ಶೇರ್
 
Comments
Few people are attempting to weaken the honesty of our social structures; Govt is working towards cleansing the system of such elements: PM
As a result of the efforts of the Government, the economy is functioning with less cash: PM Modi
The cash to GDP ratio has come down to 9 per cent, from 12 per cent before demonetisation: Prime Minister
There was a time when India was among Fragile Five economies, but now steps taken by Govt will ensure a new league of development: PM
Premium would be placed on honesty, and the interests of the honest would be protected: PM Modi
87 reforms have been carried out in 21 sectors in last three years: PM Modi
In the policy and planning of the Government, care is being taken to ensure that lives of poor and middle class change for the better: PM

 

ನನ್ನ ಸಚಿವ ಸಂಪುಟದಲ್ಲಿರುವ ಸಹೋದ್ಯೋಗಿ ಮಿತ್ರರೂ ಕಾರ್ಪೊರೇಟ್ ವ್ಯವಹಾರಗಳ ಸಹಾಯಕ ಸಚಿವರೂ ಆದ ಶ್ರೀ ಪಿ.ಪಿ.ಚೌಧರಿಯವರೇ,

ಭಾರತೀಯ ಕಂಪನಿ ಸೆಕ್ರೆಟರಿಗಳ ಸಂಸ್ಥೆಯ ಅಧ್ಯಕ್ಷರಾದ ಡಾ.ಶಾಮ್ ಅಗರವಾಲ್ ಅವರೇ, ಮತ್ತು ಈ ಸಮಾರಂಭದಲ್ಲಿ ಉಪಸ್ಥಿತರಿರುವ ಇನ್ನಿತರ ಗಣ್ಯರೇ,

ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆಯು (ಐಸಿಎಸ್ಐ) ಇಂದು ತನ್ನ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಸಂಸ್ಥೆಯ ಜತೆ ಗುರುತಿಸಿಕೊಂಡು, ದುಡಿದಿರುವ ಎಲ್ಲ ಮಹನೀಯರಿಗೂ ನನ್ನ ಹೃತ್ಪೂರ್ವಕ ಶುಭ ಕಾಮನೆಗಳು.

ಐಸಿಎಸ್ಐನ ಈ 49 ವರ್ಷಗಳ ಪಯಣದಲ್ಲಿ ಸಂಸ್ಥೆಯ ಜತೆಗಿದ್ದವರೊಂದಿಗೆ ಮತ್ತು ಅವರೆಲ್ಲರನ್ನೂ ಗೌರವಿಸುತ್ತಿರುವ ಈ ಸಂದರ್ಭದಲ್ಲಿ ನಾನು ಇಲ್ಲಿರುವುದು ನನ್ನ ಸುಕೃತವೇ ಸರಿ. ದೇಶದ ಪ್ರತಿಯೊಂದು ಕಂಪನಿಯೂ/ಉದ್ದಿಮೆಯೂ ದೇಶದ ಕಾನೂನುಗಳನ್ನು ಪಾಲಿಸುವಂತೆ, ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವಂತೆ ಮತ್ತು ಸುಳ್ಳು ಲೆಕ್ಕ ತೋರಿಸದಂತೆ ಮಾಡುತ್ತಿರುವ ಪರಿಣತರೊಂದಿಗೆ ಇರುವ ಅವಕಾಶ ನನಗೆ ಸಿಕ್ಕಿದ್ದು ಬಹುದೊಡ್ಡ ಗೌರವವೇ ಸರಿ. ದೇಶದಲ್ಲಿ ಕಾರ್ಪೊರೇಟ್ ಸಂಸ್ಕೃತಿ ಹೇಗಿರಬೇಕೆಂದು ತೋರಿಸುವ ಜವಾಬ್ದಾರಿ ನಿಮ್ಮ ಮೇಲಿದೆ.`ಸತ್ಯಂ ವದ, ಧರ್ಮಂ ಚರ’ ಎನ್ನುವುದು ನಿಮ್ಮ ಸಂಸ್ಥೆಯ ಘೋಷವಾಕ್ಯವಾಗಿದೆ. ಅಂದರೆ, ಪ್ರತಿಯೊಬ್ಬರೂ ಸತ್ಯವನ್ನೇ ನುಡಿಯಬೇಕು ಮತ್ತು ನೀತಿ-ನಿಯಮಗಳನ್ನು ಪಾಲಿಸಬೇಕು ಎನ್ನುವುದು ಇದರ ಅರ್ಥವಾಗಿದೆ. ನೀವು ನೀಡುವ ಸಲಹೆಗಳು ಸರಿಯಾದರೂ ಆಗಿರಲಿ, ತಪ್ಪಾದರೂ ಆಗಿರಲಿ, ಅದು ದೇಶದ ಕಾರ್ಪೊರೇಟ್ ಆಡಳಿತದ ಮೇಲೆ ತನ್ನದೇ ಆದ ಪರಿಣಾಮ ಬೀರುತ್ತದೆ.

ಸ್ನೇಹಿತರೇ, ಜನರು ಸಾಮಾನ್ಯವಾಗಿ ಯಾವ ದಾರಿಯಲ್ಲಿ ನಡೆಯಬೇಕೋ ಅದನ್ನು ಬಿಟ್ಟು ಕೆಟ್ಟ ಹಾದಿಯನ್ನು ತುಳಿಯುವುದನ್ನು ನಾವು ಹಲವು ಸಂದರ್ಭಗಳಲ್ಲಿ ನೋಡಿದ್ದೇವೆ. ಉದಾಹರಣೆಗೆ ಹೇಳುವುದಾದರೆ, ಮಹಾಭಾರತದಲ್ಲಿ ಯುಧಿಷ್ಠಿರ ಮತ್ತು ದುರ್ಯೋಧನ ಇಬ್ಬರೂ ಒಂದೇ ಗುರುವಿನ ಬಳಿ ಪಾಠ ಕಲಿತವರೇ ಆಗಿದ್ದರು. ಆದರೇನು ಮಾಡುವುದು, ಅವರಿಬ್ಬರೂ ಹಿಡಿದ ಬೇರೆಬೇರೆಯಾಗಿದ್ದವು.

ಮಹಾಭಾರತದಲ್ಲಿ ಬರುವ ದುರ್ಯೋಧನನ ಮಾತೊಂದು ಹೀಗಿದೆ- “ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ/ ಜಾನಾಮಿ ಅಧರ್ಮಂ ನ ಚ ಮೇ ನಿವೃತ್ತಿಃ”. ಅಂದರೆ, “ನ್ಯಾಯವೆಂದರೇನೆಂದು ನನಗೆ ಗೊತ್ತು. ಆದರೆ, ಆ ಹಾದಿ ನನಗೆ ಇಷ್ಟವಿಲ್ಲ. ಕೆಡುಕೆಂದರೇನೆಂಬುದೂ ನನಗೆ ಗೊತ್ತು. ಆದರೂ ನಾನು ಅದರಿಂದ ದೂರವಾಗಲಾರೆ,” ಎಂದರ್ಥ.

`ಸತ್ಯಂ ವದ, ಧರ್ಮಂ ಚರ’ ಎನ್ನುವ ಘೋಷವಾಕ್ಯವನ್ನು ಅಳವಡಿಸಿಕೊಂಡಿರುವ ನಿಮ್ಮ ಸಂಸ್ಥೆಯು ಮೌಲ್ಯಗಳನ್ನು ಎತ್ತಿ ಹಿಡಿದ ಅಂತಹ ಜನರನ್ನು ನೆನಪಿಸುತ್ತದೆ. ನಿಮ್ಮ ಸಂಸ್ಥೆಯು ದೇಶದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಒಂದು ವ್ಯವಸ್ಥಿತ/ಸಾಂಸ್ಥಿಕ ರೂಪ ನೀಡುವ ದಿಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಸೋದರ-ಸೋದರಿಯರೇ, ಆಚಾರ್ಯ ಚಾಣಕ್ಯನ ಒಂದು ಮಾತು ಹೀಗಿದೆ-

“ಏಕೇನ ಶುಷ್ಕ ವೃಕ್ಷೇಣ / ದಹ್ಯ ಮಾನೇನ ವನೇನಾ

ದಹ್ಯತೇ ತಾ ವನಂ ಸರ್ವಂ/ ಕುಪುತ್ರೇಣ ಕುಲಂ ಯಥಾ”

ಅಂದರೆ, “ಕಾಡಿನಲ್ಲಿರುವ ಒಂದೇಒಂದು ಒಣಮರಕ್ಕೆ ಬೆಂಕಿ ಬಿದ್ದರೂ ಸಾಕು, ಅದು ಇಡೀ ಕಾಡನ್ನೇ ಸುಟ್ಟು ಭಸ್ಮ ಮಾಡುತ್ತದೆ/ ಹಾಗೆಯೇ, ಒಂದು ಕುಟುಂಬದಲ್ಲಿ ಒಬ್ಬೇಒಬ್ಬ ದುಷ್ಟನಿದ್ದರೂ ಸಾಕು, ಅವನಿಂದಾಗಿ ಇಡೀ ವಂಶಕ್ಕೇ ಕೆಟ್ಟ ಹೆಸರು ಬರುತ್ತದೆ” ಎಂದರ್ಥ.

ಸ್ನೇಹಿತರೇ, ಈ ತತ್ವವು ಇಡೀ ದೇಶಕ್ಕೂ ಅನ್ವಯಿಸುತ್ತದೆ. ನಮ್ಮಲ್ಲಿ ಕೆಲವೇ ಕೆಲವು ಜನರು ಇಡೀ ದೇಶದ ಹೆಸರಿಗೆ ಧಕ್ಕೆ ತರುವ ಕೆಲಸಗಳಲ್ಲಿ ಮುಳುಗಿದ್ದು, ಇವರು ನಮ್ಮ ಸಮಾಜವನ್ನು ದುರ್ಬಲಗೊಳಿಸಲು ಹವಣಿಸುತ್ತಿದ್ದಾರೆ. ಆದರೆ, ನಮ್ಮ ಸರಕಾರವು ಇಡೀ ವ್ಯವಸ್ಥೆಯನ್ನು ಮತ್ತು ಸಂಸ್ಥೆಗಳನ್ನು ಚೊಕ್ಕಟಗೊಳಿಸುವ ಆಂದೋಲನವನ್ನು ಕೈಗೆತ್ತಿಕೊಂಡಿದ್ದು, ಇಂಥ ದುಷ್ಟ ವ್ಯಕ್ತಿಗಳಿಂದ ಇವೆಲ್ಲಕ್ಕೂ ಮುಕ್ತಿ ದೊರಕಿಸಿಕೊಡಲು ಮುಂದಡಿ ಇಟ್ಟಿದೆ.

ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ನಾವು ಈ ಆಂದೋಲನ ಭಾಗವಾಗಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದೆವು. ಅಂದರೆ, ನಮ್ಮ ಸರಕಾರದ ಸಂಪುಟವು ತೆಗೆದುಕೊಂಡ ಮೊಟ್ಟಮೊದಲ ನಿರ್ಧಾರವೇ ಇದಾಗಿತ್ತು. ವಾಸ್ತವವಾಗಿ, ಇಂಥದೊಂದು ತನಿಖಾ ತಂಡವನ್ನು ರಚಿಸಬೇಕೆಂದು ಸುಪ್ರೀಂಕೋರ್ಟ್ ಎಷ್ಟೋ ವರ್ಷಗಳ ಹಿಂದೆಯೇ ಸಲಹೆ ನೀಡಿತ್ತು. ಇದಕ್ಕೆ ಪೂರಕವಾಗಿ ನಮ್ಮ ಸರಕಾರ ಕೈಗೊಂಡಿರುವ ಹಲವು ಪೂರಕ ಕ್ರಮಗಳು ಹೀಗಿವೆ-

-ವಿದೇಶಗಳಲ್ಲಿ ಇಟ್ಟಿರುವ ಕಾಳಧನವನ್ನು ವಾಪಸ್ ದೇಶಕ್ಕೆ ತರಲು ಕಪ್ಪು ಹಣ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

-ಹಲವು ದೇಶಗಳೊಂದಿಗೆ ತೆರಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದ್ದು, ಮೊದಲಿನ ಒಡಂಬಡಿಕೆಗಳಿಗೆ ತಿದ್ದುಪಡಿ ತರಲಾಗಿದೆ. ಹಲವು ದೇಶಗಳೊಂದಿಗೆ ಸಮಾಲೋಚಿಸಿ, ಹೊಸ ಮಾರ್ಗೋಪಾಯಗಳನ್ನು ಕಂಡುಹಿಡಿಯಲಾಗಿದೆ.

-ದಿವಾಳಿ ಘೋಷಣೆಗೆ ಸಂಬಂಧಿಸಿದಂತೆ ಹೊಸ ಸಂಹಿತೆಯನ್ನು ರೂಪಿಸಲಾಗಿದೆ.

-ಕಳೆದ 28 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೇನಾಮಿ ಆಸ್ತಿ ಶಾಸನವನ್ನು ಅನುಷ್ಠಾನಕ್ಕೆ ತರಲಾಗಿದೆ.

-ಹಲವು ವರ್ಷಗಳಿಂದ ಪ್ರಗತಿ ಕಾಣದೆ ಸ್ತಬ್ಧವಾಗಿದ್ದ ಸುಗಮ ಮತ್ತು ಸರಳ ತೆರಿಗೆ -ಜಿಎಸ್ ಟಿ- ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

-ಜತೆಗೆ, ಈ ಸರಕಾರವು ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವ ಧೈರ್ಯವನ್ನು ಪ್ರದರ್ಶಿಸಿದೆ.

ಸೋದರರೇ ಮತ್ತು ಸೋದರಿಯರೇ, ಈ ಸರಕಾರವು ದೇಶದ ಸಾಂಸ್ಥಿಕ ವ್ಯವಸ್ಥೆಯಲ್ಲಿ ಋಜುತ್ವವನ್ನು/ ಪ್ರಾಮಾಣಿಕತೆಯನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ನಮ್ಮ ಸರಕಾರದ ಪರಿಶ್ರಮದಿಂದಾಗಿ, ನಾವೀಗ ಗೋಚರರೂಪದಲ್ಲಿ ಅತ್ಯಂತ ಕಡಿಮೆ ಹಣವಿರುವ ಆರ್ಥಿಕ ವ್ಯವಸ್ಥೆಯನ್ನು ಹೊಂದಿದ್ದೇವೆ. 2016ನೇ ಇಸವಿಯ ನವೆಂಬರ್ 9ನೇ ತಾರೀಖನ್ನು ಭಾರತದ ಇತಿಹಾಸದಲ್ಲಿ ಮುಂಬರುವ ದಿನಗಳಲ್ಲಿ `ಭ್ರಷ್ಟಾಚಾರ ನಿರ್ಮೂಲನಾ ಆಂದೋಲನ’ ಆರಂಭವಾದ ದಿನವೆಂದು ಗುರುತಿಸಲಾಗುತ್ತದೆ. ನೋಟು ರದ್ದತಿ ಕ್ರಮದ ನಂತರ ನಮ್ಮ ನಿವ್ವಳ ದೇಶೀಯ ಉತ್ಪಾದನೆ(ಜಿಡಿಪಿ)ಗೆ ಹರಿದು ಬರುತ್ತಿರುವ ಗೋಚರ ಹಣದ ಪ್ರಮಾಣ ಶೇಕಡ 9ಕ್ಕೆ ಇಳಿದಿದೆ. 2016ನೇ ಇಸವಿಯ ನವೆಂಬರ್ 8ನೇ ತಾರೀಖಿಗೂ ಮೊದಲು ಈ ಪ್ರಮಾಣ ಶೇಕಡ 12ಕ್ಕಿಂತ ಜಾಸ್ತಿ ಇತ್ತು. ಇಡೀ ದೇಶದಲ್ಲಿ ಮತ್ತು ಇಡೀ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯ ಯುಗವನ್ನು ನಾವು ಆರಂಭಿಸಿದೆ ಇದ್ದಿದ್ದರೆ ಇದು ಸಾಧ್ಯವಾಗುತ್ತಿತ್ತೇನು? ಮೊದಲೆಲ್ಲ ಕಪ್ಪುಹಣವನ್ನು ಸಲೀಸಾಗಿ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈಗ ಕಾಳಧನ ವಿನಿಮಯ ಮಾಡುವುದಕ್ಕೂ ಮೊದಲು 50 ಸಲ ಯೋಚಿಸಬೇಕಾಗಿ ಬಂದಿದೆ. ಈ ವಿಷಯ ನಿಮಗಿಂತ ಚೆನ್ನಾಗಿ ಬೇರೆ ಯಾರಿಗೆ ಗೊತ್ತು ಹೇಳಿ?

