1. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥರಾದ ನಾವು ಬ್ಯೂನಸ್ ಐರಿಸ್‍ನಲ್ಲಿ ಜಿ-20 ಶೃಂಗಸಭೆಯ ಸಂದರ್ಭದಲ್ಲಿ 2018ರ ನವೆಂಬರ್ 30 ರಂದು ಬ್ರಿಕ್ಸ್ ದೇಶಗಳ ನಾಯಕರ ವಾರ್ಷಿಕ ಅನೌಪಚಾರಿಕ ಸಭೆಯಲ್ಲಿ ಸೇರಿದ್ದೆವು. ಜಿ-20 ಶೃಂಗಸಭೆಯನ್ನು ಆಯೋಜಿಸಿರುವ ಅರ್ಜೆಂಟಿನಾವು ನಮಗೆ ನೀಡಿರುವ ಆತಿಥ್ಯಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ.
2. ನಾವು ಅಂತಾರಾಷ್ಟ್ರೀಯ ರಾಜಕೀಯ, ಭದ್ರತೆ ಮತ್ತು ಜಾಗತಿಕ ಆರ್ಥಿಕ-ಹಣಕಾಸು ವಿಷಯಗಳು ಹಾಗೆಯೇ ಸುಸ್ಥಿರ ಅಭಿವೃದ್ಧಿಗೆ ಇರುವ ಸವಾಲುಗಳ ಬಗ್ಗೆ ನಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ವಿಶ್ವಸಂಸ್ಥೆಯ ಪ್ರಮುಖ ಪಾತ್ರವಾದ ವಿಶ್ವ ಶಾಂತಿ ಮತ್ತು ಸ್ಥಿರತೆ, ವಿಶ್ವಸಂಸ್ಥೆಯ ಉದ್ದೇಶ ಮತ್ತು ತತ್ವಗಳು, ಅಂತಾರಾಷ್ಟ್ರೀಯ ಕಾನೂನಿಗೆ ಗೌರವ, ಪ್ರಜಾಪ್ರಭುತ್ವ ಹಾಗೂ ಕಾನೂನಿನ ಉತ್ತೇಜನಕ್ಕೆ ನಾವು ಬದ್ಧವಾಗಿದ್ದೇವೆ. ಬಹುಪಕ್ಷೀಯತೆಯನ್ನು ಬಲಪಡಿಸುವುದು, ನ್ಯಾಯೋಚಿತ, ನ್ಯಾಯಸಮ್ಮತ, ಸಮಾನ, ಪ್ರಜಾಪ್ರಭುತ್ವ ಹಾಗೂ ಅಂತಾರಾಷ್ಟ್ರೀಯ ಪ್ರಾತಿನಿಧ್ಯವನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.
3. ಬ್ರಿಕ್ಸ್ ರಾಷ್ಟ್ರಗಳೂ ಸೇರಿದಂತೆ ಹಲವೆಡೆ ಮುಂದುರಿದಿರುವ ಭಯೋತ್ಪಾದಕ ದಾಳಿಗಳನ್ನು ನಾವು ಖಂಡಿಸುತ್ತೇವೆ. ಎಲ್ಲಿಯಾದರೂ ಮತ್ತು ಯಾರಿಂದಲಾದರೂ ನಡೆಯುವ ಯಾವುದೇ ರೂಪದ ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ. ವಿಶ್ವಸಂಸ್ಥೆಯ ಕಠಿಣ ಅಂತಾರಾಷ್ಟ್ರೀಯ ಕಾನೂನುಗಳಡಿಯಲ್ಲಿ ಭಯೋತ್ಪಾದನೆ ವಿರುದ್ಧ ಸೆಣಸಲು ತೀವ್ರ ಪ್ರಯತ್ನಗಳನ್ನು ಮಾಡುತ್ತೇವೆ. ಜೋಹಾನ್ಸ್‍ಬರ್ಗ್ ಘೋಷಣೆಯಲ್ಲಿ ಗುರುತಿಸಲಾಗಿರುವ ಘಾತುಕ ಶಕ್ತಿಗಳೂ ಸೇರಿದಂತೆ ಎಲ್ಲ ಭಯೋತ್ಪಾದಕ ಶಕ್ತಿಗಳ ವಿರುದ್ಧ ಸಮಗ್ರ ಹೋರಾಟ ಅನುಸರಿಸಬೇಕೆಂದು ಎಲ್ಲ ದೇಶಗಳಿಗೂ ನಾವು ಕರೆಕೊಡುತ್ತಿದ್ದೇವೆ
