ಪದ್ಮವಿಭೂಷಣ ಪಂಡಿತ್ ಛನ್ನುಲಾಲ್ ಮಿಶ್ರಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪಂಡಿತ್ ಛನ್ನುಲಾಲ್ ಮಿಶ್ರಾ ಅವರ ನಿಧನವು ಭಾರತೀಯ ಸಂಗೀತ ಜಗತ್ತಿಗೆ ತುಂಬಲಾರದ ನಷ್ಟ ಎಂದು ಪ್ರಧಾನಮಂತ್ರಿಯವರು ಹೇಳಿದರು. ಪಂಡಿತ್ ಛನ್ನುಲಾಲ್ ಮಿಶ್ರಾ ಅವರು ತಮ್ಮ ಜೀವನವನ್ನು ಕಲೆ ಮತ್ತು ಸಂಸ್ಕೃತಿಗೆ ಮುಡಿಪಾಗಿಟ್ಟರು ಮತ್ತು ಬನಾರಸ್ ಘರಾನಾದ ಸಂಗೀತ ಸಂಪ್ರದಾಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಪಂಡಿತ್ ಮಿಶ್ರಾ ಅವರು ತಮ್ಮ ಧ್ವನಿ ಮತ್ತು ಹಾಡುಗಳಿಂದ ಕಾಶಿಯ ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಶ್ರೀ ಮೋದಿ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಮಣಿಕರ್ಣಿಕಾ ಘಾಟ್ ನಲ್ಲಿನ ಹೋಳಿ ಹಬ್ಬವಿಗಿರಲಿ ಅಥವಾ ಸಾವನ್ ತಿಂಗಳ ಆಚರಣೆಯ ಅವರ ಕಜ್ರಿ ಪ್ರದರ್ಶನವಾಗಲಿ, ಅವರ ಸಂಗೀತ ಸಂಪೂರ್ಣ ಕಾಶಿಯಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತದೆ. ಜಾಗತಿಕ ವೇದಿಕೆಯಲ್ಲಿ ಪ್ರಮುಖ ಜಾನಪದ ಸಂಪ್ರದಾಯಗಳಿಗೆ ಮನ್ನಣೆ ತರುವಲ್ಲಿ ಪಂಡಿತ್ ಮಿಶ್ರಾ ಜಿ ಅವರ ಕೊಡುಗೆಯನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಪಂಡಿತ್ ಮಿಶ್ರಾ ಅವರನ್ನು ಹಲವಾರು ಬಾರಿ ಭೇಟಿಯಾಗುವ ಮತ್ತು ಅವರ ಪ್ರೀತಿಯನ್ನು ಪಡೆಯುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಹೇಳಿದರು. 2014ರ ಚುನಾವಣೆಯಲ್ಲಿ ಪಂಡಿತ್ ಛನ್ನುಲಾಲ್ ಮಿಶ್ರಾ ಜಿ ಅವರು ತಮ್ಮ ಅಭ್ಯರ್ಥಿತನ ಪ್ರಸ್ತಾಪಕರಲ್ಲಿ ಒಬ್ಬರಾಗಿದ್ದರು ಎಂದು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಕಾಶಿಯೊಂದಿಗಿನ ಪಂಡಿತ್ ಮಿಶ್ರಾ ಜಿ ಅವರ ಆಳವಾದ ಭಾವನಾತ್ಮಕ ಸಂಪರ್ಕವು ನಿಜವಾಗಿಯೂ ವಿಶಿಷ್ಟವಾಗಿದೆ ಎಂದು ಹೇಳಿದರು.
ಕಾಶಿಯ ಅಭಿವೃದ್ಧಿ ಮತ್ತು ಸಂಪ್ರದಾಯಗಳ ಕುರಿತು ಪಂಡಿತ್ ಮಿಶ್ರಾ ಅವರು ತಮಗೆ ಆಗಾಗ್ಗೆ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಿದ್ದರು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನಿವಾಸಕ್ಕೆ ತಾವು ಭೇಟಿ ನೀಡಿದ್ದನ್ನು ಶ್ರೀ ಮೋದಿ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು, ಗಾಂಧಿ ಜಯಂತಿಯಂದು ಈ ಸಂದೇಶವನ್ನು ಬರೆಯುವಾಗ ಈ ನೆನಪು ವಿಶೇಷವಾಗಿ ಎದ್ದು ಕಾಣುತ್ತದೆ ಎಂದು ಅವರು ಹೇಳಿದರು.
ಪಂಡಿತ್ ಮಿಶ್ರಾ ಜಿ ಭೌತಿಕವಾಗಿ ಇಲ್ಲದಿದ್ದರೂ, ಭಾರತದ ಪ್ರತಿಯೊಬ್ಬ ಸಂಗೀತ ಪ್ರೇಮಿ ಅವರ ಜೀವನದಿಂದ ಸ್ಫೂರ್ತಿ ಪಡೆಯುತ್ತಲೇ ಇರುತ್ತಾರೆ ಮತ್ತು ಕಾಶಿಯು ಪ್ರತಿ ಆಚರಣೆಯಲ್ಲೂ ಅವರ ಭಜನೆಗಳ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಪಂಡಿತ್ ಮಿಶ್ರಾ ಅವರ ಅಗಲಿದ ಕುಟುಂಬಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿಯವರು, ಅವರ ಕುಟುಂಬದ ದುಃಖವು ತಮ್ಮ ವೈಯಕ್ತಿಕ ದುಃಖ ಎಂದು ಹೇಳಿದರು. ಬಾಬಾ ವಿಶ್ವನಾಥ್ ದೇವರು ಪಂಡಿತ್ ಛನ್ನುಲಾಲ್ ಮಿಶ್ರಾ ಅವರಿಗೆ ಅವರ ಪಾದಗಳಲ್ಲಿ ಸ್ಥಾನ ನೀಡಲಿ ಮತ್ತು ಈ ದುಃಖದ ಸಮಯದಲ್ಲಿ ಅವರ ಹಿತೈಷಿಗಳಿಗೆ ಶಕ್ತಿ ನೀಡಲಿ ಎಂದು ಪ್ರಧಾನಮಂತ್ರಿ ಅವರು ಪ್ರಾರ್ಥಿಸಿದರು.




