ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

April 27th, 11:30 am

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ನಿಮ್ಮೊಂದಿಗೆ ನಾನು 'ಮನದ ಮಾತು' ಆಡುತ್ತಿರುವಾಗ, ನನ್ನ ಹೃದಯ ನೋವಿನಿಂದ ಭಾರವಾಗಿದೆ. ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ಘಟನೆ ದೇಶದ ಪ್ರತಿಯೊಬ್ಬ ನಾಗರಿಕನನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಸಂತ್ರಸ್ತ ಕುಟುಂಬಗಳ ಬಗ್ಗೆ ಪ್ರತಿ ಭಾರತೀಯನಲ್ಲೂ ಅಪಾರ ಸಹಾನುಭೂತಿಯಿದೆ. ರಾಜ್ಯ, ಭಾಷೆಯನ್ನು ಮೀರಿ ಎಲ್ಲ ಜನರು ಈ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಸ್ವತಃ ಅನುಭವಿಸುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ನನಗೆ ಅನಿಸುತ್ತದೆ. ಪಹಲ್ಗಾಮ್‌ನಲ್ಲಿ ನಡೆದ ಈ ದಾಳಿಯು ಭಯೋತ್ಪಾದನೆಗೆ ಉತ್ತೇಜನ ನೀಡುವವರ ಹತಾಶೆಯನ್ನು ತೋರಿಸುತ್ತದೆ ಮತ್ತು ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ. ಶಾಲಾ ಕಾಲೇಜುಗಳಲ್ಲಿ ಹುರುಪು ತುಂಬಿರುವಂತಹ ಕಾಲದಲ್ಲಿ, ನಿರ್ಮಾಣ ಕಾರ್ಯಗಳು ಅಭೂತಪೂರ್ವ ವೇಗವನ್ನು ಪಡೆದುಕೊಂಡಿರುವಾಗ, ಕಾಶ್ಮೀರದಲ್ಲಿ ಶಾಂತಿ ಮರುಕಳಿಸುತ್ತಿರುವ ಇಂತಹ ಸಮಯದಲ್ಲಿ, ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುತ್ತಿರುವಾಗ, ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಂಡುಬರುತ್ತಿರುವಾಗ, ಜನರ ಆದಾಯ ಹೆಚ್ಚುತ್ತಿರುವಾಗ, ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿದ್ದಾಗ, ದೇಶದ ಶತ್ರುಗಳು, ಜಮ್ಮು ಮತ್ತು ಕಾಶ್ಮೀರದ ವೈರಿಗಳಿಗೆ ಇದನ್ನು ಸಹಿಸಲಾಗಲಿಲ್ಲ. ಭಯೋತ್ಪಾದಕರು ಮತ್ತಷ್ಟು ಭಯೋತ್ಪಾದನೆ ಹೆಚ್ಚಿಸಲು ಬಯಸುತ್ತಿದ್ದಾರೆ. ಕಾಶ್ಮೀರವನ್ನು ಮತ್ತೆ ನಾಶಮಾಡಲು ಹುನ್ನಾರದಿಂದ ಇಷ್ಟು ದೊಡ್ಡ ಘಟನೆ ನಡೆಯುವಂತೆ ಪಿತೂರಿ ನಡೆಸಿದರು. ದೇಶದ ಏಕತೆ, 140 ಕೋಟಿ ಭಾರತೀಯರ ಒಗ್ಗಟ್ಟು, ಭಯೋತ್ಪಾದನೆಯ ವಿರುದ್ಧದ ಈ ಯುದ್ಧದಲ್ಲಿ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಒಗ್ಗಟ್ಟೆ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಪಾತ್ರವಾಹಿಸಲಿದೆ. ದೇಶ ಎದುರಿಸುತ್ತಿರುವ ಈ ಸವಾಲನ್ನು ಎದುರಿಸಲು ನಾವು ನಮ್ಮ ಸಂಕಲ್ಪವನ್ನು ಬಲಪಡಿಸಿಕೊಳ್ಳಬೇಕು. ಒಂದು ರಾಷ್ಟ್ರ ರೂಪದಲ್ಲಿ ಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಈ ಭಯೋತ್ಪಾದಕ ದಾಳಿಯ ನಂತರ ಸಂಪೂರ್ಣ ದೇಶ ಒಕ್ಕೊರಲಿನಿಂದ ಧ್ವನಿಯೆತ್ತಿರುವುದನ್ನು ಇಂದು ಜಗತ್ತೇ ನೋಡುತ್ತಿದೆ.