ಸ್ನೇಹಿತರೇ, ಮಹಾಭಾರತದಲ್ಲಿ ಶಲ್ಯನ ಪಾತ್ರವೂ ಬರುತ್ತದೆ. ಇವನು ಕರ್ಣನ ಸಾರಥಿಯಾಗಿದ್ದವನು. ಇನ್ನೊಂದು ಕಡೆ, ಪಾಂಡವರ ಪಾಳೆಯದಲ್ಲಿ ಶ್ರೀಕೃಷ್ಣನು ಅರ್ಜುನನ ಸಾರಥಿಯಾಗಿದ್ದ. ಶಲ್ಯ ಏನು ಮಾಡುತ್ತಿದ್ದನೆಂದರೆ, ಯುದ್ಧಭೂಮಿಯಲ್ಲಿರುವವರ ಉತ್ಸಾಹವನ್ನು ಅವನು ಸದಾ ಕುಗ್ಗಿಸಿ, ಎಲ್ಲೆಡೆಯೂ ನಿರಾಶೆಯನ್ನು ಹಬ್ಬಿಸುತ್ತಿದ್ದ. ಅಂದರೆ ಅವನ ಬಾಯಿಂದ ಯಾವಾಗಲೂ “ನಿನಗೆ ಧೈರ್ಯವಿಲ್ಲ, ನಿನ್ನ ಕುದುರೆಗಳಿಗೆ ಬಲವಿಲ್ಲ, ನಿನ್ನ ರಥ ಸರಿಯಾಗಿಲ್ಲ. ಹೀಗಿರುವಾಗ ನೀನು ಹೇಗೆ ತಾನೇ ಯುದ್ಧದಲ್ಲಿ ಹೋರಾಡಬಲ್ಲೆ?” ಎನ್ನುವ ಮಾತುಗಳೇ ಬರುತ್ತಿದ್ದವು. ಅಂದಂತೆ, ಈ ಶಲ್ಯನು ಮಹಾಭಾರತದ ಯುಗಕ್ಕೆ ಸೇರಿದವನು. ಆದರೆ, ಶಲ್ಯನ ಮನಃಸ್ಥಿತಿಯನ್ನುಳ್ಳ ಜನರು ಈಗಲೂ ನಮ್ಮ ಸುತ್ತಮುತ್ತ ಇದ್ದಾರೆ. ಇಂಥವರು ಯಾವಾಗಲೂ ಹತಾಶೆಯ ಮಾತುಗಳನ್ನೇ ಆಡುತ್ತ,, ಅದನ್ನೇ ಎಲ್ಲೆಡೆ ಹುಟ್ಟುಹಾಕುತ್ತಿರುತ್ತಾರೆ. ಇಂಥವರಿಗೆ, ಕೇವಲ ಒಂದು ತ್ರೈಮಾಸಿಕ ಅವಧಿಯಲ್ಲಿ ದೇಶದ ಜಿಡಿಪಿ ದರ ಇಳಿದಿರುವುದೇ ಬಹುದೊಡ್ಡ ಸುದ್ದಿಯಾಗಿದೆ. ಇವರೆಲ್ಲರೂ ನಿರಾಶಾವಾದದ ಮನಃಸ್ಥಿತಿಯವರಾಗಿದ್ದು, ಯಾವಾಗಲೂ “ನೀವು ಇದನ್ನು ಹೇಗೆ ಮಾಡುತ್ತೀರಿ ಮತ್ತು ಮುಂದೇನಾಗುತ್ತದೆ” ಎನ್ನುವುದನ್ನೇ ಮಾತನಾಡುತ್ತಿರುತ್ತಾರೆ.

ಇತ್ತೀಚೆಗೆ ಚೀನಾದೊಂದಿಗೆ ನಮಗೆ ದೋಖ್ಲಾಂನಲ್ಲಿ ವಿವಾದ ಸೃಷ್ಟಿಯಾಯಿತಷ್ಟೆ. ಆಗಲೂ ಇಂಥವರು ಮತ್ತೊಮ್ಮೆ ನಿರಾಶಾವಾದದ ಮಾತುಗಳನ್ನೇ ಎಲ್ಲೆಡೆ ಹಬ್ಬಿಸುತ್ತ, ಈ ಸರಕಾರದ ಕೈಯಲ್ಲಿ ಏನೂ ಆಗುವುದಿಲ್ಲ ಎಂದೇ ಹೇಳುತ್ತಿದ್ದರು. ಕೆಲವರ ಸ್ವಭಾವವೇ ಹೀಗೆ, ಅವರು ನಿರಾಶೆಯನ್ನು ಹುಟ್ಟಿಸುವುದರಲ್ಲೇ ಸಂತೋಷವನ್ನು ಕಾಣುತ್ತಿರುತ್ತಾರೆ. ಹೀಗೆ ಮಾಡಿದರಷ್ಟೇ ಅವರಿಗೆ ಚೆನ್ನಾಗಿ ನಿದ್ದೆ ಬರುತ್ತದೆ! ಜಿಡಿಪಿ ದರ ಒಂದು ತ್ರೈಮಾಸಿಕ ಅವಧಿಯಲ್ಲಿ ಇಳಿದ ಸುದ್ದಿಯೇ ಇವರ ಕೈಗೆ ದೊಡ್ಡ ಅಸ್ತ್ರದಂತೆ ಕಾಣುತ್ತದೆ. ಇಂಥ ಜನರನ್ನು ನಾವು ಪತ್ತೆ ಹಚ್ಚುವುದು ಅಗತ್ಯವಾಗಿದೆ. ಸ್ನೇಹಿತರೇ, ಅಂಕಿಅಂಶಗಳೆಲ್ಲವೂ ಅವರ ಪಾಲಿಗೆ ಸರಿಯಾಗಿದ್ದರೆ ಸಾಕು, ಸಂಸ್ಥೆಗಳು ಮತ್ತು ಲೆಕ್ಕಪತ್ರಗಳೆಲ್ಲವೂ ಸರಿಯಾಗಿದೆ ಎಂದು ಇವರಿಗೆ ಅನಿಸುತ್ತದೆ. ಆದರೆ, ಅದೇ ಅಂಕಿಅಂಶಗಳು ಇವರ ಮೂಗಿನ ನೇರಕ್ಕೆ ಇಲ್ಲವೆನ್ನಿ, ಕೂಡಲೇ ಇವರೆಲ್ಲ ಸಂಸ್ಥೆಗಳನ್ನೂ ಅವುಗಳ ಕಾರ್ಯವಿಧಾನಗಳನ್ನೂ ಪ್ರಶ್ನಿಸಲು ಶುರು ಮಾಡಿಬಿಡುತ್ತಾರೆ. ಯಾವುದೇ ತೀರ್ಮಾನಕ್ಕೆ ಬರುವ ಮೊದಲೇ ಇಂಥ ಜನರನ್ನು ಪತ್ತೆ ಹಚ್ಚುವುದು ಬಹುಮುಖ್ಯ. ಆಗಮಾತ್ರ ನಾವು ಋಜುತ್ವದ ಮಾರ್ಗದಲ್ಲಿ ನಡೆಯಬಹುದಷ್ಟೆ.

ಸ್ನೇಹಿತರೇ, ಹಾಗಾದರೆ ಆರ್ಥಿಕ ವರ್ಷದ ಒಂದು ತ್ರೈಮಾಸಿಕ ಅವಧಿಯಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಜಿಡಿಪಿ ದರ ಶೇಕಡ 5.7ಕ್ಕೆ ಇಳಿದಿದೆ ಎಂದು ನಿಮಗೆ ನಿಜಕ್ಕೂ ಅನಿಸುತ್ತಿದೆಯೇನು? ಇದು ಖಂಡಿತವಾಗಿಯೂ ಸಾಧ್ಯವಿಲ್ಲ. ನಮ್ಮ ಹಿಂದಿನ ಸರಕಾರವಿದ್ದಾಗ, ಕಳೆದ ಆರು ವರ್ಷಗಳ ಅವಧಿಯಲ್ಲಿ ಜಿಡಿಪಿ ದರ ಶೇಕಡ 5.7ಕ್ಕಷ್ಟೇ ಏಕೆ, ಎಂಟು ಸಲ ಅದು ಇದಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿದಿತ್ತು. ಎಷ್ಟೋ ತ್ರೈಮಾಸಿಕಗಳಲ್ಲಿ ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆ ದರವು ಕೇವಲ ಶೇಕಡ 0.5% ಮತ್ತು ಶೇಕಡ 1.5%ಕ್ಕೆಲ್ಲ ಕುಸಿದಿತ್ತು. ಇಂಥ ಕುಸಿತವು ಈಗಿನ ಕುಸಿತಕ್ಕಿಂತ ಹೆಚ್ಚು ಅಪಾಯಕಾರಿಯಾದುದು. ಏಕೆಂದರೆ, ಇಂಥ ಕಾಲಘಟ್ಟಗಳಲ್ಲೆಲ್ಲ ದೇಶದ ಅರ್ಥವ್ಯವಸ್ಥೆಯು ಹೆಚ್ಚಿನ ಹಣದುಬ್ಬರ, ತೀವ್ರವಾದ ಚಾಲ್ತಿ ಖಾತೆ ಕೊರತೆ ಮತ್ತು ವಿಪರೀತವೆನಿವಷ್ಟರ ಮಟ್ಟಿಗಿನ ವಿತ್ತೀಯ ಕೊರತೆಯಿಂದ ಬೇರೆ ನಲುಗುತ್ತಿತ್ತು.

2014ಕ್ಕಿಂತ ಹಿಂದಿನ ಎರಡು ವರ್ಷಗಳನ್ನೇ ತೆಗೆದುಕೊಳ್ಳಿ. ಅಂದರೆ, 2012-13 ಮತ್ತು 2013-14ನೇ ಸಾಲುಗಳಲ್ಲಿ ನಮ್ಮ ಆರ್ಥಿಕ ಬೆಳವಣಿಗೆಯ ಸರಾಸರಿ ದರ ಶೇಕಡ 6 ಮಾತ್ರವೇ ಇತ್ತು. ನಾನು ಈ ಎರಡು ವರ್ಷಗಳ ಉದಾಹರಣೆಯನ್ನಷ್ಟೇ ಏಕೆ ನೀಡುತ್ತಿದ್ದೇನೆ ಎಂದು ಕೆಲವರು ಕೇಳಬಹುದು. ಏಕೆಂದರೆ, ನಾವು ಏನೇ ಹೇಳಿದರೂ ಪ್ರತಿಯಾಗಿ ಅದಕ್ಕೆ ಇನ್ನೊಂದು ಮಾತನಾಡುವುದಕ್ಕೆ `ಶಲ್ಯ ಮನೋಭಾವ’ದ ಜನರಿಗೆ ಒಂದು ಕ್ಷಣ ಸಾಕು!

ಸ್ನೇಹಿತರೇ, ನಾನು ಈ ಎರಡು ವರ್ಷಗಳ ಬಗ್ಗೆಯೇ ಹೇಳಲು ಕಾರಣವಿದೆ. ಏಕೆಂದರೆ, ಹಿಂದಿನ ಸರಕಾರದ ಆ ಎರಡು ವರ್ಷಗಳ ಅವಧಿಯಲ್ಲಿ ಜಿಡಿಪಿ ದರವನ್ನು ಲೆಕ್ಕ ಹಾಕುತ್ತಿದ್ದ ವಿಧಾನಕ್ಕೂ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ಕಳೆದ ಮೂರು ವರ್ಷಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಳವಡಿಸಿಕೊಂಡಿರುವ ವಿಧಾನಕ್ಕೂ ವ್ಯತ್ಯಾಸವಿದೆ. ಕೇಂದ್ರ ಅಂಕಿಅಂಶ ಕಚೇರಿಯು, ನಮ್ಮ ಸರಕಾರದ ಅವಧಿಯಲ್ಲಿ ಶೇಕಡ 7.4ರಷ್ಟು ಜಿಡಿಪಿ ದರವಿದೆ ಎನ್ನುವ ಅಂಕಿಅಂಶವನ್ನು ಬಿಡುಗಡೆ ಮಾಡಿದಾಗ ಕೆಲವರು ಅದನ್ನು ತಳ್ಳಿಹಾಕಿದರು. ಏಕೆಂದರೆ, ಇದು ಅವರ ಗ್ರಹಿಕೆಗೆ ತಕ್ಕಂತೆ ಇರಲಿಲ್ಲ. ಹೀಗಾಗಿ ಇವರೆಲ್ಲ “ದೇಶದ ಆರ್ಥಿಕತೆಯು ಈ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದು ನಮಗೆ ಅನ್ನಿಸುತ್ತಿಲ್ಲ,” ಎಂದರು. ಅಂದರೆ, ಈ ಅಂಕಿಅಂಶವು ಅವರ `ಶಲ್ಯ ಮನೋಭಾವ’ಕ್ಕೆ ಹೊಂದುತ್ತಿರಲಿಲ್ಲ ಎಂದರ್ಥವಷ್ಟೆ.

ಆಗ ಇವರಿಗೆಲ್ಲ ಈ ಸಂಸ್ಥೆಗಳು ಹೇಳಿದ್ದು ಹಿಡಿಸುತ್ತಿರಲಿಲ್ಲ, ಅವು ಅನುಸರಿಸುವ ವಿಧಿವಿಧಾನಗಳು ಪಥ್ಯವಾಗಿರಲಿಲ್ಲ. ಆದರೆ, ಅವೇ ಸಂಸ್ಥೆಗಳು “ದೇಶದ ಜಿಡಿಪಿ ದರ ಶೇಕಡ 5.7ಕ್ಕೆ ಕುಸಿದಿದೆ,” ಎಂದ ತಕ್ಷಣ ಈ ಜನಗಳ ಉತ್ಸಾಹ ಉಕ್ಕಿಬಿಟ್ಟಿತು. ಕೂಡಲೇ ಇವರೆಲ್ಲ “ಈ ಸಂಸ್ಥೆಗಳು ಹೇಳುತ್ತಿರುವುದು ಸರಿಯಾಗಿದೆ,” ಎನ್ನತೊಡಗಿದರು. ಆದರೆ ಇದೇ ಜನಗಳು ಹಿಂದೊಮ್ಮೆ “ಈ ಸಂಸ್ಥೆಗಳು ಸರಿಯಿಲ್ಲ,” ಎಂದು ದೂಷಿಸುತ್ತಿದ್ದರು. ನಿಜ ಹೇಳಬೇಕೆಂದರೆ, ದೇಶದ ಆರ್ಥಿಕತೆಯು ವೇಗದಿಂದ ಬೆಳೆಯುತ್ತಿದೆ. ಆದರೆ, ಈ ಜನರು ಅದನ್ನು ಒಪ್ಪುತ್ತಿಲ್ಲ ಅಷ್ಟೆ. ಹೀಗಾಗಿ, ಇಂಥ ಬೆರಳೆಣಿಕೆಯಷ್ಟು ಜನರು “ಜಿಡಿಪಿ ದರವನ್ನು ಲೆಕ್ಕ ಹಾಕುತ್ತಿರುವುದರಲ್ಲೇ ಏನೋ ತಪ್ಪಿದೆ,” ಎನ್ನುತ್ತಿದ್ದಾರೆ. ಹಿಂದೆಲ್ಲ ಇದೇ ಮಹಾಶಯರು, ಅಂಕಿಅಂಶಗಳಿಗಿರುವ ಆಧಾರದ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ. ಹೀಗಾಗಿಯೇ ಇವರಿಗೆ ಈಗ ದೇಶದ ಆರ್ಥಿಕತೆಯು ಸಾಧಿಸುತ್ತಿರುವ ಬೆಳವಣಿಗೆಯು ಕಾಣುತ್ತಿಲ್ಲ.

ಸಹೋದರರೇ ಮತ್ತು ಸಹೋದರಿಯರೇ, ಕೇವಲ ಎರಡು ತ್ರೈಮಾಸಿಕಗಳ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರವು ಶೇಕಡ 6.1ರಿಂದ ಶೇಕಡ 5.7ಕ್ಕೆ ಕುಸಿದಿದ್ದೇ ತಡ, ಶಲ್ಯ ಮನೋಭಾವದ ಹಣಕಾಸು ತಜ್ಞರಿಗೆಲ್ಲ ಅದೇ ಅಂಕಿಅಂಶಗಳು ಸರಿಯಾಗಿ ಕಾಣಿಸುತ್ತಿವೆ!

ಸಹೋದರರೇ ಮತ್ತು ಸಹೋದರಿಯರೇ, ಭಾರತವನ್ನು ಒಂದು ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಒಂದು ಗುಂಪಿನಲ್ಲಿ `ಐದು ದುರ್ಬಲ ರಾಷ್ಟ್ರಗಳು’ (ಫ್ರಝೈಲ್ ಫೈವ್) ಎನ್ನುವ ರೋಗಗ್ರಸ್ತ ಕೂಟದ ಜತೆ ಗುರುತಿಸಲಾಗುತ್ತಿತ್ತು. ಈ ಗುಂಪು ಈಗಿರುವ ಜಿ-7, ಜಿ-8 ಅಥವಾ ಜಿ-20 ಕೂಟಗಳಂತಲ್ಲ.

