೂ ನೋಡಿಕೊಂಡಂತಾಗುತ್ತದೆ. ಮತ್ತು ಇಷ್ಟು ದೀರ್ಘಾವಧಿಯ ಕಠಿಣ ಕಾರ್ಯವಿಧಾನಗಳು ಮತ್ತು ವೈಜ್ಞಾನಿಕ ತನಿಖೆಗಳ ನಂತರ, ಲಸಿಕೆಗಳು ಇದ್ದಾಗ, ಆರೋಗ್ಯ ಸೇವೆಯಲ್ಲಿ ತೊಡಗಿರುವ ಎಲ್ಲರಿಗೂ ಆದ್ಯತೆ ನೀಡಲು ನಾವು ನಿರ್ಧರಿಸಿದ್ದೇವೆ. ಕೆಲವು ಜನರು ನನ್ನ ಮೇಲೆ ಕೋಪಗೊಳ್ಳುತ್ತಿದ್ದಾರೆ ಏಕೆಂದರೆ ಅವರು ಆರಂಭಿಕ ಲಸಿಕೆ ಸಹ ಬಯಸುತ್ತಾರೆ, ಆದರೆ ಮೊದಲು ನಿಮಗೆ ಲಸಿಕೆ ನೀಡಬೇಕು ಎಂದು ನಾನು ಹೇಳುತ್ತೇನೆ. ಹಲವಾರು ಹಂತಗಳಲ್ಲಿ ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಕಂಡುಹಿಡಿದ ನಂತರವೇ ಲಸಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ, ದೇಶದ ಜನರು ತಮ್ಮ ವಿಜ್ಞಾನಿಗಳು ಮತ್ತು ವೈದ್ಯರನ್ನು ನಂಬಬೇಕು ಮತ್ತು ವೈದ್ಯಕೀಯ ಕ್ಷೇತ್ರದ ನಿಮ್ಮಂತಹ ಜನರು ಇದನ್ನು ಹೇಳಿದಾಗ ಜನರು ನಂಬಿಕೆ ಹೊಂದಬೇಕು. ಪುಷ್ಪಾಜಿ ನಿಮಗೆ ಅನೇಕ ಅಭಿನಂದನೆಗಳು. ಆರೋಗ್ಯವಾಗಿರಿ ಮತ್ತು ಸೇವೆಯನ್ನು ಮುಂದುವರಿಸಿ.

ಪ್ರಧಾನಿ ನರೇಂದ್ರ ಮೋದಿ: ನಮಸ್ತೆ, ರಾಣಿಜಿ.

ರಾಣಿ ಕುನ್ವರ್ ಶ್ರೀವಾಸ್ತವ್: ನಮಸ್ತೆ ಸರ್. ನಾನು, ಕಾಶಿಯ ಎಲ್ಲ ಜನರ ಪರವಾಗಿ ಮಾನ್ಯ ಪ್ರಧಾನ ಮಂತ್ರಿಗೆ ಪ್ರಣಾಮಗಳನ್ನು ಮಾಡುತ್ತೇನೆ. ಸರ್, ನನ್ನ ಹೆಸರು ರಾಣಿ ಕುನ್ವರ್ ಶ್ರೀವಾಸ್ತವ್. ನಾನು ಆರು ವರ್ಷಗಳಿಂದ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಎನ್‌ಎಂ ಆಗಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನಿ ನರೇಂದ್ರ ಮೋದಿ: ಈ ಆರು ವರ್ಷಗಳಲ್ಲಿ ನೀವು ಎಷ್ಟು ಜನರಿಗೆ ಲಸಿಕೆ ಹಾಕಿದ್ದೀರಿ? ದಿನದಲ್ಲಿ ನೀವು ಎಷ್ಟು ಜನರಿಗೆ ಲಸಿಕೆ ಹಾಕುತ್ತೀರಿ?

ರಾಣಿ ಕುನ್ವರ್ ಶ್ರೀವಾಸ್ತವ್: ಸರ್, ನಾವು ದಿನಕ್ಕೆ ಸುಮಾರು 100 ಜನರಿಗೆ ಲಸಿಕೆ ಹಾಕುತ್ತೇವೆ.

ಪ್ರಧಾನಿ ನರೇಂದ್ರ ಮೋದಿ: ಹಾಗಾದರೆ, ಈ ಲಸಿಕೆ ಕಾರ್ಯಕ್ರಮದ ಸಮಯದಲ್ಲಿ ನಿಮ್ಮ ಎಲ್ಲಾ ದಾಖಲೆಗಳು ಮುರಿಯಲಿವೆ, ಏಕೆಂದರೆ ನೀವು ಅನೇಕ ಜನರಿಗೆ ಲಸಿಕೆ ಹಾಕಬೇಕಾಗಬಹುದು ಇದರಿಂದ ಬಹುಶಃ ನಿಮ್ಮ ಎಲ್ಲಾ ದಾಖಲೆಗಳು ಮುರಿಯಬಹುದು.

