ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್ಐ) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

July 01st, 03:04 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಿ, ʻಉದ್ಯೋಗ ಆಧರಿತ ಪ್ರೋತ್ಸಾಹಧನʼ(ಇಎಲ್ಐ) ಯೋಜನೆಗೆ ಅನುಮೋದನೆ ನೀಡಿದೆ. ಉದ್ಯೋಗ ಸೃಷ್ಟಿ, ಎಲ್ಲ ವಲಯಗಳಲ್ಲಿ ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ, ಮೊದಲ ಬಾರಿಯ ಉದ್ಯೋಗಿಗಳಿಗೆ ಒಂದು ತಿಂಗಳ ವೇತನ (15,000 ರೂ.ವರೆಗೆ), ಉದ್ಯೋಗದಾತರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಎರಡು ವರ್ಷಗಳವರೆಗೆ ಪ್ರೋತ್ಸಾಹಧನ ನೀಡಲಾಗುವುದು. ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತೃತ ಪ್ರಯೋಜನಗಳನ್ನು ನೀಡಲಾಗುವುದು. 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಒದಗಿಸಲು ಪ್ರಧಾನ ಮಂತ್ರಿಯವರ ಐದು ಯೋಜನೆಗಳ ಪ್ಯಾಕೇಜ್‌ನ ಭಾಗವಾಗಿ 2024-25ರ ಕೇಂದ್ರ ಬಜೆಟ್‌ನಲ್ಲಿ 2 ಲಕ್ಷ ಕೋಟಿ ರೂ.ಗಳ ಅನುದಾನದೊಂದಿಗೆ ʻಉದ್ಯೋಗ ಆಧರಿತ ಪ್ರೋತ್ಸಾಹಧನʼ(ಇಎಲ್ಐ) ಯೋಜನೆಯನ್ನು ಘೋಷಿಸಲಾಯಿತು.