ಏಕೆಂದರೆ, ಈ `ಫ್ರಝೈಲ್ ಫೈವ್’ ಗುಂಪಿನಲ್ಲಿದ್ದ ರಾಷ್ಟ್ರಗಳನ್ನು ಅಪಾಯಕಾರಿ ಎಂದು ಗುರುತಿಸಲಾಗಿತ್ತು. ಅಂದರೆ, ಈ ದೇಶಗಳ ಆರ್ಥಿಕ ಸ್ಥಿತಿಗತಿ ಮಾತ್ರ ಕೆಟ್ಟದಾಗಿದ್ದು ಇದಕ್ಕೆ ಕಾರಣವಲ್ಲ. ಬದಲಿಗೆ, ಜಾಗತಿಕ ಆರ್ಥಿಕ ಚೇತರಿಕೆಗೆ ಕೂಡ ಈ ದೇಶಗಳೇ ಬಹುದೊಡ್ಡ ಅಡ್ಡಗಾಲು ಎಂದು ಭಾವಿಸಲಾಗಿತ್ತು. ಭಾರತವನ್ನೂ ಆಗ ಈ ಅಪಾಯಕಾರಿ ಗುಂಪಿನಲ್ಲಿಡಲಾಗಿತ್ತು. ಅಂದರೆ, ನಮಗೆ ನಮ್ಮ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸಲು ಬರುವುದಿಲ್ಲ, ಜತೆಗೆ ಬೇರೆ ದೇಶಗಳ ಪಾಲಿಗೂ ನಾವು ತೊಂದರೆಯಾಗಿ ಪರಿಣಮಿಸಿದ್ದೆವು ಎಂದು ಇದರರ್ಥ.

ಆ ದಿನಗಳಲ್ಲಿ ಪ್ರಕಾಂಡ ಹಣಕಾಸು ತಜ್ಞರಿದ್ದಾರು. ಆದರೂ ಹೀಗೇಕಾಯಿತು ಎನ್ನುವುದು ಅರ್ಥಶಾಸ್ತ್ರದ ತಿಳಿವಳಿಕೆ ಇಲ್ಲದ ನನ್ನಂಥ ವ್ಯಕ್ತಿಗೆ ಈಗಲೂ ಗೊತ್ತಾಗುತ್ತಿಲ್ಲ. ಆ ದಿನಗಳಲ್ಲಿ ದೇಶದ ಅರ್ಥವ್ಯವಸ್ಥೆಗೆ ಸಂಬಂಧಪಟ್ಟಂತೆ ದೊಡ್ಡ ಸುದ್ದಿಯಾಗುತ್ತಿದ್ದುದು ಜಿಡಿಪಿ ದರವಲ್ಲ, ಬದಲಿಗೆ ಹೆಚ್ಚುತ್ತಲೇ ಇದ್ದ ಹಣದುಬ್ಬರ ದರ ಎನ್ನುವುದನ್ನು ನೀವು ತಿಳಿದುಕೊಂಡಿರಬೇಕು. ಇದರ ಜತೆಗೆ, ಆಗ ಚಾಲ್ತಿ ಖಾತೆ ಕೊರತೆ ಮತ್ತು ವಿತ್ತೀಯ ಕೊರತೆಗಳು ಕೂಡ ಪ್ರಮುಖ ಸುದ್ದಿಯಾಗಿದ್ದವು. ಅಲ್ಲದೆ, ನಮ್ಮ ರೂಪಾಯಿಯ ಎದುರು ಡಾಲರ್ ದರ ಹೇಗೆ ಬೆಳೆಯುತ್ತಿದೆ ಎನ್ನುವುದು ಕೂಡ ಆಗ ದಿನಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಬರುತ್ತಿತ್ತು. ಇನ್ನೊಂದೆಡೆಯಲ್ಲಿ, ಬಡ್ಡಿ ದರದ ಬೆಳವಣಿಗೆಯ ಬಗ್ಗೆಯೂ ಕಾವೇರಿದ ಚರ್ಚೆಗಳು ಆಗ ನಡೆಯುತ್ತಿದ್ದವು. ಆದರೆ, ದೇಶದ ಬೆಳವಣಿಗೆಯೇ ತಿರುವುಮುರುವಾಗಲು ಕಾರಣವಾಗಿದ್ದ ಈ ಅಂಶಗಳು/ಮಾನದಂಡಗಳು ಬೆರಳೆಣಿಕೆಯಷ್ಟು ಜನರಿಗೆ ಆಪ್ಯಾಯಮಾನವಾಗಿ ಕಾಣುತ್ತಿದ್ದವು.

ಆದರೆ, ಈಗ ಅದೇ ಮಾನದಂಡಗಳ ಪ್ರಕಾರ, ದೇಶದ ಅರ್ಥವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳು ಕಂಡುಬಂದಿವೆ; ಜತೆಗೆ, ದೇಶದ ಅಭಿವೃದ್ಧಿಯು ಸರಿಯಾದ ದಿಕ್ಕಿನಲ್ಲಿದೆ ಎಂದು ಇವು ಹೇಳುತ್ತಿವೆ. ಆದರೆ, ಈ ಬೆರಳೆಣಿಕೆಯಷ್ಟು ಜನರು ಇದನ್ನೆಲ್ಲ ತಮಗೆ ಹೇಗೆ ಬೇಕೋ ಹಾಗೆ ನೋಡುತ್ತಿದ್ದಾರೆ. ಇಂಥ ಜನರಿಗೆ ಕಣ್ಣೆದುರಿಗಿರುವುದು ಕಾಣುವುದಿಲ್ಲ ಎನ್ನುವುದನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ. ಇದಕ್ಕೆ ಪೂರಕವಾಗಿ ನಾನು ಪ್ರಾತ್ಯಕ್ಷಿಕೆಯನ್ನೂ ತೋರಿಸುತ್ತಿದ್ದೇನೆ.

ದೇಶದಲ್ಲಿ ಹಣದುಬ್ಬರ ದರ ಹಿಂದೆಲ್ಲ ಶೇಕಡ 10ಕ್ಕಿಂತ ಜಾಸ್ತಿ ಇತ್ತು. ಅದು ಈ ವರ್ಷ ಸರಾಸರಿ ಶೇಕಡ 2.5ರಷ್ಟಿದೆ. ಅಂದಮೇಲೆ ಶೇಕಡ 10ರ ದರವನ್ನು ಈ ಶೇಕಡ 2.5ರೊಂದಿಗೆ ಹೋಲಿಸಬಹುದೇ? ಚಾಲ್ತಿ ಖಾತೆ ಕೊರತೆಯೂ ಅಷ್ಟೆ, ಹಿಂದೆ ಇದು ಶೇಕಡ 4ರಷ್ಟಿತ್ತು; ಆದರೆ ಈಗ ಇದು ಶೇಕಡ 1ರ ಆಸುಪಾಸಿನಲ್ಲಿದೆ. ಇದನ್ನು ನೀವೇ ನೋಡಬಹುದು.

ಈ ಮಾನದಂಡಗಳನ್ನು ನಾವು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ. ಈ ಹಂತದಲ್ಲಿ ಕೇಂದ್ರ ಸರಕಾರ ಇನ್ನೊಂದು ಸಾಧನೆಯನ್ನೂ ಮಾಡಿದೆ. ಅದೇನೆಂದರೆ, ಹಿಂದಿನ ಸರಕಾರವಿದ್ದಾಗ ವಿತ್ತೀಯ ಕೊರತೆಯು ಶೇಕಡ 4.5ರಷ್ಟಿತ್ತು. ಇದನ್ನು ಕೂಡ ನಾವು ಶೇಕಡ 3.5ಕ್ಕೆ ಇಳಿಸಿದ್ದೇವೆ.

ಇವತ್ತು ವಿದೇಶಿ ಹೂಡಿಕೆದಾರರು ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಬಂಡವಾಳ ತೊಡಗಿಸಿದ್ದಾರೆ. ಹಿಂದೆ ನಮ್ಮ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ 30,000 ಕೋಟಿ ಡಾಲರುಗಳಷ್ಟು ಹಣವಿತ್ತು. ಅದೀಗ 40,000 ಕೋಟಿ ಡಾಲರ್ ಆಗಿದೆ. ಅಂದರೆ, ಇದರಲ್ಲಿ ಕೂಡ ಶೇಕಡ 25ರಷ್ಟು ಹೆಚ್ಚಳವಾಗಿದೆ.

ನಾವು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತಂದಿರುವ ಸುಧಾರಣೆಗಳು, ಮೂಡಿಸಿರುವ ವಿಶ್ವಾಸ ಮತ್ತು ಸಾಧಿಸಿರುವ ಯಶಸ್ಸು ಕೆಲವರಿಗೆ ಅಪಥ್ಯವಾಗಿದೆ. ಆದ್ದರಿಂದ, ಈ ಬೆರಳೆಣಿಕೆಯಷ್ಟು ಜನರು ದೇಶದ ಹಿತಾಸಕ್ತಿಯನ್ನು ಕಾಪಾಡಲು ಶ್ರಮಿಸುತ್ತಿದ್ದಾರೋ ಅಥವಾ ಬೇರೆಯವರ ಹಿತವನ್ನು ಕಾಪಾಡುತ್ತಿದ್ದಾರೋ ಎನ್ನುವುದನ್ನು ಇಡೀ ರಾಷ್ಟ್ರ ಅರಿಯಬೇಕು.ಸ್ನೇಹಿತರೇ, ಕಳೆದ ಮೂರು ವರ್ಷಗಳಲ್ಲಿ ನಾವು ಸರಾಸರಿಯಾಗಿ ಶೇಕಡ 7.5ರಷ್ಟು ಜಿಡಿಪಿ ಬೆಳವಣಿಗೆಯನ್ನು ಕಂಡರೂ ಈ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಈ ದರವು ಕುಸಿತವನ್ನು ಕಂಡಿದೆ ಎನ್ನುವುದು ನಿಜ. ನಾವು ಇದನ್ನು ಅಲ್ಲಗಳೆಯುವುದಿಲ್ಲ. ಆದರೆ, ಇದನ್ನು ನಿವಾರಿಸಿ, ಜಿಡಿಪಿ ದರವನ್ನು ಮೊದಲಿನ ಹಾಗೆಯೇ ಮಾಡಲು ಸರಕಾರವು ಸಂಪೂರ್ಣವಾಗಿ ಬದ್ಧವಾಗಿದೆ. ಜತೆಗೆ, ಈ ಸಾಮರ್ಥ್ಯವೂ ನಮಗಿದ್ದು, ಇದಕ್ಕೆ ಅಗತ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ನಿಮ್ಮೆಲ್ಲರಿಗೂ ಹೇಳಲು ಬಯಸುತ್ತೇನೆ.

ದೇಶದ ಅರ್ಥವ್ಯವಸ್ಥೆಯ ಬುನಾದಿ ಭದ್ರವಾಗಿದೆ ಎಂದು ಹಲವು ಪರಿಣತರು ಒಪ್ಪಿಕೊಂಡಿದ್ದಾರೆ. ಜತೆಗೆ, ನಾವೂ ಸಹ ಹಲವು ನಿರ್ದಾರಗಳನ್ನು ತೆಗೆದುಕೊಂಡಿದ್ದು, ಈ ಸಂಬಂಧದ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ದೇಶದ ಆರ್ಥಿಕ ಸ್ಥಿರತೆಯನ್ನು ನಾವು ಕಾಪಾಡಲಿದ್ದೇವೆ. ಅಲ್ಲದೆ, ದೇಶಕ್ಕೆ ನಾವು ಮತ್ತಷ್ಟು ಬಂಡವಾಳವನ್ನು ಸೆಳೆಯಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ತೆಗೆದುಕೊಂಡು, ಅಭಿವೃದ್ಧಿಯ ರಥವನ್ನು ಎಳೆಯಲಿದ್ದೇವೆ.

ನಾವು ತೆಗೆದುಕೊಂಡಿರುವ ಕ್ರಮಗಳಿಂದಾಗಿ, ಭಾರತವು ಮುಂಬರುವ ವರ್ಷಗಳಲ್ಲಿ ಆರ್ಥಿಕತೆಯ ದೃಷ್ಟಿಯಿಂದ ಹೊಸ ಕೂಟವನ್ನು ಸೇರಿಕೊಳ್ಳಲಿದೆ ಎಂಬ ಭರವಸೆಯನ್ನು ನಾನು ನಿಮಗೆ ನೀಡಲು ಬಯಸುತ್ತೇನೆ. ಭಾರತೀಯ ರಿಸರ್ವ್ ಬ್ಯಾಂಕ್ ಇವತ್ತು ಹೇಳಿರುವ ಪ್ರಕಾರ, ಮುಂದಿನ ತ್ರೈಮಾಸಿಕದ ಹೊತ್ತಿಗೆ ಜಿಡಿಪಿ ದರವು ಏರುಮುಖವಾಗಲಿದ್ದು, ಕ್ರಮೇಣ ಇದು ಶೇಕಡ 7.7ರಷ್ಟು ಪ್ರಮಾಣವನ್ನು ತಲುಪಲಿದೆ.

ಇವತ್ತು ಇಡೀ ದೇಶದ ಸಾಂಸ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುತ್ತಿದ್ದೇವೆ. ಈ ಹಂತದಲ್ಲಿ ನಮ್ಮ ಯಾವುದೇ ರಂಗವು/ಕ್ಷೇತ್ರವು ಸರಕಾರದ ನೆರವನ್ನು ಬಯಸಿದರೆ ಅದಕ್ಕೆ ಸ್ಪಂದಿಸಲು ಸರಕಾರ ಸಿದ್ಧವಾಗಿದೆ. ಇದು ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಉದ್ದಿಮೆಗಳ ವಲಯವೇ ಇರಬಹುದು ಅಥವಾ ರಫ್ತು ವಹಿವಾಟು ವಲಯವಿರಬಹುದು, ಅಥವಾ ನಮ್ಮ ಅನೌಪಚಾರಿಕ ಅರ್ಥವ್ಯವಸ್ಥೆ ಕ್ಷೇತ್ರವೇ ಆಗಿರಬಹುದು, ಒಟ್ಟಿನಲ್ಲಿ ಯಾವ ವಲಯಕ್ಕೇ ಆದರೂ ಸರಕಾರವು ಸಹಾಯ ನೀಡಲಿದೆ. ಈ ವೇದಿಕೆಯ ಮೂಲಕ ನಾನು ಒಂದು ಸಂಗತಿಯನ್ನು ಹೇಳಬಯಸುತ್ತೇನೆ. ಅದೇನೆಂದರೆ, ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರಾಮಾಣಿಕತೆ ಮಾತ್ರ ನಿಮ್ಮನ್ನು ಕಾಪಾಡುತ್ತದೆ. ಜತೆಗೆ, ಸರಕಾರವು ಕೂಡ ಪ್ರಾಮಾಣಿಕರನ್ನು ಮಾತ್ರ ರಕ್ಷಿಸುತ್ತದೆ.

ಇತ್ತೀಚೆಗೆ ನಮ್ಮ ಕೆಲವು ವ್ಯಾಪಾರ-ವಹಿವಾಟುದಾರರು ಮುಖ್ಯವಾಹಿನಿಗೆ ಬಂದಿದ್ದಾರೆ. ಇಂಥವರಿಗೆ, ಸರಕಾರವು ಎಲ್ಲಿ ತಮ್ಮ ಹಳೆಯ ಲೆಕ್ಕಪತ್ರಗಳನ್ನೆಲ್ಲ ಜಾಲಾಡುತ್ತದೋ ಎನ್ನುವ ಭಯವಿದೆ ಎನ್ನುವುದು ನನಗೆ ಗೊತ್ತು. ಆದರೆ, ಸರಕಾರಕ್ಕೆ ಅಂಥ ಯಾವ ಉದ್ದೇಶವೂ ಇಲ್ಲವೆನ್ನುವುದನ್ನು ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಪ್ರಾಯಶಃ, ಹಿಂದಿನ ಸರಕಾರವಿದ್ದಾಗ ಹೀಗೆಲ್ಲ ನಡೆದಿರಬಹುದು. ಏಕೆಂದರೆ, ಆಗಿನ ನಿಯಮಗಳು, ಅವರ ಮನೋಭಾವ ಮತ್ತು ಅವರ ವರ್ತನೆಗಳು ಭಿನ್ನವಾಗಿದ್ದವು. ನೀವು ಮುಖ್ಯವಾಹಿನಿಯನ್ನು ಸೇರಿಕೊಳ್ಳದಂತೆ ತಡೆಯುವುದಕ್ಕಿಂತ ಘೋರಪಾಪ ಇನ್ನೊಂದಿಲ್ಲ. ಆದ್ದರಿಂದ, ಯಾರು ಈ ಮುಖ್ಯವಾಹಿನಿಯನ್ನು ಸೇರಿಕೊಳ್ಳಲು ಇಷ್ಟಪಡುತ್ತಾರೋ ಅವರನ್ನು ಸ್ವಾಗತಿಸಬೇಕು ಎನ್ನುವುದೇ ನಮ್ಮ ಸರಕಾರದ ನಿಲುವಾಗಿದೆ. ದಯವಿಟ್ಟು, ಹಳೆಯ ಯೋಚನಾಕ್ರಮವನ್ನು ಪಕ್ಕಕ್ಕೆ ಸರಿಸಿ. ನಾವು ಯಾವಾಗಲೂ ನಿಮ್ಮೊಂದಿಗಿದ್ದೇವೆ. ಆದ್ದರಿಂದ, ನೀವು ಚಿಂತೆಯನ್ನು ಬಿಟ್ಟುಬಿಡಿ.