ರಾಣಿ ಕುನ್ವರ್ ಶ್ರೀವಾಸ್ತವ್: ಸರ್, ಕೋವಿಡ್ -19 ನಂತಹ ಭಯಾನಕ ಕಾಯಿಲೆಯ ವಿರುದ್ಧ ಲಸಿಕೆ ಹಾಕುವ ಅವಕಾಶ ನನಗೆ ಸಿಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ತುಂಬಾ ಅದೃಷ್ಟಶಾಲಿ ಎಂದುಕೊಳ್ಳುತ್ತೇನೆ.

ಪ್ರಧಾನಿ ನರೇಂದ್ರ ಮೋದಿ: ಆಗ ಜನರು ಕೂಡ ನಿಮ್ಮನ್ನು ಆಶೀರ್ವದಿಸುತ್ತಾರೆ.

ರಾಣಿ ಕುನ್ವರ್ ಶ್ರೀವಾಸ್ತವ್: ಹೌದು ಸರ್, ನನಗೆ ಅನೇಕ ಆಶೀರ್ವಾದಗಳು ಸಿಗುತ್ತವೆ. ನನ್ನೊಂದಿಗೆ, ಕೊರೊನಾ ಲಸಿಕೆಗಳನ್ನು 10 ತಿಂಗಳಲ್ಲಿಯೇ ಪ್ರಾರಂಭಿಸಲಾಗಿದೆ ಮತ್ತು ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಜನರು ನಿಮ್ಮನ್ನು ಹೆಚ್ಚು ಆಶೀರ್ವದಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ: ನೋಡಿ, ನಾನು ಅದಕ್ಕೆ ಅರ್ಹನಲ್ಲ. ಮೊದಲಿಗೆ, ನೀವು ಧೈರ್ಯದಿಂದ ಕೆಲಸ ಮಾಡುವುದನ್ನು ಮುಂದುವರೆಸಿದ್ದರಿಂದ, ಕೊರೊನಾವನ್ನು ಮನೆಗೆ ಕೊಂಡೊಯ್ಯುವ ಭಯದ ಮಧ್ಯೆ ಬಡವರಿಗೆ ಮತ್ತು ರೋಗಿಗಳಿಗೆ ಸೇವೆ ಸಲ್ಲಿಸಿದ್ದರಿಂದ ನೀವು ಇದಕ್ಕೆ ಅರ್ಹರಾಗಿದ್ದೀರಿ. ಎರಡನೆಯದು ನಮ್ಮ ಆಧುನಿಕ ಋಷಿಮುನಿಗಳಾದ ನಮ್ಮ ವಿಜ್ಞಾನಿಗಳು. ಕೊರೊನಾ ಒಂದು ಅಪರಿಚಿತ ಶತ್ರು ಆದರೆ ನಮ್ಮ ವಿಜ್ಞಾನಿಗಳು ಅಚಲವಾಗಿಯೇ ಇದ್ದರು ಮತ್ತು ಪ್ರಯೋಗಾಲಯಗಳಲ್ಲಿ ಹಗಲು ರಾತ್ರಿ ಕೆಲಸ ಮಾಡಿದರು ಮತ್ತು ಇಂದು ಲಸಿಕೆಗಳು ಅವರ ಪ್ರಯತ್ನದ ಫಲವಾಗಿದೆ. ಆದ್ದರಿಂದ, ನಾನಲ್ಲ, ಆದರೆ ನೀವೆಲ್ಲರೂ ಇದಕ್ಕೆ ಅರ್ಹರಾಗಿದ್ದೀರಿ. ನೀವು ಇದನ್ನು ಬಲವಾದ ನಂಬಿಕೆಯಿಂದ ಹೇಳುತ್ತಿರುವುದು ನನಗೆ ಒಳ್ಳೆಯದು. ದಯವಿಟ್ಟು, ಅದನ್ನು ಮುಂದುವರೆಸಿಕೊಂಡು ಜನರ ವಿಶ್ವಾಸವನ್ನು ಬೆಳೆಸಿಕೊಳ್ಳಿ. ರಾಣಿಜಿಗೆ ನನ್ನ ಶುಭಾಶಯಗಳು. ಧನ್ಯವಾದಗಳು.

ರಾಣಿ ಕುನ್ವರ್ ಶ್ರೀವಾಸ್ತವ್: ಧನ್ಯವಾದಗಳು ಸರ್, ನಮಸ್ಕಾರ.

ಪ್ರಧಾನಿ ನರೇಂದ್ರ ಮೋದಿ: ನಮಸ್ಕಾರ, ಡಾಕ್ಟರ್!