ಮಹಾರಾಷ್ಟ್ರದ ನಾಗಪುರದಲ್ಲಿ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರದ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

March 30th, 11:53 am

ಗುಡಿ ಪಾಡ್ವ ಮತ್ತು ಹೊಸ ವರ್ಷಕ್ಕೆ ನಾನು ನಿಮಗೆಲ್ಲರಿಗೂ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ಕೋರುತ್ತೇನೆ! ಅತ್ಯಂತ ಗೌರವಾನ್ವಿತ ಸರ್ಸಂಘಚಾಲಕ್ ಜಿ, ಡಾ. ಮೋಹನ್ ಭಾಗವತ್ ಜಿ, ಸ್ವಾಮಿ ಗೋವಿಂದ್ ಗಿರಿ ಜಿ ಮಹಾರಾಜ್, ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್, ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ ಜಿ, ಡಾ. ಅವಿನಾಶ್ ಚಂದ್ರ ಅಗ್ನಿಹೋತ್ರಿ ಜಿ, ಇತರ ಗಣ್ಯರೇ ಹಾಗು ಇಲ್ಲಿ ಉಪಸ್ಥಿತರಿರುವ ಎಲ್ಲಾ ಹಿರಿಯ ಸಹೋದ್ಯೋಗಿಗಳೇ, ಇಂದು ರಾಷ್ಟ್ರ ಯಜ್ಞದ ಈ ಪವಿತ್ರ ಆಚರಣೆಯಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಇಂದು, ಚೈತ್ರ ಶುಕ್ಲ ಪ್ರತಿಪದದ ಈ ದಿನವು ತುಂಬಾ ವಿಶೇಷವಾಗಿದೆ. ನವರಾತ್ರಿಯ ಪವಿತ್ರ ಹಬ್ಬ ಇಂದಿನಿಂದ ಆರಂಭವಾಗುತ್ತಿದೆ. ಇಂದು ದೇಶದ ವಿವಿಧ ಭಾಗಗಳಲ್ಲಿ ಗುಡಿ-ಪಾಡ್ವ, ಯುಗಾದಿ ಮತ್ತು ನವರೆಹ್ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇಂದು ಭಗವಾನ್ ಜುಲೇಲಾಲ್ ಜಿ ಮತ್ತು ಗುರು ಅಂಗದ್ ದೇವ್ ಜಿ ಅವರ ಜನ್ಮ ದಿನಾಚರಣೆಯೂ ಆಗಿದೆ. ಇದು ನಮ್ಮ ಸ್ಫೂರ್ತಿ, ಅತ್ಯಂತ ಗೌರವಾನ್ವಿತ ಡಾಕ್ಟರ್ ಸಾಹೇಬ್ ಅವರ ಜನ್ಮ ದಿನಾಚರಣೆಯೂ ಆಗಿದೆ. ಮತ್ತು ಈ ವರ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅದ್ಭುತ ಪ್ರಯಾಣದ 100 ವರ್ಷಗಳು ಪೂರ್ಣಗೊಂಡಿವೆ. ಇಂದು ಈ ಸಂದರ್ಭದಲ್ಲಿ, ಸ್ಮೃತಿ ಮಂದಿರಕ್ಕೆ ಭೇಟಿ ನೀಡುವ ಮತ್ತು ಗೌರವಾನ್ವಿತ ಡಾಕ್ಟರ್ ಸಾಹೇಬ್ ಮತ್ತು ಗೌರವಾನ್ವಿತ ಗುರೂಜಿ ಅವರಿಗೆ ಗೌರವ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿದೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು

March 30th, 11:52 am

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ಪ್ರಧಾನಮಂತ್ರಿಯವರು ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪವಿತ್ರ ನವರಾತ್ರಿ ಉತ್ಸವದ ಆರಂಭವನ್ನು ಸೂಚಿಸುವ ಚೈತ್ರ ಶುಕ್ಲ ಪ್ರತಿಪದದ ಮಹತ್ವದ ಬಗ್ಗೆ ತಿಳಿಸಿದರು. ದೇಶಾದ್ಯಂತ ಇಂದು ಗುಡಿ ಪಡ್ವಾ, ಯುಗಾದಿ ಮತ್ತು ನವರೇಹ್‌ನಂತಹ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು. ಭಗವಾನ್ ಜುಲೇಲಾಲ್ ಮತ್ತು ಗುರು ಅಂಗದ್ ದೇವ್ ಅವರ ಜನ್ಮ ದಿನಾಚರಣೆಯೊಂದಿಗೆ ಈ ದಿನವು ಹೊಂದಿಕೆಯಾಗುವುದರಿಂದ ಈ ದಿನದ ಮಹತ್ವವನ್ನು ಅವರು ವಿವರಿಸಿದರು. ಈ ಸಂದರ್ಭವನ್ನು ಸ್ಪೂರ್ತಿದಾಯಕ ಡಾ. ಕೆ. ಬಿ. ಹೆಡ್ಗೆವಾರ್ ಅವರ ಜನ್ಮ ವಾರ್ಷಿಕೋತ್ಸವ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶ್ರೇಷ್ಠ ಪ್ರಯಾಣದ ಶತಮಾನೋತ್ಸವ ವರ್ಷವೆಂದು ತಿಳಿಸಿದರು. ಈ ಮಹತ್ವದ ದಿನದಂದು ಡಾ. ಹೆಡ್ಗೆವಾರ್ ಮತ್ತು ಶ್ರೀ ಗೋಲ್ವಾಲ್ಕರ್ ಗುರೂಜಿ ಅವರಿಗೆ ಗೌರವ ಸಲ್ಲಿಸಲು ಸ್ಮೃತಿ ಮಂದಿರಕ್ಕೆ ಭೇಟಿ ನೀಡಿರುವುದು ನನಗೆ ಸಿಕ್ಕ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.

ಮ್ಯಾನ್ಮಾರ್‌ ಭೂಕಂಪದ ಹಿನ್ನೆಲೆಯಲ್ಲಿ ಹಿರಿಯ ಸೇನಾ ಮುಖ್ಯಸ್ಥರಾದ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಪ್ರಧಾನಮಂತ್ರಿ ಮಾತುಕತೆ

March 29th, 01:41 pm

ಮ್ಯಾನ್ಮಾರ್‌ನಲ್ಲಿ ಭೂಕಂಪದ ದುರಂತ ಸನ್ನಿವೇಶದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೇನಾ ಮುಖ್ಯಸ್ಥರಾದ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸವಾಲಿನ ಸಮಯದಲ್ಲಿ ಮ್ಯಾನ್ಮಾರ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಆಪ್ತ ಸ್ನೇಹಿತ ಮತ್ತು ನೆರೆಹೊರೆಯ ದೇಶವಾದ ಭಾರತದ ದೃಢವಾದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಈ ವಿಪತ್ತಿಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು ಆಪರೇಷನ್ ಬ್ರಹ್ಮ ಪ್ರಾರಂಭಿಸಿದೆ, ಇದು ವಿಕೋಪದಿಂದ ಬಾಧಿತವಾಗಿರುವ ಪ್ರದೇಶಗಳಿಗೆ ತಕ್ಷಣದ ಪರಿಹಾರ ಮತ್ತು ಸಹಾಯವನ್ನು ಒದಗಿಸುವ ಉಪಕ್ರಮವಾಗಿದೆ.