ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಮಾನ್ಯ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಪ್ರಧಾನಮಂತ್ರಿ ಮೋದಿಯವರ 75ನೇ ಜನುಮದಿನಕ್ಕೆ ಯುರೋಪಿಯನ್ ಆಯೋಗದ ಅಧ್ಯಕ್ಷರು ಶುಭಾಶಯ ಕೋರಿದರು. ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಸಿದರು.
ಯುರೋಪಿಯನ್ ಒಕ್ಕೂಟವು (ಇಯು) ಇಂದು ಹೊಸ ಕಾರ್ಯತಂತ್ರದ ಇಯು-ಭಾರತ ಕಾರ್ಯಸೂಚಿಯನ್ನು ಅಳವಡಿಸಿಕೊಂಡಿದ್ದಕ್ಕಾಗಿ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳಾಗಿ, ಪರಸ್ಪರ ಸಮೃದ್ಧಿಗಾಗಿ ಭಾರತ-ಇಯು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ಜಾಗತಿಕ ಸಮಸ್ಯೆಗಳನ್ನು ಜಂಟಿಯಾಗಿ ಪರಿಹರಿಸಲು, ಸ್ಥಿರತೆಯನ್ನು ಪೋಷಿಸಲು ಮತ್ತು ನಿಯಮಾಧಾರಿತ ಕ್ರಮವನ್ನು ಉತ್ತೇಜಿಸುವ ಪ್ರಯತ್ನಗಳನ್ನು ಉಭಯ ನಾಯಕರು ಸ್ವಾಗತಿಸಿದರು.
ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾತುಕತೆಗಳನ್ನು ವರ್ಷಾಂತ್ಯದೊಳಗೆ ಮುಕ್ತಾಯಗೊಳಿಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು.
ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಉಕ್ರೇನ್‌ನಲ್ಲಿನ ಸಂಘರ್ಷದ ಶೀಘ್ರ ಮತ್ತು ಶಾಂತಿಯುತ ಪರಿಹಾರಕ್ಕೆ ಭಾರತ ಬದ್ಧವಾಗಿದೆ.
ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಮುಂಬರುವ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೆ ಆಹ್ವಾನ ನೀಡಿದರು.