ಡಾ. ವಿ. ಶುಕ್ಲಾ: ನಮಸ್ಕಾರ ಸರ್. ನಾನು, ಡಾ. ವಿ. ಶುಕ್ಲಾ ವಾರಣಾಸಿಯ ಪಂಡಿತ್ ದೀನ್‌ ದಯಾಳ್ ಉಪಾಧ್ಯಾಯದ ಮುಖ್ಯ ವೈದ್ಯಕೀಯ ಅಧೀಕ್ಷಕ,. ನನ್ನ ವೈದ್ಯಕೀಯ ಭ್ರಾತೃತ್ವದ ಪರವಾಗಿ ಅವರು ಗೌರವಾನ್ವಿತ ಪ್ರಧಾನಿಯವರಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ಪ್ರಧಾನಿ ನರೇಂದ್ರ ಮೋದಿ: ಹೇಳಿ, ಶುಕ್ಲಾಜಿ. ನಿಮ್ಮ ಅನುಭವಗಳು ಯಾವುವು? ನಮ್ಮ ಕಾಶಿ ಜನರು ತೃಪ್ತರಾಗಿದ್ದಾರೆಯೇ?

ಡಾ. ವಿ. ಶುಕ್ಲಾ: ಸರ್, ಅವರು ತುಂಬಾ ತೃಪ್ತರಾಗಿದ್ದಾರೆ. ಎಲ್ಲರಲ್ಲೂ ತುಂಬಾ ಉತ್ಸಾಹವಿದೆ. ಇಷ್ಟು ಕಡಿಮೆ ಅವಧಿಯಲ್ಲಿ, ನಾವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ, ಲಸಿಕೆ ಬಗ್ಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಮುಂದಿದ್ದೇವೆ. ವ್ಯಾಕ್ಸಿನೇಷನ್ಗಾಗಿ ನೀವು ಮೊದಲು ನಮ್ಮನ್ನು ಆಯ್ಕೆ ಮಾಡಿದ್ದೀರಿ ಎಂದು ನಮ್ಮ ವೈದ್ಯಕೀಯ ಭ್ರಾತೃತ್ವ ಮತ್ತು ಆರೋಗ್ಯ ಕಾರ್ಯಕರ್ತರು ಹೆಮ್ಮೆ ಪಡುತ್ತಾರೆ. ನಾವು ಹೆಮ್ಮೆಪಡುತ್ತೇವೆ ಮತ್ತು ಅದಕ್ಕಾಗಿ ಕೃತಜ್ಞತೆಗಳು .

ಪ್ರಧಾನಿ ನರೇಂದ್ರ ಮೋದಿ: ನಾನು ನಿಮಗೆ ಕೃತಜ್ಞನಾಗಿದ್ದೇನೆ, ಆದರೆ ನೀವು ನಿಜವಾಗಿಯೂ ಅದ್ಭುತಗಳನ್ನು ಮಾಡಿದ್ದೀರಿ. ಈ ಬಿಕ್ಕಟ್ಟಿನಿಂದ ದೇಶವನ್ನು ಉಳಿಸುವಲ್ಲಿ ಕೊರೊನಾ ಯೋಧರಿಗೆ ಬಹಳ ದೊಡ್ಡ ಪಾತ್ರವಿದೆ ಎಂದು ನಾನು ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಹಾ, ಶುಕ್ಲಾಜಿ, ನಿಮ್ಮ ಅನುಭವದ ಬಗ್ಗೆ ನಮಗೆ ತಿಳಿಸಿ.

ಡಾ. ವಿ. ಶುಕ್ಲಾ: ಸರ್, ಆರೋಗ್ಯ ಇಲಾಖೆಯಲ್ಲಿರುವ ಈ ಜನರಿಗೆ ಮೊದಲು ಲಸಿಕೆ ಹಾಕುವ ಅವಶ್ಯಕತೆಯಿದೆ ಎಂದು ಇಲಾಖೆಯಲ್ಲಿ ಇಟ್ಟಿರುವ ನಂಬಿಕೆ ನಮಗೆ ಉತ್ಸಾಹ ತುಂಬಿದೆ, ಮತ್ತು ನಾವು ಹೆಚ್ಚು ಉತ್ಸಾಹದಿಂದ ನಮ್ಮ ಕೆಲಸಕ್ಕೆ ಬದ್ಧರಾಗಿದ್ದೇವೆ. ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವೆಂದು ಜನರಿಗೆ ಸಕಾರಾತ್ಮಕ ಸಂದೇಶವನ್ನು ಕಳುಹಿಸುತ್ತಿದೆ ಏಕೆಂದರೆ ಪ್ರಧಾನ ಮಂತ್ರಿ ಮತ್ತು ವಿಜ್ಞಾನಿಗಳು ಲಸಿಕೆಗಾಗಿ ಈ ಕಾಯಿಲೆಯಿಂದ ಜನರನ್ನು ಉಳಿಸುವಲ್ಲಿ ತೊಡಗಿರುವ ಜನರನ್ನು ಮೊದಲು ಆಯ್ಕೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ: ನೋಡಿ, ಕಳೆದ ನಾಲ್ಕೈದು ವರ್ಷಗಳಿಂದ ನಾವು ನಡೆಸುತ್ತಿರುವ ಸ್ವಚ್ಛತೆ , ಶುದ್ಧ ಕುಡಿಯುವ ನೀರು, ಶೌಚಾಲಯಗಳಂತಹ ವಿವಿಧ ಅಭಿಯಾನಗಳಿಂದಾಗಿ ದೇಶದ ಕಡು ಬಡವರೂ ಕೂಡ ಈ ರೋಗದ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ದೇವರು ನಮಗೆ ದಯೆ ತೋರಿಸಿದ್ದಾನೆ. ಬಡ ನಾಗರಿಕರು ಮತ್ತು ವೃದ್ಧರು ಈ ರೋಗವನ್ನು ನಿಭಾಯಿಸಲು ಈ ಅಭಿಯಾನಗಳು ಪರೋಕ್ಷವಾಗಿ ನಮಗೆ ಸಹಾಯ ಮಾಡಿದವು. ಇದರ ಪರಿಣಾಮವಾಗಿ, ನಮ್ಮ ದೇಶದಲ್ಲಿ ಮರಣ ಪ್ರಮಾಣ ತುಂಬಾ ಕಡಿಮೆಯಾಗಿದೆ. ಸ್ವಚ್ಛತೆ, ಶೌಚಾಲಯ ಅಥವಾ ಶುದ್ಧ ನೀರು ಸಾಕಷ್ಟು ಸಹಾಯ ಮಾಡಿದೆ. ಶುಕ್ಲಾಜಿ, ನೀವೊಬ್ಬ ನಾಯಕರು ನಿಮ್ಮೊಂದಿಗೆ ಕೆಲಸ ಮಾಡುವ ದೊಡ್ಡ ತಂಡವಿದೆ ಮತ್ತು ವಿವಿಧ ಸ್ತರಗಳ ಜನರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸಹೋದ್ಯೋಗಿಗಳ ವಿಶ್ವಾಸಾರ್ಹದ ಎಷ್ಟರ ಮಟ್ಟದಲ್ಲಿದೆ?