4. ಡಬ್ಲ್ಯೂಟಿಒದಲ್ಲಿ ರೂಪಿಸಿರುವಂತೆ ನಿಯಮಾಧಾರಿತ ಬಹುಕ್ಷೀಯ ವ್ಯಾಪಾರ ವ್ಯವಸ್ಥೆ, ಪಾರದರ್ಶಕ, ನಿಷ್ಪಕ್ಷಪಾತಿ, ಮುಕ್ತ ಹಾಗೂ ಅಂತರ್ಗತ ಅಂತಾರಾಷ್ಟ್ರೀಯ ವ್ಯಾಪಾರವನ್ನು ನಾವು ಬೆಂಬಲಿಸುತ್ತೇವೆ. ಡಬ್ಲ್ಯೂಟಿಒದ ಕಾರ್ಯದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಮುಕ್ತ ಹಾಗೂ ಫಲಿತಾಂಶ ಆಧಾರಿತ ಚರ್ಚೆಗಳನ್ನು ಡಬ್ಲ್ಯೂಟಿಒದ ಇತರ ರಾಷ್ಟ್ರಗಳೊಂದಿಗೆ ನಡೆಸಲು ನಾವು ಸಿದ್ಧರಿದ್ದೇವೆ.
5. ಡಬ್ಲ್ಯೂಟಿಒದ ಉದ್ದೇಶ ಹಾಗೂ ನಿಯಮಗಳು ಏಕಪಕ್ಷೀಯ ಮತ್ತು ರಕ್ಷಣಾತ್ಮಕ ಕ್ರಮಗಳಿಗೆ ಎದುರಾಗಿವೆ. ಡಬ್ಲ್ಯೂಟಿಒದ ಇಂತಹ ಅಸಮಂಜಸ ಕ್ರಮಗಳನ್ನು ವಿರೋಧಿಸಲು ನಾವು ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡುತ್ತಿದ್ದೇವೆ. ಡಬ್ಲ್ಯೂಟಿಒಗೆ ಅವರು ನೀಡಿರುವ ಒಪ್ಪಿಗೆಯಂತೆ ನಡೆಯಬೇಕು. ಪಕ್ಷಪಾತಿ ಹಾಗೂ ನಿರ್ಬಂಧಿತ ಸ್ವರೂಪದ ನಿಯಮಗಳನ್ನು ಹಿಂಪಡೆಯಬೇಕು.
6. ಸದ್ಯದ ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸಲು ಡಬ್ಲ್ಯೂಟಿಒದ ಸುಧಾರಣೆಗೆ ನಡೆಯುವ ಕ್ರಮಗಳನ್ನು ನಾವು ಬೆಂಬಲಿಸುತ್ತೇವೆ. ಈ ಕ್ರಮಗಳಲ್ಲಿ ಡಬ್ಲ್ಯೂಟಿಒದ ಮಹತ್ವದ ಮತ್ತು ಮೂಲಭೂತ ಉದ್ದೇಶಗಳು ರಕ್ಷಿಸಲ್ಪಡಬೇಕು. ಡಬ್ಲ್ಯೂಟಿಒ ಸದಸ್ಯರ ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಆಸಕ್ತಿಗಳು ಇದರಲ್ಲಿ ಬಿಂಬಿತವಾಗಬೇಕು.
7. ಡಬ್ಲ್ಯೂಟಿಒದ ಸರಿಯಾದ ಕಾರ್ಯನಿರ್ವಹಣೆಗೆ ವ್ಯಾಜ್ಯ ಪರಿಹಾರ ವ್ಯವಸ್ಥೆಯು ಅಗತ್ಯವಾಗಿದೆ. ಇದರ ಸಮರ್ಥ ಕಾರ್ಯನಿರ್ವಹಣೆಯು ಸದಸ್ಯ ರಾಷ್ಟ್ರಗಳಲ್ಲಿ ಡಬ್ಲ್ಯೂಟಿಒ ಜತೆ ಮಾತುಕತೆ ನಡೆಸಲು ಆತ್ಮವಿಶ್ವಾಸ ತುಂಬುತ್ತದೆ. ಆದ್ದರಿಂದ ಡಬ್ಲ್ಯೂಟಿಒದ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಗತ್ಯವಾದ ಈ ಮೇಲ್ಮನವಿ ವ್ಯವಸ್ಥೆಯ ರಚನೆಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದೇವೆ.
8. ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವು ಇತರ ಸದಸ್ಯ ರಾಷ್ಟ್ರಗಳೊಂದಿಗೆ ಸಂವಹನ ಹಾಗೂ ಸಹಕಾರವನ್ನು ಹೆಚ್ಚಿಸಿ ಜಂಟಿ ಹಾಗೂ ಸಹಯೋಗದೊಂದಿಗೆ ಡಬ್ಲ್ಯೂಟಿಒ ಸಮರ್ಥವಾಗಿ ಕಾರ್ಯನಿರ್ವಹಿಸಲು ನಾವು ಬದ್ಧರಾಗಿದ್ದೇವೆ. ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಎಲ್ಲ ರಾಷ್ಟ್ರಗಳೂ ಭಾಗವಹಿಸುವಂತೆ ಮಾಡಲು ಹಾಗೂ ಜಾಗತಿಕ ಆರ್ಥಿಕ ಆಡಳಿತದಲ್ಲಿ ಅರ್ಥಪೂರ್ಣ ಪಾತ್ರ ನಿರ್ವಹಿಸಲು ನಮ್ಮ ಸಹಕಾರವನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ.
9. ಅರ್ಜೆಂಟಿನಾದ ಜಿ-20 ಶೃಂಗಸಭೆಯ ಧ್ಯೇಯವಾದ ನ್ಯಾಯಸಮ್ಮತ ಹಾಗೂ ಸುಸ್ಥಿರ ಬೆಳವಣಿಗೆಗಾಗಿ ಒಮ್ಮತ ಮೂಡಿಸುವ ಹಾಗೂ ಭವಿಷ್ಯದೆಡೆಗಿನ ಕ್ರಮಗಳು, ಅಭಿವೃದ್ಧಿಗಾಗಿ ಮೂಲಸೌಕರ್ಯಗಳು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಆಹಾರ ಸುರಕ್ಷತೆಯನ್ನು ನಾವು ಸ್ವಾಗತಿಸುತ್ತೇವೆ.
10. ಅಭಿವೃದ್ಧಿಯಲ್ಲಿ ಮೂಲಸೌಕರ್ಯದ ಮಹತ್ವವನ್ನು ನಾವು ಗುರುತಿಸುತ್ತೇವೆ ಮತ್ತು ಜಾಗತಿಕ ಮೂಲಸೌಕರ್ಯಗಳ ಅಂತರವನ್ನು ಕಡಿಮೆ ಮಾಡಲು ನಾವು ಬದ್ಧರಾಗಿದ್ದೇವೆ. ಸುಸ್ಥಿರ ಮತ್ತು ವಿಪತ್ತು ನಿರೋಧಕ ಮೂಲಸೌಕರ್ಯಗಳಿಗಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್ ಸೇರಿದಂತೆ ಇನ್ನಿತರ ಉಪಕ್ರಮಗಳನ್ನು ರಾಷ್ಟ್ರೀಯ ಹಾಗೂ ಸಾಮೂಹಿಕವಾಗಿ ಕೈಗೊಳ್ಳಲಾಗುವುದು.
11. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೇಂದ್ರದಲ್ಲಿ ಸಮರ್ಪಕ ಸಂಪನ್ಮೂಲಭರಿತ, ಕೋಟಾ ಆಧಾರಿತ ಪ್ರಬಲ ಜಾಗತಿಕ ಹಣಕಾಸು ಸುರಕ್ಷಾ ಜಾಲದ ಸ್ಥಾಪನೆಯ ಬಗ್ಗೆ ನಮ್ಮ ಒಲವಿದೆ. ಇದಕ್ಕಾಗಿ ನಾವು ಪ್ರಬಲ ಉದಯೋನ್ಮುಖ ಹಾಗೂ ಅಭಿವೃದ್ಧಿಹೊಂದಿದ ಆರ್ಥಿಕತೆಗಳಿಗೆ ದನಿಯಾಗಲು, ಅಭಿವೃದ್ಧಿ ಹೊಂದದ ರಾಷ್ಟ್ರಗಳನ್ನು ರಕ್ಷಿಸಲು 2019ರ ಚಳಿಗಾಲದ ಸಭೆ ಅಥವಾ 2019ರ ವಾರ್ಷಿಕ ಸಭೆ ಹೊತ್ತಿಗೆ ಹೊಸ ಕೋಟಾ ನೀತಿ ಸೇರಿದಂತೆ ಐಎಂಎಫ್‍ನ 15ನೇ ಕೋಟಾಗಳ ಸಾಮಾನ್ಯ ಪರಿಶೀಲನೆಯ ತೀರ್ಮಾನಗಳಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ.