ಇನ್ನು, ಜಿಎಸ್ ಟಿ ಬಗ್ಗೆಯೂ ನಾನು ನಿಮ್ಮೊಂದಿಗೆ ಕೆಲವು ಮಾತುಗಳನ್ನಾಡಬೇಕು. ಅಂದಹಾಗೆ, ಜಿಎಸ್ ಟಿ ವ್ಯವಸ್ಥೆ ಜಾರಿಗೆ ಬಂದು ಇಲ್ಲಿಗೆ ಮೂರು ತಿಂಗಳಾಯಿತಷ್ಟೆ. ಈ ವ್ಯವಸ್ಥೆಯಲ್ಲಿ ಯಾವುದು ಫಲ ಕೊಡುತ್ತಿದೆ ಮತ್ತು ಯಾವುದು ಫಲ ಕೊಡುತ್ತಿಲ್ಲ ಎನ್ನುವುದನ್ನು ನಾವು ತೀರಾ ಹತ್ತಿರದಿಂದ ನೋಡುತ್ತಿದ್ದೇವೆ. ಇಷ್ಟೇ ಅಲ್ಲ, ಜಿಎಸ್ ಟಿಗೆ ಸಂಬಂಧಿಸಿದಂತೆ ತುಂಬಾ ಸಣ್ಣಪುಟ್ಟ ವಿಷಯಗಳಿಗೆ ಕೂಡ ನಾವು ಜನರ ಪ್ರತಿಕ್ರಿಯೆಯನ್ನು ಕಿವಿದೆರೆದು ಆಲಿಸುತ್ತಿದ್ದೇವೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಯೇ ಇರಲಿ, ಜಿಎಸ್ ಟಿ ಅರ್ಜಿಗಳನ್ನು ತುಂಬುವಲ್ಲಿನ ಸಮಸ್ಯೆಯೇ ಇರಬಹುದು ಅಥವಾ ಬೇರೆ ಯಾವುದೇ ತೊಂದರೆ ಇರಬಹುದು, ಇವೆಲ್ಲವನ್ನೂ ಸರಿಪಡಿಸಿ, ಎಲ್ಲ ರಾಜಕೀಯ ಪಕ್ಷಗಳನ್ನೂ ರಾಜ್ಯ ಸರಕಾರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರವನ್ನು ಕಂಡುಹಿಡಿಯುವಂತೆ ಈಗಾಗಲೇ ಜಿಎಸ್ ಟಿ ಮಂಡಳಿಗೆ ಸೂಚಿಸಲಾಗಿದೆ. ನಾವು ತೀರಾ ಸಾಂಪ್ರದಾಯಿಕ ಮತ್ತು ಮಡಿಯ ಮನೋಭಾವದವರಲ್ಲ ಎಂಬ ಸಂಗತಿಯನ್ನು ನಾನು, ನಮ್ಮ ವ್ಯಾಪಾರ-ವಹಿವಾಟುದಾರರಿಗೆ ಹೇಳಬಯಸುತ್ತೇನೆ. ನಾವೇನೂ ಸರ್ವಜ್ಞರಲ್ಲ, ನಿಜ. ಆದರೆ, ಏನನ್ನಾದರೂ ಮಾಡುವುದು ಅಗತ್ಯವೆನಿಸಿದರೆ ಖಂಡಿತವಾಗಿಯೂ ಅದನ್ನು ಮಾಡಿಯೇ ತೀರುತ್ತೇವೆ.

ನಮಗೆ ಎಲ್ಲವೂ ಗೊತ್ತು ಎಂದೇನೂ ನಾವು ಹೇಳಿಕೊಳ್ಳಲು ಹೋಗುವುದಿಲ್ಲ. ಆದರೆ, ಸರಿಯಾದ ದಿಕ್ಕಿನಲ್ಲಿ ಸಾಗಲು ಇದೊಂದು ಪ್ರಯತ್ನವಾಗಿದೆ. ಎಲ್ಲೆಲ್ಲಿ ಅಡೆತಡೆಗಳಿವೆಯೋ ಅವನ್ನೆಲ್ಲ ನಿವಾರಿಸಲು ನಾವು ಕಳೆದ ಮೂರು ವರ್ಷಗಳಲ್ಲಿ ನಮ್ಮ ಅನುಭವದ ಆಧಾರದ ಮೇಲೆ ಪ್ರಯತ್ನಿಸಿದ್ದು, ಅಗತ್ಯವೆನಿಸಿದಾಗಲೆಲ್ಲ ಸುಧಾರಣೆಗಳನ್ನು ತಂದಿದ್ದೇವೆ.

ಸ್ನೇಹಿತರೇ, ದೇಶದ ಆರ್ಥಿಕ ವ್ಯವಸ್ಥೆಯ ಸ್ಥಿತಿಗತಿಗಳನ್ನು ನಿಮ್ಮೊಂದಿಗೆ ಚರ್ಚಿಸುತ್ತಿರುವಾಗ ಕೆಲವು ವಿವರಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ಈ ವಿವರಗಳ ಪರಿಣಾಮಗಳೇನು ಎನ್ನುವುದನ್ನು ಕೂಡ ನಾನು ನಿಮ್ಮ ನಿರ್ಧಾರಕ್ಕೇ ಬಿಡುತ್ತೇನೆ.

ಸ್ನೇಹಿತರೇ, ನೀವೊಂದು ಹೊಸ ಕಾರನ್ನು ಖರೀದಿಸಿದಿರಿ ಎಂದಿಟ್ಟುಕೊಂಡರೆ ನೀವು ಖಂಡಿತವಾಗಿಯೂ ಅದನ್ನು ಯಾರದೋ ಬಲವಂತಕ್ಕೆ ಮಣಿದೇನೂ ಖರೀದಿಸುವುದಿಲ್ಲ. ಬದಲಿಗೆ ನಿಮ್ಮ ಮನೆಯ ಖರ್ಚುವೆಚ್ಚ, ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆಗುತ್ತಿರುವ ಖರ್ಚು, ನಿಮ್ಮ ಮನೆಯಲ್ಲಿರುವ ಹಿರಿಯರಿಗೆ ನೀವು ಮಾಡುತ್ತಿರುವ ವೈದ್ಯಕೀಯ ವೆಚ್ಚ ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡೇ ಇರುತ್ತೀರಿ. ಇಷ್ಟಾಗಿಯೂ ನೀವು ಸಾಕಷ್ಟು ಪ್ರಮಾಣದಲ್ಲಿ ಹಣವನ್ನು ಉಳಿತಾಯ ಮಾಡಿದ್ದೀರಿ ಎಂದಾದರೆ ಮಾತ್ರ ನೀವು ಕಾರನ್ನೋ, ಹೊಸ ಮನೆಯನ್ನೋ ಖರೀದಿಸಲು ಮುಂದಾಗುತ್ತೀರಿ ಎನ್ನುವುದು ನನ್ನ ದೃಢವಾದ ನಂಬಿಕೆ. ಇದು ನಮ್ಮ ಸಮಾಜದಲ್ಲಿರುವ ಚಿಂತನಾ ಕ್ರಮ. ಇಂಥ ಪರಿಸ್ಥಿತಿಯಲ್ಲಿ-

-ದೇಶದಲ್ಲಿ ಜೂನ್ ತಿಂಗಳ ನಂತರ ಪ್ರಯಾಣಿಕರ ಕಾರುಗಳ ಮಾರಾಟವು ಸರಿಸುಮಾರು ಶೇಕಡ 12ರಷ್ಟು ಇದೆ. ಇದಕ್ಕೆ ನೀವೇನು ಹೇಳುತ್ತೀರಿ?

-ಹಾಗೆಯೇ, ಜೂನ್ ತಿಂಗಳ ನಂತರ ದೇಶದಲ್ಲಿ ವಾಣಿಜ್ಯ ಉದ್ದೇಶದ ವಾಹನಗಳ ಮಾರಾಟವು ಶೇಕಡ 23ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದೆ. ಇದಕ್ಕೆ ನೀವೇನು ಹೇಳುತ್ತೀರಿ?

-ಇದರಂತೆಯೇ, ದೇಶದಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಶೇಕಡ 14ರಷ್ಟು ಬೆಳವಣಿಗೆ ಕಂಡಿದೆ. ಇದಕ್ಕೆ ನಿಮ್ಮ ಉತ್ತರವೇನು?

-ಕಳೆದ ಎರಡು ತಿಂಗಳ ಅವಧಿಯಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡ 14ರಷ್ಟು ಹೆಚ್ಚಳ ಕಂಡುಬಂದಿದೆ. ಇದಕ್ಕೆ ನೀವೆನೆನ್ನುವಿರಿ?

-ಹಾಗೆಯೇ, ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನಗಳ ಹಾರಾಟದಲ್ಲಿ ಸರಿಸುಮಾರು ಶೇಕಡ 16ರಷ್ಟು ಬೆಳವಣಿಗೆ ಕಂಡುಬಂದಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?

-ಇದರ ಜತೆಗೆ, ದೂರವಾಣಿ ಬಳಕೆದಾರರ ಸಂಖ್ಯೆಯಲ್ಲೂ ಶೇಕಡ 14ರಷ್ಟು ಬೆಳವಣಿಗೆ ದಾಖಲಾಗಿದೆ. ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಅಣ್ಣತಮ್ಮಂದಿರೇ ಮತ್ತು ಅಕ್ಕತಂಗಿಯರೇ, ಈ ಬೆಳವಣಿಗೆಗಳೆಲ್ಲವೂ ಜನರು ವಾಹನಗಳನ್ನು ಖರೀದಿಸುತ್ತಿದ್ದಾರೆ, ಹೊಸ ಫೋನುಗಳ ಸಂಪರ್ಕ ಪಡೆಯುತ್ತಿದ್ದಾರೆ ಮತ್ತು ವಿಮಾನದಲ್ಲಿ ಓಡಾಡುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ. ಜತೆಗೆ, ಇವು ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಕೂಡ ಹೇಳುತ್ತಿವೆ.

ಇನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಬೇಡಿಕೆಯತ್ತ ನೋಡೋಣ. ಅಲ್ಲಿ, ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಟ್ರ್ಯಾಕ್ಟರ್ ಗೆ ಇರುವ ಬೇಡಿಕೆ ಶೇಕಡ 34ರಷ್ಟು ಬೆಳವಣಿಗೆಯನ್ನು ಕಂಡಿದೆ.

ಇಷ್ಟೇ ಅಲ್ಲ, ಎಫ್ಎಂಶಸಿಜಿ ವಲಯದಲ್ಲಿ ಕೂಡ ಸೆಪ್ಟೆಂಬರ್ ತಿಂಗಳಲ್ಲಿ ಬೇಡಿಕೆಯು ಏರುಮುಖವಾಗಿರುವುದು ಕಂಡುಬಂದಿದೆ.

ಸ್ನೇಹಿತರೇ, ದೇಶವಾಸಿಗಳಲ್ಲಿ ವಿಶ್ವಾಸದ ಮಟ್ಟ ಹೆಚ್ಚಾಗಿದ್ದಾಗ ಮಾತ್ರ ಇಂಥ ಸಂಗತಿಗಳು ನಡೆಯುತ್ತವೆ. ದೇಶದ ಜನರಿಗೆ ಇಂಥ ವಿಶ್ವಾಸವಿದೆ ಎಂದಾದರೆ, ನಮ್ಮ ಆರ್ಥಿಕತೆಯು ಸದೃಢವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

-ಇತ್ತೀಚೆಗೆ ಬಿಡುಗಡೆಯಾಗಿರುವ ಪಿಎಂಐ ಸೂಚ್ಯಂಕವು, ದೇಶದ ಅರ್ಥವ್ಯವಸ್ಥೆಯು ಹಿಗ್ಗುತ್ತಿರುವುದನ್ನು ಪ್ರತಿಬಿಂಬಿಸಿದೆ. ಅಷ್ಟೇ ಅಲ್ಲ, `ಫ್ಯೂಚರ್ ಔಟ್ಪುರಟ್ ಇಂಡೆಕ್ಸ್’ ಕೂಡ 60ನ್ನು ದಾಟಿದೆ.

-ನೀವು ಇತ್ತೀಚೆಗೆ ಬಿಡುಗಡೆಯಾಗಿರುವ ಅಂಕಿಅಂಶಗಳನ್ನು ನೋಡಿದರೆ, ಕಲ್ಲಿದ್ದಲು, ವಿದ್ಯುತ್ತು, ಉಕ್ಕು ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯು ತೀವ್ರ ಬೆಳವಣಿಗೆಯನ್ನು ದಾಖಲಿಸಿರುವುದನ್ನು ನೋಡಬಹುದು.

-ಸ್ನೇಹಿತರೇ, ವೈಯಕ್ತಿಕ ಸಾಲ ವಿತರಣೆಯಲ್ಲಿ ಕೂಡ ಕ್ಷಿಪ್ರ ಬೆಳವಣಿಗೆ ದಾಖಲಾಗಿದೆ.

-ಅಲ್ಲದೆ, ಹೌಸಿಂಗ್ ಫೈನಾನ್ಸ್ ಕಂಪನಿಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನೀಡುತ್ತಿರುವ ಸಾಲದ ಪ್ರಮಾಣದಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ.

-ಜೊತೆಗೆ, ಮ್ಯೂಚುಯಲ್ ಫಂಡ್ ಮತ್ತು ಹೂಡಿಕೆ ಮಾರುಕಟ್ಟೆಯಲ್ಲಿನ ವಿಮಾ ವಲಯದಲ್ಲಿ ಬಂಡವಾಳ ಹೂಡಿಕೆ ಕೂಡ ಊರ್ಧ್ವಮುಖವಾಗಿದೆ.

-ಕಂಪನಿಗಳು ಈ ವರ್ಷದ ಮೊದಲ ಆರು ತಿಂಗಳಲ್ಲಿ ಐಪಿಒ ಮುಖಾಂತರ 25,000 ಕೋಟಿ ರೂಪಾಯಿಗಳನ್ನು ಕ್ರೋಡೀಕರಿಸಿವೆ. ಇಡೀ ಹೋದ ವರ್ಷ ಈ ಮೊತ್ತ 29,000 ಕೋಟಿ ರೂಪಾಯಿಗಳಷ್ಟಿತ್ತು.

-ನಾಲ್ಕು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಹಣಕಾಸೇತರ ಸಂಸ್ಥೆಗಳಲ್ಲಿ ಕಾರ್ಪೊರೇಟ್ ಬಾಂಡ್ಗಟಳು ಮತ್ತು ಪ್ರೈವೇಟ್ ಪ್ಲೇಸ್ಮೆಂವಟ್ ಮೂಲಕ 45,000 ಕೋಟಿ ರೂಪಾಯಿಗಳನ್ನು ಬಂಡವಾಳವಾಗಿ ಹೂಡಲಾಗಿದೆ.

-ಈ ಅಂಕಿಅಂಶಗಳು/ವಿವರಗಳು ದೇಶದ ಆರ್ಥಿಕ ವ್ಯವಸ್ಥೆಯ ವಿಶಾಲ ನೆಲೆಯನ್ನು ಪ್ರತಿಬಿಂಬಿಸುತ್ತವೆ. ಜತೆಗೆ, ಭಾರತದಲ್ಲಿ ಈಗ ಹಣಕಾಸು ಸೌಲಭ್ಯವೆಂದರೆ ಹಿಂದಿನಂತೆ ಕೇವಲ ಬ್ಯಾಂಕುಗಳು ಮಾತ್ರ ನೀಡುವ ಸಾಲವಷ್ಟೆ ಅಲ್ಲ ಎನ್ನುವುದು ಇದರ ಅರ್ಥವಾಗಿದೆ.