ಡಾ. ವಿ.ಶುಕ್ಲಾ: ತುಂಬಾ ಹೆಚ್ಚಿದೆ. ಜನರು ಸಂಪೂರ್ಣವಾಗಿ ತೃಪ್ತರಾಗಿದ್ದಾರೆ. ಯಾರಿಗೂ ಯಾವುದೇ ಆತಂಕವಿಲ್ಲ. ಲಸಿಕೆ ಕಾರ್ಯಕ್ರಮದ ಮೊದಲು, ನಾವು ಚರ್ಚೆ ನಡೆಸಿದ್ದೇವೆ ಮತ್ತು ಇದು ಹಲವಾರು ವರ್ಷಗಳಿಂದ ನಡೆಯುತ್ತಿರುವ ಯಾವುದೇ ಲಸಿಕೆ ಅಭಿಯಾನದಂತೆ ಮತ್ತು ನೋವು, ಜ್ವರ, ಶೀತದಂತಹ ಸಣ್ಣ ಅಡ್ಡಪರಿಣಾಮಗಳು ಸಾಮಾನ್ಯವಾಗಿದೆ ಮತ್ತು ಅದು ಅದೇನೂ ದೊಡ್ಡ ಸಮಸ್ಯೆಯಲ್ಲ ಎಂದು ಸಮಾಜದ ಪ್ರತಿಯೊಬ್ಬರಿಗೂ ಹೇಳಬೇಕು ಎಂದು ಚರ್ಚಿಸಿದ್ದೇವೆ,. ಮತ್ತು ಲಸಿಕೆ ನಂತರ ಈ ಸಮಸ್ಯೆಗಳು ಬರಬಹುದು, ಆದರೆ ನಾವು ಭಯಪಡಬೇಕಾಗಿಲ್ಲ. ಆದ್ದರಿಂದ, ಜನರಲ್ಲಿ ಯಾವುದೇ ತಪ್ಪುಗ್ರಹಿಕೆಯನ್ನು ನಿವಾರಿಸಲು, ನಾವು ಮೊದಲ ದಿನ ನಮ್ಮ ಕೇಂದ್ರದ ಸಿಬ್ಬಂದಿಗೆ ಲಸಿಕೆ ಹಾಕಿದ್ದೇವೆ ಮತ್ತು ಶೇಕಡಾ 82 ರಷ್ಟು ಲಸಿಕೆ ಮಾಡಲಾಯಿತು. ಇದು ಜನರ ಆತ್ಮ ವಿಶ್ವಾಸಕ್ಕೂ ಕಾರಣವಾಯಿತು ಮತ್ತು ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ: ನಾವು ಜನರಿಗೆ ಚಿಂತೆ ಮಾಡಬೇಡಿ ಮತ್ತು ಲಸಿಕೆ ಹಾಕಿಸಿಕೊಳ್ಳುವಂತೆ ವಿನಂತಿಸಬಹದು ಎಂದು ಏನೇ ಹೇಳಿದರೂ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಜನರಿಂದ ಒಂದು ಮಾತು ರೋಗಿಗಳು ಮತ್ತು ಜನರಲ್ಲಿ ವಿಶ್ವಾಸವನ್ನು ಉಂಟುಮಾಡುತ್ತದೆ. ಆದ್ದರಿಂದ, ಜನರು ನಿಮಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿರಬಹುದು. ನೀವು ಹೇಗೆ ನಿರ್ವಹಿಸುತ್ತೀರಿ?