12. 2030ರ ಹೊತ್ತಿಗೆ ಸಂಪೂರ್ಣ ಬಡತನ ನಿರ್ಮೂಲನೆಯ ಅಂತಿಮ ಗುರಿಯನ್ನು ಸಾಧಿಸಲು ಆರ್ಥಿಕ, ಸಾಮಾಜಿಕ ಹಾಗೂ ಪ್ರಾಕೃತಿಕ ದೃಷ್ಟಿಕೋನಗಳಲ್ಲಿ ಸಮಾನ, ಅಂತರ್ಗತ, ಮುಕ್ತ ಮತು ನಾವೀನ್ಯತೆಯ ಸುಸ್ಥಿರ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳ 2030ರ ಕಾರ್ಯಸೂಚಿಯ ಅನುಷ್ಠಾನಕ್ಕೆ ನಮ್ಮ ಬದ್ಧತೆಯನ್ನು ಎತ್ತಿಹಿಡಿಯುತ್ತೇವೆ. ಅಡ್ಡೀಸ್ ಅಬಾಬಾ ಕಾರ್ಯಸೂಚಿಯಂತೆ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಒಡಿಎ ಬದ್ಧತೆಗಳನ್ನು ನಿಗದಿತ ಸಮಯದಲ್ಲಿ ಪೂರೈಸಬೇಕು ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ.
13. ಜಾಗತಿಕ ಆರ್ಥಿಕತೆಯು ವಿಸ್ತಾರಗೊಳ್ಳುತ್ತಿದ್ದರೂ ಅಸಮತೋಲನ ಹಾಗೂ ಅಪಾಯಗಳು ಹೆಚ್ಚುತ್ತಿವೆ. ಇತ್ತೀಚೆಗೆ ಕೆಲವು ಉದಯೋನ್ಮುಖ ಆರ್ಥಿಕ ಮಾರುಕಟ್ಟೆಗಳಲ್ಲಿ ಉಂಟಾದ ಚಂಚಲತೆಗೆ ಮುಂದುವರಿದ ಆರ್ಥಿಕತೆಗಳು ತಳೆದ ನೀತಿಗಳ ಸಾಮಾನ್ಯೀಕರಣದ ನಕಾರಾತ್ಮಕ ಅಂಶಗಳು ಕಾರಣವೆಂಬ ಬಗ್ಗೆ ನಮಗೆ ಕಳವಳವಿದೆ. ಇದು ಹರಡದಂತೆ ತಡೆಯಲು ಜಿ-20 ಸಭೆಯಲ್ಲಿ ಎಲ್ಲ ಆರ್ಥಿಕತೆಗಳು ತಮ್ಮ ನೀತಿ ನಿರೂಪಣೆಗಳನ್ನು ಬಲಪಡಿಸಿಕೊಂಡು ಸಹಕಾರ ವೃದ್ಧಿಸಿಕೊಳ್ಳಬೇಕೆಂದು ಕರೆಕೊಡುತ್ತಿದ್ದೇವೆ.
14. ಹವಾಮಾನ ಬದಲಾವಣೆ ಕುರಿತಂತೆ ಯುಎನ್‍ಎಫ್‍ಸಿಸಿಯ ನಿಯಮಗಳ ಅಡಿಯಲ್ಲಿ ಅಂಗೀಕರಿಸಿರುವ ಪ್ಯಾರಿಸ್ ಒಪ್ಪಂದದ ಸಂಪೂರ್ಣ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ. ಅಭಿವೃದ್ಧಿಶೀಲ ರಾಷ್ಟ್ರಗಳು ತಗ್ಗಿಸುವಿಕೆ ಹಾಗೂ ಅಳವಡಿಕೆಯನ್ನು ಉತ್ತಮಪಡಿಸಿಕೊಳ್ಳಲು ಮುಂದುವರೆದ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣಕಾಸು, ತಾಂತ್ರಿಕತೆ ಮತ್ತು ಸಾಮಥ್ರ್ಯ ನಿರ್ಮಾಣಗಳ ನೆರವು ನೀಡಬೇಕು. ಪ್ಯಾರಿಸ್ ಒಪ್ಪಂದದ ಕಾರ್ಯಾಚರಣೆ ಹಾಗೂ ಅನುಷ್ಠಾನದ ಪ್ಯಾರಿಸ್ ಒಪ್ಪಂದದ ಕಾರ್ಯಸೂಚಿಯ ಸಿಒಪಿ-24ರ ಸಂದರ್ಭದಲ್ಲಿ ಸಮತೋಲಿತ ಫಲಿತಾಂಶವನ್ನು ತಲುಪಬೇಕೆಂದು ನಾವು ಎಲ್ಲ ರಾಷ್ಟ್ರಗಳಿಗೆ ಕರೆಕೊಡುತ್ತಿದ್ದೇವೆ. ಮಹತ್ವಾಕಾಂಕ್ಷೆಯ ಹಸಿರು ವಾತಾವರಣ ನಿಧಿಯ ಮೊದಲ ಮರುಪೂರಣ ಪ್ರಕ್ರಿಯೆಯ ಮಹತ್ವದ ಬಗ್ಗೆ ನಾವು ಒತ್ತಿ ಹೇಳುತ್ತಿದ್ದೇವೆ.