-ಸ್ನೇಹಿತರೇ, ಈ ಸರಕಾರವು ನಿರಂತರವಾಗಿ ಸಮಯ ಮತ್ತು ಸಂಪನ್ಮೂಲ ಎರಡನ್ನೂ ಸೂಕ್ತವಾಗಿ ಬಳಸಿಕೊಳ್ಳುವುದಕ್ಕೆ ಒತ್ತು ನೀಡಿದೆ. ಕಳೆದ ಮೂರು ವರ್ಷಗಳಿಂದ ಕೆಲಸಗಳು ಎಷ್ಟು ಚುರುಕಾಗಿ ನಡೆಯುತ್ತಿವೆ ಮತ್ತು ಅದಕ್ಕೂ ಮೊದಲು ಹಿಂದಿನ ಸರಕಾರದ ಕೊನೆಯ ಮೂರು ವರ್ಷಗಳಲ್ಲಿ ಕೆಲಸಗಳು ಹೇಗೆ ನಡೆಯುತ್ತಿದ್ದವು ಎನ್ನುವುದರ ನಡುವಿನ ವ್ಯತ್ಯಾಸವನ್ನು ಯಾರಾದರೂ ಸ್ಪಷ್ಟವಾಗಿ ಗುರುತಿಸಬಹುದು.

-ಹಿಂದಿನ ಸರಕಾರವು ತನ್ನ ಕೊನೆಯ ಮೂರು ವರ್ಷಗಳಲ್ಲಿ 80 ಸಾವಿರ ಕಿಲೋಮೀಟರುಗಳಷ್ಟು ಗ್ರಾಮೀಣ ರಸ್ತೆಗಳನ್ನು ನಿರ್ಮಿಸಿತ್ತು. ಆದರೆ, ಅದೇ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಕಳೆದ ಮೂರು ವರ್ಷಗಳಲ್ಲಿ ದೇಶದ ಗ್ರಾಮಾಂತರ ಪ್ರದೇಶದಲ್ಲಿ 1.20 ಲಕ್ಷ ಕಿಲೋಮೀಟರ್ ಉದ್ದದಷ್ಟು ರಸ್ತೆಯನ್ನು ನಿರ್ಮಿಸಿದೆ. ಅಂದರೆ, ಗ್ರಾಮೀಣ ರಸ್ತೆ ನಿರ್ಮಾಣದಲ್ಲಿ ಶೇಕಡ 50ರಷ್ಟು ಬೆಳವಣಿಗೆಯು ನಮ್ಮ ಸರಕಾರ ಬಂದಮೇಲೆ ದಾಖಲಾಗಿದೆ.

-ಹಿಂದಿನ ಸರಕಾರವು ತನ್ನ ಅಧಿಕಾರಾವಧಿಯ ಕೊನೆಯ ಮೂರು ವರ್ಷಗಳಲ್ಲಿ ಕೇವಲ 15,000 ಕಿಲೋಮೀಟರುಗಳಷ್ಟು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಚಾಲನೆ ನೀಡಿತ್ತು. ಆದರೆ, ನಮ್ಮಸರಕಾರವು ಕೇವಲ ಮೂರು ವರ್ಷಗಳಲ್ಲಿ 34,000 ಕಿಲೋಮೀಟರುಗಳಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ.

-ಹೆದ್ದಾರಿ ನಿರ್ಮಾಣ ವಲಯದಲ್ಲಿ ಆಗಿರುವ ಬಂಡವಾಳ ಹೂಡಿಕೆಯನ್ನು ಕೂಡ ನಾವು ಗಮನಿಸಬಹುದು. ಹಿಂದಿನ ಸರಕಾರವು ತನ್ನ ಅವಧಿಯ ಕೊನೆಯ ಮೂರು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ 93,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದ್ದರೆ, ನಾವು ಇಷ್ಟೇ ಅವಧಿಯಲ್ಲಿ 1.83 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಅಂದರೆ, ಹೆದ್ದಾರಿ ನಿರ್ಮಾಣ, ಇದಕ್ಕೆ ಅಗತ್ಯವಾದ ಭೂಮಿಯ ಸ್ವಾಧೀನಕ್ಕೆ ನಾವು ಹಿಂದಿನ ಸರಕಾರಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ವಿನಿಯೋಗಿಸುತ್ತಿದ್ದೇವೆ ಎಂದಾಯಿತು.

ಅಂದಂತೆ, ಹೆದ್ದಾರಿಗಳ ನಿರ್ಮಾಣಕ್ಕೆ ಸರಕಾರವು ಎಷ್ಟೊಂದು ಆಡಳಿತಾತ್ಮಕ ಮತ್ತು ಆರ್ಥಿಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಬಹುದು. ಇದಕ್ಕೆ ಸಂಬಂಧಿಸಿದ ವಿವರಗಳು ಮತ್ತು ಅಂಕಿಅಂಶಗಳನ್ನು ನೋಡಿದರೆ, ನಮ್ಮ ಸರಕಾರವು ಎಷ್ಟೊಂದು ಪರಿಣಾಮಕಾರಿಯಾಗಿ ನೀತಿಗಳನ್ನು ರೂಪಿಸುತ್ತಿದೆ ಮತ್ತು ಅವುಗಳನ್ನು ಎಷ್ಟೊಂದು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ಇದಕ್ಕೂ ಮೊದಲು ಕೇಂದ್ರ ಸರಕಾರದ ಮಟ್ಟದಲ್ಲಿ ಯಾವುದಕ್ಕೆ ಸಂಬಂಧಿಸಿದಂತೆಯೂ ಸರಿಯಾದ ನೀತಿಯೆನ್ನುವುದೇ ಇರಲಿಲ್ಲ.

ಹೆದ್ದಾರಿ ವಲಯಕ್ಕೆ ಸಂಬಂಧಿಸಿದಂತೆಯೇ, ರೈಲ್ವೆ ವಲಯದಲ್ಲಿ ಸಾಧಿಸಿರುವ ಪ್ರಗತಿಯನ್ನೂ ನಾನು ನೋಡಬಹುದು:

-ಹಿಂದಿನ ಸರಕಾರವು ತನ್ನ ಕೊನೆಯ ಮೂರು ವರ್ಷಗಳ ಅವಧಿಯಲ್ಲಿ ಸರಿಸುಮಾರು 1,100 ಕಿಲೋಮೀಟರ್ ಉದ್ದದಷ್ಟು ರೈಲು ಹಳಿಗಳನ್ನು ನಿರ್ಮಿಸಿತು. ಆದರೆ, ನಮ್ಮ ಸರಕಾರವು ಕಳೆದ ಮೂರು ವರ್ಷಗಳಲ್ಲಿ 2,100 ಕಿಲೋಮೀಟರ್ ಉದ್ದದಷ್ಟು ಹಳಿಗಳನ್ನು ನಿರ್ಮಿಸಿದೆ. ಅಂದರೆ, ಹಿಂದಿನ ಸರಕಾರಕ್ಕಿಂತ ಇಂದಿನ ಸರಕಾರದ ಸಾಧನೆ ಈ ಕ್ಷೇತ್ರದಲ್ಲಿ ಇಮ್ಮಡಿಯಾಗಿದೆ.

-ಹಿಂದಿನ ಸರಕಾರವು ತನ್ನ ಕೊನೆಯ ಮೂರು ವರ್ಷಗಳಲ್ಲಿ 1,300 ಕಿಲೋಮೀಟರ್ ಉದ್ದದಷ್ಟು ರೈಲುಮಾರ್ಗವನ್ನು ಜೋಡಿಮಾರ್ಗವನ್ನಾಗಿ ಪರಿವರ್ತಿಸಿತ್ತು. ಆದರೆ ನಾವು ಕೇವಲ ಮೂರು ವರ್ಷಗಳಲ್ಲಿ 2,600 ಕಿಲೋಮೀಟರ್ ಉದ್ದದಷ್ಟು ಹಳಿಯನ್ನು ಜೋಡಿಮಾರ್ಗವನ್ನಾಗಿ ಬದಲಾಯಿಸಿದೆ. ಈ ವಿಚಾರದಲ್ಲೂ ನಮ್ಮ ಸಾಧನೆ ದುಪ್ಪಟ್ಟಾಗಿದೆ.

ಸ್ನೇಹಿತರೇ, ಹಿಂದಿನ ಸರಕಾರವು ತನ್ನ ಕಟ್ಟಕಡೆಯ ಮೂರು ವರ್ಷಗಳಲ್ಲಿ 1.49 ಲಕ್ಷ ಕೋಟಿ ರೂಪಾಯಿಗಳಷ್ಟು ಹೂಡಿಕೆ ವೆಚ್ಚ ಮಾಡಿತ್ತು. ಆದರೆ, ನಾವು ಇಷ್ಟೇ ಕಾಲಾವಧಿಯಲ್ಲಿ 2.64 ಲಕ್ಷ ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದ್ದೇವೆ. ಅಂದರೆ, ಈ ವಿಷಯದಲ್ಲಿ ಶೇಕಡ 75ರಷ್ಟು ಬೆಳವಣಿಗೆ ದಾಖಲಾಗಿದೆ ಎಂದರ್ಥ.

ನಾವಿನ್ನು, ಮರುಬಳಕೆ ಮಾಡಬಹುದಾದ ಇಂಧನಗಳ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯನ್ನು ಗಮನಿಸೋಣ:

-ಹಿಂದಿನ ಸರಕಾರವು ತನ್ನ ಕೊನೆಯ ಮೂರು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ 12,000 ಮೆಗಾವಾಟ್ ವಿದ್ಯುತ್ತನ್ನು ಉತ್ಪಾದಿಸುವ ಗುರಿಯನ್ನು ಇಟ್ಟುಕೊಂಡಿತ್ತು. ಆದರೆ, ನಾವು ಇಷ್ಟೇ ಅವಧಿಯಲ್ಲಿ ದೇಶದ ವಿದ್ಯುತ್ ಜಾಲಕ್ಕೆ ಮರುಬಳಕೆ ಮಾಡಬಹುದಾದ 22,000 ಮೆಗಾವಾಟ್ ವಿದ್ಯುತ್ತನ್ನು ಸೇರಿಸಿದ್ದೇವೆ. ಅಂದರೆ, ಈ ವಿಚಾರದಲ್ಲೂ ಹಿಂದಿನವರಿಗೆ ಹೋಲಿಸಿದರೆ ನಮ್ಮ ಸಾಧನೆ ಸರಿಸುಮಾರು ಎರಡು ಪಟ್ಟು ಹೆಚ್ಚಾಗಿಯೇ ಇದೆ.

-ಇನ್ನು ನೌಕೋದ್ಯಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಹಿಂದಿನ ಸರಕಾರದ ಅವಧಿಯಲ್ಲಿ ಸರಕು ಸಾಗಣೆ ನಿರ್ವಹಣೆಯು ನಕಾರಾತ್ಮಕವಾಗಿತ್ತು. ಆದರೆ, ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ಈ ಕ್ಷೇತ್ರದಲ್ಲಿ ಶೇಕಡ 11ರಷ್ಟು ಹೆಚ್ಚಳ ಕಂಡುಬಂದಿದೆ.ಸ್ನೇಹಿತರೇ, ನಮ್ಮ ಸರಕಾರವು ದೇಶದಲ್ಲಿ ಲೌಕಿಕ ಮೂಲಸೌಲಭ್ಯಗಳಾದ ರೈಲು, ರಸ್ತೆ ಮತ್ತು ವಿದ್ತುತ್ ವಲಯಗಳ ಸುಧಾರಣೆಗೆ ಆದ್ಯ ಗಮನ ಕೊಡುತ್ತಿರುವುದರ ಜತೆಗೆ ಸಾಮಾಜಿಕ ಮೂಲಸೌಲಭ್ಯವನ್ನು ಬಲಪಡಿಸಲು ಕೂಡ ಕಟಿಬದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಮಹತ್ವದ ನೀತಿನಿರ್ಧಾರಗಳನ್ನು ಕೈಗೊಂಡಿದ್ದು, ಜನರಿಗೆ ಮನೆಗಳು ಕೈಗೆಟುಕುವಂತೆ ಮಾಡಲು ಹಿಂದೆಂದೂ ಇಲ್ಲದ ರೀತಿಯಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ.

ಸ್ನೇಹಿತರೇ, ಹಿಂದಿನ ಸರಕಾರವು ತನ್ನ ಕಡೆಯ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ವಸತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 15,000 ಕೋಟಿ ರೂಪಾಯಿಗಳಷ್ಟು ಮೊತ್ತದ ಯೋಜನೆಗಳನ್ನು ಮಂಜೂರು ಮಾಡಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದಮೇಲೆ ಇಷ್ಟೇ ಅವಧಿಯಲ್ಲಿ 1.53 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದ್ದೇವೆ. ಬಡವರಿಗೂ ಮಧ್ಯಮ ವರ್ಗದವರಿಗೂ ಮನೆಗಳನ್ನು ಒದಗಿಸಲು ನಾವು ಎಷ್ಟೊಂದು ಕಂಕಣಬದ್ಧರಾಗಿದ್ದೇವೆ ಎನ್ನುವುದನ್ನು ಇದು ಹೇಳುತ್ತದೆ.

ಸಹೋದರರೇ ಮತ್ತು ಸಹೋದರಿಯರೇ, ದೇಶಾದ್ಯಂತ ನಡೆಯುತ್ತಿರುವ ಈ ಅಭಿವೃದ್ಧಿ ಚಟುವಟಿಕೆಗಳಿಗೆ ಸಿಕ್ಕಾಬಟ್ಟೆ ಬಂಡವಾಳ ಹೂಡಿಕೆ ಅಗತ್ಯವಿದೆ. ಇದಕ್ಕಾಗಿ, ಸರಕಾರವು ದೇಶಕ್ಕೆ ಮತ್ತಷ್ಟು ವಿದೇಶಿ ಬಂಡವಾಳ ಹರಿದುಬರುವಂತೆ ಮಾಡಲು ಒತ್ತು ಕೊಡುತ್ತಿದೆ.

-ಅಂದಹಾಗೆ, ಹಿಂದಿನ ಸರಕಾರದ ಅವಧಿಯಲ್ಲಿ ವಿಮಾ ವಲಯದ ಸುಧಾರಣೆಯ ಬಗ್ಗೆ ಮೊದಲಿಗೆ ಚರ್ಚೆಯು ಆರಂಭವಾಯಿತಷ್ಟೆ. ಆಗ ದಿನಪತ್ರಿಕೆಗಳೆಲ್ಲವೂ `ನಿಜಕ್ಕೂ ಈ ಸುಧಾರಣೆ ಸಾಧ್ಯವಾದರೆ ಅದೊಂದು ಮಹತ್ಸಾಧನೆಯಾಗಲಿದೆ,’ ಎಂದೇ ದೊಡ್ಡದಾಗಿ ಸುದ್ದಿಯನ್ನು ಪ್ರಕಟಿಸುತ್ತಿದ್ದವು. ಆದರೆ, ಆ ಸರಕಾರವು ಈ ಯಾವ ಸುಧಾರಣೆಗಳನ್ನೂ ತರದೆ ತನ್ನ ಅಧಿಕಾರಾವಧಿಯನ್ನು ಮುಗಿಸಿತು. ನಾವು ಈ ವಿಷಯದಲ್ಲಿ ಹಾಗೆ ಮಾಡಿಲ್ಲ. ಬದಲಿಗೆ, ವಿಮಾ ವಲಯದಲ್ಲಿ ಅಗತ್ಯವಾಗಿದ್ದ ಈ ಸುಧಾರಣೆಗಳನ್ನು ಆದ್ಯತೆಯ ಮೇರೆಗೆ ಜಾರಿಗೆ ತಂದಿದ್ದೇವೆ. ಇದು ನಡೆದಿದ್ದು ನಮ್ಮ ಸರಕಾರದಿಂದಲೇ. ಆದರೆ, `ಶಲ್ಯ ಮನೋಭಾವ’ದ ಜನರಿಗೆ ಇದೆಲ್ಲ ದೊಡ್ಡ ಸಾಧನೆ ಎನಿಸಿಯೇ ಇಲ್ಲ. ಏಕೆಂದರೆ, ತಮಗೆ ಬೇಕಾದ/ತಾವು ಇಷ್ಟಪಡುವ ಸರಕಾರ ಇದನ್ನು ಮಾಡಲಿಲ್ಲ!