ಡಾ. ವಿ. ಶುಕ್ಲಾ: ಪ್ರತಿ ಲಸಿಕೆ ನಂತರ ಸಣ್ಣ ಅಡ್ಡಪರಿಣಾಮಗಳು ಸಾಮಾನ್ಯವೆಂದು ನಾವು ಜನರಿಗೆ ಹೇಳುತ್ತೇವೆ. ನಿನ್ನೆ ತನಕ, ದೇಶದಲ್ಲಿ 10 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿದವರುಬಹಳ ಕಡಿಮೆ. ನಮ್ಮ ಕೇಂದ್ರದಲ್ಲಿ ಯಾರಿಗೆ ಲಸಿಕೆ ಹಾಕಿಸಲಾಗಿದೆಯೋ ಅವರನ್ನು ಗಮನಿಸಲು ಇಲ್ಲಿ ಅರ್ಧ ಘಂಟೆಯವರೆಗೆ ಕುಳಿತುಕೊಳ್ಳಬೇಕಾಗಿತ್ತು ಮತ್ತು ಅದರ ನಂತರ ಎಲ್ಲರೂ ತಮ್ಮ ಕೆಲಸಕ್ಕೆ ಮರಳಿದರು. ಚುಚ್ಚುಮದ್ದಿನ ನಂತರ ಸ್ವಚ್ಛ ಗೊಳಿಸುವ ಸಿಬ್ಬಂದಿ ತಮ್ಮ ಕೆಲಸವನ್ನು ಪುನರಾರಂಭಿಸಿದರು. ನಾವು ನಮ್ಮ ಕೆಲಸವನ್ನು ಪುನರಾರಂಭಿಸಿದ್ದೇವೆ. ಗಂಭೀರ ರೋಗವಿರುವವರು, ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರು, ಅಥವಾ ಉಸಿರಾಟದ ತೊಂದರೆ ಇರುವವರು ಅಥವಾ ಕ್ಯಾನ್ಸರ್ ರೋಗಿಗಳಿಗೆ ಲಸಿಕೆ ಹಾಕುವ ಅವಶ್ಯಕತೆಯಿದೆ. ನೈಸರ್ಗಿಕವಾಗಿ ಏನಾದರೂ ಸಂಭವಿಸದಲ್ಲಿ, ಅದನ್ನು ಲಕ್ಷಾಂತರ ಜನರ ವ್ಯಾಕ್ಸಿನೇಷನ್ನಿಗೆ ಸಂಬಂಧ ಕಲ್ಪಿಸಬಾರದು. ಇದು ಸಾಮಾನ್ಯ ವಿಧಾನ ಮತ್ತು ಯಾವುದೇ ಲಸಿಕೆ ಅಮರತ್ವವನ್ನು ಖಚಿತಪಡಿಸುವುದಿಲ್ಲ ಮತ್ತು ಆದ್ದರಿಂದ, ವ್ಯಾಕ್ಸಿನೇಷನ್‌ನೊಂದಿಗೆ ಅದನ್ನು ಜೋಡಿಸುವುದು ತಪ್ಪು. ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಏಕೆಂದರೆ ನಮ್ಮ ದೇಶದಲ್ಲಿ ನಡೆದಂತೆ ವರದಿಯನ್ನು ವಿಶ್ವದ ಬೇರೆಲ್ಲಿಯೂ ಮಾಡಿಲ್ಲ. ಲಸಿಕೆ ನಂತರ ಹತ್ತು ಲಕ್ಷ ಜನರು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ. ಇದು ನಮಗೆ ಒಂದು ದೊಡ್ಡ ಭಾಗ್ಯವಾಗಿದೆ ಮತ್ತು ಈ ರೋಗದ ವಿರುದ್ಧ ಇಷ್ಟು ದೊಡ್ಡ ಲಸಿಕೆ ಅಭಿಯಾನವನ್ನು ಭಾರತ ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಇನ್ನೂ ಮಾಡಲಾಗಿಲ್ಲ ಎಂಬ ಸಂದೇಶವನ್ನು ನಾವು ಜಗತ್ತಿಗೆ ನೀಡುತ್ತೇವೆ.

