ಅಕ್ಟೋಬರ್ 4ರಂದು 62,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಯುವ ಕೇಂದ್ರಿತ ಉಪಕ್ರಮಗಳನ್ನು ಅನಾವರಣಗೊಳಿಸಲಿರುವ ಪ್ರಧಾನಮಂತ್ರಿ

October 03rd, 03:54 pm

ಯುವ ಅಭಿವೃದ್ಧಿಗಾಗಿ ಐತಿಹಾಸಿಕ ಉಪಕ್ರಮವೊಂದರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಗ್ಗೆ 11 ಗಂಟೆಗೆ 62,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಯುವ ಕೇಂದ್ರಿತ ಉಪಕ್ರಮಗಳನ್ನು ಅನಾವರಣಗೊಳಿಸಲಿದ್ದಾರೆ. ಇದು ದೇಶಾದ್ಯಂತ ಶಿಕ್ಷಣ, ಕೌಶಲ್ಯ ಮತ್ತು ಉದ್ಯಮಶೀಲತೆಗೆ ನಿರ್ಣಾಯಕ ಉತ್ತೇಜನ ನೀಡುತ್ತದೆ. ಈ ಕಾರ್ಯಕ್ರಮವು ಪ್ರಧಾನಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿ ಆಯೋಜಿಸಲಾದ ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವದ ನಾಲ್ಕನೇ ಆವೃತ್ತಿಯಾದ ಕೌಶಲ್ ದೀಕ್ಷಾಂತ್ ಸಮಾರೋಹ್ ಅನ್ನು ಸಹ ಒಳಗೊಂಡಿರುತ್ತದೆ. ಅಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ ಬರುವ ಕೈಗಾರಿಕಾ ತರಬೇತಿ ಸಂಸ್ಥೆಗಳ 46 ಅಖಿಲ ಭಾರತ ಟಾಪರ್ ಗಳನ್ನು ಸನ್ಮಾನಿಸಲಾಗುವುದು.