15. 2018ರ ಜುಲೈ 25 ರಿಂದ 27ರವರೆಗೆ ಜೋಹಾನ್ಸ್‍ಬರ್ಗ್‍ನಲ್ಲಿ ನಡೆದ 10ನೇ ಬ್ರಿಕ್ಸ್ ಶೃಂಗಸಭೆಯ ಯಶಸ್ಸಿನ ಬಗ್ಗೆ ದಕ್ಷಿಣ ಆಫ್ರಿಕಾಕ್ಕೆ ನಮ್ಮ ಮೆಚ್ಚುಗೆಯನ್ನು ಮತ್ತೆ ವ್ಯಕ್ತಪಡಿಸುತ್ತಿದ್ದೇವೆ ಹಾಗೂ ನಮ್ಮ ಜನತೆಯ ಅನುಕೂಲಕ್ಕಾಗಿ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸಲು ಬದ್ಧರಾಗಿದ್ದೇವೆ. ದಕ್ಷಿಣ ಆಫ್ರಿಕಾ ಅಧ್ಯಕ್ಷತೆಯ ಬ್ರಿಕ್ಸ್ ಶೃಂಗಸಭೆಯಲ್ಲಿ ಆರ್ಥಿಕತೆ, ಶಾಂತಿ ಮತ್ತು ಭದ್ರತೆ ಹಾಗೂ ಜನರ ನಡುವಿನ ವಿನಿಮಯಗಳ ಸಾಧನೆಗಳು ಮತ್ತು ಹೊಸ ಕೈಗಾರಿಕಾ ಕ್ರಾಂತಿಯ ಬ್ರಿಕ್ಸ್ ಪಾಲುದಾರಿಕೆ, ಬ್ರಿಕ್ಸ್ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ, ಬ್ರಿಕ್ಸ್ ಇಂಧನ ಸಂಶೋಧನೆ ಸಹಕಾರ ವೇದಿಕೆ ಮತ್ತು ಸಾವೋ ಪೌಲೋದಲ್ಲಿ ನ್ಯೂ ಡೆವಲಪ್‍ಮೆಟ್ ಬ್ಯಾಂಕ್‍ನ ಅಮೆರಿಕಾದ ಪ್ರಾದೇಶಿಕ ಕಚೇರಿ ಸ್ಥಾಪನೆಯ ಬಗ್ಗೆ ನಮಗೆ ತೃಪ್ತಿ ಇದೆ. ಜೋಹಾನ್ಸ್‍ಬರ್ಗ್ ಶೃಂಗ ಸಭೆ ಹಾಗೂ ಹಿಂದಿನ ಶೃಂಗಸಭೆಗಳ ನಿರ್ಣಯಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ.
16. 2019ರಲ್ಲಿ ಬ್ರೆಜಿಲ್ ಆತಿಥ್ಯದಲ್ಲಿ ನಡೆಯುವ 11ನೇ ಬ್ರಿಕ್ಸ್ ಶೃಂಗಸಭೆಯನ್ನು ನಾವು ಎದುರು ನೋಡುತ್ತಿದ್ದು ನಮ್ಮ ಸಂಪೂರ್ಣ ಸಹಕಾರವನ್ನು ಶೃಂಗಸಭೆಯ ಅಧ್ಯಕ್ಷತೆ ವಹಿಸುವ ಬ್ರೆಜಿಲ್‍ಗೆ ನೀಡುತ್ತೇವೆ.