ಪ್ರಧಾನಿ ನರೇಂದ್ರ ಮೋದಿ: ನಿಮ್ಮ ಸ್ವಾಭಿಮಾನವು ತುಂಬಾ ಪ್ರಬಲವಾಗಿದೆ ಮತ್ತು ನಿಮ್ಮ ನಾಯಕತ್ವವು ತುಂಬಾ ಶಕ್ತಿಯುತವಾಗಿದೆ ಮತ್ತು ನಿಮ್ಮ ಆಸ್ಪತ್ರೆಯಲ್ಲಿ ನೀವು ಎಷ್ಟೋ ಜನರಿಗೆ ಲಸಿಕೆ ನೀಡಿದ್ದರಿಂದ, 100 ಪ್ರತಿಶತದಷ್ಟು ಕೆಲಸ ಎಷ್ಟು ಬೇಗನೆ ಪೂರ್ಣಗೊಳ್ಳುತ್ತದೆ ಎಂದು ನಿರ್ಧರಿಸಲು ನಾನು ಎಲ್ಲಾ ಆಸ್ಪತ್ರೆಗಳನ್ನು ಒತ್ತಾಯಿಸುತ್ತೇನೆ. ನಮ್ಮ ಆಸ್ಪತ್ರೆಗಳಲ್ಲಿ 100 ಪ್ರತಿಶತದಷ್ಟು ಲಸಿಕೆ ಮಾಡಿದ ನಂತರ ಎರಡನೇ ಹಂತದ ಲಸಿಕೆ ಪ್ರಾರಂಭವಾಗುವಂತಹ ವಾತಾವರಣವನ್ನು ನಿರ್ಮಾಣ ಮಾಡಲು ಸ್ಪರ್ಧೆಯನ್ನು ನಡೆಸಬೇಕು . 50 ವರ್ಷಕ್ಕಿಂತ ಮೇಲ್ಪಟ್ಟವರ ಮೇಲೆ ನಾವು ತಕ್ಷಣ ಲಸಿಕೆ ಹಾಕುವುದನ್ನು ಪ್ರಾರಂಭಿಸಬಹುದು. ನಿಮ್ಮ ನಾಯಕತ್ವದಲ್ಲಿ ಎಷ್ಟೋ ಜನರಿಗೆ ಲಸಿಕೆ ಹಾಕಿದ್ದಕ್ಕಾಗಿ ನೀವು ಮೆಚ್ಚುಗೆಗೆ ಅರ್ಹರಾಗಿದ್ದೀರಿ. ಆದರೆ ಇತರ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ನಿಮ್ಮಿಂದ ಸ್ಫೂರ್ತಿ ಪಡೆದರೆ ಮತ್ತು ಹೆಚ್ಚು ಮುಂಚೂಣಿಯ ಯೋಧರಿಗೆ ಲಸಿಕೆ ಹಾಕಿದರೆ ಅದು ಬಹಳ ಸಹಾಯಕವಾಗುತ್ತದೆ. ಶುಕ್ಲಾಜಿ, ನಿಮ್ಮನ್ನು ಮತ್ತು ನಿಮ್ಮ ತಂಡವನ್ನು ಅಭಿನಂದಿಸುತ್ತೇನೆ. ಧನ್ಯವಾದಗಳು.

ಪ್ರಧಾನಿ ನರೇಂದ್ರ ಮೋದಿ: ನಮಸ್ತೆ, ರಮೇಶ್‌ ಜಿ.

ರಮೇಶ್ ಚಂದ್ ರಾಯ್: ಮಾನ್ಯ ಪ್ರಧಾನ ಮಂತ್ರಿಯವರಿಗೆ ನಮಸ್ಕಾರ. ನಾನು, ರಮೇಶ್ ಚಂದ್ ರಾಯ್, ಪಂಡಿತ್ ದೀಂದಯಾಲ್ ಉಪಾಧ್ಯಾಯ ವೈದ್ಯಕೀಯ ಆಸ್ಪತ್ರೆಯಲ್ಲಿ ಹಿರಿಯ ಲ್ಯಾಬ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನಿ ನರೇಂದ್ರ ಮೋದಿ: ನಿಮಗೆ ಲಸಿಕೆ ನೀಡಲಾಗಿದೆಯೇ?

ರಮೇಶ್ ಚಂದ್ ರಾಯ್‌ : ಹೌದು ಸರ್, ಇದು ನನಗೆ ಮೊದಲ ಹಂತದಲ್ಲಿ ಈ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ.

ಪ್ರಧಾನಿ ನರೇಂದ್ರ ಮೋದಿ: ಅದ್ಭುತ. ಹಾಗಾದ್ರೆ, ಇತರರ ಆತ್ಮವಿಶ್ವಾಸವೂ ಹೆಚ್ಚಾಗಿರಬೇಕು. ಹಿರಿಯ ತಂತ್ರಜ್ಞರಿಗೆ ಲಸಿಕೆ ಹಾಕಿದಾಗ, ಅದು ಇತರರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ರಮೇಶ್ ಚಂದ್‌ ರಾಯ್‌ : ನಿಜ, ಸರ್. ನೀವು ಮೊದಲ ಡೋಸ್ ತೆಗೆದುಕೊಂಡಿದ್ದೀರಿ, ಎರಡನೆಯದಕ್ಕೆ ಸಿದ್ಧರಾಗಿರಿ ಎಂದು ನಾವು ಎಲ್ಲರಿಗೂ ಹೇಳುತ್ತಿದ್ದೇವೆ. ಸುರಕ್ಷಿತವಾಗಿರಿ; ನಿಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರವನ್ನು ಸುರಕ್ಷಿತವಾಗಿರಿಸಿಕೊಳ್ಳಿ ಸರ್.