-‘ಸುಧಾರಣೆ’ ಎನ್ನುವುದನ್ನೇ ತಮ್ಮ ಧ್ಯೇಯಗೀತೆಯನ್ನಾಗಿ ಮಾಡಿಕೊಂಡಿದ್ದ ಜನರಿಗೆ ನಾನು ಒಂದು ಸಂಗತಿಯನ್ನು ಹೇಳಬಯಸುತ್ತೇನೆ. ಅದೇನೆಂದರೆ, ನಾವು ಕಳೆದ ಮೂರು ವರ್ಷಗಳಲ್ಲಿ ದೇಶದ 21 ವಲಯಗಳಿಗೆ ಸಂಬಂಧಿಸಿದಂತೆ 87 ಸಣ್ಣ ಮತ್ತು ದೊಡ್ಡ ಸುಧಾರಣೆಗಳನ್ನು ತಂದಿದ್ದೇವೆ. ನಿರ್ಮಾಣ ವಲಯ, ರಕ್ಷಣಾ ವಲಯ, ಹಣಕಾಸು ಸೇವೆಗಳು, ಆಹಾರ ಸಂಸ್ಕರಣೆ ಮತ್ತು ಇನ್ನಿತರ ಕೆಲವು ದೊಡ್ಡ ವಲಯಗಳಿಗೆ ಸಂಬಂಧಿಸಿದಂತೆ ನಾವು ಹೂಡಿಕೆ ನೀತಿ ಬಹುದೊಡ್ಡ ಬದಲಾವಣೆಗಳನ್ನು ತಂದಿದ್ದೇವೆ.

ದೇಶವು ಉದಾರೀಕರಣಕ್ಕೆ ತೆರೆದುಕೊಂಡ ಮೇಲೆ ನಮ್ಮಲ್ಲಿಗೆ ವಿದೇಶಿ ಬಂಡವಾಳ ಹರಿದುಬರಲು ಶುರುವಾಯಿತು. ಉದಾರ ಆರ್ಥಿಕ ನೀತಿ ಜಾರಿಗೆ ಬಂದಮೇಲೆ ದೇಶಕ್ಕೆ ಹರಿದು ಬಂದಿರುವ ವಿದೇಶಿ ಹೂಡಿಕೆಯನ್ನೂ ಕಳೆದ ಮೂರು ವರ್ಷಗಳಲ್ಲಿ ಹರಿದುಬಂದಿರುವ ಇಂಥ ಹೂಡಿಕೆಯನ್ನೂ ಹೋಲಿಸಿ ನೋಡಿದರೆ, ನಮ್ಮ ಸರಕಾರ ಜಾರಿಗೆ ತಂದಿರುವ ಆರ್ಥಿಕ ಸುಧಾರಣೆಗಳ ಪರಿಣಾಮ ಏನೆಂಬುದು ನಿಮಗೆ ಗೊತ್ತಾಗುತ್ತದೆ.

ಸೋದರ-ಸೋದರಿಯರೇ, ನೀವೆಲ್ಲರೂ ಅಂಕಿಅಂಶಗಳ ಕ್ಷೇತ್ರಕ್ಕೆ ಸಂಬಂಧಿಸಿದವರು. ನಾನೀಗ ನೀಡಲಿರುವ ಅಂಕಿಅಂಶವು ನಿಮಗೆ ನಿಜವಾಗಲೂ ಅಚ್ಚರಿಯನ್ನು ಹುಟ್ಟಿಸುವುದರಲ್ಲಿ ಅನುಮಾನವಿಲ್ಲ. ದೇಶದಲ್ಲಿ 1992ರಲ್ಲಿ ಆರ್ಥಿಕ ಉದಾರೀಕರಣ ಆರಂಭವಾಯಿತು. ಇದನ್ನು ನಾನು ಆಧಾರವಾಗಿ ಇಟ್ಟುಕೊಂಡರೆ, ಅಲ್ಲಿಂದ ಹಿಡಿದು 2014ರವರೆಗೆ ದೇಶದ ಮೇಲೆ ಉದಾರೀಕರಣದ ಪರಿಣಾಮವೇನು ಮತ್ತು 2014ರಿಂದ 2017ವರೆಗೆ ಇದು ನೀಡಿರುವ ಫಲಗಳೇನು ಎನ್ನುವುದನ್ನು ಹೋಲಿಸಿ ನೋಡೋಣ.

* ನಿರ್ಮಾಣ ವಲಯದಲ್ಲಿ ಉದಾರೀಕರಣ ಆರಂಭವಾದಂದಿನಿಂದ ಹಿಡಿದು ಇಲ್ಲಿಯವರೆಗೆ ಹರಿದುಬಂದಿರುವ ವಿದೇಶಿ ನೇರ ಹೂಡಿಕೆಯಲ್ಲಿ ಶೇಕಡ 75ರಷ್ಟು ಭಾಗವು ಕೇವಲ ಕಳೆದ ಮೂರು ವರ್ಷಗಳಲ್ಲಿ ಬಂದಿದೆ.

* ನಾಗರಿಕ ವಿಮಾನಯಾನ ವಲಯದಲ್ಲೂ ಇದುವರೆಗಿನ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ ಶೇಕಡ 69ರಷ್ಟು ಈ ಮೂರು ವರ್ಷಗಳ ಸಾಧನೆಯಾಗಿದೆ.

* ಗಣಿಗಾರಿಕೆ ಕ್ಷೇತ್ರದಲ್ಲಿ ಇದುವರೆಗೆ ಆಗಿರುವ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇಕಡ 69 ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಬಂದಿದೆ.

* ಕಂಪ್ಯೂಟರ್ ತಂತ್ರಾಂಶ ಮತ್ತು ಯಂತ್ರಾಂಶ ವಲಯದಲ್ಲಿ ಆಗಿರುವ ಶೇಕಡ 53ರಷ್ಟು ವಿದೇಶಿ ನೇರ ಹೂಡಿಕೆಗೂ ಇದೇ ಮಾತು ಅನ್ವಯಿಸುತ್ತದೆ.

* ಇನ್ನು ವಿದ್ಯುತ್ ಉಪಕರಣಗಳ ತಯಾರಿಕೆ ವಲಯವು 1992ರಿಂದ ಹಿಡಿದು ಇದುವರೆಗೆ ಆಕರ್ಷಿಸಿರುವ ವಿದೇಶಿ ನೇರ ಹೂಡಿಕೆಯಲ್ಲಿ ಶೇಕಡ 52ರಷ್ಟು ಬಂಡವಾಳವು ಕಳೆದು ಮೂರು ವರ್ಷಗಳಲ್ಲಿ ಬಂದಿದೆ.

* ಮರುಬಳಕೆ ಮಾಡಬಹುದಾದ ಇಂಧನ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಈ ಪ್ರಮಾಣ ಶೇಕಡ 49ರಷ್ಟಿದೆ.

* ಜವಳಿ ಉದ್ದಿಮೆಯು ಕಳೆದ 25 ವರ್ಷಗಳಲ್ಲಿ ಸೆಳೆದಿರುವ ವಿದೇಶಿ ನೇರ ಹೂಡಿಕೆಯಲ್ಲಿ ಶೇಕಡ 45ರಷ್ಟು ನಮ್ಮ ಆಳ್ವಿಕೆಯ ಈ ಮೂರು ವರ್ಷಗಳಲ್ಲಿ ಸಾಧ್ಯವಾಗಿದೆ.

* ಅಂದಂತೆ, ಆಟೊಮೊಬೈಲ್ ಕ್ಷೇತ್ರವು ಲಾಗಾಯ್ತಿನಿಂದಲೂ ಸಾಕಷ್ಟು ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಆದರೆ, ಈ ವಲಯದಲ್ಲೂ ಇದುವರೆಗೆ ತೊಡಗಿಸಿರುವ ಒಟ್ಟು ವಿದೇಶಿ ಹೂಡಿಕೆಯಲ್ಲಿ ಶೇ.44ರಷ್ಟು ಬಂಡವಾಳವು ಕೇವಲ ಈ ಮೂರು ವರ್ಷಗಳಲ್ಲಿ ಬಂದಿದೆ.

ದೇಶದಲ್ಲಿ ವಿದೇಶಿ ನೇರ ಹೂಡಿಕೆಯು ಹೀಗೆ ಒಂದೇ ಸಮನೆ ಏರುತ್ತಿರುವುದು ವಿದೇಶಿ ಹೂಡಿಕೆದಾರರು ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಮೇಲಿಟ್ಟಿರುವ ನಂಬಿಕೆಯನ್ನು ಸೂಚಿಸುತ್ತದೆ.

ನಾವು ರೂಪಿಸಿರುವ ನೀತಿಗಳು, ಅವುಗಳ ಅನುಷ್ಠಾನ ಮತ್ತು ನಮ್ಮ ದೂರದೃಷ್ಟಿಗಳು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿವೆ. ಈ ರೀತಿಯ ಹೂಡಿಕೆಯು ದೇಶದ ಅಭಿವೃದ್ಧಿಯ ಬೆಳವಣಿಗೆ ದರ ಏರುಮುಖವಾಗುವಲ್ಲಿ ಮತ್ತು ಉದ್ಯೋಗಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರಸ್ತೆ ನಿರ್ಮಾಣದ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕೆಂದರೆ, ರೈಲು ಹಳಿಗಳನ್ನು ವಿಸ್ತರಿಸಬೇಕೆಂದರೆ ಉದ್ಯೋಗಗಳು ಸೃಷ್ಟಿಯಾಗಲೇಬೇಕಲ್ಲವೇ? ಇದು ಹೇಗೆ ಸಂಭವಿಸುತ್ತದೆ? ಇಷ್ಟಾದರೂ `ಶಲ್ಯ ಮನೋಭಾವ’ವು ಇದ್ದೇಇರುತ್ತದೆ.

ಸ್ನೇಹಿತರೇ, ಈ ಸರಕಾರವು ನೀವು ಕಷ್ಟಪಟ್ಟು ದುಡಿದ ಒಂದೊಂದು ಪೈಸೆಗೂ ಇರುವ ಕಿಮ್ಮತ್ತನ್ನು ಅರ್ಥ ಮಾಡಿಕೊಂಡಿದೆ. ಹೀಗಾಗಿಯೇ, ಸರಕಾರದ ನೀತಿನಿಯಮಾವಳಿಗಳನ್ನು ಬಡವರಿಗೆ ಮತ್ತು ಮಧ್ಯಮ ವರ್ಗದವರ ಬದುಕನ್ನು ಸುಖಕರಗೊಳಿಸುವ ಗುರಿಯೊಂದಿಗೆ ರೂಪಿಸಲಾಗಿದೆ. ಇಷ್ಡೇ ಅಲ್ಲ, ಈ ಎರಡೂ ವರ್ಗಗಳ ಜನರು ತಾವು ದುಡಿದಿದ್ದರಲ್ಲಿ ಉಳಿತಾಯವನ್ನು ಮಾಡುವುದೂ ಸಾಧ್ಯವಾಗುವ ವಾತಾವರಣವನ್ನು ನಿರ್ಮಿಸಬೇಕೆಂಬ ಆಶಯವೂ ಸರಕಾರದ ನೀತಿಗಳ ಹಿಂದಿದೆ.

ಮಿತ್ರರೇ, ಹಿಂದಿನ ಸರಕಾರ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಒಂದು ಎಲ್ ಇ ಡಿ ದೀಪದ ಬೆಲೆ 350 ರೂಪಾಯಿಯಾಗಿತ್ತು. ಆದರೆ ನಮ್ಮ ಸರಕಾರದ ನಿರಂತರ ಪ್ರಯತ್ನದಿಂದಾಗಿ ಇವತ್ತು ಇದರ ಬೆಲೆ ಕೇವಲ 40-45 ರೂಪಾಯಿಗೆ ಇಳಿದಿದೆ. ನಮ್ಮ ಸರಕಾರ ಜಾರಿಗೆ ತಂದಿರುವ `ಉಜಾಲಾ’ ಯೋಜನೆಯೇ ಇದಕ್ಕೆ ಕಾರಣ. ಇದರಿಂದ ಬಡವರಿಗೆ ಮತ್ತು ಮಧ್ಯಮ ವರ್ಗದವರ ಜನರಿಗೆ ಹಣ ಉಳಿತಾಯವಾಗಿದೆಯೋ, ಇಲ್ಲವೋ ಎಂಬುದನ್ನು ನೀವೇ ಹೇಳಿ. ನಾವು ಅಧಿಕಾರಕ್ಕೂ ಬರುವ ಮೊದಲು ಒಂದು ಎಲ್ ಇಡಿ ದೀಪದ ಬೆಲೆ ಅದ್ಯಾಕೆ ಅಷ್ಟೊಂದು ದುಬಾರಿಯಾಗಿತ್ತು ಎಂದು ನನಗೆ ಅರ್ಥವಾಗುತ್ತಿಲ್ಲ. ಇದು ನಿಜಕ್ಕೂ ಸಂಶೋಧನೆ ಮಾಡಲು ತಕ್ಕ ವಿಚಾರವಾಗಿದೆ.

ದೇಶದಲ್ಲಿ ಇದುವರೆಗೂ 26 ಕೋಟಿ ಎಲ್ ಇಡಿ ದೀಪಗಳನ್ನು ವಿತರಿಸಲಾಗಿದೆ. ಇದರಲ್ಲಿ ಒಂದು ದೀಪದ ಬೆಲೆಯ ಮೇಲೆ ಸರಾಸರಿ 250 ರೂಪಾಯಿಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ಲೆಕ್ಕ ಹಾಕಿದರೂ ಈ ಮೊತ್ತ 6,500 ಕೋಟಿ ರೂ.ಗಳಾಗುತ್ತವೆ. ಇದನ್ನೆಲ್ಲ ಉಳಿಸಿರುವುದು ನಮ್ಮ ದೇಶದ ಮಧ್ಯಮ ವರ್ಗದ ಜನರು. ಈ ದೀಪಗಳು ಜತೆಗೆ ವಿದ್ಯುತ್ ಉಳಿತಾಯವನ್ನೂ ಸಾಧ್ಯವಾಗಿಸುತ್ತಿವೆ. ಈ ಬಾಬ್ತಿನಲ್ಲಿ ಕೇವಲ ಒಂದು ವರ್ಷದಲ್ಲಿ ನಮ್ಮ ಮಧ್ಯಮ ವರ್ಗದ ಜನರು 14,000 ಕೋಟಿ ರೂ.ಗಳನ್ನು ಮಿಗುತಾಯ ಮಾಡಿದ್ದಾರೆ. ಈಗ ನೀವು ಎಲ್ ಇಡಿ ದೀಪಗಳ ಖರೀದಿ ಮತ್ತು ವಿದ್ಯುತ್ ಮಿತವ್ಯಯ ಎರಡರಿಂದಲೂ ಆಗುತ್ತಿರುವ ಮಿಗುತಾಯವನ್ನು ಲೆಕ್ಕ ಹಾಕಿದರೆ, ಇದೊಂದೇ ವರ್ಷಕ್ಕೆ 20,000 ಕೋಟಿ ರೂ.ಗಳಿಗಿಂತ ಹೆಚ್ಚಾಗುತ್ತದೆ. ಇದು ತನ್ನಿಂತಾನೇ ಮಧ್ಯಮ ವರ್ಗದ ಕುಟುಂಬಗಳನ್ನು ಸಬಲೀಕರಿಸುತ್ತಿದೆ.

ನಮ್ಮ ಸರಕಾರದ ಈ ಪ್ರಯತ್ನದಿಂದಾಗಿ ಕೇವಲ ನಮಗಷ್ಟೆ ಲಾಭವಾಗುತ್ತಿಲ್ಲ. ಬದಲಿಗೆ, ಸ್ಥಳೀಯ ಸಂಸ್ಥೆಗಳು ಕೂಡ ಇದರ ಫಲವನ್ನು ಉಣ್ಣುತ್ತಿವೆ. ಸ್ಥಳೀಯ ಸಂಸ್ಥೆಗಳು ಈಗ ತಮ್ಮ ವ್ಯಾಪ್ತಿಯಲ್ಲಿ ಹಳೆಯ ಬೀದಿದೀಪಗಳನ್ನು ಬದಲಿಸಿ, ಅಲ್ಲೆಲ್ಲ ಎಲ್ ಇಡಿ ದೀಪಗಳನ್ನು ಅಳವಡಿಸುತ್ತಿವೆ. ಒಂದು ಅಂದಾಜಿನ ಪ್ರಕಾರ, ದ್ವಿತೀಯ ಸ್ತರದ ಪಟ್ಟದಲ್ಲಿರುವ ಒಂದು ಪುರಸಭೆಯು ಈ ಬಾಬ್ತಿನಲ್ಲಿ ಸರಾಸರಿ 10ರಿಂದ 15 ಕೋಟಿ ರೂ.ಗಳನ್ನು ಉಳಿಸುತ್ತಿದೆ. ಅದು, ಈ ಹಣವನ್ನೀಗ ನಗರಾಭಿವೃದ್ಧಿಗೆ ವಿನಿಯೋಗಿಸಿ, ಆ ಮೂಲಕ ಆರ್ಥಿಕ ಬೆಳವಣಿಗೆಗೆ ತನ್ನ ಕಾಣಿಕೆಯನ್ನು ಕೊಡಬಹುದು.