ಪ್ರಧಾನಿ ನರೇಂದ್ರ ಮೋದಿ: ನೀವು ಅದನ್ನು ವಿಶ್ವಾಸದಿಂದ ಮುಂದುವೆರಿಸಿದ್ದೀರಿ. ನಿಮ್ಮ ಇಡೀ ತಂಡದ ಮೇಲೆ ಅದರ ಪ್ರಭಾವ ಏನು? ಅವರಲ್ಲಿ ವಿಶ್ವಾಸ ಹೆಚ್ಚಿದೆಯೇ?

ರಮೇಶ್ ಚಂದ್ ರಾಯ್: ತುಂಬಾ, ಸರ್. ಜನರು ಬಹಳ ಉತ್ಸಾಹದಿಂದ‌ ಇದ್ದಾರೆ ಮತ್ತು 81 ಜನರು ವ್ಯಾಕ್ಸಿನೇಷನ್ಗಾಗಿ ಮೊದಲ ಹಂತದಲ್ಲಿ ಬಂದರು. ಬಹುಶಃ, 19 ಜನರು ಕೆಲವು ಕಾರಣಗಳಿಂದ ಎಲ್ಲೋ ಹೋಗಿದ್ದರು. ನಮ್ಮ ಅಭಿಯಾನವು ಚಾಲನೆಯಲ್ಲಿದೆ, ಸರ್.

ಪ್ರಧಾನಿ ನರೇಂದ್ರ ಮೋದಿ: ರಮೇಶ್‌ ಜಿ ಮತ್ತು ನಿಮ್ಮ ತಂಡಕ್ಕೆ ನನ್ನ ಶುಭಾಶಯಗಳು. ಅನೇಕ ಧನ್ಯವಾದಗಳು.

ಪ್ರಧಾನಿ ನರೇಂದ್ರ ಮೋದಿ: ನಮಸ್ತೆ, ಶ್ರಂಖ್ಲಾಜಿ.

ಶ್ರಂಖ್ಲಾ ಚೌಹಾನ್: ಸರ್, ನಿಮಗೆ ಅನೇಕ ಪ್ರಣಾಮಗಳು ಸರ್, ನಾನು ಸಿಎಸ್.ಸಿ. ಹಾತಿ ಬಜಾರ್, ಪಿಎಸ್ಸಿ ಸೇವಾಪುರಿಯಲ್ಲಿ ಎಎನ್ಎಂ ಆಗಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನಿ ನರೇಂದ್ರ ಮೋದಿ: ಮೊದಲನೆಯದಾಗಿ, ನಿಮಗೆ ಅನೇಕ ಧನ್ಯವಾದಗಳು. ಏಕೆಂದರೆ ನಿಜವಾಗಿಯೂ ಸೇವಾಪುರಿಯಲ್ಲಿ ಸೇವೆ ಸಲ್ಲಿಸುವ ಮೂಲಕ, ನೀವು ಸೇವಪುರಿಯ ಹೆಸರನ್ನು ಸಹ ಸಾರ್ಥಕಗೊಳಿಸುತ್ತಿದ್ದೀರಿ ಮತ್ತು ನಿಮ್ಮ ಕುಟುಂಬದ ಹೆಸರನ್ನು ಸಾರ್ಥಕಗೊಳಿಸುತ್ತಿದ್ದೀರಿ. ಇದು ಬಹಳ ಉದಾತ್ತ ಸೇವೆ. ಅಂತಹ ಬಿಕ್ಕಟ್ಟಿನ ಸಮಯದಲ್ಲಿ ನೀವು ಸೇವೆ ಸಲ್ಲಿಸಿದಾಗ, ಅದು ಅಮೂಲ್ಯವಾದುದು ಮತ್ತು ಬೆಲೆ ಕಟ್ಟಲಾಗದು. ನಿಮ್ಮಂತಹ ಜನರಿಂದ ಜಗತ್ತಿನ ಅತಿ ದೊಡ್ಡ ಅಭಿಯಾನವನ್ನು ನಡೆಸಲಾಗುತ್ತಿದೆ. ನೀವು ಇಲ್ಲಿಯವರೆಗೆ ಎಷ್ಟು ಜನರಿಗೆ ಲಸಿಕೆ ಹಾಕಿದ್ದೀರಿ? ದಿನದಲ್ಲಿ ನೀವು ಎಷ್ಟು ಜನರಿಗೆ ಲಸಿಕೆ ಹಾಕುತ್ತೀರಿ?

ಶ್ರಂಖ್ಲಾ ಚೌಹಾನ್: ಸರ್, ಜನವರಿ 16, 2021 ರಂದು, ಮೊದಲ ಹಂತದಲ್ಲಿ ನಾನು ಕೋವಿಶೀಲ್ಡ್ನ ಮೊದಲ ಡೋಸನ್ನುತೆಗೆದುಕೊಂಡೆ ಮತ್ತು ಅದೇ ದಿನ 87 ಜನರಿಗೆ ಲಸಿಕೆ ಹಾಕಿದೆ.

ಪ್ರಧಾನಿ ನರೇಂದ್ರ ಮೋದಿ: ವಾಹ್! ನೀವೇ ಲಸಿಕೆ ಹಾಕಿಸಿಕೊಂಡ ದಿನ ನೀವು ತುಂಬಾ ಕೆಲಸ ಮಾಡಿದ್ದೀರಿ!

ಶ್ರಂಖ್ಲಾ ಚೌಹಾನ್: ಯೆಸ್ ಸರ್.

ಪ್ರಧಾನಿ ನರೇಂದ್ರ ಮೋದಿ: ಅದ್ಭುತ! 87 ಜನರಿಗೆ ಲಸಿಕೆ ಹಾಕುವುದು ಸಣ್ಣ ವಿಷಯವಲ್ಲ. ಹಾಗಾದರೆ ಅವರೆಲ್ಲರೂ ನಿಮ್ಮನ್ನು ಆಶೀರ್ವದಿಸುತ್ತಿರಬೇಕು.

ಶ್ರಂಖ್ಲಾ ಚೌಹಾನ್: ಯೆಸ್‌ ಸರ್. ಕರ್ತವ್ಯದಲ್ಲಿದ್ದ ಎಲ್ಲರಿಗೂ ಲಸಿಕೆ ಹಾಕಿದ ನಂತರ ನಾನು ಲಸಿಕೆ ಹಾಕಿಸಿಕೊಂಡೆ.

ಪ್ರಧಾನಿ ನರೇಂದ್ರ ಮೋದಿ: ನಿಮಗೂ ನನ್ನ ಶುಭಾಶಯಗಳು. ನಿಮ್ಮ ಪ್ರಯತ್ನದಿಂದಾಗಿ ನೀವೆಲ್ಲರೂ ಶೀಘ್ರದಲ್ಲೇ ಸುರಕ್ಷಿತವಾಗಿರುತ್ತೀರಿ ಮತ್ತು ಲಸಿಕೆ ಹಾಕುವ ಕೆಲಸವನ್ನು ಸಮಾಜದ ಇತರರಿಗೆ ಮುಂದುವರೆಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಇಂದು, ನಿಮ್ಮೊಂದಿಗೆ ಮಾತನಾಡಲು ನಡೆಸಲು ನನಗೆ ಅವಕಾಶ ಸಿಕ್ಕಿತು. ಲಸಿಕೆ ಕಾರ್ಯಕ್ರಮದ ಸಮಯದಲ್ಲಿ ನಾನು ಕಾಶಿಯ ಜನರನ್ನು ಭೇಟಿಯಾಗಬಹುದೆಂದು, ಅವರೊಂದಿಗೆ ಮಾತನಾಡಬಹುದೆಂದು ಮತ್ತು ವಿಶೇಷವಾಗಿ ಈ ಅಭಿಯಾನವನ್ನು ಮುನ್ನಡೆಸುತ್ತಿರುವ ವೈದ್ಯಕೀಯ ಭ್ರಾತೃತ್ವವನ್ನು ಮಾತನಾಡಿಸಲು ಸಾಧ್ಯವಾಯಿತೆಂದು ನನಗೆ ಸಂತೋಷವಾಗಿದೆ. ಇದು ನನಗೆ ಅದೃಷ್ಟದ ಕ್ಷಣಗಳು. ಮತ್ತೊಮ್ಮೆ, ನಾನು ಕಾಶಿಯ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ವಿನಂತಿಸುತ್ತೇನೆ, ಇದರಿಂದಾಗಿ ನಾವು ಎರಡನೇ ಹಂತಕ್ಕೆ ಹೋಗಬಹುದು, ಇದರಿಂದಾಗಿ ನಾವು 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತ್ವರಿತವಾಗಿ ಲಸಿಕೆ ನೀಡಬಹುದು. ಕಾಶಿಯಲ್ಲಿ ಈ ಕಾರ್ಯವನ್ನು ನಾವು ಸಾಧ್ಯವಾದಷ್ಟು ಬೇಗ ಸಾಧಿಸಬೇಕೆಂದು ಕಾಶಿಯ ಸೇವಕನಾಗಿ ನಾನು ವಿನಂತಿಸುತ್ತೇನೆ.

ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳು.

ಧನ್ಯವಾದಗಳು!

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Why Narendra Modi is a radical departure in Indian thinking about the world

Media Coverage

Why Narendra Modi is a radical departure in Indian thinking about the world
...

Nm on the go

Always be the first to hear from the PM. Get the App Now!
...
ಸೋಶಿಯಲ್ ಮೀಡಿಯಾ ಕಾರ್ನರ್ 17 ಅಕ್ಟೋಬರ್ 2021
October 17, 2021
ಶೇರ್
 
Comments

Citizens congratulate the Indian Army as they won Gold Medal at the prestigious Cambrian Patrol Exercise.

Indians express gratitude and recognize the initiatives of the Modi government towards Healthcare and Economy.