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ನಮ್ಮ ಸರಕಾರವು ಸ್ವಂತ ಮನೆ ಕಟ್ಟಿಕೊಳ್ಳಲು ಮುಂದಾಗುವ ಮಧ್ಯಮ ವರ್ಗದವರು ತೆಗೆದುಕೊಳ್ಳುವ ಸಾಲದ ಮೇಲಿನ ಬಡ್ಡಿ ಹೊರೆಯನ್ನು ಇಳಿಸಿದೆ. ಈ ವಿಷಯವಾಗಿ ಸರಿಯಾಗಿ ಚರಿತ್ರೆಯನ್ನು ನೆನಪಿಸಿಕೊಳ್ಳಿ. ಏಕೆಂದರೆ, ನಮ್ಮ ಸರಕಾರ ಬರುವುದಕ್ಕೂ ಮೊದಲು ಬೇರಾವ ಸರಕಾರಗಳೂ ಇಂಥದೊಂದು ಹೆಜ್ಜೆ ಇಟ್ಟಿರಲಿಲ್ಲ.

ಸರಕಾರವು ಮಧ್ಯಮ ವರ್ಗದವರ ಮೇಲಿನ ಹೊರೆಯನ್ನು ತಗ್ಗಿಸುವ, ಕೆಳಮಧ್ಯಮ ವರ್ಗದವರಿಗೆ ಅವಕಾಶಗಳನ್ನು ಒದಗಿಸುವ ಮತ್ತು ಬಡವರನ್ನು ಸಬಲೀಕರಿಸುವ ಕೆಲಸಗಳಿಗೆ ಅಗತ್ಯವಾದ ಕ್ರಮಗಳನ್ನು ಸದಾ ಕೈಗೊಳ್ಳುತ್ತ ಬಂದಿದೆ. ಇದಕ್ಕಾಗಿ ಅಗತ್ಯವಾದ ನೀತಿಗಳನ್ನು ರೂಪಿಸಲಾಗಿದ್ದು, ಇವನ್ನು ಒಂದು ಕಾಲಮಿತಿಯಲ್ಲಿ ಜಾರಿಗೊಳಿಸಲು ನಾವು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ನಾವು ಯಾವಾಗಲೂ ಸಕಾರಾತ್ಮಕವಾಗಿಯೇ ಇದ್ದೇವೆ.

ನಾನು ದೇಶವನ್ನು ಅವರಿವರ ಪಾಲಾಗಲು ಬಿಡದೆ, ದೇಶವನ್ನೂ ದೇಶದ ಜನರನ್ನೂ ಮೇಲಕ್ಕೆತ್ತಲು ಶ್ರಮಿಸುತ್ತಿರುವುದಕ್ಕಾಗಿ ಕೆಲವೊಮ್ಮೆಟೀಕೆಗಳನ್ನೂ ಎದುರಿಸಬೇಕಾಗುತ್ತದೆ ಎನ್ನುವುದು ನನಗೆ ಗೊತ್ತಿದೆ. ಆದರೆ, ನಾನು ನನ್ನ ಹಿತಕ್ಕೋಸ್ಕರ ದೇಶದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳಲಾರೆ. ಇಷ್ಟಕ್ಕೂ ನಾವು ಯಾವಾಗಲೂ ಬರೀ ಅಧಿಕಾರ ಮತ್ತು ವೋಟಿನ ಬಗ್ಗೆ ಮಾತ್ರ ಚಿಂತಿಸಬೇಕೇನು? ನಾವು ಆರಿಸಿಕೊಂಡಿರುವ ದಾರಿ ಕಷ್ಟಕರವಾದುದು. ಆದರೆ, ಇದು ಸರಿಯಾದ ಹಾದಿಯೇ ಆಗಿದ್ದು, ಜನರ ಕಲ್ಯಾಣವನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ.

ಇದಕ್ಕಾಗಿಯೇ ನಾನು ಪದೇಪದೇ ಟೀಕೆಗೆ ತುತ್ತಾಗಬೇಕಾಗಿ ಬಂದಿದೆ. ನೀವು ನಿಮ್ಮ ಕೈಯಲ್ಲಿರುವುದನ್ನೆಲ್ಲ ಕೊಡುಗೈ ದಾನಿಯಂತೆ ಕೊಟ್ಟುಬಿಟ್ಟರೆ, ಅದನ್ನು ತೆಗೆದುಕೊಂಡವರು ನಿಮ್ಮನ್ನು ಹಾಡಿ ಹೊಗಳುತ್ತಾರೆ, ನಿಜ. ಆದರೆ, ನನಗಿದು ಬೇಕಾಗಿಲ್ಲ. ನನ್ನ ಸರಕಾರ ಅಧಿಕಾರಕ್ಕೆ ಬಂದಮೇಲೆ ನಾವು, ಸರಕಾರವು ನೀಡುವ ಧನಸಹಾಯವು ನೇರವಾಗಿ ಫಲಾನುಭವಿಗಳ ಖಾತೆಗೆ ಸಂದಾಯವಾಗುವಂಥ ಯೋಜನೆಯನ್ನು ಜಾರಿಗೆ ತಂದೆವು. ಇದು, ಪಟ್ಟಭದ್ರ ಹಿತಾಸಕ್ತಿಗಳನ್ನು ಕೆರಳಿಸಿತು. ಹೀಗಾಗಿ, ಅಂಥ ಶಕ್ತಿಗಳಿಗೆ ನನ್ನ ಮೇಲೆ ಸಿಟ್ಟು ಬಂದಿದೆ. ಅಷ್ಟೇ ಅಲ್ಲ, ಈ ಯೋಜನೆಯನ್ನು ಜಾರಿಗೆ ತರುವ ಮೂಲಕ, ಅದುವರೆಗೂ ಚಾಲ್ತಿಯಲ್ಲಿದ್ದ ನಕಲಿ ಖಾತೆಗಳನ್ನು ರದ್ದುಪಡಿಸಿದೆವು. ಹೀಗಾಗಿಯೇ, ಇಂಥ ಜನರಿಗೆ ಪ್ರಧಾನಮಂತ್ರಿ ಮೋದಿಯೆಂದರೆ ಅಪಥ್ಯ!

ಆದ್ದರಿಂದಲೇ ನಾವು ಶ್ರೀಸಾಮಾನ್ಯನ ಸಬಲೀಕರಣಕ್ಕೆ ಒತ್ತು ಕೊಟ್ಟಿದ್ದೇವೆ. ನಾನು ನನ್ನ ಹಿತಕ್ಕೋಸ್ಕರ ದೇಶದ ಹಿತವನ್ನು ಎಂದಿಗೂ ಬಲಿ ಕೊಡುವುದಿಲ್ಲ ಎಂಬ ಮಾತನ್ನು ನಾನು ನನ್ನ ದೇಶವಾಸಿಗಳಿಗೆ ವಿನಯದಿಂದ ಹೇಳಬಯಸುತ್ತೇನೆ.

ಗೆಳೆಯರೇ, ಈ ಸರಕಾರವು ಕೇವಲ ಖಾಸಗಿ ಮತ್ತು ಸಾರ್ವಜನಿಕ ವಲಯಗಳಿಗೆ ಮಾತ್ರ ಗಮನ ಹರಿಸಿಲ್ಲ; ಬದಲಿಗೆ, ವೈಯಕ್ತಿಕ ವಲಯಕ್ಕೂ ಆದ್ಯತೆ ಕೊಟ್ಟಿದೆ. ಇಲ್ಲದೆ ಹೋಗಿದ್ದರೆ, ಇಂದು ಕೇವಲ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸುತ್ತ ಮಾತ್ರ ಗಿರಕಿ ಹೊಡೆಯುತ್ತಿರುತ್ತಿತ್ತು. ಮನುಷ್ಯರೆಂದ ಮೇಲೆ ಕೆಲವು ವೈಯಕ್ತಿಕ ಆಸೆ-ಆಕಾಂಕ್ಷೆಗಳು ಕೂಡ ಇದ್ದೇಇರುತ್ತವೆ. ಹೀಗಾಗಿ, ಖಾಸಗಿ ಮತ್ತು ಸಾರ್ವಜನಿಕ ವಲಯಗಳಂತೆ ಈ ವಲಯವೂ ನಮಗೆ ಅಷ್ಟೇ ಮುಖ್ಯ. ಆದ್ದರಿಂದಲೇ, ನಮ್ಮ ಸರಕಾರವು ತಾವೇ ಸ್ವತಃ ಏನನ್ನಾದರೂ ಮಾಡಲು ಬಯಸುವಂಥ ಯುವಕ/ಯುವತಿಯರಿಗೆ ಸಾಧ್ಯವಾದ ಎಲ್ಲಾ ಸಹಾಯಗಳನ್ನೂ ಮಾಡುತ್ತಿದೆ. ಈ ಮೂಲಕ ಅವರೆಲ್ಲ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಕೈ ಜೋಡಿಸುತ್ತಿದೆ.

* `ಮುದ್ರಾ’ ಯೋಜನೆಯಡಿ ಕೇಂದ್ರ ಸರಕಾರವು 9 ಕೋಟಿ ಬ್ಯಾಂಕ್ ಖಾತೆದಾರರಿಗೆ ಯಾವುದೇ ಖಾತ್ರಿ ಇಲ್ಲದೆ 3.75 ಲಕ್ಷ ಕೋಟಿ ರೂಪಾಯಿಗಳನ್ನು ಸಾಲವಾಗಿ ಕೊಟ್ಟಿದೆ.

* ಈ 9 ಕೋಟಿ ಜನರ ಪೈಕಿ, 2.63 ಕೋಟಿ ಜನರು ಯುವಜನರಾಗಿದ್ದು, ಇವರೆಲ್ಲರಿಗೂ ಇದೇ ಮೊದಲ ಬಾರಿಗೆ ಬ್ಯಾಂಕ್ ಸಾಲ ಸೌಲಭ್ಯ ಸಿಕ್ಕಿದೆ. ಅಂದರೆ, ಮುದ್ರಾ ಯೋಜನೆಯಡಿ ಸಾಲ ತೆಗೆದುಕೊಂಡು, ತಮ್ಮದೇ ವ್ಯಾಪಾರ ವಹಿವಾಟುಗಳನ್ನು ಆರಂಭಿಸಲು ಇವರು ಮುಂದಾಗಿದ್ದಾರೆ ಎಂದರ್ಥ.

* ಕೇಂದ್ರ ಸರಕಾರವು `ಸ್ಕಿಲ್ ಇಂಡಿಯಾ ಮಿಷನ್,’ `ಸ್ಟ್ಯಾಂಡ್-ಅಪ್ ಇಂಡಿಯಾ’, ಮತ್ತು `ಸ್ಟಾರ್ಟಪ್ ಇಂಡಿಯಾ’ ಯೋಜನೆಗಳ ಮೂಲಕ ಸ್ವ-ಉದ್ಯೋಗವನ್ನು ಉತ್ತೇಜಿಸುತ್ತಿದೆ. ಹೆಚ್ಚುಹೆಚ್ಚು ಜನರನ್ನು ಅಧಿಕೃತ ಆರ್ಥಿಕ ವ್ಯವಸ್ಥೆಯ ಕಕ್ಷೆಗೆ ತರುವುದಕ್ಕಾಗಿ ಕಂಪನಿಗಳಿಗೆ ಕೇಂದ್ರ ಸರಕಾರವು ಅನೇಕ ಪ್ರೋತ್ಸಾಹಕ ಭತ್ಯೆಗಳನ್ನು ನೀಡುತ್ತಿದೆ.

ಸೋದರ-ಸೋದರಿಯರೇ, ಸಂಘಟಿತ ವಲಯದಲ್ಲಿರುವ ಉದ್ಯೋಗಗಳ ಬಗ್ಗೆ ಇರುವ ಕೆಲವು ಅಂಕಿಅಂಶಗಳನ್ನು ನೋಡಿದರೆ ಈ ಕೆಳಗಿನ ಅಂಶಗಳು ದೃಢವಾಗುತ್ತವೆ-

* 2014ರ ಮಾರ್ಚ್ ಕೊನೆಯ ಹೊತ್ತಿನಲ್ಲಿ ದೇಶದಲ್ಲಿ ಪ್ರತೀ ತಿಂಗಳೂ 3.26 ಕೋಟಿ ಉದ್ಯೋಗಿಗಳು `ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ’ಗೆ ತಮ್ಮ ಕಾಣಿಕೆ ನೀಡುತ್ತಿದ್ದರು. ಆದರೆ, ಕಳೆದ ಮೂರು ವರ್ಷಗಳಲ್ಲಿ ಈ ಸಂಖ್ಯೆ 4.80 ಕೋಟಿಗೆ ಏರಿದೆ. ಉದ್ಯೋಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗದೆ ಇದು ಸಾಧ್ಯವಿಲ್ಲ ಎನ್ನುವುದನ್ನು ಕೆಲವರು ಮರೆತಿದ್ದಾರೆ!

ಗೆಳೆಯರೇ, ಕೇಂದ್ರ ಸರಕಾರದ ಹಲವು ಯೋಜನೆಗಳು ಬಡವರ, ಕೆಳ ಮಧ್ಯಮ ವರ್ಗದವರ ಮತ್ತು ಮಧ್ಯಮ ವರ್ಗದವರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಯನ್ನು ತರುವುದನ್ನು ಖಾತ್ರಿಪಡಿಸಿಕೊಳ್ಳಲು ನಾವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ.

ನಾವು ಜಾರಿಗೆ ತಂದ `ಜನಧನ್ ಯೋಜನೆ’ಯಡಿ 30 ಕೋಟಿ ಬಡವರು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇನ್ನು `ಉಜ್ವಲಾ’ ಯೋಜನೆಯಡಿ ದೇಶದ ಮೂರು ಕೋಟಿ ಗೃಹಿಣಿಯರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸಲಾಗಿದೆ. ಅಲ್ಲದೆ, ದೇಶದ ಸರಿಸುಮಾರು 15 ಕೋಟಿ ಜನರನ್ನು ಸರಕಾರದ ಹಲವು ವಿಮಾ ಯೋಜನೆಗಳ ವ್ಯಾಪ್ತಿಗೆ ತರಲಾಗಿದೆ. ಇನ್ನು, ದೇಶದ ಬಡವರಿಗೆಲ್ಲ ವಿದ್ಯುತ್ ಸೌಲಭ್ಯವನ್ನು ಒದಗಿಸಲು ಕೆಲದಿನಗಳ ಹಿಂದಷ್ಟೆ `ಸೌಭಾಗ್ಯ’ ಯೋಜನೆಯನ್ನು ಘೋಷಿಸಲಾಗಿದೆ. ಈ ಎಲ್ಲ ಯೋಜನೆಗಳು ಬಡವರ ಸಬಲೀಕರಣವನ್ನು ಮಾಡುತ್ತಿವೆ.

ಆದರೆ, ಭ್ರಷ್ಟಾಚಾರ ಮತ್ತು ಕಪ್ಪುಹಣ ಎರಡೂ ಈ ದೇಶಕ್ಕೆ ದೊಡ್ಡ ತಲೆನೋವಾಗಿವೆ. ಇವೆರಡನ್ನೂ ಹತ್ತಿಕ್ಕುವಲ್ಲಿ ನಿಮ್ಮ ಈ ಸಂಸ್ಥೆಗೂ ದೇಶದಲ್ಲಿರುವ ಕಂಪನಿ ಸೆಕ್ರೆಟರಿಗಳಿಗೂ ಬಹುಮುಖ್ಯವಾದ ಪಾತ್ರವಿದೆ.

ನಮ್ಮ ದೇಶದಲ್ಲಿ ಒಟ್ಟು ಮೂರು ಲಕ್ಷ ಹುಸಿ ಉದ್ದಿಮೆಗಳು ನೋಂದಣಿಯಾಗಿವೆ. ಇವುಗಳ ಪೈಕಿ 2.1 ಲಕ್ಷದಷ್ಟು ಕಂಪನಿಗಳು, ಕೇಂದ್ರ ಸರಕಾರದ ನೋಟು ರದ್ದತಿ ಕ್ರಮದ ನಂತರ ಕಾಳಧನದ ದುರ್ಲಾಭ ಪಡೆಯುತ್ತಿದ್ದವು. ಹೀಗಾಗಿ, ಸರಕಾರವು ಇಷ್ಟೂ ಕಂಪನಿಗಳ ನೋಂದಣಿಯನ್ನೇ ರದ್ದುಪಡಿಸಲಾಗಿದೆ.

ಇದರಿಂದಾಗಿ, ಯಾವುದೇ ಉದ್ಯಮ ಸಂಸ್ಥೆಯಲ್ಲಿ ನಿರ್ದೇಶಕರಾಗಿರುವವರಲ್ಲಿ ಈಗ ಜಾಗೃತಿ ಹೆಚ್ಚಾಗಲಿದೆ ಮತ್ತು ಈ ಶುದ್ಧೀಕರಣ ಯಜ್ಞದ ಫಲವಾಗಿ ಉದ್ದಿಮೆಗಳು ಇನ್ನುಮುಂದೆ ಹೆಚ್ಚು ಪಾರದರ್ಶಕವಾಗಲಿವೆ ಎನ್ನುವ ಭರವಸೆ ನನಗಿದೆ.

ಗೆಳೆಯರೇ, ಇದು ಮಹತ್ತರ ಬದಲಾವಣೆಗಳ ಕಾಲಘಟ್ಟವಾಗಿದ್ದು, ದೇಶದ ಇತಿಹಾಸದಲ್ಲಿ ಹಿಂದೆಂದೂ ಇಂಥ ಯುಗಪ್ರವರ್ತಕ ಪರಿವರ್ತನೆಗಳು ಸಂಭವಿಸಿರಲಿಲ್ಲ.

ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತದ ಅಗತ್ಯ ಎಷ್ಟೊಂದಿದೆ, ಇದಕ್ಕಿರುವ ಪ್ರಾಮುಖ್ಯವೇನು ಎನ್ನುವುದು ದೇಶದಲ್ಲಿ ಈಗ ಎಲ್ಲರಿಗೂ ಗೊತ್ತಾಗಿದೆ. ಅಂದಂತೆ, ದೇಶದಲ್ಲಿ `ಔದ್ಯಮಿಕ ಆಡಳಿತ ನೀತಿ’ಯನ್ನು ರೂಪಿಸುವಲ್ಲಿ ಐಸಿಎಸ್ಐ ಸಂಸ್ಥೆಯು ಮಾಡಿದ ಶಿಫಾರಸುಗಳು ಸಕಾರಾತ್ಮಕ ಪಾತ್ರ ವಹಿಸಿವೆ.

ದೇಶದಲ್ಲಿ ಇನ್ನುಮುಂದೆ ಹೊಸ ಬಗೆಯ ವಾಣಿಜ್ಯ ಸಂಸ್ಕೃತಿ ಬರಬೇಕಾಗಿದೆ. ಇದು ನೆಲೆಯೂರುವಂತೆ ಮಾಡುವಲ್ಲಿ ನೀವೆಲ್ಲರೂ ಶ್ರಮಿಸಬೇಕಾದ್ದು ಈಗಿನ ಅಗತ್ಯವಾಗಿದೆ. ದೇಶದಲ್ಲಿ ಜಿಎಸ್ ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ಮೇಲೆ ಹೊಸದಾಗಿ 19 ಲಕ್ಷ ಜನರು ಪರೋಕ್ಷ ತೆರಿಗೆ ವ್ಯಾಪ್ತಿಗೆ ಬಂದಿದ್ದಾರೆ. ಸಣ್ಣ ವ್ಯಾಪಾರಿಯೇ ಇರಲಿ, ದೊಡ್ಡ ಉದ್ಯಮಿಯೇ ಇರಲಿ, ಪ್ರತಿಯೊಬ್ಬರೂ ಜಿಎಸ್ ಟಿ ವ್ಯವಸ್ಥೆಯೊಳಗೇ ಅಂತರ್ಗತವಾಗಿರುವ ಪ್ರಾಮಾಣಿಕ ತೆರಿಗೆ ಪಾವತಿ ವಿಧಾನವನ್ನು ಅಳವಡಿಸಿಕೊಳ್ಳಬೇಕು. ದೇಶದ ವಣಿಕ ಸಮುದಾಯವನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕಾದುದು ನಿಮ್ಮ ಕರ್ತವ್ಯವೂ ಆಗಿದೆ. ನಿಮ್ಮ ಸಂಸ್ಥೆಗೆ ಪ್ರತೀವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು ಕಂಪನಿ ಸೆಕ್ರೆಟರಿಗಳಾಗಬೇಕೆಂದು ದಾಖಲಾಗುತ್ತಾರೆ. ಹೀಗಾಗಿ, ಜಿಎಸ್ ಟಿ ವ್ಯವಸ್ಥೆಗೆ ಸಂಬಂಧಿಸಿದ ಸಣ್ಣಪುಟ್ಟ ಸಂಗತಿಗಳ ಬಗ್ಗೆ ಕನಿಷ್ಠಪಕ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಅಗತ್ಯವಾದ ತರಬೇತಿ ನೀಡುವ ಹೊಣೆಯನ್ನು ಸ್ವೀಕರಿಸಲು ನಿಮ್ಮ ಸಂಸ್ಥೆ ಸಿದ್ಧವಾಗಿದೆಯೇ? ಇಷ್ಟು ವಿದ್ಯಾರ್ಥಿಗಳು ನಿಮ್ಮಿಂದ ತರಬೇತಾದರೆ ಅವರೆಲ್ಲರೂ ನಮ್ಮ ಸಣ್ಣಪುಟ್ಟ ವ್ಯಾಪಾರಿಗಳನ್ನು ಜಿಎಸ್ ಟಿ ವ್ಯಾಪ್ತಿಗೆ ಸೇರಿಸಲು/ತರಲು ನೆರವಾಗಬಹುದು; ವ್ಯಾಪಾರಿಗಳು ತಮ್ಮ ತೆರಿಗೆ ವಿವರ ಸಲ್ಲಿಸಲು ಇವರು ನೆರವು ನೀಡಬಹುದು. ಇದಕ್ಕೆಲ್ಲ ಕೇವಲ 7ರಿಂದ 10 ದಿನಗಳ ತರಬೇತಿ ಸಾಕು. ಇದರಿಂದ ಹೊಸ ಬಗೆಯ ಉದ್ಯೋಗಸೃಷ್ಟಿಯೂ ಆಗುತ್ತದೆ. ನಿಮ್ಮ ಸಂಸ್ಥೆಯು ವ್ಯವಸ್ಥಿತ ವಿಧಾನದಲ್ಲಿ ಈ ಕೆಲಸವನ್ನು ಕೈಗೆತ್ತಿಕೊಂಡರೆ, ದೇಶಕ್ಕೆ ಇಂತಹ ಒಂದು ಲಕ್ಷ ವಿದ್ಯಾರ್ಥಿಗಳು ಕೂಡ ಸಾಕಾಗುವುದಿಲ್ಲ.

ಗೆಳೆಯರೇ, ದೇಶವು 2022ರಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ತಮ್ಮ ಜೀವನದ ಬಹುಭಾಗವನ್ನೆಲ್ಲ ಕಾರಾಗೃಹದಲ್ಲೇ ಕಳೆದ ಚೇತನಗಳ ಆಶೋತ್ತರಗಳನ್ನು ಈಡೇರಿಸುವ ಕನಸು ನಮಗಿರಬೇಕು. 1942ರಲ್ಲಿ `ಕ್ವಿಟ್ ಇಂಡಿಯಾ’ ಚಳವಳಿ ನಡೆದ ಸಮಯದಲ್ಲಿ ದೇಶದ ಪ್ರತಿಯೊಬ್ಬರೂ ಬ್ರಿಟಿಷರನ್ನು ಇಲ್ಲಿಂದ ಓಡಿಸುವವರೆಗೂ ತಾವು ವಿರಮಿಸುವುದಿಲ್ಲವೆಂಬ ಕನಸನ್ನು ಹೊತ್ತುಕೊಂಡಿದ್ದರು. 2022ರಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈಗಲೂ ಅಂಥದೊಂದು ಕನಸು ಪ್ರತಿಯೊಬ್ಬರಲ್ಲೂ ಇರಬೇಕು.

ಗೆಳೆಯರೇ, 2022ರಲ್ಲಿ ಬರಲಿರುವ ಶುಭ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನಾನು ಐಸಿಎಸ್ಐ ಸಂಸ್ಥೆಯಿಂದ ಕೆಲವು ವಚನಗಳನ್ನು ನಿರೀಕ್ಷಿಸುತ್ತಿದ್ದೇನೆ. ಇವುಗಳನ್ನು ನೀವೆಲ್ಲರೂ ಪೂರೈಸಬೇಕು-

* 2022ರ ಹೊತ್ತಿಗೆ ದೇಶವು ಅತ್ಯಧಿಕ ತೆರಿಗೆ ಪಾವತಿಸುವಂತೆ ಮಾಡುವ ಹೊಣೆಗಾರಿಕೆಯನ್ನು ನೀವು ವಹಿಸಿಕೊಳ್ಳುವಿರಾ?

* 2022ರ ಹೊತ್ತಿಗೆ ದೇಶದಲ್ಲಿ ಒಂದೇಒಂದು ಹುಸಿಉದ್ದಿಮೆಯೂ ಇರದಂತೆ ಮಾಡಬಲ್ಲೆವು ಎಂದು ನೀವು ಮಾತು ಕೊಡುವಿರಾ?

* 2022ರ ಹೊತ್ತಿಗೆ ದೇಶದ ಪ್ರತಿಯೊಂದು ಕಂಪನಿಯೂ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವಂತೆ ಮಾಡಬಲ್ಲೆವು ಎನ್ನುವುದನ್ನು ಖಾತ್ರಿಪಡಿಸುವಿರಾ?

* 2022ರ ಹೊತ್ತಿಗೆ ನಿಮ್ಮ ಉದಾರ ನೆರವಿನ ಮೂಲಕ ದೇಶದಲ್ಲಿ ಹೊಸ ಬಗೆಯ ವಾಣಿಜ್ಯ ಸಂಸ್ಕೃತಿ ನೆಲೆಯೂರುವಂತೆ ಮಾಡುವಿರಾ?

ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಐಸಿಎಸ್ಐ ಸಂಸ್ಥೆಯು, ಈ ಗುರಿಗಳನ್ನು ಸಾಧಿಸಲು ಮತ್ತು ಇವೆಲ್ಲವನ್ನೂ ತನ್ನ ವೃತ್ತಿಸಂಸ್ಕೃತಿಯಲ್ಲೂ ಅಳವಡಿಸಿಕೊಳ್ಳಲು ತನ್ನ ಹೊಸ ಪಯಣವನ್ನು ಆರಂಭಿಸಿದೆ ಎನ್ನುವ ಭರವಸೆ ನನಗಿದೆ.

ಈ ಚಿನ್ನದ ಹಬ್ಬದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಅಭಿನಂದನೆಗಳು.

ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಕೆಲವರು ಇತ್ತೀಚೆಗೆ ಸರಕಾರವನ್ನು ಟೀಕಿಸುತ್ತಿದ್ದಾರೆ. ಇದರಿಂದ ನಾವೇನೂ ಕುಪಿತರಾಗಿಲ್ಲ. ಜನರ ಹಿತ ಕಾಪಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರವು ಸಂವೇದನಾಶೀಲವಾಗಿದೆ. ನಮ್ಮ ವಿರುದ್ಧದ ಕಟುಟೀಕೆಯನ್ನು ಕೂಡ ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತೇವೆ. 125 ಕೋಟಿ ಜನರಿರುವ ಈ ದೇಶವನ್ನು ಬೆಳವಣಿಗೆ ಮತ್ತು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿಕೊಂಡು ಹೋಗಲು ನಾವು ವಿನೀತ ಭಾವದೊಂದಿಗೆ ಕಟಿಬದ್ಧರಾಗಿದ್ದೇವೆ. ಈ ಸಂದರ್ಭದಲ್ಲಿ ನಾವು ಜನರ ಹಿತಾಸಕ್ತಿಗಳನ್ನೂ ಈಗಿನ ತೀವ್ರತೆ ಮತ್ತು ಲಯದೊಂದಿಗೇ ಮುಂದುವರಿಸಿಕೊಂಡು ಹೋಗಬೇಕೆಂಬುದೂ ನಮ್ಮ ಮನಸ್ಸಿನಲ್ಲಿದೆ.

ನಮ್ಮವಿರುದ್ಧ ಬರುವ ಟೀಕೆಗಳೆಲ್ಲ ಲೋಪದೋಷಗಳಿಂದ ಕೂಡಿವೆ ಎನ್ನುವುದನ್ನು ಕೂಡ ನಾವು ಒಪ್ಪುವುದಿಲ್ಲ ಎನ್ನುವುದನ್ನು ನಮ್ಮ ಟೀಕಾಕಾರರಿಗೆ ನಾನು ವಿನಯದಿಂದ ಹೇಳಬಯಸುತ್ತೇನೆ. ಆದರೆ, ದೇಶದಲ್ಲಿ ನಿರಾಶೆಯ ವಾತಾವರಣವನ್ನು ಸೃಷ್ಟಿಸುವುದನ್ನು ನಾವು ಒಪ್ಪುವುದಿಲ್ಲ.

ದೇಶದ ಆರ್ಥಿಕ ವ್ಯವಸ್ಥೆಯ ಶಕ್ತಿಯನ್ನು ತೋರಿಸುವ ಹಲವು ಸಂಗತಿಗಳನ್ನು ನಾನು ನಿಮಗೆ ತೋರಿಸಿದ್ದೇನೆ. ನಮ್ಮ ಹಣಕಾಸು ಪ್ರಪಂಚವು ಎಷ್ಟೊಂದು ಪ್ರಬಲವಾಗಿದೆ ಎನ್ನುವುದನ್ನು ತೋರಿಸುವಂಥ ಇನ್ನೂ ಹಲವು ಅಂಶಗಳಿವೆ. ಈ ಅಂಶಗಳು ನಮ್ಮ ಸರಕಾರದ ನೀತಿ ನಿರ್ಧಾರಗಳ ಶಕ್ತಿಯನ್ನು ಕೂಡ ಸ್ಫುಟವಾಗಿ ತೋರಿಸುತ್ತವೆ. ಇದು ನಾವು ಸಾಗುತ್ತಿರುವ ದಿಕ್ಕು ಮತ್ತು ಅದರ ವೇಗಕ್ಕೆ ಕೂಡ ಸಾಕ್ಷಿಯಾಗಿದೆ. ದೇಶದ ಒಳಗೂ ಹೊರಗೂ ಭಾರತದ ಬಗ್ಗೆ ವರ್ಧಿಸುತ್ತಿರುವ ವಿಶ್ವಾಸವು ಕೂಡ ನಮ್ಮ ಆರ್ಥಿಕತೆಯ ಶಕ್ತಿಯ ಸೂಚನೆಯಾಗಿದೆ.

ಇದನ್ನು ನಾವು ಉದಾಸೀನ ಮಾಡುವಂತಿಲ್ಲ. ನಾವೆಲ್ಲರೂ ಹೊಸ ಬಗೆಯ ಚೈತನ್ಯ, ಉತ್ಸಾಹ, ವಿಶ್ವಾಸ ಮತ್ತು ಸಂಸ್ಕೃತಿಗಳೊಂದಿಗೆ ನವಭಾರತದ ನಿರ್ಮಾಣದ ಕಡೆಗೆ ಮುಂದಡಿ ಇಡೋಣ.

ಈ ಚಿನ್ನದ ಹಬ್ಬದ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಅಭಿನಂದನೆಗಳು. ನೀವು ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದವರಾದ್ದರಿಂದ ನಿಮ್ಮೆಲ್ಲರೊಂದಿಗೂ ನನ್ನ ವಿಚಾರಗಳನ್ನು ಹಂಚಿಕೊಳ್ಳಬೇಕೆನಿಸಿತು. ಈ ವೇದಿಕೆಯ ಮೂಲಕ ಈ ವಿಚಾರಗಳೆಲ್ಲವೂ ದೇಶದ ಸಹನಾಗರಿಕರನ್ನೆಲ್ಲ ತಲುಪುತ್ತದೆ ಎನ್ನುವ ತುಂಬುವಿಶ್ವಾಸ ನನ್ನದಾಗಿದೆ.

ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭ ಹಾರೈಕೆಗಳು.

ಧನ್ಯವಾದಗಳು.

 

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Suheldev to Birsa: How PM saluted 'unsung heroes'

Media Coverage

Suheldev to Birsa: How PM saluted 'unsung heroes'
...

Nm on the go

Always be the first to hear from the PM. Get the App Now!
...
PM calls on President
November 26, 2022
ಶೇರ್
 
Comments

The Prime Minister, Shri Narendra Modi has called on the President of India, Smt Droupadi Murmu.

Prime Minister's office tweeted;

"PM @narendramodi called on Rashtrapati Droupadi Murmu Ji earlier today."